ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ವಯಸ್ಸಿಗೆ ಕತೆ ಕಟ್ಟಿದ ಅನನ್ಯಾ

Last Updated 8 ಜನವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಗ್ರೀನ್‌ವುಡ್‌ ಹೈ ಇಂಟರ್‌ನ್ಯಾಷನಲ್‌ ಶಾಲೆಯ 10ನೇ ತರಗತಿಯ ಅನನ್ಯಾ ರಾಜಾರಾಮನ್‌ 2020ರ ‘ಗ್ಲೋಬಲ್‌ ಚೈಲ್ಡ್‌ ಪ್ರಾಡಿಜಿ’ (ಜಾಗತಿಕ ಪ್ರಚಂಡ ಬುದ್ಧಿಮತ್ತೆಯ ಮಗು) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಬರವಣಿಗೆಯ ಕೌಶಲವನ್ನು ಎಳವೆಯಲ್ಲಿ ರೂಢಿಸಿಕೊಂಡಿದ್ದಕ್ಕಾಗಿ ಇಂಥದ್ದೊಂದು ಪ್ರಶಸ್ತಿ ಸಿಕ್ಕಿದೆ.

ತನ್ನ 2ನೇ ವಯಸ್ಸಿಗೆ ಅನನ್ಯಾ ಕತೆಗಳನ್ನು ಕಟ್ಟಲು ಆರಂಭಿಸಿದ್ದಳು. ಐದು ವರ್ಷವಾಗುವ ಹೊತ್ತಿಗೆ 175 ಕಥೆಗಳನ್ನು ರೂಪಿಸಿದ್ದಳು. ಏಳನೇ ವಯಸ್ಸಿಗೆ ಮೊದಲ ಕಿರು ಕಾದಂಬರಿಯನ್ನು ರಚಿಸಿದ್ದಾಳೆ. ಸಾಹಸಗಾಥೆಯನ್ನು ಆಧರಿಸಿ 9ನೇ ವಯಸ್ಸಿಗೆ ಅಪರಾಧ ಲೋಕವನ್ನು ಬಿಂಬಿಸುವ ಕಾದಂಬರಿಯನ್ನು ಬರೆದಿದ್ದಾಳೆ. ರೋಮಾಂಚನಗೊಳಿಸುವ ಅಪರಾಧ ಲೋಕದ ಕತೆಗಳನ್ನು ಕಟ್ಟುವುದರಲ್ಲಿ ಅನನ್ಯಾಗೆ ಎಲ್ಲಿಲ್ಲದ ಆಸಕ್ತಿ. ಇದಕ್ಕೆ ಶಾಲೆಯ ಶಿಕ್ಷಕರು, ಪೋಷಕರು ಬೆಂಬಲ ಸೂಚಿಸುತ್ತಾ ಬಂದಿದ್ದಾರೆ.

ಆಕೆಯ ಮೊದಲ ಕಾದಂಬರಿ ‘ಮ್ಯಾಗನಸ್‌ ಹೂಪರ್‌‘ 2016ರಲ್ಲಿ ಪ್ರಕಟಗೊಂಡಿತು. ಇಂಡಿಯಾದ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಅತಿ ಕಿರಿಯ ವಯಸ್ಸಿನ ಅಪರಾಧ ಲೋಕದ ಕತೆಗಾರ್ತಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾಳೆ. ಬರವಣಿಗೆಗಾಗಿ ತನ್ನದೇ ಬ್ಲಾಗೊಂದನ್ನು ನಿರ್ವಹಿಸುತ್ತಿದ್ದಾಳೆ.

ಈ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಅನನ್ಯಾ ಪ್ರತಿಕ್ರಿಯಿಸುವುದು ಹೀಗೆ, ‘ಜಾಗತಿಕ ಮಟ್ಟದಲ್ಲಿಪ್ರಚಂಡ ಬುದ್ಧಿಮತ್ತೆಯ ನೂರು ಮಕ್ಕಳಲ್ಲಿ ಒಂದಾಗಿರುವುದಕ್ಕೆ ಖುಷಿ ಎನಿಸಿದೆ. ಈ ವೇದಿಕೆಯ ಮೂಲಕ ಬೇರೆ ದೇಶಗಳ ಪ್ರತಿಭಾನ್ವಿತರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿದೆ. ಈ ಪ್ರಶಸ್ತಿ ಪಡೆಯಲು ಬೆನ್ನೆಲುಬಾಗಿ ನಿಂತ ನನ್ನೆಲ್ಲ ಗುರುಗಳಿಗೆ, ಕುಟುಂಬ ಸದಸ್ಯರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು..’

ಭೌತವಿಜ್ಞಾನಿಯಾಗಬೇಕು ಎನ್ನುವುದು ಅನನ್ಯಾ ಹಂಬಲ.ಈ ಆಯ್ಕೆ ‍ಪ‍್ರಕ್ರಿಯೆ 2017ರಲ್ಲಿಯೇ ಆರಂಭಗೊಂಡಿತ್ತು. ನಲವತ್ತೈದು ದೇಶಗಳಿಂದ 15 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಪ್ರಚಂಡ ಬುದ್ಧಿಮತ್ತೆಯ 100 ಮಕ್ಕಳನ್ನು ಆಯ್ಕೆ ಮಾಡುವ ಹೊಣೆ ಈ ಪ್ರಶಸ್ತಿಯ ಆಯ್ಕೆ ಸಮಿತಿಯದ್ದಾಗಿತ್ತು. ಆಯ್ಕೆಯಾದ 100 ಮಕ್ಕಳಲ್ಲಿ ಅನನ್ಯಾ ಕೂಡ ಒಬ್ಬರು.

ಈಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಪುದುಚೇರಿಯ ರಾಜ್ಯಪಾಲರಾದ ಕಿರಣ್‌ಬೇಡಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಅವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮಕ್ಕೆ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಇಂಟರ್‌ನ್ಯಾಷನಲ್‌ ಫೌಂಡೇಷನ್‌ ಮತ್ತು ಸಂಗೀತ ಮಾಂತ್ರಿಕ ಎ.ಆರ್‌.ರೆಹಮಾನ್‌ ಅವರಂಥ ದಿಗ್ಗಜರು ಬೆಂಬಲ ಸೂಚಿಸಿದ್ದರು. ನೃತ್ಯ, ಸಂಗೀತ, ಕಲೆ, ಬರವಣಿಗೆ, ನಟನೆ, ವಿಜ್ಞಾನ, ಅನ್ವೇಷಣೆ, ಕ್ರೀಡೆ, ರೂಪದರ್ಶಿ ಹೀಗೆ ನಾನಾ ಕ್ಷೇತ್ರಗಳ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಲಾಗಿದೆ. ಈ ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುವುದಲ್ಲದೇ, ಹಲವು ಕ್ಷೇತ್ರಗಳಸಾಧಕರನ್ನು ಭೇಟಿಯಾಗಲು ವೇದಿಕೆಯ ದೊರೆತಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT