ಬುಧವಾರ, ಅಕ್ಟೋಬರ್ 23, 2019
21 °C

ಉತ್ತರ – ದಕ್ಷಿಣ ಸಂಸ್ಕೃತಿ ಸಂಗಮ ಬೆಂಗಳೂರು ದಸರಾ...

Published:
Updated:
Prajavani

ಬೆಂಗಳೂರು ದಸರಾ ಅಕ್ಷರಶಃ ದಕ್ಷಿಣ ಮತ್ತು ಉತ್ತರ ಭಾರತದ ಸಂಸ್ಕೃತಿಯ ಸಮ್ಮಿಲನ. ಸಾಂಪ್ರದಾಯಿಕ ಹಬ್ಬದ ಆಚರಣೆಗೆ ಕಾಸ್ಮೋಪಾಲಿಟನ್‌ ಟಚ್‌ ಕೂಡ ಸಿಕ್ಕಿದೆ. ಇಲ್ಲಿರುವ ಗುಜರಾತಿಗಳು, ಬಂಗಾಳಿಗಳು, ಸಿಂಧಿಗಳು, ಮರಾಠಿಗರು ಸೇರಿದಂತೆ ಅಸಂಖ್ಯಾತ ಉತ್ತರ ಭಾರತೀಯರು ತಮ್ಮ ರಾಜ್ಯಗಳ ವಿಭಿನ್ನ ಮತ್ತು ವಿಶಿಷ್ಟ ಹಿನ್ನೆಲೆಯ ಆಚರಣೆ ಮೂಲಕ ಹಬ್ಬಕ್ಕೆ ರಂಗು ತರುತ್ತಾರೆ. ಗುಜರಾತಿಗಳ ದಾಂಡಿಯಾ ರಾಸ್‌, ಗಾರ್ಭಾ ನೃತ್ಯ, ಬಂಗಾಳಿಗಳ ದುರ್ಗಾ ಪೂಜೆ ಹಬ್ಬದ ಸೊಬಗನ್ನು ಇಮ್ಮಡಿಗೊಳಿಸುತ್ತವೆ.    

ಪಂಚಮಿ, ವರಮಹಾಲಕ್ಷ್ಮಿ, ಗೌರಿ– ಗಣೇಶ ಉತ್ಸವ, ಕೃಷ್ಣ ಜನ್ಮಾಷ್ಟಮಿ, ಓಣಂ...ಹೀಗೆ ಸಾಲು ಹಬ್ಬಗಳು ಮುಗಿಯುತ್ತಿದ್ದಂತೆ ಬರುವ ಮಹಾಲಯ ಅಮಾವಾಸ್ಯೆಯ ಮರುದಿನದಿಂದ (ಭಾನುವಾರ) ನವರಾತ್ರಿ ಆಚರಣೆ ವಿಧ್ಯುಕ್ತವಾಗಿ ಆರಂಭವಾಗುತ್ತದೆ. 

ಲಕ್ಷ್ಮಿ, ಗೌರಿ, ಗಣೇಶನ ಮೂರ್ತಿಗಳ ಜಾಗವನ್ನು ನವದುರ್ಗೆಯರ ಪ್ರತಿಮೆಗಳು ಅಲಂಕರಿಸಿವೆ. ನವರಾತ್ರಿ ಮತ್ತು ದಸರಾಕ್ಕೆ ನಿಜವಾದ ಮೆರಗು ತರುವುದು ಗೊಂಬೆಗಳ ಅಲಂಕಾರ. ಪಟ್ಟದ ಗೊಂಬೆಗಳ ಜತೆಗೆ ವೈವಿಧ್ಯಮಯ ಅಲಂಕಾರಿಕ ಗೊಂಬೆಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ರಾಮಾಯಣ, ಮಹಾಭಾರತ, ಕೃಷ್ಣ ಅವತಾರದ ಕಥೆಯ ಹೇಳುವ ಗೊಂಬೆಗಳು ಕಣ್ಮನ ಸೆಳೆಯುತ್ತವೆ. ಗ್ರಾಹಕರು ಅಲಂಕಾರಕ್ಕೆ ತಮ್ಮ ಇಷ್ಟದ ಯಾವುದೇ ಗೊಂಬೆಗಳನ್ನು ಖರೀದಿಸಲಿ. ಪಟ್ಟದ ಗೊಂಬೆಗಳು ಮತ್ತು ಕತ್ತು ಹೊರಳಾಡಿಸುವ ದಢೂತಿ ಅಜ್ಜ, ಅಜ್ಜಿಯರ ಗೊಂಬೆಗಳನ್ನು ಮಾತ್ರ ಖರೀದಿಸುವುದು ವಾಡಿಕೆ. 

ನಮ್ಮ ನಾಡಹಬ್ಬದ ಸೊಬಗನ್ನು ಇಮ್ಮಡಿಗೊಳಿಸುವ ವೈವಿಧ್ಯಮಯ ಗೊಂಬೆಗಳು ಬರುವುದು ಮಾತ್ರ ನೆರೆಯ ರಾಜ್ಯಗಳಿಂದ. ಹಬ್ಬಕ್ಕೂ ಮುನ್ನವೇ ತಮಿಳುನಾಡಿನ ಕಾಂಜೀವರಂ, ತಿರುಪತಿ, ಕಡಲೂರು, ಪುದುಚೇರಿ, ಕಾಳಹಸ್ತಿ, ಹೈದರಾಬಾದ್ ಮತ್ತು ಪಶ್ಚಿಮ ಬಂಗಾಳದ ಗೊಂಬೆಗಳು ಬೆಂಗಳೂರು ತಲುಪುತ್ತವೆ. ಮಲ್ಲೇಶ್ವರ, ವಿ.ವಿ. ಪುರಂ, ಬಸವನಗುಡಿಯಲ್ಲಿ ಗೊಂಬೆ ಮಾರಾಟ ಮಾಡುವ ಅಂಗಡಿ, ಮಳಿಗೆಗಳು ವರುಷಗಳಿಂದ ಇವೆ. 

‘ಉತ್ತರ ಭಾರತೀಯರು, ಗುಜರಾತಿಗಳು ಮತ್ತು ಬಂಗಾಳಿಗಳು ಮಾತ್ರ ಪಶ್ಚಿಮ ಬಂಗಾಳದ ಶೈಲಿಯ ದುರ್ಗಾ ಮೂರ್ತಿ ಖರಿದಿಸುತ್ತಾರೆ. ಕನ್ನಡಿಗರು ಮಾತ್ರ ಕಾಂಜೀವರಂ, ಕಾಳಹಸ್ತಿಯಲ್ಲಿ ತಯಾರಿಸಿದ ಲಕ್ಷ್ಮಿ, ಸರಸ್ವತಿಯ ಸಾಂಪ್ರದಾಯಿಕ ವಿನ್ಯಾಸದ ಮೂರ್ತಿ ಖರೀದಿಸುತ್ತಾರೆ. ಈ ಎಲ್ಲ ಬೊಂಬೆಗಳನ್ನು ಪೇಪರ್‌ನಿಂದ ತಯಾರಿಸಲಾಗಿದ್ದು, ತುಂಬಾ ಹಗುರವಾಗಿವೆ. ಒಂದು ಸೆಟ್‌ ಕನಿಷ್ಠ ಬೆಲೆ ₹2ರಿಂದ ₹3 ಸಾವಿರವಾಗುತ್ತದೆ’ ಎನ್ನುತ್ತಾರೆ ಮಲ್ಲೇಶ್ವರ 10ನೇ ಕ್ರಾಸ್‌ನಲ್ಲಿರುವ ವಿಜಯಾ ಜನರಲ್‌ ಸ್ಟೋರ್ಸ್‌ ಮಾಲೀಕ ಕೆ. ಶಂಕರ್‌.

ನೆರೆಯ ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದ ಬಂದಿರುವ ಕಲಾವಿದರು ಹಲವು ದಿನಗಳಿಂದ ನಗರದಲ್ಲಿ ದುರ್ಗಾ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನಲ್ಲಿ ಈಗ ಥೀಂ ಆಧಾರಿತ ಮೂರ್ತಿ ಮತ್ತು ಗೊಂಬೆಗಳಿಗೆ ಹೆಚ್ಚಿನ ಬೇಡಿಕೆ ಎಂದು ಅವರು ಅನುಭವ ಹಂಚಿಕೊಂಡರು.  

ವಿ.ವಿ. ಪುರಂ, ಬಸವನಗುಡಿ, ಮಲ್ಲೇಶ್ವರ ಮತ್ತು ರಾಜಾಜಿನಗರದ ಕೆಲವು ಕುಟುಂಬಗಳು ತಲೆಮಾರುಗಳಿಂದ ಮನೆಯಲ್ಲಿ ಒಂಬತ್ತು ದಿನ ಶೃಂಗರಿಸಿದ ಗೊಂಬೆಗಳನ್ನು ಕೂರಿಸುತ್ತಾರೆ. ಕುಟುಂಬದ ಆಪ್ತರು, ಸ್ನೇಹಿತರು, ಬಂಧು, ಬಳಗದವರನ್ನು ಪೂಜೆಗೆ ಆಹ್ವಾನಿಸುತ್ತಾರೆ. ಆ ಸೊಬಗನ್ನು ನೂರಾರು ಜನರು ಕಣ್ತುಂಬಿಕೊಳ್ಳುತ್ತಾರೆ.

ಅಟ್ಟದ ಮೇಲೆ ಪಟ್ಟದ ಗೊಂಬೆಗಳನ್ನು ಕೂಡಿಸಿದ ನಂತರ ಅಕ್ಕಪಕ್ಕ ಅಲಂಕಾರ ಮಾಡಿದ ಬೇರೆ, ಬೇರೆ ಅಲಂಕೃತ ಗೊಂಬೆಗಳನ್ನು ಕೂರಿಸುತ್ತಾರೆ. ಈ ಸಂಪ್ರದಾಯ ಇತ್ತೀಚೆಗೆ ಕಡಿಮೆಯಾಗುತ್ತಿದೆ ಎಂದು ಗೊಂಬೆ ಖರೀದಿಸಲು ಮಲ್ಲೇಶ್ವರಕ್ಕೆ ಬಂದಿದ್ದ ರಾಜಾಜಿನಗರದ ಪ್ರೇಮಾ ಬೇಸರದಿಂದ ನುಡಿದರು.


ದುರ್ಗೆ

ಬಂಗಾಳಿ ದುರ್ಗೆಯ ವೈಭವ 

ಪಶ್ಚಿಮ ಬಂಗಾಳಕ್ಕೂ ದುರ್ಗಾಪೂಜೆಗೂ ಎಲ್ಲಿಲ್ಲದ ನಂಟು. ಬೆಂಗಳೂರಿನಲ್ಲಿರುವ ಬಂಗಾಳಿಗಳು ನವರಾತ್ರಿ ಮತ್ತು ದಸರಾಕ್ಕೆ ತಮ್ಮ ಶೈಲಿಯಲ್ಲಿರುವ ದುರ್ಗಾಮೂರ್ತಿಗಳನ್ನು ವಿಶೇಷವಾಗಿ ತಯಾರಿಸಿ, ಆರಾಧಿಸುತ್ತಾರೆ.

ಕಾಕ್ಸ್ ಟೌನ್‌ ಮತ್ತು ಕ್ವೀನ್ಸ್‌ ರಸ್ತೆಯಲ್ಲಿರುವ ಬಂಗಾಳಿ ಕುಟುಂಬಗಳು ಹಲವಾರು ದಶಕಗಳಿಂದ ದುರ್ಗಾಮೂರ್ತಿ ತಯಾರಿಕೆಯಲ್ಲಿ ತೊಡಗಿವೆ. ಹಬ್ಬಕ್ಕೂ ಒಂದು ಅಥವಾ ಎರಡು ತಿಂಗಳ ಮೊದಲೇ ವಿಗ್ರಹ ತಯಾರಿಕೆ ಕೆಲಸ ಆರಂಭವಾಗುತ್ತದೆ. ಪಶ್ಚಿಮ ಬಂಗಾಳದಿಂದ ರೈಲಿನಲ್ಲಿ ಬರುವ ಕಲಾವಿದರ ತಂಡ ಅಲ್ಲಿಂದಲೇ ಮಣ್ಣು, ಬಣ್ಣ, ಮರ, ಬಣ್ಣ ಮತ್ತು ಅಲಂಕಾರಿಕ ಸಾಮಗ್ರಿ ತರುತ್ತಾರೆ. ವಿವಿಧ ಆಕಾರ, ಗಾತ್ರ ಮತ್ತು ವಿನ್ಯಾಸದ ವಿಗ್ರಹಗಳಿಗೆ ₹10 ಸಾವಿರದಿಂದ ₹80 ಸಾವಿರವರೆಗೆ ಬೆಲೆಯಿದೆ. 

ನಗರದ ಬಂಗಾಳಿ ಸಂಘ, ಸಂಸ್ಥೆಗಳು ಮಲ್ಲೇಶ್ವರದ ಕೆನರಾ ಯೂನಿಯನ್‌ ಮತ್ತು ಜಯಮಹಲ್‌ನಲ್ಲಿ ವೈಭವಯುತವಾಗಿ ನವರಾತ್ರಿ ಆಚರಿಸುತ್ತವೆ. ಜಯಮಹಲ್ ದುರ್ಗಾದೇವಿ ಸಾರ್ವಜನಿಕ ಸಮಿತಿ ಮತ್ತು ಬಂಗಾಳಿ ಒಕ್ಕೂಟ ವಿಶೇಷ ಅಲಂಕಾರಗಳ ಮೂಲಕ ಗಮನ ಸೆಳೆಯುತ್ತಿವೆ. ಐದು ದಿನ ದುರ್ಗೆಗೆ ಅಲಂಕಾರ ಮತ್ತು ಪೂಜೆ ಮಾಡುವ ಜತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ನವರಾತ್ರಿ ನೆಪದಲ್ಲಿ ಸಾಂಪ್ರದಾಯಿಕ ಉಡುಗೆ, ತೊಡುಗೆಗಳಲ್ಲಿ ಬಂಗಾಳಿಗಳು ಒಂದೆಡೆ ಸೇರಿ ನಲಿಯುತ್ತಾರೆ. 

ಬಗೆ, ಬಗೆಯ ಬಂಗಾಳಿ ಸಿಹಿತಿನಿಸು ಮತ್ತು ರುಚಿಕರ ಖಾದ್ಯಗಳನ್ನು ಸವಿಯುತ್ತಾರೆ. ಐದನೇ ದಿನ  ಕುಂಕುಮ ಹಬ್ಬ ಆಚರಿಸುತ್ತಾರೆ. ಬಂಗಾಳಿ ಮಹಿಳೆಯರು ದೇವಿಗೆ ಕುಂಕುಮ ಹಚ್ಚಿ ವಿಸರ್ಜನೆ ಮಾಡುತ್ತಾರೆ.

ಶತಮಾನದ ವಿಜಯ ದಶಮಿಗೆ ಮೊದಲ ಮಹಾಯುದ್ಧದ ನಂಟು!

ಮೊದಲ ಮಹಾಯುದ್ಧದ ವಿಜಯದ ಸಂಕೇತವಾಗಿ ಆಚರಿಸುವ ಜೆ.ಸಿ. ನಗರ (ಜಯ ಚಾಮರಾಜೇಂದ್ರ ನಗರ) ವಿಜಯ ದಶಮಿಗೆ ಶತಮಾನದ ಇತಿಹಾಸವಿದೆ. ಇದು ನಗರದ ಅತಿ ಹಳೆಯ ದಸರಾ ಉತ್ಸವಗಳಲ್ಲಿ ಒಂದು. ಈ ಬಾರಿ ಇಲ್ಲಿ ಆಚರಿಸುತ್ತಿರುವುದು 106ನೇ ವರ್ಷದ ದಸರಾ.  

ದೇವರ ಮೂರ್ತಿಗಳ ಜತೆಗೆ ಜನಪರ ಮಹಾರಾಜ ಎಂದು ಹೆಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪ್ರತಿಮೆಯನ್ನು ಪಲ್ಲಕ್ಕಿಯಲ್ಲಿ ಮೆರವಣಿ ಮಾಡುವ ಸಂಪ್ರದಾಯ ಇಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿಯ ವಿಜಯದಶಮಿಗೆ ಮೊದಲ ಮಹಾಯುದ್ಧದ ಗಾಢ ನಂಟಿದೆ. 1914ರಲ್ಲಿ ಮೊದಲ ಮಹಾಯುದ್ಧದಲ್ಲಿ ಬ್ರಿಟಿಷರ ಪರವಾಗಿ ಹೋರಾಡಲು ಮೈಸೂರು ಅರಸರ ಸೈನ್ಯ ತೆರಳಿತ್ತು. ಬೆಂಗಳೂರಿನ ಜಯಮಹಲ್‌ ಪ್ರದೇಶದ ಮೂರು ತುಕಡಿಗಳು ಯುದ್ಧದಲ್ಲಿ ಹೋರಾಡಿದ್ದವು. ಯುದ್ಧಕ್ಕೆ ಹೊರಡುವ ಮುನ್ನ ಸೈನಿಕರೆಲ್ಲ ಜೆ.ಸಿ.ನಗರದ ಮುನೇಶ್ವರ ದೇವಸ್ಥಾನಕ್ಕೆ ಬಂದು ಆಶೀರ್ವಾದ ಪಡೆದು ಹೋಗಿದ್ದರು.


ಪಟ್ಟದ ಗೊಂಬೆ ಖರೀದಿಸಿದ ಗ್ರಾಹಕಿ ಪ್ರೇಮಾ

ಯುದ್ಧದಲ್ಲಿ ಗೆದ್ದು ಮರಳಿ ಬಂದರೆ ಮುನೇಶ್ವರ ಮೂರ್ತಿಯನ್ನು ಹೊತ್ತು ಸಾಗುವ ಹರಕೆ ಹೊತ್ತಿದ್ದರು. ಅದರಂತೆ ವಿಜಯಶಾಲಿಯಾಗಿ ಮರಳಿದ ಮೈಸೂರು ಸೈನಿಕರು ವಿಜಯ ದಶಮಿ ದಿನ ಹೆಗಲ ಮೇಲೆ ಮುನೇಶ್ವರ ಮೂರ್ತಿಯನ್ನು ಹೊತ್ತು ಮೆರವಣಿಯಲ್ಲಿ ಸಾಗಿದ್ದರು. 
ಶತಮಾನದಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯಕ್ಕೀಗ 106 ವರ್ಷ. ಇಂದಿಗೂ ಈ ಸಂಪ್ರದಾಯ  ಚಾಚೂ ತಪ್ಪದೇ ನಡೆಯುತ್ತಿದೆ ಎಂದು ಜೆ.ಸಿ. ನಗರ ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು ಹೇಳುತ್ತಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)