ತ್ರಿ’ಶಕ್ತಿ’ಗಳಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲ: ಶ್ರೀನಿವಾಸ ಪ್ರಸಾದ

ಬುಧವಾರ, ಏಪ್ರಿಲ್ 24, 2019
23 °C
ನನ್ನ ಪ್ರತಿಕ್ರಿಯೆಗೆ ಧ್ರುವನಾರಾಯಣ ಅರ್ಹರಲ್ಲ–ಮಾಧ್ಯಮ ಸಂವಾದ

ತ್ರಿ’ಶಕ್ತಿ’ಗಳಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲ: ಶ್ರೀನಿವಾಸ ಪ್ರಸಾದ

Published:
Updated:
Prajavani

ಚಾಮರಾಜನಗರ: ‘ದೇಶದಾದ್ಯಂತ ಇರುವ ಪ್ರಧಾನಿ ಮೋದಿ ಅಲೆ, ರಾಜ್ಯದಲ್ಲಿ ಯಡಿಯೂರಪ್ಪ ಅವರ ವರ್ಚಸ್ಸು ಮತ್ತು ರಾಜಕಾರಣದಲ್ಲಿ ನನ್ನ 42 ವರ್ಷಗಳ ಅನುಭವ... ಈ ಮೂರು ಅಂಶಗಳು ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ’ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ಅವರು ಸೋಮವಾರ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘1977ರಿಂದ ಸಕ್ರಿಯ ರಾಜಕಾರಣದಲ್ಲಿದ್ದೇನೆ. ಸಾಕಷ್ಟು ಅನುಭವವಿದೆ. ಕ್ಷೇತ್ರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಜನರು ನನ್ನ ಮೇಲೆ ಪ್ರೀತಿ, ವಿಶ್ವಾಸ ತೋರಿಸಿದ್ದಾರೆ. ಅದಕ್ಕೆ ತಕ್ಕಂತೆ ಒಂದು ಕಪ್ಪುಚುಕ್ಕೆ ಇಲ್ಲದಂತೆ ಎಚ್ಚರಿಕೆಯಿಂದ ನಡೆದುಕೊಂಡು ಬಂದಿದ್ದೇನೆ. ಈ ಬಾರಿ ಚುನಾವಣೆಗೆ ನಿಲ್ಲಲೇಬೇಕು ಎಂಬ ಜನರ ಪ್ರೀತಿ, ವಿಶ್ವಾಸಕ್ಕೆ ಕಟ್ಟು ಬಿದ್ದು ಸ್ಪರ್ಧಿಸುತ್ತಿದ್ದೇನೆ’ ಎಂದು ಹೇಳಿದರು.

‘ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಹಿಂದೆ ಇದ್ದವರು ಈಗಲೂ ನನ್ನನ್ನು ನೆನಪು ಮಾಡಿಕೊಂಡು ಸ್ವಾಗತಿಸುತ್ತಿದ್ದಾರೆ. ಜನರಿಗೆ ಮೋದಿ ಅವರ ಬಗ್ಗೆ ಒಲವು ಇದೆ. ಅತ್ಯುತ್ತಮ ಬೆಂಬಲ ಸಿಗುತ್ತಿದೆ. ದೇಶದಲ್ಲಿ ಹಾಗೂ ಬಿಜೆಪಿ ಪರ ವಾತಾವರಣ ಇದೆ’ ಎಂದರು.

ಯಾರ ಸಾಧನೆಗೆ ಹೋಲಿಕೆ?: ‘ಹಾಲಿ ಸಂಸದ ಆರ್‌.ಧ್ರುವನಾರಾಯಣ ಅವರು ತಮ್ಮ ಸಾಧನೆಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಅವರು ಸಾಧನೆ ಮಾಡಿದ್ದಾರೆ, ಇಲ್ಲ ಎಂದಲ್ಲ. ಆದರೆ, ಅವರು ತಮ್ಮ ಸಾಧನೆಯನ್ನು ಯಾರ ಸಾಧನೆಯೊಂದಿಗೆ ಹೋಲಿಸಿಕೊಳ್ಳುತ್ತಿದ್ದಾರೆ? ಸಂಸದನಾಗಿ ಶ್ರೀನಿವಾಸ ಪ್ರಸಾದ್‌ ಮಾಡಿರುವ ಸಾಧನೆಯೇ ಅಥವಾ ಅವರಿಗಿಂತ ಮೊದಲು ಎರಡು ಬಾರಿ ಸಂಸದರಾಗಿ ಆಯ್ಕೆಯಾದ ಸಿದ್ದರಾಜು ಅವರ ಸಾಧನೆಯೊಂದಿಗೋ ಇಲ್ಲವೇ ಕಾಗಲವಾಡಿ ಶಿವಣ್ಣ ಅವರ ಸಾಧನೆಯೊಂದಿಗೊ’ ಎಂದು ಪ್ರಶ್ನಿಸಿದರು.

‘40 ವರ್ಷಗಳ ಹಿಂದೆ ಇದ್ದುದಕ್ಕೂ, ಈಗಿನ ಸ್ಥಿತಿಗೂ ಅಜಗಜಾಂತರ ಇದೆ. ಆಗ ಕೇಂದ್ರ ಸರ್ಕಾರದ ಇಷ್ಟು ಯೋಜನೆಗಳಿರಲಿಲ್ಲ. ಪ್ರದೇಶಾಭಿವೃದ್ಧಿ ನಿಧಿ ಈಗ ವರ್ಷಕ್ಕೆ ₹ 5 ಕೋಟಿ ಬರುತ್ತದೆ. 1993ರಲ್ಲಿ ಈ ಯೋಜನೆ ಅನುಷ್ಠಾನಗೊಂಡಾಗ ₹ 2 ಲಕ್ಷ ಇತ್ತು. ನಂತರ ₹ 5 ಲಕ್ಷ, ಆ ಬಳಿಕ ₹ 1 ಕೋಟಿಗೆ ಹೆಚ್ಚಿಸಲಾಯಿತು’ ಎಂದರು.

‘ನಾನು ಸಂಸದನಾಗಿದ್ದ ಸಮಯದಲ್ಲಿ ಸ್ವಯಂ ಆಗಿ ಡಯಲ್‌ ಮಾಡುವ ದೂರವಾಣಿ ಎಕ್ಸ್‌ಚೇಂಜ್‌ ಚಾಮರಾಜನಗರದಲ್ಲಿ ಸ್ಥಾಪನೆಯಾಯಿತು. ಸಾಲಮೇಳಗಳನ್ನು ನಡೆಸಿ ಜನರಿಗೆ ಅನುಕೂಲಮಾಡಿಕೊಟ್ಟಿದ್ದೆ. ರೈಲ್ವೆ ಮೀಟರ್‌ಗೇಜ್‌ ಅನ್ನು ಬ್ರಾಡ್‌ಗೇಜ್‌ ಆಗಿ ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ ಮೈಸೂರು–ಚಾಮರಾಜನರ ಮಾರ್ಗವನ್ನು ಕೈಬಿಡಲಾಗಿತ್ತು. ಅದನ್ನು ಪಟ್ಟು ಬಿಡದೆ, ನಿತೀಶ್‌ ಕುಮಾರ್‌ ಅವರ ಕಾಲದಲ್ಲಿ ಅನುಷ್ಠಾನಕ್ಕೆ ಬರುವಂತೆ ಮಾಡಿದೆ. ಚಾಮರಾಜನರದಲ್ಲಿನ ಡಿಗ್ರಿ ಕಾಲೇಜಿಗೆ ಒಂದೇ ಕೊಠಡಿ ಇತ್ತು. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ನೆರವಾಗಿದ್ದೆ. ಅಂಬೇಡ್ಕರ್‌ ಭವನ ನಿರ್ಮಾಣ ಹಾಗೂ ಸಮುದಾಯ ಭವನಗಳಿಗೆ ನೆರವಾಗಿದ್ದೇನೆ’ ಎಂದು ತಮ್ಮ ಸಾಧನೆಗಳನ್ನು ವಿವರಿಸಿದರು.

ತತ್ವ‌ಗಳಿಗೆ ಈಗಲೂ ಬದ್ಧ: ‘ನಾನು ಪಕ್ಷಾಂತರ ಮಾಡಿರಬಹುದು. ಆದರೆ, ನಾನು ಪಾಲಿಸಿಕೊಂಡು ಬಂದಿರುವ ತತ್ವಗಳಿಂದ ಎಂದೂ ವಿಮುಖನಾಗಿಲ್ಲ. ಅದಕ್ಕೆ ನಾನು ಬದ್ಧನಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂ‌ವಿಧಾನ ಬದಲಾಗದು: ಬಿಜೆಪಿ ಸಂವಿಧಾನ ಬದಲಾಯಿಸಲು ಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ, ‘ಸಿದ್ದರಾಮಯ್ಯ ಅವರಿಗೆ ಸಂವಿಧಾನದ ಬಗ್ಗೆ ಅರಿವೇ ಇಲ್ಲ. ವಕೀಲರಾಗಿ ಏನು ತಿಳಿದುಕೊಂಡಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಸಂವಿಧಾನವನ್ನು ಬದಲಾಯಿಸುವುದು ಎಂದರೆ ಪಠ್ಯಪುಸ್ತಕದಲ್ಲಿ ಪಠ್ಯವನ್ನು ಬದಲಾವಣೆ ಮಾಡಿದಂತಲ್ಲ. ಈ ದೇಶದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದರು.

‘ಸಂವಿಧಾನವನ್ನು ಪರಾಮರ್ಶೆಗೆ ಒಳಪಡಿಸಬೇಕು ಎಂದು ನಾನು ಹೇಳಿರುವುದು ನಿಜ. ವಿಮರ್ಶೆ ಎಂದರೆ, ಸಂವಿಧಾನವನ್ನು ಪುನರ್‌ ಬರೆಯುವುದು ಎಂದರ್ಥವಲ್ಲ. ಸಂವಿಧಾನ ರಚನೆಯಾದ ನಂತರ ಅದರಿಂದ ಆದ ಅನುಕೂಲ ಆಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಬೇಕಾದ ಅಗತ್ಯವಿದೆ’ ಎಂದು ಹೇಳಿದರು.

ಉತ್ತರಾಧಿಕಾರಿ–ಹೇಳಿದ್ದು ನಿಜ: ‘ಧ್ರುವನಾರಾಯಣ ಅವರನ್ನು ಉತ್ತರಾಧಿಕಾರಿ ಎಂದು ಸಾರ್ವಜನಿಕವಾಗಿ ನೀವು ಹೇಳಿರುವುದು ನಿಜವೇ’ ಎಂದು ಕೇಳಿದ ಪ್ರಶ್ನೆಗೆ, ‘ಹೌದು ಹೇಳಿದ್ದೆ. ಅದಕ್ಕಾಗಿಯೇ ಧ್ರುವ ಅವರಿಗೆ ರಾಜಕೀಯವಾಗಿ ಸಾಕಷ್ಟು ಉತ್ತೇಜನ ನೀಡಿದ್ದೆ. 2008ರಲ್ಲಿ ಕೊಳ್ಳೇಗಾಲದಿಂದ ಟಿಕೆಟ್‌ ಕೊಡಿಸಲು ನೆರವಾಗಿದ್ದೆ. 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಹೈಕಮಾಂಡ್‌ ಮೇಲೆ ಒತ್ತಡ ಹಾಕಿದ್ದೆ. ಆದರೆ, ಅವರು ಪೊಲೀಸ್‌ ಮಾಹಿತಿದಾರರಂತೆ ಒಬ್ಬರಿಂದ ಮತ್ತೊಬ್ಬರಿಗೆ ಏನೇನೋ ಹೇಳುತ್ತಾ ಬಂದರು. ಕುತಂತ್ರಿ ರಾಜಕಾರಣಿಯಾದರು’ ಎಂದು ಹೇಳಿದರು.

ಪ್ರಸಾದ್‌ ಅವಕಾಶವಾದಿ ರಾಜಕಾರಣಿ ಎಂದು ಧ್ರುವನಾರಾಯಣ ಹೇಳಿರುವ ಬಗ್ಗೆ ಕೇಳಿದ್ದಕ್ಕೆ, ‘ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆ ಅರ್ಹತೆಯೂ ಧ್ರುವನಾರಾಯಣಗೆ ಇಲ್ಲ’ ಎಂದು ತೀಕ್ಷ್ಣವಾಗಿ ಹೇಳಿದರು.

‘ಇದು ದೋಸ್ತಿ ವರ್ಸಸ್‌ ದೋಸ್ತಿ ಚುನಾವಣೆ’

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಾಡಿರುವ ಮೈತ್ರಿಯನ್ನು ಟೀಕಿಸಿದ ಅವರು, ‘ಸರ್ಕಾರ ರಚನೆಯಾಗಿ ಎಂಟು ತಿಂಗಳು ಕಳೆದರೂ ಎರಡೂ ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲ. ಕಾಂಗ್ರೆಸ್‌ 8 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಲ್ಲದೆ ಕಾಂಗ್ರೆಸ್‌ ಮುಖಂಡರನ್ನೇ ಅದು ಕಣಕ್ಕಿಳಿಸಿದೆ’ ಎಂದು ವ್ಯಂಗ್ಯವಾಡಿದರು. 

‘ಈ ಮೈತ್ರಿಯಿಂದ ಬಿಜೆಪಿಗೆ ಅನುಕೂಲವಾಗಿದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಿಜೆಪಿ ಸೋಲಿಸಬೇಕು ಎಂದು ಎರಡೂ ಪಕ್ಷಗಳು ಮೈತ್ರಿ ಮಾಡಿವೆ. ಆದರೆ, ಅವುಗಳೇ ಬೈದಾಡಿಕೊಳ್ಳುತ್ತಿವೆ. ರಾಜ್ಯದಲ್ಲಿ ಬಿಜೆಪಿ ಮತ್ತು ದೋಸ್ತಿಗಳ ನಡುವೆ ಹಣಾಹಣಿ ಇಲ್ಲ. ಈ ಚುನಾವಣೆ ದೋಸ್ತಿ ವರ್ಸಸ್‌ ದೋಸ್ತಿ ಆಗಿದೆ’ ಎಂದು ಕುಟುಕಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !