ಗುರುವಾರ , ಸೆಪ್ಟೆಂಬರ್ 19, 2019
29 °C

ನಡುರಸ್ತೆಯಲ್ಲೇ ಕಸ ವಿಂಗಡಣೆ!

Published:
Updated:
Prajavani

ಮನೆಗಳಿಂದ ಸಂಗ್ರಹಿಸುವ ಕಸವನ್ನು ನಡುರಸ್ತೆಗಳಲ್ಲಿಯೇ ವಿಂಗಡಣೆ ಮಾಡಿ, ಬಿಬಿಎಂಪಿ ಲಾರಿಗಳಿಗೆ ವಿಲೇವಾರಿ ಮಾಡಲಾಗುತ್ತಿದೆ. ಅಸಹನೀಯ ಗಬ್ಬುನಾತ, ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕಸ, ಅದರಿಂದ ಹರಿಯುವ ಕೊಳಚೆ ನೀರಿನಿಂದಾಗಿ ಮೂಗು ಮುಚ್ಚಿಕೊಂಡು ತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಮುತ್ತಲಿನ ಮನೆಯವರ ಸ್ಥಿತಿಯಂತೂ ಹೇಳತೀರದು.

ಬೆಂಗಳೂರು ಪ್ಯಾಲೇಸ್‌ ಗುಟ್ಟಳ್ಳಿ ಟಾಂಗಾ ಸರ್ಕಲ್‌, ಗುಟ್ಟಳ್ಳಿಯಿಂದ ವಸಂತನಗರದ ಕಡೆ ಹೋಗುವ ಅರಮನೆ ರಸ್ತೆ, ಮಲ್ಲೇಶ್ವರದ ರೈಲು ನಿಲ್ದಾಣದ ಎದುರಿನ ರಸ್ತೆ, ಎಚ್‌ಬಿಆರ್‌ ಬಡಾವಣೆಯ ಹೆಣ್ಣೂರು ವರ್ತುಲ ರಸ್ತೆಯಲ್ಲಿ ಬೆಳ್ಳಂಬೆಳಗಿಯೇ ಇಂತಹ ದೃಶ್ಯಗಳು ಸಾಮಾನ್ಯ. ಕಸ ವಿಂಗಡಣೆ ಮತ್ತು ವಿಲೇವಾರಿಗೆ ಬಿಬಿಎಂಪಿ ನಿರ್ದಿಷ್ಟ ಜಾಗ ಗುರುತು ಮಾಡಿದೆ. ಆದರೂ, ಕಸ ಹೊತ್ತು ಬರುವ ಆಟೊ ಮತ್ತು ಲಾರಿಗಳನ್ನು ಬೇಕೆಂದಲ್ಲಿ ನಿಲ್ಲಿಸಿ ಕಸ ವಿಂಗಡಿಸಲಾಗುತ್ತಿದೆ. ಇದರಿಂದಾಗಿ ರಸ್ತೆಗೆ ಬೀಳುವ ಕೊಳೆತ ಆಹಾರವನ್ನು ನಾಯಿ ಮತ್ತು ಕಾಗೆಗಳು ಚೆಲ್ಲಾಪಿಲ್ಲಿ ಮಾಡುತ್ತವೆ. ವಾಹನಗಳಿಂದ ರಸ್ತೆ ತುಂಬ ಸೋರುವ ಮಲೀನ ನೀರಿನಿಂದ ರೋಗ, ರುಜಿನ ಹರಡುತ್ತಿವೆ.

ಮಲ್ಲೇಶ್ವರದ ರೈಲು ನಿಲ್ದಾಣ ಬಳಿ ಬಿಬಿಎಂಪಿ ತ್ಯಾಜ್ಯದ ಜತೆ ಸ್ಥಳೀಯರು ತಂದು ಸುರಿಯುವ ಕಸ, ಕಡ್ಡಿ, ಟೈರ್, ಹರಿದ ಹಾಸಿಗೆ, ಆಸ್ಪತ್ರೆ ತ್ಯಾಜ್ಯ, ಹೋಟೆಲ್‌ ಕಸ ಪರಿಸ್ಥಿತಿಯನ್ನು ಮತ್ತಷ್ಟು ಅಸಹನೀಯಗೊಳಿಸಿವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುರೇಶ್.

ಈ ಬಗ್ಗೆ ಬಿಬಿಎಂಪಿ ಕಚೇರಿಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೆರೆಡು ದಿನ ಮಾತ್ರ ಸ್ವಚ್ಛತೆ ಕಾಣುತ್ತದೆ. ಮೂರನೇ ದಿನದಿಂದ ಮತ್ತದೇ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದುವರೆಗೂ ತಪ್ಪಿಲ್ಲ ಎನ್ನುವುದು ಸ್ಥಳೀಯ ನಿವಾಸಿಗಳ ಅಳಲು. 

Post Comments (+)