ವಿಜಯಪುರದಲ್ಲಿ 100 ಹಾಸಿಗೆಯ ತಾಯಿ- ಮತ್ತು ಮಕ್ಕಳ ಆಸ್ಪತ್ರೆ ಲೋಕಾರ್ಪಣೆ

7
ವೈದ್ಯಕೀಯ ಕಾಲೇಜು ಮಂಜೂರಿಗೆ ಯತ್ನ: ಶಿವಾನಂದ

ವಿಜಯಪುರದಲ್ಲಿ 100 ಹಾಸಿಗೆಯ ತಾಯಿ- ಮತ್ತು ಮಕ್ಕಳ ಆಸ್ಪತ್ರೆ ಲೋಕಾರ್ಪಣೆ

Published:
Updated:
Deccan Herald

ವಿಜಯಪುರ: ‘ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಕಲ್ ಕಾಲೇಜಿಗೆ ಪೂರಕವಾಗುವ ಎಲ್ಲ ಸೌಕರ್ಯಗಳಿದ್ದು, ಮಂಜೂರಾತಿಗಾಗಿ ಪ್ರಾಮಾಣಿಕವಾಗಿ ಯತ್ನಿಸುವೆ’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಂಗಳವಾರ 100 ಹಾಸಿಗೆಯುಳ್ಳ ತಾಯಿ- ಮತ್ತು ಮಕ್ಕಳ ಆಸ್ಪತ್ರೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಮೇಲೆಯೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಡ ಹೇರಿ ಮಂಜೂರು ಮಾಡಿಸಬೇಕು’ ಎಂದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ ಸಿಟಿ ಸ್ಕ್ಯಾನ್ ಯಂತ್ರ ಅಳವಡಿಸಲಾಗಿದ್ದು, ಇನ್ನೂ 15–20 ದಿನಗಳಲ್ಲಿ ಎಂಆರ್ಐ ಸೌಲಭ್ಯ ಸಹ ಅಳವಡಿಸಲಾಗುವುದು. ಪೈಲಟ್ ಪ್ರಾಜೆಕ್ಟ್‌ನಲ್ಲಿಯೇ ಬಸವನಬಾಗೇವಾಡಿ ಹಾಗೂ ಸಿಂದಗಿ ಭಾಗದ ಎಎನ್ಎಂ ಕೇಂದ್ರಗಳನ್ನು ಹೆಲ್ತ್-ವೆಲ್ತ್ ಸೆಂಟರ್‌ಗಳನ್ನಾಗಿ ಮೇಲ್ದರ್ಜಗೇರಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಎಎನ್ಎಂ ಕೇಂದ್ರಗಳನ್ನೇ ಹೆಲ್ತ್ ಅಂಡ್ ವೆಲ್ತ್ ಸೆಂಟರ್‌ಗಳನ್ನಾಗಿ ಮೇಲ್ದರ್ಜೆಗೇರಿಸುವ ವಿಶೇಷ ಕಾರ್ಯಯೋಜನೆ ರೂಪಿಸಲಾಗುತ್ತಿದೆ. 100 ದಿನಗಳಲ್ಲಿ 400 ವೈದ್ಯರ ನೇಮಕಾತಿ ನಡೆದಿದೆ. ವೈದ್ಯರು ಮತ್ತು ಸರ್ಕಾರದ ಮಧ್ಯವಿದ್ದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲಾಗಿದೆ. ಲೋಕಸೇವಾ ಆಯೋಗದಿಂದ ವೈದ್ಯರ ನೇಮಕಾತಿ ನಿರಂತರವಾಗಿ ನಡೆಯುವ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸಲಾಗುವುದು’ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ ‘ಜಿಲ್ಲೆಯಲ್ಲಿ ನೀರಿಕ್ಷಿತ ಪ್ರಮಾಣದಲ್ಲಿ ಜನೌಷಧಿ ಕೇಂದ್ರಗಳು ಆರಂಭಗೊಂಡಿಲ್ಲ. ಸಿದ್ಧಸಿರಿ ವತಿಯಿಂದ ಜನರ ಉಪಯೋಗಕ್ಕಾಗಿ ಜನೌಷಧಿ ಮಳಿಗೆಗಳನ್ನು ತೆರೆಯಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಹ ಸಲ್ಲಿಸಿದ್ದೇನೆ. ವಿಜಯಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭವಾಗಬೇಕು. ಇದು ನನ್ನ ಆಶಯ ಕೂಡಾ ಹೌದು. ಕೇಂದ್ರ ಸರ್ಕಾರಿ ಮಟ್ಟದಲ್ಲಿ ಇದಕ್ಕೆ ಪೂರಕವಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂಬ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಮಾತನಾಡಿ ‘ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು, ನಾವು ನೆಲೆಸಿರುವ ಸ್ಥಳದ ಬಗ್ಗೆ ಅಭಿಮಾನ ಹೊಂದಿರಲೇಬೇಕು. ಆದರೆ, ಕೆಲ ವೈದ್ಯರು ಹಳ್ಳಿಗಳಲ್ಲಿ ಮೂಲ ಸೌಕರ್ಯದ ಕೊರತೆ ಇರುವುದರಿಂದ ಇರಲಾಗುತ್ತಿಲ್ಲ ಎನ್ನುತ್ತಿದ್ದಾರೆ’ ಎಂದ ಅವರು, ‘ಸಿಂದಗಿಯಲ್ಲಿ ತೋಟಗಾರಿಕಾ ಕಾಲೇಜು ನಿರ್ಮಾಣಕ್ಕೆ ಸಚಿವ ಶಿವಾನಂದ ಪಾಟೀಲ, ನಗರ ಶಾಸಕ ಯತ್ನಾಳ ಕೈ ಜೋಡಿಸಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ, ಜಿಲ್ಲಾ ಪಂಚಾಯ್ತಿಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಕೊಡಬಾಗಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ ಅಖ್ತರ್, ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ, ಜಿಲ್ಲಾ ಪಂಚಾಯ್ತಿ ಸಿಇಒ ವಿಕಾಸ್‌ ಕಿಶೋರ್‌ ಸುರಳಕರ್ ಇದ್ದರು.

ಡಿಎಚ್‌ಒ ಡಾ.ಮಹೇಂದ್ರ ಕಾಪಸೆ ಸ್ವಾಗತಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶರಣಪ್ಪ ಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಬಿರಾದಾರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !