ಬುಧವಾರ, ಅಕ್ಟೋಬರ್ 23, 2019
21 °C

ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ‘ಕೃತಕ ಬುದ್ಧಿಮತ್ತೆ’ ನೆರವು

Published:
Updated:
Prajavani

ದಿನದಿಂದ ದಿನಕ್ಕೆ ಜಟಿಲವಾಗುತ್ತಿರುವ ಸಂಚಾರ ಸಮಸ್ಯೆಯ ಸಮರ್ಪಕ ನಿರ್ವಹಣೆಗೆ ಬೆಂಗಳೂರು ನಗರ ಸಂಚಾರ ಪೊಲೀಸ್‌ ಇಲಾಖೆಯು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌) ತಂತ್ರಜ್ಞಾನದ ಮೊರೆ ಹೋಗಿದೆ.

ಬೆಂಗಳೂರಿನ ಎಲ್ಲ 387 ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಶೀಘ್ರದಲ್ಲಿಯೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಲಿದೆ.

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ನೆರವಿನಿಂದ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿರುವ ಕ್ಯಾಮೆರಾಗಳು ಸಂಚಾರ ದಟ್ಟಣೆಗೆ ಅನುಗುಣವಾಗಿ ಸ್ವಯಂ ನಿರ್ಧಾರ ತೆಗೆದುಕೊಳ್ಳುತ್ತವೆ. ದಟ್ಟಣೆಗೆ ಅನುಗುಣವಾಗಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತವೆ. 

ಆರಂಭದಲ್ಲಿ ಪ್ರಾಯೋಗಿಕವಾಗಿ ನಗರದಲ್ಲಿ 35 ಜಂಕ್ಷನ್‌ಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಲಾದ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಹಂತ, ಹಂತವಾಗಿ ಉಳಿದೆಡೆಯೂ ಹೊಸ ಸಿಗ್ನಲ್‌ ಅಳವಡಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಬಿ.ಆರ್.ರವಿಕಾಂತೇ ಗೌಡ ಅವರು ‘ಮೆಟ್ರೊ’ಗೆ ತಿಳಿಸಿದರು. 

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಲಾದ ಹೊಸ ಸಿಗ್ನಲ್‌ಗಳು ತಾವೇ ವಾಹನಗಳ ಸಂಖ್ಯೆ ಲೆಕ್ಕ ಹಾಕುತ್ತವೆ. ಈ ಮಾಹಿತಿ ಕೇಂದ್ರ ಸಂಸ್ಕರಣಾ ಘಟಕಕ್ಕೆ ರವಾನೆಯಾಗುತ್ತದೆ. ಪ್ರತಿ ಜಂಕ್ಷನ್‌ನಲ್ಲಿ ಎಷ್ಟು ಸಮಯ ನೀಡಬೇಕು ಎಂಬ ಸಲಹೆಯನ್ನು ಕೂಡ ಈ ವ್ಯವಸ್ಥೆ ನೀಡಬಲ್ಲುದು. ಅದಕ್ಕೆ ತಕ್ಕಂತೆ ದಟ್ಟಣೆ ಹೆಚ್ಚಾದ ರಸ್ತೆಗಳನ್ನು ಮುಕ್ತಗೊಳಿಸಲು ನೆರವಾಗಬಲ್ಲುದು. ಇಲ್ಲಿ ಪೊಲೀಸ್‌ ಸಿಬ್ಬಂದಿಯ ಪಾತ್ರ ಇರುವುದಿಲ್ಲ. ಎಲ್ಲ ಸ್ವಯಂಚಾಲಿತವಾಗಿ ವ್ಯವಸ್ಥೆಯಾಗಿರುತ್ತದೆ ಎಂದು ಅವರು ತಿಳಿಸಿದರು. 

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವ್ಯವಸ್ಥೆಯಿಂದ ಬೆಂಗಳೂರು ಟ್ರಾಫಿಕ್‌ ಸಂಚಾರ ವ್ಯವಸ್ಥೆ ಮತ್ತಷ್ಟು ಸ್ಮಾರ್ಟ್ ಆಗಲಿದೆ. ಸಂಚಾರ  ಸಮಸ್ಯೆಗೆ ಪರಿಹಾರ ದೊರೆಯಲಿದೆ. 

ಒಂದು ಜಂಕ್ಷನ್‌ನಲ್ಲಿ ಸಿಗ್ನಲ್‌ ಹಸಿರು ಬಣ್ಣ ತೋರಿಸಿದರೆ, ಅದರ ಮುಂದಿನ ಜಂಕ್ಷನ್‌ ಸಿಗ್ನಲ್‌ ಕೂಡ ಹಸಿರು ಬಣ್ಣ ತೋರಿಸುತ್ತದೆ. ಇಂತಹ ಸಂಯೋಜಿತ ನಿರ್ವಹಣೆಯಿಂದ ವಾಹನಗಳು ಅಡೆತಡೆ ಇಲ್ಲದೆ ಸಾಗಬಹುದು. ಸಿಗ್ನಲ್‌ಗಳಲ್ಲಿ ಅಳವಡಿಸಲಾಗುವ ಕಂಪೈಲರ್‌ ಬಾಕ್ಸ್‌ನಲ್ಲಿ 64 ಕಾರ್ಯನಿರ್ವಹಣೆಗಳನ್ನು ಅಳವಡಿಸಲಾಗಿರುತ್ತದೆ. ಟ್ರಾಫಿಕ್‌ ಪೊಲೀಸರು ಪೂರ್ವ ನಿರ್ದೇಶನದಂತೆ ಫ್ರೀ ಲೆಫ್ಟ್‌, ರೈಟ್‌ ಮಾರ್ಗಗಳನ್ನು ಇದು ನಿರ್ವಹಿಸುತ್ತದೆ. 

ಪ್ರತಿ ಆರು ತಿಂಗಳಿಗೊಮ್ಮೆ ರಸ್ತೆಯಲ್ಲಿಯ ಸಂಚಾರ ದಟ್ಟಣೆಯ ಅಂಕಿ, ಅಂಶಗಳ ಅಧ್ಯಯನ ನಡೆಸಿ ಅಗತ್ಯ ಮಾರ್ಪಾಡು ಮಾಡಲಾಗುವುದು. ಆಗಾಗ ಬದಲಾಗುವ ಒನ್‌ವೇ ಮತ್ತು ಪದೇ ಪದೇ ನಡೆಯುವ ರಸ್ತೆ ಕಾಮಗಾರಿಗಳಿಗೆ ತಕ್ಕಂತೆ ಸಂಚಾರ ದೀಪಗಳ ನಿರ್ವಹಣೆಯಲ್ಲಿ ಮಾರ್ಪಾಡು ಮಾಡಬೇಕಾಗುತ್ತದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?

- ಕ್ಯಾಮೆರಾಗಳು ಸಂಚಾರ ದಟ್ಟಣೆಯನ್ನು ಸೆರೆ ಹಿಡಿದು ವಿಶ್ಲೇಷಿಸುತ್ತವೆ.

- ಸಂಚಾರ ದಟ್ಟಣೆಯ ದತ್ತಾಂಶಗಳನ್ನು ಕೇಂದ್ರೀಯ ಸಂಸ್ಕರಣಾ ಕೇಂದ್ರಕ್ಕೆ ರವಾನಿಸುತ್ತದೆ.

- ನಗರದ ವಿವಿಧ ಜಂಕ್ಷನ್‌, ರಸ್ತೆಗಳ ಸಿಗ್ನಲ್‌ನಲ್ಲಿಯ ಸಂದೇಶಗಳನ್ನು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಲಾಗುತ್ತದೆ.

- ಕೇಂದ್ರೀಯ ಸಂಸ್ಕರಣಾ ಘಟಕ ಎಲ್ಲ ದತ್ತಾಂಶಗಳನ್ನು ಕಲೆ ಹಾಕಿ ಯಾವ ಸಿಗ್ನಲ್‌ನಲ್ಲಿ ಎಷ್ಟು ಸಮಯ ನೀಡಬೇಕು ಎಂದು ನಿರ್ಧರಿಸುತ್ತದೆ.

- ರಸ್ತೆಯಲ್ಲಿ ವಾಹನ ಬರುವಾಗ ಆ್ಯಕ್ಟಿವ್‌ ಮೋಡ್‌ನಲ್ಲಿರುತ್ತದೆ.

- ರಸ್ತೆಗಳಲ್ಲಿಯ ವಾಹನಗಳ ಮೇಲೆ ನಿಗಾ ವಹಿಸುತ್ತದೆ.

- ರೇಡಾರ್‌ ರೀತಿ ಇನ್ಫ್ರಾರೆಡ್‌ ಕಿರಣಗಳನ್ನು ಹಾಯಿಸಿ ವಾಹನಗಳ ಲೆಕ್ಕ ಹಾಕುತ್ತದೆ.

- ರಿಮೋಟ್‌ನಿಂದ ಕಂಟ್ರೋಲ್‌ ಮಾಡಬಹುದು.

- ಮಳೆ, ಬಿಸಿಲು ಚಳಿ ನಿರೋಧಕ.

- ಮೋಡ ಕವಿದ ವಾತಾವರಣದಲ್ಲಿ ಕರಾರುವಾಕ್ಕಾಗಿ ಕೆಲಸ ಮಾಡುವ ಸಾಮರ್ಥ್ಯ. 

- ಪಾದಚಾರಿಗಳು ಮತ್ತು ವಾಹನಗಳನ್ನು ಪ್ರತ್ಯೇಕಿಸಿ ಲೆಕ್ಕ ಹಾಕುವ ಸಾಮರ್ಥ್ಯ.

- ವಿಭಿನ್ನ ಕೋನಗಳಲ್ಲಿ ಸುತ್ತುವ ವ್ಯವಸ್ಥೆ.

 

ಚಾಲಕರಿಗೆ ಏನು ಲಾಭ?

- ಸಿಗ್ನಲ್‌ಗಳಲ್ಲಿ ಚಾಲಕರು ಕಾಯುವ ಸಮಯ ತಗ್ಗಲಿದೆ.

- ರಾತ್ರಿ ವೇಳೆ ಸಿಗ್ನಲ್‌ಗಳು ಬೇಗ ಸಂಚಾರಕ್ಕೆ ಅವಕಾಶ.

- ಫ್ರೀ ಲೆಫ್ಟ್‌, ಫೀ ರೈಟ್‌ ಮುಕ್ತ ನೀತಿ.

- ಸಂಚಾರ ದಟ್ಟಣೆ ನಿಯಂತ್ರಣ.

ಕ್ಯಾಮೆರಾ ಕಣ್ಣು ತಪ್ಪಿಸಲಾಗದು!

ಸಿಗ್ನಲ್ ಜಂಕ್ಷನ್‌ಗಳಲ್ಲಿ ನಡೆಯುವ ಚಿಕ್ಕಪುಟ್ಟ ಘಟನೆಗಳೂ ಕ್ಯಾಮೆರಾಗಳಲ್ಲಿ ಸೆರೆಯಾಗುತ್ತವೆ. ಸಿಗ್ನಲ್‌ ಜಂಪ್‌ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನಂಬರ್‌ ಪ್ಲೇಟ್‌ ಸೆರೆ ಹಿಡಿಯುವ ಕ್ಯಾಮೆರಾಗಳು ಮಾಹಿತಿಯನ್ನು ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸೆಂಟರ್‌ಗೆ ರವಾನಿಸುತ್ತವೆ. ಸಾವಿರಾರು ವಾಹನಗಳ ನಡುವೆಯೂ ಸಿಗ್ನಲ್‌ ಜಂಪ್‌ ಮಾಡುವ ವಾಹನದ ನಂಬರ್‌ ಪ್ಲೇಟ್‌ ಚಿತ್ರವನ್ನು ಸಿಗ್ನಲ್‌ ಕ್ಯಾಮೆರಾಗಳು ಕರಾರುವಾಕ್ಕಾಗಿ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿವೆ. 

ಪದೇ ಪದೇ ನಿಯಮ ಉಲ್ಲಂಘಿಸುವ ವಾಹನಗಳ ನಂಬರ್‌ ಪ್ಲೇಟ್‌ಗಳ ಚಿತ್ರಗಳನ್ನು ಪ್ರತ್ಯೇಕಿಸಿ ದಾಖಲಿಸುತ್ತದೆ. ಅಂತಹವರ ವಿರುದ್ಧ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ರವಿಕಾಂತೇ ಗೌಡ ತಿಳಿಸಿದರು. 

ಜಪಾನ್‌ ತಂತ್ರಜ್ಞಾನ

ನಗರ ಭೂಸಾರಿಗೆ ಇಲಾಖೆ (ಡಿಯುಎಲ್‌ಟಿ) ಟ್ರಾಫಿಕ್‌ ಸೆನ್ಸರ್‌ಗಳನ್ನು ಅಳವಡಿಸುವ ಮೇಲುಸ್ತುವಾರಿ ವಹಿಸಿಕೊಂಡಿದೆ. ಜಪಾನ್ ಮಾದರಿಯ ಈ ಸಿಗ್ನಲ್‌ ಸೆನ್ಸರ್‌ಗಳು ಶೇ 30ರಷ್ಟು ಸಂಚಾರ ದಟ್ಟಣೆ ನಿಯಂತ್ರಿಸಲಿವೆ.

ಹಳೆ ಮದ್ರಾಸ್‌ ರಸ್ತೆ, ಹೊಸೂರು ರಸ್ತೆ, ಕೆ.ಆರ್‌. ಪುರ, ದೊಮ್ಮಲೂರು, ಬೆಳ್ಳಂದೂರು, ಯಶವಂತಪುರ, ಓಂಕಾರ ಆಶ್ರಮ ರಸ್ತೆ, ರಾಮಮೂರ್ತಿ ನಗರ ಸೇರಿದಂತೆ ಭಾರಿ ಸಂಚಾರ ದಟ್ಟಣೆಯಿಂದ ಕೂಡಿರುವ ನಗರದ ಹಲವು ರಸ್ತೆ, ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ. ಈ ರಸ್ತೆಗಳಲ್ಲಿ ಪ್ರತಿ 100 ಮತ್ತು 150 ಮೀಟರ್‌ ಅಂತರದಲ್ಲಿ ಈ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಕ್ಯೂ ಲೆಂಗ್ತ್‌ ಮೇಸರ್‌ಮೆಂಟ್‌ ವ್ಯವಸ್ಥೆ ಅಡಿ ಸಂಚಾರ ದಟ್ಟಣೆ ಎಣಿಕೆ ಮಾಡುವ ಮೂಲಕ ನೈಜ ಟೈಮಿಂಗ್‌ ವೀಕ್ಷಣೆಗೆ ನೆರವಾಗುತ್ತಿವೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)