ಮೆಟ್ರೊ ನಿಲ್ದಾಣ: ಬೇಕಾಬಿಟ್ಟಿ ವಾಹನ ನಿಲುಗಡೆ

7
ದೂರವಾಯಿತು ನೆಮ್ಮದಿ: ಜಯನಗರ ನಿವಾಸಿಗಳ ಅಳಲು

ಮೆಟ್ರೊ ನಿಲ್ದಾಣ: ಬೇಕಾಬಿಟ್ಟಿ ವಾಹನ ನಿಲುಗಡೆ

Published:
Updated:
Deccan Herald

ಬೆಂಗಳೂರು: ನಗರದ ವ್ಯವಸ್ಥಿತ ಹಾಗೂ ಪ್ರಶಾಂತ ಬಡಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಜಯನಗರದ ಪರಿಸ್ಥಿತಿ ನಾಲ್ಕೈದು ವರ್ಷಗಳಲ್ಲಿ ಸಂಪೂರ್ಣ ಬದಲಾಗಿದೆ. ಹಿಂದೆ ಇಲ್ಲಿದ್ದ ನೆಮ್ಮದಿಯ ವಾತಾವರಣ ಈಗ ಉಳಿದಿಲ್ಲ.

‘ನಮ್ಮ ಮೆಟ್ರೊ’ ಸೇವೆಯಿಂದ ಅನುಕೂಲವೇನೋ ಆಗಿದೆ. ಆದರೆ, ಮೆಟ್ರೊ ಪ್ರಯಾಣಿಕರು ಇಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸುತ್ತಿದ್ದು, ಇದರಿಂದ ನಮ್ಮ ನೆಮ್ಮದಿ ದೂರವಾಗಿದೆ. ಒಂದು ಕಾಲದಲ್ಲಿ ನಗರದಲ್ಲಿ ವಾಸಕ್ಕೆ ಅತ್ಯಂತ ಪ್ರಶಸ್ತವಾದ ಸ್ಥಳ ಎಂಬ ಹೆಗ್ಗಳಿಕೆಗೆ ‍ಪಾತ್ರವಾಗಿದ್ದ ಈ ಬಡಾವಣೆಯ ಸ್ಥಿತಿ ಈಗ ಅವೆನ್ಯೂ ರಸ್ತೆಗಿಂತಲೂ ಕಡೆಯಾಗುತ್ತಿದೆ’ ಎಂದು ದೂರುತ್ತಾರೆ ಜಯನಗರ 8ನೇ ಬ್ಲಾಕ್‌ ನಿವಾಸಿಗಳು.

‘ನಮ್ಮ ಮನೆಯ ಗೇಟಿನ ಎದುರೇ ವಾಹನಗಳನ್ನು ನಿಲ್ಲಿಸುತ್ತಾರೆ. ಕೆಲವೊಮ್ಮೆ ಎರಡು ದಿನಗಳ ಬಳಿಕವೂ ವಾಹನವನ್ನು ಕೊಂಡೊಯ್ಯುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಗಲಾಟೆ ಮಾಡುತ್ತಾರೆ. ಜಗಳವಾಡುವುದೀಗ ನಮಗೆ ನಿತ್ಯದ ಕರ್ಮವಾಗಿದೆ’ ಎಂದು ಸ್ಥಳೀಯ ನಿವಾಸಿ ಮುರಳಿ ಬೇಸರ ವ್ಯಕ್ತಪಡಿಸಿದರು.

‘ಮೆಟ್ರೊ ನಿಗಮದವರು ‍ಪ್ರಯಾಣಿಕರ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿಲ್ಲ. ಬೇಕಾ ಬಿಟ್ಟಿ ವಾಹನ ನಿಲ್ಲಿಸುವುದರಿಂದ ಪಾದಚಾರಿ ಮಾರ್ಗವಂತೂ ಇದ್ದೂ ಇಲ್ಲದಂತಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪಾಲಿಕೆ ಅಧಿಕಾರಿಗಳಿಗಂತೂ ನಮ್ಮ ಸಮಸ್ಯೆ ಕಾಣಿಸುವುದೇ ಇಲ್ಲ’ ಎಂದರು.

‘ಮೆಟ್ರೊ ಕಾಮಗಾರಿಗೆ ಇಲ್ಲಿನ ಉದ್ಯಾನವನ್ನು ಒತ್ತುವರಿ ಮಾಡಿದರು. ಅಳಿದುಳಿದ ಉದ್ಯಾನವು ಮೆಟ್ರೊ ಸೇವೆ ಆರಂಭವಾದ ಬಳಿಕ ಗಬ್ಬೆದ್ದು ಹೋಗಿದೆ. ಕೆಲವು ಪ್ರಯಾಣಿಕರು ಉದ್ಯಾನದಲ್ಲೇ ಮೂತ್ರವಿಸರ್ಜನೆ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕುವವರಿಲ್ಲ’ ಎಂದು ಸ್ಥಳೀಯರೊಬ್ಬರು ದೂರಿದರು.

'ಕೆಲವು ಪುಂಡ ಪೊಕರಿಗಳು ಯಾರದೋ ಮನೆಯ ಕಾಂಪೌಂಡ್‌ ಮೇಲೆ  ಹರಟೆ ಹೊಡೆಯುತ್ತಾ ಗಂಟೆಗಟ್ಟಲೆ ಕುಳಿತಿರುತ್ತಾರೆ. ಅವರು ನಮ್ಮ ಮಾತನ್ನು ಕೇಳುವುದೂ ಇಲ್ಲ. ಇನ್ನು ಕೆಲವರು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರ ಮೇಲೆ ನಿಗಾ ಇಡುವ ವ್ಯವಸ್ಥೆಯೂ ಆಗಬೇಕು' ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !