ನಾವು ಯಾರ ‘ಎ’ ಟೀಮ್ ಅಲ್ಲ, ‘ಬಿ’ ಟೀಮೂ ಅಲ್ಲ: ಬಿಎಸ್‌ಪಿ ಅಭ್ಯರ್ಥಿ ಶಿವಕುಮಾರ್‌

ಭಾನುವಾರ, ಏಪ್ರಿಲ್ 21, 2019
25 °C
ಜನರು ಬದಲಾವಣೆ ಬಯಸಿದ್ದಾರೆ– ಮಾಧ್ಯಮ ಸಂವಾದ

ನಾವು ಯಾರ ‘ಎ’ ಟೀಮ್ ಅಲ್ಲ, ‘ಬಿ’ ಟೀಮೂ ಅಲ್ಲ: ಬಿಎಸ್‌ಪಿ ಅಭ್ಯರ್ಥಿ ಶಿವಕುಮಾರ್‌

Published:
Updated:
Prajavani

ಚಾಮರಾಜನಗರ: ‘ನಾವು ಯಾರ ‘ಎ’ ಟೀಮ್‌ ಅಲ್ಲ, ‘ಬಿ’ ಟೀಮೂ ಅಲ್ಲ. ನಮ್ಮದೂ ರಾಷ್ಟ್ರೀಯ ಪಕ್ಷ. ಕಾಂಗ್ರೆಸ್‌ ಮತ್ತು ಬಿಜೆಪಿಯ ದುರಾಡಳಿತವನ್ನು ಹೋಗಲಾಡಿಸುವ ಉದ್ದೇಶದಿಂದ ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕಬೇಕು ಎಂದು ಪಕ್ಷ ಸ್ಥಾಪನೆಯಾಗಿದೆ. ದೇಶದಲ್ಲಿ ಮೂರನೇ ರಾಜಕೀಯ ಶಕ್ತಿಯನ್ನು ಸಂಘಟಿಸುತ್ತಿದ್ದೇವೆ. ಇದರಿಂದ ಕೆಲವರಿಗೆ ಲಾಭವಾಗಬಹುದು, ಇನ್ನು ಕೆಲವರಿಗೆ ನಷ್ಟವಾಗಬಹುದು’ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿ ಡಾ.ಎಂ.ಶಿವಕುಮಾರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ಬಿಎಸ್‌ಪಿ, ಬಿಜೆಪಿಯ ‘ಬಿ’ ಟೀಮ್ ಎಂಬ ಕಾಂಗ್ರೆಸ್‌ ಮುಖಂಡರ ಆರೋಪವನ್ನು ನಿರಾಕರಿಸಿದರು. ‘ನಮ್ಮಿಂದಾಗಿ ಬಿಜೆಪಿಗೆ ಅನುಕೂಲವಾಗುತ್ತಿಲ್ಲ. ವಾಸ್ತವದಲ್ಲಿ ಕಾಂಗ್ರೆಸ್‌ನಿಂದಾಗಿ ಲಾಭವಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಅದು ಬಿಎಸ್‌ಪಿ–ಎಸ್‌ಪಿ ಮೈತ್ರಿ ಜೊತೆ ಮೈತ್ರಿ ಮಾಡಬೇಕಿತ್ತು. ಆದರೆ, ಎಲ್ಲ ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿ ಬಿಜೆಪಿಗೆ ಅನುಕೂಲವಾಗುವಂತೆ ಮಾಡಿದೆ’ ಎಂದು ದೂರಿದರು. 

ಅಭಿವೃದ್ಧಿಯಾಗಿಲ್ಲ: ‘ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗಿ 20 ವರ್ಷಗಳಾದರೂ ಅಭಿವೃದ್ಧಿಯಾಗಿಲ್ಲ. ಹಿಂದೆ ಸಂಸದರಾಗಿ ಆಯ್ಕೆಯಾದವರು ಏನೂ ಮಾಡಿಲ್ಲ. ಜನರು ಬದಲಾವಣೆ ಬಯಸಿದ್ದಾರೆ. ಹೋದ ಕಡೆಗಳಲ್ಲೆಲ್ಲ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಭಿವೃದ್ಧಿ ಮಾಡಲು ನಮಗೊಂದು ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದೇವೆ. ನಾನೆಲ್ಲೂ ಧ್ರುವನಾರಾಯಣ , ಶ್ರೀನಿವಾಸ ಪ್ರಸಾದ್‌ ಅವರನ್ನು ಟೀಕಿಸುತ್ತಿಲ್ಲ. ಅವರಿಬ್ಬರೂ ಹಿರಿಯರು ಆಗಿರುವುದರಿಂದ ಅವರಿಗೆ ವಿಶ್ರಾಂತಿ ಕೊಟ್ಟು ಕಿರಿಯನಾಗಿರುವ ನನಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಜಗಳದಲ್ಲಿ ನಿರತವಾಗಿವೆ. ಹಾಗಾಗಿ, ಜನರು ನಮಗೆ ಅವಕಾಶ ನೀಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಲಿತರಿಗೆ ಮಾತ್ರ ಸೀಮಿತವಲ್ಲ: ‘ಬಿಎಸ್‌ಪಿ ದಲಿತರ ಪಕ್ಷ  ಎಂಬ ಅಭಿಪ್ರಾಯ ಹಿಂದೆ ಇತ್ತು. ಈಗ ಬದಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲದಲ್ಲಿ ಎಲ್ಲ ಸಮುದಾಯಗಳ ವಿಶ್ವಾಸವನ್ನು ಗಳಿಸಿದ್ದೇವೆ. ಈಗಲೂ ಅಷ್ಟೇ, ಕ್ಷೇತ್ರ ವ್ಯಾಪ್ತಿಯ ಎಂಟೂ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸಿದ್ದೇವೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸರ್ವಜನರಿಗಾಗಿ ನಮ್ಮ ಪಕ್ಷ ಕೆಲಸ ಮಾಡುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ ಮತ ಬ್ಯಾಂಕ್‌ಗೆ ಬಿಎಸ್‌ಪಿ ಕೈಹಾಕುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ದಲಿತ ಮತಗಳು ವಾಸ್ತವವಾಗಿ ನಮ್ಮ ಪಕ್ಷದ ಮತಗಳು, ಕಾಂಗ್ರೆಸ್‌ ಅವುಗಳನ್ನು ಕೊಂಡುಕೊಳ್ಳುತ್ತಾ ಬಂದಿದೆ. ನಾವು ಯಾರ ಮತ ಬ್ಯಾಂಕ್‌ಗೂ ಕೈ ಹಾಕುವುದಿಲ್ಲ. ನಮ್ಮ ಪ‍ಕ್ಷ, ಸಂಘಟನೆಯನ್ನು ಬಲಪಡಿಸಲು ಯತ್ನಿಸುತ್ತಿದ್ದೇವೆ’ ಎಂದರು.

ಬಿಎಸ್‌ಪಿ ಮುಖ್ಯಸ್ಥರಾದ ಮಾಯಾವತಿ ಪ್ರಧಾನಿಯಾಗುತ್ತಾರಾ ಎಂದು ಕೇಳಿದ್ದಕ್ಕೆ, ‘ಕರ್ನಾಟಕದಲ್ಲಿ 38 ಸ್ಥಾನಗಳನ್ನು ಗೆದ್ದಿರುವ ಜೆಡಿಎಸ್‌ ಮುಖ್ಯಮಂತ್ರಿ ಸ್ಥಾನ ಗಳಿಸಿರುವಂತೆ, ದೇಶದಲ್ಲಿ ಈ ಬಾರಿ ಮಾಯಾವತಿ ಅವರು ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಎಸ್‌ಪಿ, ಬಿಎಸ್‌ಪಿ ಮೈತ್ರಿಯು ಚುನಾವಣೆಯಲ್ಲಿ 80ರಿಂದ 90 ಸ್ಥಾನಗಳನ್ನು ಗೆದ್ದರೂ ಸಾಕು. ಬೇರೆ ಪಕ್ಷಗಳು ಅನಿವಾರ್ಯವಾಗಿ ಮಾಯಾವತಿ ಅವರನ್ನು ಸಂಪರ್ಕಿಸಬೇಕಾಗುತ್ತದೆ. ಬಿಜೆಪಿಗೆ ಈ ಬಾರಿ 100ಕ್ಕಿಂತ ಹೆಚ್ಚು ಸ್ಥಾನಗಳು ಸಿಗುವುದಿಲ್ಲ’ ಎಂದು ಉತ್ತರಿಸಿದರು. 

ವಿದ್ಯೆ, ಉದ್ಯೋಗಕ್ಕೆ ಒತ್ತು: ಕ್ಷೇತ್ರದ ಅಭಿವೃದ್ಧಿಗೆ ಹಾಕಿಕೊಂಡಿರುವ ಯೋಜನೆಗಳನ್ನು ಪ್ರಸ್ತಾಪಿಸಿದ ಶಿವಕುಮಾರ್‌, ‘ಉದ್ಯೋಗ, ಶಿಕ್ಷಣ ಮತ್ತು ಮೂಲಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎ‌ನ್ನುವ ಗುರಿಯನ್ನು ಇಟ್ಟುಕೊಂಡಿದ್ದೇನೆ. ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಅಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಅವುಗಳನ್ನು ಕಲ್ಪಿಸಬೇಕಾಗಿದೆ. ನಮ್ಮ ಜಿಲ್ಲೆಯಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡಬೇಕೆಂದಿದ್ದೇನೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಹಿಂದಿನ ಸಂಸದರಿಂದ ಮಾಡಲಾಗದ ಅಭಿವೃದ್ಧಿ ಕೆಲಸಗಳನ್ನು ಮಾಡುವ ಕನಸು ನನ್ನದು’ ಎಂದು ಹೇಳಿದರು.

‘ಮಹೇಶ್‌ ಜನರ ವಿಶ್ವಾಸ ಕಳೆದುಕೊಂಡಿಲ್ಲ’

ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಶಾಸಕರಾದ ನಂತರ ಜನರಿಂದ ದೂರವಾಗಿದ್ದಾರೆ, ಅವರು ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಎನ್‌.ಮಹೇಶ್‌ ಅವರ ವಿರುದ್ಧ ವ್ಯವಸ್ಥಿತವಾಗಿ ಪಿತೂರಿ ಮಾಡಿ ಇಂತಹ ಸುದ್ದಿ ಹಬ್ಬಿಸಲಾಗುತ್ತಿದೆ’ ಎಂದು ಹೇಳಿದರು.

‘ಒಬ್ಬ ವ್ಯಕ್ತಿಯ ಕೆಲಸ, ಸಾಧನೆ ಬಗ್ಗೆ ಏಳೆಂಟು ತಿಂಗಳಲ್ಲಿ ತೀರ್ಪು ನೀಡಲು ಸಾಧ್ಯವಿಲ್ಲ. ಚುನಾವಣಾ ಫಲಿತಾಂಶ ಬಂದ ನಂತರ ಸರ್ಕಾರ ರಚಿಸುವ ವಿಚಾರದಲ್ಲಿನ ಗೊಂದಲಗಳಿಂದಾಗಿ ಕೆಲವು ದಿನ ಅವರು ಕ್ಷೇತ್ರದಿಂದ ದೂರ ಉಳಿಯಬೇಕಾಯಿತು. ನಂತರ ಸರ್ಕಾರ ರಚಿಸಿದ ನಂತರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಂತಹ ಅತ್ಯಂತ ಸೂಕ್ಷ್ಮ ಹಾಗೂ ದೊಡ್ಡ ಖಾತೆಯನ್ನು ನೀಡಿದ್ದರಿಂದ ಕ್ಷೇತ್ರದ ಜನರೊಂದಿಗೆ ಬೆರೆಯಲು ಸಾಧ್ಯವಾಗದಿರುವುದು ನಿಜ. ಕಳೆದ ಎರಡೂವರೆ ತಿಂಗಳಿನಿಂದ ಅವರು ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಜನರ ವಿಶ್ವಾಸವನ್ನು ಮತ್ತೆ ಗಳಿಸಲು ಯತ್ನಿಸುತ್ತಿದ್ದಾರೆ’ ಎಂದರು.

‘ಎಂಟು ತಿಂಗಳ ಅವಧಿಯಲ್ಲಿ ಮಹೇಶ್‌ ಅವರು ಕ್ಷೇತ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದಕ್ಕೆ ಪ್ರಚಾರ ಸಿಕ್ಕಿಲ್ಲ. ಯಳಂದೂರಿನ 34 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿಸಿದ್ದಾರೆ. ಕೊಳ್ಳೇಗಾಲ ಕ್ಷೇತ್ರವ್ಯಾಪ್ತಿಯ ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿ ಹಾಗೂ ನಿರ್ಮಾಣಕ್ಕಾಗಿ ₹ 8 ಕೋಟಿ ಬಿಡುಗಡೆ ಮಾಡಿಸಿದ್ದಾರೆ. ರೇಷ್ಮೆ ಕಾರ್ಖಾನೆಗಳ ಪುನಶ್ಚೇತನಕ್ಕಾಗಿ ಬಜೆಟ್‌ನಲ್ಲಿ ₹ 5 ಕೋಟಿ ಬಿಡುಗಡೆಯಾಗಿದೆ. ಕ್ಷೇತ್ರದಲ್ಲಿ ಬರುವ ಪಟ್ಟಣಗಳ ರಸ್ತೆಗಳನ್ನು ಸುಂದರಗೊಳಿಸಲು ₹ 20 ಕೋಟಿ ಮಂಜೂರು ಆಗಿದೆ. ಕೊಳ್ಳೇಗಾಲದ ಚಿಕ್ಕ ಮತ್ತು ದೊಡ್ಡ ರಂಗನಾಥನಕೆರೆಗಳ ಅಭಿವೃದ್ಧಿಗೆ ಯೋಜನೆ ಸಿದ್ಧ ಮಾಡಿಕೊಂಡಿದ್ದಾರೆ. ಒಟ್ಟಾರೆ ₹ 100 ಕೋಟಿಗೂ ಹೆಚ್ಚು ಅನುದಾನ ತಂದಿದ್ದಾರೆ. ಈ ಕೆಲಸಗಳೆಲ್ಲ ಕಣ್ಣಿಗೆ ಕಾಣಬೇಕಾದರೆ ಎರಡು ವರ್ಷಗಳು ಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !