ಒತ್ತಡಕ್ಕೆ ಮಣಿಯದೆ ಸಭೆ ನಿಗದಿ; ಹಿರಿಯರ ಮುನಿಸು..!

7
ಬಿಜೆಪಿ ಸದಸ್ಯರಿಬ್ಬರ ಜಟಾಪಟಿಯಿಂದ ಮೊಟಕುಗೊಂಡಿದ್ದ ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಇಂದು

ಒತ್ತಡಕ್ಕೆ ಮಣಿಯದೆ ಸಭೆ ನಿಗದಿ; ಹಿರಿಯರ ಮುನಿಸು..!

Published:
Updated:

ವಿಜಯಪುರ: ಕೆಲ ಹಿರಿಯ ಸದಸ್ಯರ ಪ್ರತಿರೋಧದ ನಡುವೆಯೂ ಮೇಯರ್‌ ಶ್ರೀದೇವಿ ಲೋಗಾಂವಿ, ಮೊಟಕುಗೊಂಡಿದ್ದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯನ್ನು ಶುಕ್ರವಾರ (ಅ.12) ಕರೆದಿದ್ದಾರೆ.

ಮೇಯರ್‌ ನಿರ್ಧಾರಕ್ಕೆ ಪಾಲಿಕೆ ಸದಸ್ಯರಲ್ಲೇ ಪರ–ವಿರೋಧ ವ್ಯಕ್ತವಾಗಿದೆ. ಬೆರಳೆಣಿಕೆಯ ಹಿರಿಯ ಸದಸ್ಯರು ವಾರದೊಳಗೆ ಮತ್ತೊಮ್ಮೆ ಸಭೆ ನಡೆಸುವ ಅಗತ್ಯವಿರಲಿಲ್ಲ ಎಂದು ತಮ್ಮ ಅಸಮಾಧಾನವನ್ನು ಈಗಾಗಲೇ ಶ್ರೀದೇವಿ ಮುಂಭಾಗವೇ ಹೊರಹಾಕಿದ್ದರೆ; ಕೆಲವರು ದಿಟ್ಟ ನಿರ್ಧಾರ ಎಂದು ಪ್ರಶಂಸಿಸಿದ್ದಾರೆ.

‘ಮುಂದೂಡಿದ್ದ ಸಭೆಯನ್ನು ಕರೆಯುವ ಅಗತ್ಯವಿಲ್ಲ. ಈ ಹಿಂದೆಯೂ ಹಲ ಸಭೆ ನಡೆಸಿಲ್ಲ. ನೀವ್ಯಾಕೆ ವಿನಾಃ ಕಾರಣ ಮೈಮೇಲೆ ಕಿರಿಕಿರಿ ಹಾಕ್ಕೊಳ್ತೀರಿ ಎಂದು ಪಾಲಿಕೆಯ ಅಂಗಳದಲ್ಲಿ ದಶಕದಿಂದ ಬೀಡುಬಿಟ್ಟಿರುವ ಕೆಲ ಅಧಿಕಾರಿಗಳು ಮೇಯರ್‌ ಮೇಲೆ ತಮ್ಮ ಪ್ರಭಾವ ಬೀರಲು ಮುಂದಾದರೂ; ಲೋಗಾಂವಿ ಯಾವುದಕ್ಕೂ ಕಿವಿಗೊಟ್ಟಿಲ್ಲ. ದಿಟ್ಟತನದ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಕೆಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

‘ಈ ಹಿಂದಿನ ಅವಧಿಯಲ್ಲಿನ ಆಡಳಿತದಂತೆಯೇ ಸಾಮಾನ್ಯ ಸಭೆಗಳನ್ನು ನಿಯಮಿತವಾಗಿ ನಡೆಸದೆ, ಎಲ್ಲವನ್ನೂ ಅಧ್ಯಕ್ಷರ ಅಪ್ಪಣೆ ಮೇರೆಗೆ ನಿರ್ವಹಿಸಲು ಕೆಲ ಪಟ್ಟಭದ್ರರು ಯತ್ನಿಸಿದ್ದರು. ಇದಕ್ಕೆ ಮೇಯರ್ ಆಸ್ಪದ ನೀಡಿಲ್ಲ. ಸದ್ಯದ ಮಟ್ಟಿಗೆ ಇದು ಪಾಲಿಕೆ ಆಡಳಿತದಲ್ಲಿ ಭರವಸೆ ಮೂಡಿಸಿದ ವಿಷಯವಾಗಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಟಾಪಟಿಯಿಂದ ಮುಂದೂಡಲ್ಪಟ್ಟಿತ್ತು:

ಐದನೇ ಅವಧಿಯ ಮೇಯರ್‌–ಉಪ ಮೇಯರ್‌ ಆಯ್ಕೆಗೊಂಡ ಎರಡು ತಿಂಗಳ ಬಳಿಕ ಅ 7ರಂದು ಮೊದಲ ಸಾಮಾನ್ಯ ಸಭೆ ಆಯೋಜನೆಗೊಂಡಿತ್ತು. ಈ ಸಭೆಯಲ್ಲಿ ಲೀಜ್‌ ಆಸ್ತಿ ಪರಭಾರೆಗೆ ಸಂಬಂಧಿಸಿದಂಥ ವಿಷಯ ಹೊರತುಪಡಿಸಿದರೆ, ಇನ್ಯಾವುದೇ ಪ್ರಮುಖ ವಿಷಯ ಚರ್ಚೆಗೊಂಡಿರಲಿಲ್ಲ.

ಸಭೆ ತಾಸುಗಟ್ಟಲೇ ಗದ್ದಲದಲ್ಲೇ ಮುಳುಗಿತ್ತು. ಬಿಜೆಪಿ ಸದಸ್ಯರಾದ ರಾಜಶೇಖರ ಮಗಿಮಠ, ಆನಂದ ಧುಮಾಳೆ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಜಟಾಪಟಿಗಿಳಿಯುತ್ತಿದ್ದಂತೆ, ಮೇಯರ್‌ ಅನಿರ್ದಿಷ್ಟ ಅವಧಿ ಸಭೆ ಮುಂದೂಡಿದ್ದರು.

ಈ ಘಟನೆ ಕುರಿತಂತೆ ನಗರದಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. ಇದರ ಬೆನ್ನಿಗೆ ಮಂಗಳವಾರವಷ್ಟೇ (ಅ 9) ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಿಲ್ಲಾಧಿಕಾರಿಗೆ ಸುದೀರ್ಘ ಪತ್ರ ಬರೆದಿದ್ದರು. ಇದನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿ, ‘ಗೂಂಡಾ ವರ್ತನೆ ಪ್ರದರ್ಶಿಸಿದ್ದ ಸದಸ್ಯನನ್ನು ಅಮಾನತುಗೊಳಿಸಬೇಕು.

ಇನ್ಮುಂದೆ ಸಾಮಾನ್ಯ ಸಭೆ ಆರಂಭವಾಗುವ ಮುನ್ನವೇ ವೈದ್ಯಕೀಯ ತಪಾಸಣೆ, ಶಸ್ತ್ರಾಸ್ತ್ರ ತಪಾಸಣೆ ನಡೆಸಬೇಕು ಎಂದು ಕೋರಿದ್ದರು. ಮಹಿಳಾ ಸದಸ್ಯರಿಗೆ ರಕ್ಷಣೆ ಒದಗಿಸುವಂತೆಯೂ’ ಪತ್ರದಲ್ಲಿ ಉಲ್ಲೇಖಿಸಿದ್ದನ್ನು ಇಲ್ಲಿ ದಾಖಲಿಸಬಹುದು.

ಸರ್ಕಾರದ ನಿರ್ಧಾರ; ಎಸ್‌.ಬಿ.ಶೆಟ್ಟೆಣ್ಣವರ

‘ಪಾಲಿಕೆಯ ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ನಡೆದ ಘಟನಾವಳಿಗೆ ಸಂಬಂಧಿಸಿದಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂಬುದನ್ನು ಮಾಧ್ಯಮಗಳಲ್ಲಿ ಓದಿ ತಿಳಿದುಕೊಂಡಿರುವೆ. ಇದೂವರೆಗೂ ನನ್ನ ಟೇಬಲ್‌ಗೆ ಆ ಪತ್ರ ಬಂದಿಲ್ಲ.

ಪತ್ರ ಕೈ ಸೇರುತ್ತಿದ್ದಂತೆ ಪಾಲಿಕೆ ಆಯುಕ್ತರಿಗೆ ಕಳುಹಿಸಿಕೊಡುವೆ. ಘಟನೆ ಬಗ್ಗೆ ತನಿಖೆ ನಡೆಸಿ, ವರದಿ ಕೊಡುವಂತೆ ಸೂಚಿಸುತ್ತೇನೆ. ಆಯುಕ್ತರು ನೀಡಿದ ವರದಿಯನ್ನು ಸರ್ಕಾರದ ಸಂಬಂಧಿಸಿದ ಸಚಿವಾಲಯಕ್ಕೆ ಕಳುಹಿಸಿಕೊಡುವೆ. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ ತಿಳಿಸಿದರು.

ಎಂದಿನಂತೆ ಸಭೆ: ಡಾ.ಔದ್ರಾಮ

‘ಈ ಹಿಂದೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಯಾವ ರೀತಿ ನಡೆದಿದ್ದವು ಅದೇ ರೀತಿ ಶುಕ್ರವಾರದ ಮುಂದುವರಿಕೆ ಸಭೆಯೂ ನಡೆಯಲಿದೆ. ನಿಗದಿತ ಭದ್ರತೆ ಮುಂದುವರೆಯಲಿದೆ. ಯಾವುದೇ ವಿಶೇಷಗಳು ಇದರಲ್ಲಿ ಇರುವುದಿಲ್ಲ’ ಎಂದು ಪಾಲಿಕೆ ಆಯುಕ್ತ ಡಾ.ಔದ್ರಾಮ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !