ಫಲಫುಷ್ಪ ಪ್ರದರ್ಶನ: ಲಾಲ್‌ಬಾಗ್‌ನಿಂದ ಮೆಟ್ರೊದಲ್ಲಿ ಎಲ್ಲಿಗೆ ಪ್ರಯಾಣಿಸಿದರೂ ₹ 30

7
ನೂಕುನುಗ್ಗಲು ತಗ್ಗಿಸಲು ಪೇಪರ್‌ ಟಿಕೆಟ್‌ ಪರಿಚಯಿಸಿದ ‘ನಮ್ಮ ಮೆಟ್ರೊ’

ಫಲಫುಷ್ಪ ಪ್ರದರ್ಶನ: ಲಾಲ್‌ಬಾಗ್‌ನಿಂದ ಮೆಟ್ರೊದಲ್ಲಿ ಎಲ್ಲಿಗೆ ಪ್ರಯಾಣಿಸಿದರೂ ₹ 30

Published:
Updated:

ಬೆಂಗಳೂರು: ಇದೇ 11 (ಶನಿವಾರ), 12 (ಭಾನುವಾರ) ಹಾಗೂ 15ರಂದು (ಬುಧವಾರ) ‘ನಮ್ಮ ಮೆಟ್ರೊ’ ರೈಲಿನಲ್ಲಿ ಲಾಲ್‌ಬಾಗ್‌ ನಿಲ್ದಾಣದಿಂದ ಬೇರಾವುದೇ ನಿಲ್ದಾಣಕ್ಕೆ ಪ್ರಯಾಣಿಸಲು ₹ 30 ಪಾವತಿಸಬೇಕು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‌ಬಾಗ್‌ ಉದ್ಯಾನದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನದ ವೇಳೆ ಇಲ್ಲಿನ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್‌ ಖರೀದಿಗೆ ನೂಕು ನುಗ್ಗಲು ಉಂಟಾಗುವುದನ್ನು ತಡೆಯುವ ಸಲುವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಈ ವ್ಯವಸ್ಥೆ ಮಾಡಿದೆ.

‘ವಾರಾಂತ್ಯದಲ್ಲಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಲಾಲ್‌ಬಾಗ್‌ಗೆ ಭಾರಿ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಾರೆ. ಹಾಗಾಗಿ ಇಲ್ಲಿನ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್‌ಗಾಗಿ ಜನಜಂಗುಳಿ ಹೆಚ್ಚು ಇರುತ್ತದೆ. ಪ್ರಯಾಣಿಕರು ಇಲ್ಲಿ ಟಿಕೆಟ್‌ಗಾಗಿ ಸರತಿಯಲ್ಲಿ ಕಾಯುವುದನ್ನು ತಪ್ಪಿಸಲು ಪೇಪರ್‌ ಟಿಕೆಟ್‌ ವ್ಯವಸ್ಥೆ ಮಾಡಿದ್ದೇವೆ. ಪ್ರಯಾಣಿಕರು ಬೇರೆ ನಿಲ್ದಾಣದಿಂದ ಲಾಲ್‌ಬಾಗ್‌ಗೆ ಟಿಕೆಟ್‌ ಖರೀದಿಸುವಾಗ ₹ 30 ಪಾವತಿಸಿ ಮರುಪ್ರಯಾಣದ ಟಿಕೆಟ್‌ ಪಡೆಯಬಹುದು. ಫಲಫುಷ್ಪ ಪ್ರದರ್ಶನ ವೀಕ್ಷಿಸಿ ನಿರ್ಗಮಿಸುವಾಗ ಆ ಪೇಪರ್‌ ಟಿಕೆಟ್‌ ತೋರಿಸಿ ಲಾಲ್‌ಬಾಗ್‌ ನಿಲ್ದಾಣ ಪ್ರವೇಶಿಸಬಹುದು’ ಎಂದು ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪೇಪರ್‌ ಟಿಕೆಟ್‌ ಬಳಕೆ ಆಯಾ ದಿನಕ್ಕೆ ಸೀಮಿತ. ಲಾಲ್‌ಬಾಗ್‌ ಹೊರತುಪಡಿಸಿ ಬೇರೆ ನಿಲ್ದಾಣಗಳಲ್ಲಿ ಪ್ರಯಾಣಿಸುವವರು ಎಂದಿನಂತೆ ಟೋಕನ್‌ ಅಥವಾ ಸ್ಮಾರ್ಟ್‌ ಕಾರ್ಡ್‌ ಬಳಸಬಹುದು. ಲಾಲ್‌ಬಾಗ್‌ನಿಂದ ಸ್ಮಾರ್ಟ್‌ಕಾರ್ಡ್‌ ಬಳಸಿ ಪ್ರಯಾಣಿಸುವವರಿಗೆ ಎಂದಿನ ದರವೇ ಅನ್ವಯವಾಗಲಿದೆ’ ಎಂದು ಅವರು ವಿವರಿಸಿದರು.

ಪೇಪರ್‌ ಟಿಕೆಟ್‌ ವ್ಯವಸ್ಥೆಯಿಂದ ದೂರದ ನಿಲ್ದಾಣಗಳಿಗೆ ಪ್ರಯಾಣಿಸುವವರಿಗೆ ಪ್ರಯಾಣ ವೆಚ್ಚ ಕಡಿಮೆ ಆಗಲಿದೆ. ಆದರೆ, ಲಾಲ್‌ಬಾಗ್‌ಗೆ ಸಮೀಪದಲ್ಲಿರುವ ಸೌಂತ್‌ಎಂಡ್‌ ವೃತ್ತ, ಆರ್‌.ವಿ.ರಸ್ತೆ ನಿಲ್ದಾಣ, ಬನಶಂಕರಿ, ಯಲಚೇನಹಳ್ಳಿ, ನ್ಯಾಷನಲ್‌ ಕಾಲೇಜು, ಕೆ.ಆರ್‌.ಮಾರುಕಟ್ಟೆ, ಚಿಕ್ಕಪೇಟೆ, ಮೆಜೆಸ್ಟಿಕ್‌ ನಿಲ್ದಾಣಗಳಿಗೆ ಪ್ರವೇಶಿಸುವವರಿಗೆ ಈ ವ್ಯವಸ್ಥೆ ದುಬಾರಿ ಆಗಲಿದೆ.

‘ಸಾಮಾನ್ಯವಾಗಿ ಲಾಲ್‌ಬಾಗ್‌ ಆಸುಪಾಸಿನಲ್ಲಿ ಮನೆ ಇರುವವರು ಫಲಪುಷ್ಫ ಪ್ರದರ್ಶನಕ್ಕೆ ಹೋಗಲು ಮೆಟ್ರೊ ಬಳಸುವುದು ಕಡಿಮೆ. ಮೆಟ್ರೊ ಪ್ರಯಾಣ ಹಿತಕರವಾಗಿರಲಿ ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದು ಶಂಕರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !