ಖದರ್‌ ಕಳೆದುಕೊಂಡ ಎಲೆಕ್ಷನ್‌ ಪ್ರಚಾರ

ಶುಕ್ರವಾರ, ಏಪ್ರಿಲ್ 19, 2019
23 °C
ಚುನಾವಣಾ ಆಯೋಗದ ಕಡಿವಾಣಕ್ಕೆ ಮಂಕಾದ ವಹಿವಾಟು

ಖದರ್‌ ಕಳೆದುಕೊಂಡ ಎಲೆಕ್ಷನ್‌ ಪ್ರಚಾರ

Published:
Updated:
Prajavani

ಧ್ವನಿವರ್ಧಕಗಳ ಅಬ್ಬರ, ಕಾರ್ಯಕರ್ತರ ಆರ್ಭಟ, ಬಣ್ಣದ ಬಂಟಿಂಗ್ಸ್‌, ಧ್ವಜಗಳ ಹಾರಾಟ ಮತ್ತು ಪ್ರಚಾರ ಸಭೆಗಳು ಈ ಸಲದ ಲೋಕಸಭೆ ಚುನಾವಣೆಯಲ್ಲಿ ಕಾಣುತ್ತಿಲ್ಲ. ಅಷ್ಟರಮಟ್ಟಿಗೆ ಚುನಾವಣೆ ಮೊದಲಿನ ಖದರು ಕಳೆದುಕೊಂಡಿದೆ.

ಹಗಲುರಾತ್ರಿ ಕೆಲಸ ಮಾಡುತ್ತಿದ್ದ ಪ್ರಿಂಟಿಂಗ್‌ ಪ್ರೆಸ್‌ ಮತ್ತು ಜಾಹೀರಾತು ಸಂಸ್ಥೆಗಳು ಬಿಕೊ ಎನ್ನುತ್ತಿವೆ. ಚುನಾವಣೆ ಸಮಯದಲ್ಲಿ ಕೈತುಂಬಾ ಸಂಪಾದಿಸುತ್ತಿದ್ದ ಬ್ಯಾನರ್‌ ಕಲಾವಿದರು, ಫ್ಲೆಕ್ಸ್‌ ಪ್ರಿಂಟ್‌ ಮಾಡುತ್ತಿದ್ದ ಅಂಗಡಿಗಳು, ಖಾಸಗಿ ವಾಹನಗಳ ಮಾಲೀಕರು ಕೆಲಸ ಇಲ್ಲದೆ ಕುಳಿತಿದ್ದಾರೆ. ಅಭ್ಯರ್ಥಿಗಳ ಖರ್ಚು, ವೆಚ್ಚಗಳಿಗೆ ಆಯೋಗ ಹಾಕಿದ ಅಂಕುಶ ಇದಕ್ಕೆ ಕಾರಣ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಮತ್ತು ನೋಟು ರದ್ದು ಹೊಡೆತದಿಂದ ಸಣ್ಣ ಉದ್ಯಮಗಳು ಚೇತರಿಸಿಕೊಳ್ಳುವ ಮುನ್ನವೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಫ್ಲೆಕ್ಸ್‌, ಬ್ಯಾನರ್‌ಗಳಿಗೆ ಕಡಿವಾಣ ಹಾಕಿತು. ಇದು ಡಿಜಿಟಲ್ ಫ್ಲೆಕ್ಸ್‌ ಉದ್ಯಮಕ್ಕೆ ಮಾರಕವಾಯಿತು. 

ಕರಪತ್ರ ಮುದ್ರಣ, ಜಾಹೀರಾತು ಪ್ರಕಟಣೆ, ಬ್ಯಾನರ್‌ಗಳಿಗೆ ಚುನಾವಣಾ ಆಯೋಗದ ಪರವಾನಗಿ ಕಡ್ಡಾಯ. ನೀತಿ, ಸಂಹಿತೆ ಮತ್ತು ಮಾರ್ಗಸೂಚಿ ಉಲ್ಲಂಘನೆಯಾದರೆ ಕೇಸು, ಕೋರ್ಟ್‌ಗಳ ಭೀತಿ. ಇದರಿಂದಾಗಿ ಚುನಾವಣೆ ಸಾಮಗ್ರಿ ತಯಾರಿಸುವ ಕೆಲಸದ ಸಹವಾಸಕ್ಕೆ ಯಾರೂ ಹೋಗುತ್ತಿಲ್ಲ. ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಾಕಷ್ಟು ಹಣ ಹೊಂದಿದ್ದರೂ ಅದನ್ನು ಖರ್ಚು ಮಾಡುವ ಮಾಗರ್ಗಳು ಮುಚ್ಚಿವೆ. ಮಾರುಕಟ್ಟೆಯಲ್ಲಿ ಹಣದ ಹರಿವಿಲ್ಲದೆ ವ್ಯಾಪಾರ, ವಹಿವಾಟು ಮಂಕಾಗಿದೆ.    

ವಾಸ್ತವ ಅರಿತ ಉದ್ಯಮಗಳು ಆದಾಯಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡಿವೆ. ಫ್ಯಾಬ್ರಿಕ್‌ನಲ್ಲಿ ಜನ್ಮದಿನದ ಸಮಾರಂಭ, ಮದುವೆ, ಪೂಜೆ, ಆರತಕ್ಷತೆ ಸಮಾರಂಭಗಳು ಹಾಗೂ ಕಾರ್ಪೊರೇಟ್‌ ಆರ್ಡರ್‌ಗಳನ್ನು ಪಡೆಯುತ್ತಿದ್ದಾರೆ.

ಅಭ್ಯರ್ಥಿಗಳು ಕೂಡ ಪ್ರಚಾರ ವೈಖರಿ ಬದಲಾಯಿಸಿಕೊಂಡಿದ್ದಾರೆ. ಕಾರ್ಯಕರ್ತರೊಂದಿಗೆ ಮನೆ, ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ರೋಡ್‌ ಶೋಗಳ ಮೂಲಕ ಮತದಾರರನ್ನು ತಲುಪಲು ಯತ್ನಿಸುತ್ತಿದ್ದಾರೆ. ಕರಪತ್ರ, ಕೈಪಿಡಿಗಳೇ ಪ್ರಚಾರದ ಪ್ರಮುಖ ಸಾಧನಗಳು! 

ಕೋರ್ಟ್‌ಗೆ ಅಲೆಯುವ ಜಂಜಾಟ ಬೇಡ

ಅಭ್ಯರ್ಥಿಗಳ ಖರ್ಚು, ವೆಚ್ಚಗಳ ಮೇಲೆ ಆಯೋಗ ಹದ್ದಿನ ಕಣ್ಣಿಡಲು ಶುರು ಮಾಡಿದ ಮೇಲೆ 15 ವರ್ಷಗಳಿಂದ ಚುನಾವಣೆ ಕೆಲಸ ಅಷ್ಟಕ್ಕಷ್ಟೆ. ಚುನಾವಣಾ ನೀತಿ, ಸಂಹಿತೆ ಕಟ್ಟು ನಿಟ್ಟಾಗಿ ಜಾರಿಯಿಂದ ಸ್ವಲ್ಪ ಹೆಚ್ಚು, ಕಡಿಮೆಯಾದರೂ ಕೋರ್ಟ್‌ ಅಲೆಯಬೇಕಾಗುತ್ತದೆ. ಹೀಗಾಗಿ ಚುನಾವಣೆ ಕೆಲಸದ ತಂಟೆಯೇ ಬೇಡ ಎಂದು ಸುಮ್ಮನಿದ್ದೇವೆ. ಮೊದಲಾದರೆ ಒಂದೂವರೆ ತಿಂಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೆವು. ಈಗ ಆ ಕಾಲ ಇಲ್ಲ ಬಿಡಿ ಎನ್ನುತ್ತ ಶೇಷಾದ್ರಿಪುರಂನ ಸಿ.ಎಂ. ರಾಮ್‌ ಆರ್ಟ್ಸ್‌ನ ಮಾಲೀಕ ರಾಜೇಶ್‌ ಮಾತಿಗಿಳಿದರು. 

50 ವರ್ಷಗಳ ಹಿಂದೆ ತಂದೆ ಹುಟ್ಟು ಹಾಕಿದ ರಾಮ್‌ ಆರ್ಟ್ಸ್‌ ಉಸ್ತುವಾರಿಯನ್ನು ಅವರೀಗ ನೋಡಿಕೊಳ್ಳುತ್ತಿದ್ದಾರೆ. ಚುನಾವಣೆ ಬಂದರೆ ಸಿ.ಎಂ ರಾಮ್‌ ಆರ್ಟ್ಸ್‌ನಲ್ಲಿ ಕಾಲಿಡಲು ಜಾಗ ಇರುತ್ತಿರಲಿಲ್ಲ ಎಂದು ನೆನಪಿಸಿಕೊಳ್ಳುವ ರಾಜೇಶ್‌ ಮಾತಿನಲ್ಲಿ ವಿಷಾದದ ಛಾಯೆ ಇತ್ತು.

ಮೂರು ಜನರಿಗೇ ಕೆಲಸ ಇಲ್ಲ

ಬಿಬಿಎಂಪಿ ಫ್ಲೆಕ್ಸ್‌ ಬ್ಯಾನ್‌ ಮಾಡಿದ ನಂತರ ದಿನಕ್ಕೆ ₹300 ದುಡಿಯುವುದೇ ಕಷ್ಟವಾಗಿದೆ. ಫ್ಯಾಬ್ರಿಕ್‌ ಬೆಲೆ ಕೂಡ ಜಾಸ್ತಿಯಾಗಿರುವುದರಿಂದ ಗ್ರಾಹಕರ ಸಂಖ್ಯೆ ಕುಸಿದಿದೆ. ಚುನಾವಣೆ ಸಂದರ್ಭದಲ್ಲೂ ಕೆಲಸ ಇಲ್ಲ ಎಂದು ಶೇಷಾದ್ರಿಪುರಂನ ಮುರುಗನ್‌ ಆರ್ಟ್ಸ್‌ನ ಮಷಿನ್‌ ಆಪರೇಟರ್‌ ಮುರುಗನ್‌ ಬೇಸರ ವ್ಯಕ್ತಪಡಿಸಿದರು. 

ಚುನಾವಣೆ ಸಮಯದಲ್ಲಿ ತಿಂಗಳುಗಟ್ಟಲೇ ಹಗಲು, ರಾತ್ರಿ ಕೆಲಸ ಮಾಡುತ್ತಿದ್ದೆವು. ಹೆಚ್ಚುವರಿ ಕಲಾವಿದರನ್ನು ನೇಮಕ ಮಾಡಿಕೊಳ್ಳಲಾಗುತಿತ್ತು. ಈಗ ಇರುವ ಮೂವರು ಕೆಲಸಗಾರರಿಗೆ ಮಾಡಲು ಕೆಲಸ ಇಲ್ಲ. ಒಂದು ಬ್ಯಾನರ್‌ ಬರೆಯಬೇಕು ಎಂದರೂ ಕಡ್ಡಾಯವಾಗಿ ಚುನಾವಣಾ ಆಯೋಗದ ಪರವಾನಗಿ ಪತ್ರ  ಪಡೆಯಬೇಕು. ಹೀಗಾಗಿ ಆ ಜಂಜಾಟವೇ ಬೇಡ ಎನ್ನುತ್ತಾರೆ ರವಿ ಆರ್ಟ್ಸ್‌ನ ಮಾಲೀಕ ರವಿ ಮತ್ತು ಅವರ ಸಹೋದರ ವೇಲು.

ಕೈಗೆ ಸಿಗದ ರಾಜಕಾರಣಿಗಳು

25 ಸಾವಿರ ಕರಪತ್ರ, ಕೈಪಿಡಿ ಮುದ್ರಿಸಲು ಚುನಾವಣಾ ಆಯೋಗ ಅನುಮತಿ ಇದೆ. ಅರ್ಧ ಹಣ ನೀಡಿ ಪ್ರಚಾರ ಸಾಮಗ್ರಿ ಮುದ್ರಿಸಿಕೊಂಡು ಹೋಗುವ ರಾಜಕಾರಣಿಗಳು ಚುನಾವಣೆ ನಂತರ ಕೈಗೆ ಸಿಗುವುದಿಲ್ಲ. ಅವರ ಮನೆ, ಕಚೇರಿಗೆ ಅಲೆದು, ಅಲೆದು ಸುಸ್ತಾದರೂ ಬಾಕಿ ಹಣ ವಸೂಲಿಯಾಗುವುದಿಲ್ಲ. ಈಗ ಚುನಾವಣೆ ಕೆಲಸ ಎಂದರೆ ನೂರೆಂಟು ರಗಳೆ. ಮೊದಲಿನಷ್ಟು ಸುಲಭವಲ್ಲ. ಪತ್ರಿಕೆಗಳ ಜಾಹೀರಾತು ಕೂಡ ಕಡಿಮೆಯಾಗಿವೆ. ಟಿ.ವಿಗಳಿಗೆ ಜಾಹೀರಾತು ಕೊಡುವವರ ಸಂಖ್ಯೆ ದೊಡ್ಡದಿದೆ. ಚುನಾವಣೆ ಸಮಯಕ್ಕಿಂತ ಶಾಲೆ, ಕಾಲೇಜು ಪುನಾರಂಭ ಸಮಯದಲ್ಲಿ ಹೆಚ್ಚು ಆದಾಯ ಬರುತ್ತದೆ

– ವಸಂತ ಪಾಟೀಲ, ಪಾಟೀಲ ಡಿಸೈನ್ಸ್‌ ಮಾಲೀಕ, ಗಾಯತ್ರಿ ನಗರ

***

ಪ್ರಚಾರ ಸಾಮಗ್ರಿ ಬೇಕಿಲ್ಲ

ಚುನಾವಣಾ ಆಯೋಗದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಕೆಲವು ಚಿಕ್ಕಪುಟ್ಟ ಜಾಹೀರಾತು, ಬ್ಯಾನರ್‌ ಸಿದ್ಧಪಡಿಸಿಕೊಟ್ಟಿದ್ದೇವೆ. ಅಭ್ಯರ್ಥಿಗಳು ಮನೆ, ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗುವ ಕಾರಣ ಕರಪತ್ರ ಬಿಟ್ಟರೆ ಹೆಚ್ಚಿನ ಪ್ರಚಾರ ಸಾಮಗ್ರಿ ಬೇಕಾಗಿಲ್ಲ. ಅಭ್ಯರ್ಥಿಗಳು ಪ್ರಚಾರಕ್ಕೆ ಹೊಸ ಸಾಧನಗಳನ್ನು ಕಂಡುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ

ಫೋರ್‌ ಕಲರ್ಸ್‌ ಫ್ಲೆಕ್ಸ್‌ ಪ್ರಿಂಟಿಂಗ್‌ ಮಾಲೀಕರು, ಮಲ್ಲೇಶ್ವರಂ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !