ಗುರುವಾರ , ಏಪ್ರಿಲ್ 9, 2020
19 °C

ನಟನಾಗುವ ಕನಸಿಗೆ ಬೆಳಕಾದ ಮಾಡೆಲಿಂಗ್

ರೇಷ್ಮಾ ಶೆಟ್ಟಿ Updated:

ಅಕ್ಷರ ಗಾತ್ರ : | |

Deccan Herald

‘ಮಾಡೆಲಿಂಗ್ ಎನ್ನುವುದು ಬಣ್ಣ, ರೂಪ, ದೇಹಾಕೃತಿಗೆ ಸಂಬಂಧಿಸಿದ್ದಲ್ಲ. ಮಾಡೆಲಿಂಗ್ ನಿಂತಿರುವುದು ನಮ್ಮನ್ನು ನಾವು ಹೇಗೆ ಬಿಂಬಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಎನ್ನುತ್ತಾ ಮಾತು ಆರಂಭಿಸುವ ಇವರು ಬೈರತಿ ಸುನಿಲ್.

ರಾಜಕಾರಣಿಗಳ ಕುಟುಂಬ ಹಿನ್ನೆಲೆಯಿಂದ ಬಂದ ಇವರಿಗೆ ಬಾಲ್ಯದಿಂದಲೂ ನಟನೆಯ ಮೇಲೆ ವಿಪರೀತ ಒಲವು. ಆ ಕಾರಣಕ್ಕೆ ಶಾಲಾ ದಿನಗಳಿಂದಲೂ ನೃತ್ಯ, ನಾಟಕಗಳಿಗೆ ಬಣ್ಣ ಹಚ್ಚುತ್ತಿದ್ದರು. ಕಾಲೇಜು ದಿನಗಳಲ್ಲಿ ಕೆಲ ಕಾಲ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು, ನಟನೆಯ ಕನಸಿನಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದವರು. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುವಿಲ್ಲದಿದ್ದರೂ ಸುನಿಲ್‌ ಸ್ವಸಾಮರ್ಥ್ಯದಿಂದ ಹೆಸರು ಗಿಟ್ಟಿಸಿಕೊಂಡರು. 3 ವರ್ಷಗಳಿಂದ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಿದ್ದು ನಡುವೆ ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಬಿಡುಗಡೆಯಾಗಲಿರುವ ‘ಗುಡ್ಡದ ಭೂತ’ ಹಾಗೂ ‘ಸ್ತ್ರಿಲಂಕಾದಲ್ಲಿ’ ಸಿನಿಮಾಗಳಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.

‘ನನಗೆ ಮಾಡೆಲಿಂಗ್‌ಗಿಂತಲೂ ಸಿನಿಮಾಗಳ ಮೇಲೆ ಒಲವು ಜಾಸ್ತಿ. ಪೂರ್ಣ ಪ್ರಮಾಣದ ನಾಯಕನಾಗಿ, ಉತ್ತಮ ನಿರ್ದೇಶಕನಾಗಿ ಸಿನಿಮಾರಂಗದಲ್ಲಿ ಮಿಂಚುವ ಆಸೆ’ ಎನ್ನುವ ಕನಸು ಕಂಗಳ ಈ ಹುಡುಗ ಅವಾರ್ಡ್‌ಗಾಗಿ ಸಿನಿಮಾವೊಂದನ್ನು ಮಾಡುವ ಹಂಬಲದಲ್ಲಿದ್ದಾರೆ.

ನಟನಾ ಹಿನ್ನೆಲೆಯಿಲ್ಲದ, ಕಲೆ ಎಂದರೆ ಅಷ್ಟೇನೂ ಒಲವು ತೋರದ ಕುಟುಂಬ ಹಿನ್ನೆಲೆಯಿಂದ ಬಂದ ಇವರು ‘ರಾಜಕಾರಣ ಎಂದರೆ ಆ ಪಕ್ಷ, ಈ ಪಕ್ಷ, ಈ ನಾಯಕ, ಆ ನಾಯಕ ಎಂಬ ಪರ-ವಿರೋಧಗಳಿರುತ್ತವೆ. ಆದರೆ ಸಿನಿಮಾದಲ್ಲಿ ಹಾಗಿಲ್ಲ. ಸಿನಿಮಾ ಎಲ್ಲರನ್ನೂ ಒಂದೇ ಭಾವದಿಂದ ನೋಡುವಂತೆ ಮಾಡುತ್ತದೆ. ಆ ಕಾರಣಕ್ಕೆ ರಾಜಕಾರಣವನ್ನು ಬಿಟ್ಟು ಸಿನಿಮಾ ಕ್ಷೇತ್ರದೆಡೆಗೆ ಹೆಜ್ಜೆ ಬೆಳೆಸಿದ್ದು’ ಎಂದು ಬಿಚ್ಚು ಮನಸ್ಸಿನಿಂದ ನುಡಿಯುತ್ತಾರೆ.

‘ಕೇಸ್ ನಂ. 3’ ಎಂಬ ಸಿನಿಮಾಕ್ಕೂ ಬಣ್ಣ ಹಚ್ಚಿರುವ ಇವರು ಗೋವಾದಲ್ಲಿ ನಡೆದ ‘ಮಿಸ್ಸೆಸ್ ಇಂಡಿಯಾ ಎಂಪರ್‌ಪುಲ್‌ ಆಲ್ ಇಂಡಿಯಾ’ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಇವರು ಮಾಡೆಲ್‌ಗಳೊಂದಿಗೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು. ಅಲ್ಲಿ ಜನ ಇವರನ್ನು ಗುರುತಿಸಿ, ಆದರಿಸಿದ್ದು ನೋಡಿದ ಮೇಲೆ ಇವರಿಗೆ ಮಾಡೆಲಿಂಗ್ ಮೇಲೆ ಪ್ರೀತಿ ಹುಟ್ಟಿತಂತೆ. ಕಾರಣ ಮಾಡೆಲಿಂಗ್‌ನಿಂದಲೂ ಹೆಸರು ಗಳಿಸಬಹುದು, ಜನ ಗುರುತಿಸುವಂತಾಗಬಹುದು ಎಂದು ಆ ಕ್ಷಣಕ್ಕೆ ಅನ್ನಿಸಿತ್ತಂತೆ. 

 ಒಬ್ಬ ನಟ ಹಾಗೂ ಮಾಡೆಲ್ ಆಗಿ ವಸ್ತ್ರವಿನ್ಯಾಸದ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳದ ಇವರು ‘ನನಗೆ ಯಾವ ಡ್ರೆಸ್ ಚೆಂದ ಕಾಣುತ್ತದೋ, ಯಾವುದು ನನಗೆ ಕಂಫರ್ಟ್ ಎನ್ನಿಸುತ್ತದೋ ಅಂತಹ ಬಟ್ಟೆ ಧರಿಸುತ್ತೇನೆ ಹೊರತು, ಇಂಥಹದ್ದೆ ಬ್ರಾಂಡ್, ಇವರೇ ವಿನ್ಯಾಸ ಮಾಡಿರಬೇಕು ಎಂಬುದೆಲ್ಲಾ ಇಲ್ಲ. ಪರೇಶ್ ಲಾಂಬಾದಿಂದ ಹಿಡಿದು ಸಾಮಾನ್ಯ ಟೈಲರ್ ಹೊಲಿದ ಬಟ್ಟೆಯನ್ನು ಹಾಕುತ್ತೇನೆ’ ಎಂದು ಅಳುಕಿಲ್ಲದೇ ಹೇಳುತ್ತಾರೆ.

ಡಯೆಟ್ ವಿಷಯಕ್ಕೆ ಬಂದರೆ ತಮ್ಮದೇ ತತ್ವ ಹೊಂದಿರುವ ಇವರು ‘ತಿನ್ನುವುದನ್ನು ಕಂಟ್ರೋಲ್ ಮಾಡಿ ಡಯೆಟ್ ಮಾಡುತ್ತೇವೆ ಎಂಬುದೆಲ್ಲಾ ಸುಳ್ಳು. ಡಯೆಟ್ ಎನ್ನುವುದು ದೇಹಸ್ಥಿತಿ ಹಾಗೂ ನಮ್ಮ ವಿಲ್ ಪವರ್ ಮೇಲೆ ಅವಲಂಭಿಸಿದೆ. ನಮಗೆ ಏನು ಇಷ್ಟವಾಗುತ್ತದೋ ಅದೆಲ್ಲವನ್ನೂ ತಿನ್ನಬೇಕು. ಆಮೇಲೆ ಸರಿಯಾದ ಕ್ರಮದಲ್ಲಿ ವರ್ಕೌಟ್ ಮಾಡಬೇಕು’ ಎನ್ನುವ ಇವರು ಪ್ರತಿದಿನ ಒಂದರಿಂದ ಒಂದೂವರೆ ಗಂಟೆ ಜಿಮ್‌ನಲ್ಲಿ ಕಸರತ್ತು ಮಾಡುತ್ತಾರೆ.

ಮಾಡೆಲಿಂಗ್ ಎನ್ನುವುದು ಒಂದು ಗುಂಪಿನ ವಯಸ್ಸಿಗಷ್ಟೇ ಸೀಮಿತ. ಆಮೇಲೆ ಮಾಡೆಲ್‌ಗಳು ಹೇಳಹೆಸರಿಲ್ಲದಂತಾಗುತ್ತಾರೆ. ಆದರೆ ಸಿನಿಮಾ ಹಾಗೂ ನಟನೆ ಹಾಗಲ್ಲ. ಅದರಲ್ಲಿ ಒಮ್ಮೆ ಹೆಸರು ಗಳಿಸಿದರೆ ಸಾಯುವವರೆಗೂ ಜನ ಮರೆಯುವುದಿಲ್ಲ. ಸಿನಿಮಾ ನಟರು 50 ವರ್ಷ ದಾಟಿದರೂ ದೇಹವನ್ನು ಹಾಗೆ ಕಾಪಾಡಿಕೊಂಡು ಬರುತ್ತಾರೆ. ಆ ಕಾರಣಕ್ಕೆ ನನಗೆ ಸಿನಿಮಾ ನಟರೇ ರೋಲ್ ಮಾಡೆಲ್‌ಗಳು ಎನ್ನುವ ಇವರಿಗೆ ನಟ ದರ್ಶನ್ ಎಂದರೆ ಹಿಡಿ ಪ್ರೀತಿ ಹೆಚ್ಚು.

ಬಿಡುವಿನ ವೇಳೆಯಲ್ಲಿ ಕತೆಗಳನ್ನು ಬರೆಯುವ ಇವರು ಈಗಾಗಲೇ 10 ಸಿನಿಮಾ ಸ್ಟೋರಿಗಳನ್ನು ಬರೆದಿದ್ದಾರೆ. 2020ರ ವೇಳೆಗೆ ತಮ್ಮದೇ ಬ್ಯಾನರ್ ಅಡಿ ಸಿನಿಮಾ ಮಾಡುವ ಕನಸು ಹೊಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)