ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಎನ್‌.ಮಹೇಶ್‌ ಸೇರುವುದಕ್ಕಿಂತಲೂ ಮೊದಲೇ ರಾಜ್ಯದಲ್ಲಿ ಪಕ್ಷ ಇದೆ– ನೂತನ ಅಧ್ಯಕ್ಷ ಕೃಷ್ಣಮೂರ್ತಿ

ಬಿಎಸ್‌ಪಿ ಇಬ್ಬಾಗವಾಗಿಲ್ಲ, ಪಕ್ಷಕ್ಕೆ ತೊಂದರೆ ಇಲ್ಲ

Published:
Updated:
Prajavani

ಚಾಮರಾಜನಗರ: ‘ಎನ್‌.ಮಹೇಶ್‌ ಅವರು ಪಕ್ಷಕ್ಕೆ ಸೇರುವುದಕ್ಕಿಂತಲೂ ಮೊದಲೇ ರಾಜ್ಯದಲ್ಲಿ ಬಿಎಸ್‌ಪಿ ಸಕ್ರಿಯವಾಗಿತ್ತು. ಅದಕ್ಕೂ ಮೊದಲೇ ಪಕ್ಷದಿಂದ ವಿಧಾನಸಭೆಗೆ ಶಾಸಕರೊಬ್ಬರು ಆಯ್ಕೆಯಾಗಿದ್ದರು. ಉಚ್ಚಾಟಿತ ಶಾಸಕರು ಪಕ್ಷದಲ್ಲಿ ಇಲ್ಲದಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಪಕ್ಷ ಇಬ್ಭಾಗವೂ ಆಗಿಲ್ಲ’ ಎಂದು ಪಕ್ಷದ ರಾಜ್ಯ ಘಟಕದ ನೂತನ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಅವರು ಸ್ಪಷ್ಟಪಡಿಸಿದರು. 

ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಒಂದಿಬ್ಬರು ಬಿಟ್ಟರೆ, ‍ಪಕ್ಷದ ಉನ್ನತ ಹುದ್ದೆಯಲ್ಲಿರುವವರು ಯಾರೂ ರಾಜೀನಾಮೆ ಕೊಟ್ಟಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ರಾಜ್ಯದಾದ್ಯಂತ ಕಾರ್ಯಕರ್ತರ ಪಡೆಯೇ ಇದೆ’ ಎಂದು ಹೇಳಿದರು. 

ಆರೋಪಗಳ ಸುರಿಮಳೆ: ಸಂವಾದದಲ್ಲಿ ಕೃಷ್ಣಮೂರ್ತಿ ಅವರು ಎನ್‌.ಮಹೇಶ್‌ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡಿದರು. 

‘ಬೆಂಬಲಿಗರಿಂದ ಪಕ್ಷಕ್ಕೆ ರಾಜೀನಾಮೆ ಕೊಡಿಸಿ, ಪಕ್ಷದ ಅಸ್ತಿತ್ವನ್ನು ನಾಶ ಮಾಡಲು ಯತ್ನಿಸುತ್ತಿರುವ ಅವರು ಈಗ ಸಂತರ ರೀತಿಯಲ್ಲಿ  ಮಾತನಾಡುತ್ತಿದ್ದಾರೆ. ಅದನ್ನು ಮೊದಲು ನಿಲ್ಲಿಸಬೇಕು. ತಮ್ಮನ್ನು ಯಾರಾದರೂ ಪ್ರಶ್ನಿಸುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಮೈಸೂರು ವಿಭಾಗದಲ್ಲಿ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹಾಳುಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನನ್ನನ್ನು ಬೆಂಗಳೂರು ಉಸ್ತುವಾರಿಯನ್ನಾಗಿ ಮಾಡಿ ಮೈಸೂರು ವಿಭಾಗದಿಂದ ದೂರ ಇರುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು. 

‘20 ವರ್ಷಗಳಿಂದ ತಾವೇ ಪಕ್ಷವನ್ನು ಕಟ್ಟಿಬೆಳೆಸಿರುವುದಾಗಿ ಹೇಳಿಕೊಂಡು ಬರುತ್ತಿದ್ದಾರೆ. ಇವರು ಸರ್ಕಾರಿ ಕೆಲಸ ಬಿಟ್ಟು ಪಕ್ಷಕ್ಕೆ ಸೇರ್ಪಡೆಗೊಂಡಾಗ ಇವರನ್ನು ಬರಮಾಡಿಕೊಂಡಿದ್ದು ನಾನು ಮತ್ತು ಮತ್ತೊಬ್ಬರು. ನಮ್ಮ ಸಹಕಾರದಿಂದಲೇ ನಾಯಕರಾಗಿ ಬೆಳೆದಿದ್ದಾರೆ. ಈಗ ಅದೆಲ್ಲವನ್ನೂ ಮರೆತಿದ್ದಾರೆ. ಎನ್‌.ಮಹೇಶ್‌ ಆಗಿದ್ದವರು ‘ಅಣ್ಣಾ ಮಹೇಶ್‌’ ಆಗಿರುವುದರ ಹಿಂದೆ ನನ್ನಂತಹ ಸಾವಿರಾರು ಕಾರ್ಯಕರ್ತರ ಶ್ರಮ ಇದೆ’ ಎಂದರು. 

ಅವರ ಕನಸಿನ ಕೂಸಲ್ಲ: ‘ಬಹುಜನ ವಿದ್ಯಾರ್ಥಿ ಸಂಘವನ್ನು (ಬಿವಿಎಸ್‌) ತಾವೇ ಕಟ್ಟಿದ್ದು ಎಂದು ಮಹೇಶ್‌ ಹೇಳುತ್ತಿದ್ದಾರೆ. ವಾಸ್ತವದಲ್ಲಿ ಅದು ಅವರ ಪರಿಕಲ್ಪನೆ ಅಲ್ಲ. 1999–2000ರಲ್ಲಿ ಕನಕಪುರ ಶಿವಣ್ಣ ಎಂಬುವವರು ಬಿಎಸ್‌ಎಫ್‌ (ಬಹುಜನ ಸ್ಟುಡೆಂಟ್‌ ಫೆಡರೇಷನ್‌) ಎಂಬ ವಿದ್ಯಾರ್ಥಿಗಳ ಸಂಘ ಕಟ್ಟಿದ್ದರು. ಇದನ್ನು ಕಂಡು, ಶಿವಣ್ಣ ಅವರ ಮನವೊಲಿಸಿ ಬಿಎಸ್‌ಎಫ್‌ ಅನ್ನು ಬಿವಿಎಸ್‌ ಎಂದು ಮರುನಾಮಕರಣ ಮಾಡಿದರು. ನಂತರ ಇತರ ಕಡೆಗಳಲ್ಲೂ ಅದೇ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿದರು. ಈ ಸಂಘದ ಇರುವಿಕೆಯನ್ನು ಪಕ್ಷದ ನಾಯಕರಿಂದ ಮುಚ್ಚಿಟ್ಟಿದ್ದರು. ಅದೇ ರೀತಿ ‘ಜಸ್ಟಿಸ್‌’ ಹೆಸರಿನಲ್ಲಿ ಸರ್ಕಾರಿ ನೌಕರರ ಸಂಘವನ್ನೂ ಆರಂಭಿಸಿದ್ದರು. ಅದು ಕಾನ್ಶೀರಾಮ್‌ ಅವರಿಗೆ ಗೊತ್ತಾಗಿ ಪಕ್ಷದ ಅಂಗ ಸಂಸ್ಥೆಯಾದ ಸರ್ಕಾರಿ ನೌಕರರ ಸಂಘದೊಂದಿಗೆ ವಿಲೀನಗೊಳ್ಳುವಂತೆ ಆಯಿತು’ ಎಂದರು.

‘ಮುಂದಿನ ದಿನಗಳಲ್ಲಿ ಪಕ್ಷದಿಂದ ತಮಗೇನಾದರೂ ತೊಂದರೆಯಾದರೆ, ತಮ್ಮ ಹಿಂದೆ ಜನ ಬೇಕು ಎಂಬ ಕಾರಣಕ್ಕೆ ಸಂಘಟನೆಗಳ ಬಗ್ಗೆ ನಾಯಕರಿಗೆ ಮಾಹಿತಿ ನೀಡಿರಲಿಲ್ಲ’ ಎಂದು ಅವರು ಆರೋಪಿಸಿದರು. 

ಚುನಾವಣೆ ಸಂದರ್ಭದಲ್ಲಿ ರಾಜಿ: ‘2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕರಾಗಲು ಅವರು ಹಲವು ರೀತಿಯಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಹಣ, ಹೆಂಡ ಹಂಚಿ ಮತ ಖರೀದಿಸುವುದು ತಪ್ಪು ಎಂದು ಹೇಳುತ್ತಲೇ ಬಂದಿದ್ದ ಅವರು ಅದೇ ರೀತಿ ನಡೆದುಕೊಂಡಿದ್ದಾರೆಯೇ? ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ರೀತಿಯಲ್ಲೇ ಇವರು ಚುನಾವಣೆಯನ್ನು ಎದುರಿಸಿದ್ದಾರೆ’ ಎಂದು ದೂರಿದರು. 

‘ಪಕ್ಷ ನಿಷ್ಠರು ಆದೇಶ ಉಲ್ಲಂಘಿಸಬಹುದೇ’

‘ವಿಶ್ವಾಸಮತ ಯಾಚನೆಗೆ ಎರಡು ದಿನಗಳಿರುವಾಗ ರಾಜ್ಯ ಉಸ್ತುವಾರಿಯಾಗಿದ್ದ ಅಶೋಕ್‌ ಸಿದ್ದಾರ್ಥ್‌ ಅವರು ಸದನಕ್ಕೆ ಹಾಜರಾಗಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದಾಗ ಎನ್‌.ಮಹೇಶ್‌ ಅವರು ತಾವು ಹೋಗುವುದಿಲ್ಲ ಎಂದು ಹೇಳಿದ್ದರು’ ಎಂದು ಕೃಷ್ಣಮೂರ್ತಿ ಹೇಳಿದರು.

‘ಸರ್ಕಾರದ ಪರವಾಗಿ ಮತಚಲಾಯಿಸಿದರೂ ಏನೂ ಪ್ರಯೋಜನವಾಗುವುದಿಲ್ಲ. ಕೊಳ್ಳೇಗಾಲ ಕ್ಷೇತ್ರದಲ್ಲಿ ವೀರಶೈವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರವನ್ನು ಬೆಂಬಲಿಸಿದರೆ ಅವರು ಕೋಪಿಸಿಕೊಳ್ಳುತ್ತಾರೆ. ಬಿಜೆಪಿ ಸರ್ಕಾರ ಬಂದ ನಂತರ ಅದೇ ಕೋಪದಲ್ಲಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವುದಿಲ್ಲ. ಇದರಿಂದ ಮತ್ತಷ್ಟು ತೊಂದರೆಯಾಗುತ್ತದೆ. ಈಗಾಗಲೇ ಕ್ಷೇತ್ರದ ಜನರು ತಮ್ಮ ವಿರುದ್ಧ ಇದ್ದಾರೆ ಎಂದು ಮಹೇಶ್‌ ಅವರು ಹೇಳಿದ್ದಾಗಿ ಅಶೋಕ್‌ ಸಿದ್ಧಾರ್ಥ್‌ ಅವರು ಪಕ್ಷದ ಸಭೆಯಲ್ಲಿ ಹೇಳಿದ್ದಾರೆ’ ಎಂದರು. 

‘ಸರ್ಕಾರ ಉಳಿಯುತ್ತದೆಯೋ ಇಲ್ಲವೋ, ಅದು ಮುಖ್ಯ ಅಲ್ಲ. ಪಕ್ಷಕ್ಕೆ ನಿಷ್ಠರಾಗಿದ್ದವರು, ಬದ್ಧರಾಗಿದ್ದವರು ರಾಷ್ಟ್ರೀಯ ಅಧ್ಯಕ್ಷರು ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಬಹುದೇ? ಮೈತ್ರಿ ಸರ್ಕಾರವನ್ನು ಬೆಂಬಲಿಸಬೇಕು ಎಂದು ಮಾಯಾವತಿಯವರು ನೀಡಿದ ಆದೇಶದ ಅರಿವಿದ್ದೂ ಉಲ್ಲಂಘಿಸಿದ್ದರಿಂದ ಅವರನ್ನು ಉಚ್ಚಾಟನೆ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ದಿಢೀರ್‌ ಅಧ್ಯಕ್ಷ ಆಗಿದ್ದಲ್ಲ:ಸ್ಪಷ್ಟನೆ

‘ನನ್ನನ್ನು ದಿಢೀರ್‌ ಆಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿಲ್ಲ. ಎನ್‌.ಮಹೇಶ್‌ ಶಾಸಕರಾಗಿ ಆಯ್ಕೆಯಾಗಿ, ಸಚಿವ ಸ್ಥಾನ ಅಲಂಕರಿಸುತ್ತಿದ್ದಂತೆ ಮಾಯಾವತಿಯವರು ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಸೂಚಿಸಿದ್ದರು. ಮಹೇಶ್‌ ಅವರು ತಮ್ಮ ಪ್ರಭಾವ ಬಳಸಿ ಅದನ್ನು ತಪ್ಪಿಸಿದ್ದರು’ ಎಂದು ಆರೋಪಿಸಿದರು. 

‘ಆಗಸ್ಟ್‌ 23ರ ಒಳಗಾಗಿ ಮೈಸೂರು ವಿಭಾಗದ ಪಕ್ಷದ ಸಮಿತಿಗಳನ್ನು ವಿಸರ್ಜನೆ ಮಾಡುವಂತೆ ಮಾಯಾವತಿ ಅವರು ಹಿಂದಿನ ಅಧ್ಯಕ್ಷ ಪ್ರೊ.ಹರಿರಾಮ್‌ ಅವರಿಗೆ ಸೂಚಿಸಿದ್ದರು. ಆದರೆ, 23ರವರೆಗೂ ಅವರು ಮಾಡಿರಲಿಲ್ಲ. ಕೊನೆಗಳಿಗೆಯಲ್ಲಿ ವಾಟ್ಸ್‌ಆ್ಯಪ್‌ ಮೂಲಕ ಸಮಿತಿಗಳ ವಿಸರ್ಜನೆ ಆದೇಶ ಕಳಿಸಿದರು. ಇದು ಮಾಯಾವತಿಯವರ ಗಮನಕ್ಕೆ ಬಂದು, ರಾಜ್ಯದ ಎಲ್ಲ ಸಮಿತಿಗಳನ್ನು ವಿಸರ್ಜಿಸಿ, ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿದರು’ ಎಂದು ಅವರು ಸ್ಪಷ್ಟನೆ ನೀಡಿದರು.

Post Comments (+)