ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವೈಯಾಲಿಕಾವಲ್‌ನ ನಡುರಸ್ತೆಯಲ್ಲಿ ಮಣ್ಣಿನ ಗುಡ್ಡೆ!

Last Updated 8 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಉದ್ಯಾನ ನಗರಿಯ ಸೌಂದರ್ಯಕ್ಕೆ ಕಳಂಕ ತರುವ ಘನತ್ಯಾಜ್ಯ ಮತ್ತು ಕಟ್ಟಡ ಅವಶೇಷಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುವುದನ್ನು ತಡೆಯಲು ಭಾರಿ ದಂಡ ವಿಧಿಸುವುದಾಗಿ ಹೇಳಿದ್ದ ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಮಾತನ್ನು ಮರೆತಂತೆ ತೋರುತ್ತದೆ!

ಎಲ್ಲೆಂದರಲ್ಲಿ ಕಟ್ಟಡ ಅವಶೇಷ ಮತ್ತು ಕಸ ಸುರಿಯುವುದನ್ನು ತಡೆಯಲು ಮಾರ್ಷಲ್‌ಗಳನ್ನು ನಿಯೋಜಿಸುವುದಾಗಿ ಬಿಬಿಎಂಪಿ ಹೇಳಿತ್ತು.ಪ್ಯಾಲೇಸ್‌ ಗುಟ್ಟಹಳ್ಳಿ ಸರ್ಕಲ್‌ ನಡುರಸ್ತೆಯಲ್ಲಿ ಬಿದ್ದಿರುವ ದೊಡ್ಡ ಮಣ್ಣಿನ ಗುಡ್ಡೆ ತಿಂಗಳಾದರೂ ಬಿಬಿಎಂಪಿ ಅದು ಕಣ್ಣಿಗೆ ಬಿದ್ದಿಲ್ಲ.

ವೈಯಾಲಿಕಾವಲ್‌ನ ವಿನಾಯಕ ಸರ್ಕಲ್‌ನಿಂದ ಪ್ಯಾಲೇಸ್‌ ಗುಟ್ಟಳ್ಳಿ ಸರ್ಕಲ್‌ವರೆಗೆ ನೀರು ಸರಬರಾಜು ಹಳೆಯ ಕೊಳವೆಮಾರ್ಗ ಬದಲಾಯಿಸುವ ಕಾಮಗಾರಿಯನ್ನು ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿ ಕೈಗೊಂಡಿದ್ದವು.

ಕಾಮಗಾರಿಗಾಗಿ ರಸ್ತೆಯನ್ನು ಎರಡೂ ಬದಿ ಅಗೆಯಲಾಗಿತ್ತು. ಇದರಿಂದ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರು ತಿಂಗಳ ಕಾಲ ಪರದಾಡಿದರು. ಕಾಮಗಾರಿ ಮುಗಿಯಿತು ಎಂದು ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ.

ಕಾಮಗಾರಿಗಾಗಿ ಅಗೆದ ಗುಂಡಿಗಳ ಮಣ್ಣನ್ನು ಗುಟ್ಟಳ್ಳಿ ಟಾಂಗಾಕೂಟದ ಬಳಿ ಇರುವಸರ್ಕಾರಿ ಶಾಲೆ ಮತ್ತು ಬಿಬಿಎಂಪಿ ಆಸ್ಪತ್ರೆಗಳ ಬಳಿ ಸುರಿಯಲಾಗಿದೆ.ಮಣ್ಣಿನ ಕೃತಕ ಗುಡ್ಡೆ ನಿರ್ಮಾಣವಾದ ಕಾರಣ ಶಾಲೆಗೆ ಬರುವ ಮಕ್ಕಳು, ಆಸ್ಪತ್ರೆಗೆ ಬರುವ ಮಹಿಳೆಯರು, ವೃದ್ಧರು ಮತ್ತು ರೋಗಿಗಳು ಪರದಾಡುತ್ತಿದ್ದಾರೆ.

‘ರಸ್ತೆಯಲ್ಲಿ ಅಗೆದ ಮಣ್ಣನ್ನು ಇಲ್ಲಿಗೆ ತಂದು ಸುರಿದು 20 ದಿನಗಳ ಮೇಲಾಗಿದೆ. ಒಡೆದ ಇಟ್ಟಿಗೆ ತುಂಡು, ತುಕ್ಕು ಹಿಡಿದ ಕಬ್ಬಿಣದ ಚೂರು, ಸಿಮೆಂಟ್‌ ಮತ್ತು ಮಣ್ಣಿನ ಧೂಳಿನಿಂದ ತುಂಬಿದೆ. ಇಲ್ಲಿಗೆ ಸ್ಥಳೀಯರು, ಹೋಟೆಲ್‌, ಅಂಗಡಿಯವರು ಕಸ ತಂದು ಸುರಿಯುತ್ತಿದ್ದಾರೆ.ಮಳೆಯಾದರೆ ಮಣ್ಣಿನ ನೀರು ರಸ್ತೆ ಮೇಲೆ ಹರಿಯುತ್ತದೆ. ಸೊಳ್ಳೆಗಳು ಹೆಚ್ಚಾಗಿ ರೋಗದ ತಾಣವಾಗಿದೆ. ವಾಹನ ಸಂಚಾರಕ್ಕೂ ಅಡೆತಡೆಯಾಗಿದೆ’ ಎಂದು ಜನರು ದೂರುತ್ತಿದ್ದಾರೆ.

ಬಿಬಿಎಂಪಿ, ಜಲ ಮಂಡಳಿ: ಹೊಣೆ ಯಾರು?

ಈ ಬಗ್ಗೆ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳನ್ನು ವಿಚಾರಿಸಿದರೆ ಅವರು ಜಲಮಂಡಳಿಯತ್ತ ಬೆರಳು ತೋರುತ್ತಾರೆ. ಜಲ ಮಂಡಳಿಯವರನ್ನು ಕೇಳಿದರೆ ಅವರು ಬಿಬಿಎಂಪಿಯತ್ತ ಕೈ ತೋರಿಸುತ್ತಿದ್ದಾರೆ. ಇದರಿಂದ ಸ್ಥಳೀಯರು ಯಾರನ್ನು ಕೇಳಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ರಸ್ತೆ ಬದಿಯ ಖಾಲಿ ಜಾಗ, ಮೈದಾನ ಮತ್ತು ಕೆರೆಗಳ ದಡದಲ್ಲಿ ಬಿದ್ದಿರುವಕಟ್ಟಡ ಅವಶೇಷ, ಘನತ್ಯಾಜ್ಯ ಸಂಸ್ಕರಿಸಲು ಬಿದರಹಳ್ಳಿ ಹೋಬಳಿಯ ಕಣ್ಣೂರು ಬಳಿ ಹತ್ತು ಎಕರೆ ಜಾಗ ಗುರುತಿಸಲಾಗಿದೆ ಎಂದು ಬಿಬಿಎಂಪಿ ಹೇಳಿತ್ತು.

ಘನ ತ್ಯಾಜವನ್ನು ಸಂಗ್ರಹಿಸಿ ಘಟಕಕ್ಕೆ ಸಾಗಿಸಲು ಖಾಸಗಿ ವಾಹನ ಮಾಲೀಕರಿಗೆ ಗುತ್ತಿಗೆ ನೀಡಲಾಗಿದೆ. ಒಂದು ಕರೆ ಮಾಡಿದರೆ ಸಾಕು, ಸ್ಥಳಕ್ಕೆ ಬಂದು ಕಸವನ್ನು ಸಂಗ್ರಹಿಸಿ ಸಂಸ್ಕರಣಾ ಘಟಕಕ್ಕೆ ಸಾಗಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದರು.

‘ಸಾರ್ವಜನಿಕ ಸ್ಥಳದಲ್ಲಿ ಘನತ್ಯಾಜ್ಯ ಸುರಿದರೆ ದಂಡ ವಿಧಿಸುವುದಾಗಿ ಹೇಳಿದ್ದ ಬಿಬಿಎಂಪಿ ಏನು ಮಾಡುತ್ತಿದೆ. ಕಸ ಸುರಿಯುವುದನ್ನು ತಡೆಯಲು ಮಾರ್ಷಲ್‌ಗಳನ್ನು ನಿಯೋಜಿಸುವುದಾಗಿ ಬಿಬಿಎಂಪಿ ಹೇಳಿತ್ತು. ಇಲ್ಲಿ ಮಾರ್ಷಲ್‌ಗಳೂ ಇಲ್ಲ, ಮಣ್ಣನ್ನು ವಿಲೇವಾರಿಯನ್ನೂ ಮಾಡಿಲ್ಲ’ ಎಂದು ಸಾರ್ವಜನಿಕರು ಹರಿಹಾಯುತ್ತಾರೆ.

ಸಾರ್ವಜನಿಕರು ತಂದು ಸುರಿಯುವ ಕಸ ಮತ್ತು ಘನತ್ಯಾಜ್ಯಕ್ಕೆ ದಂಡ ವಿಧಿಸುವುದಾಗಿ ಹೇಳಿದ್ದ ಬಿಬಿಎಂಪಿ ಈಗ ಕಣ್ಮುಚ್ಚಿ ಕುಳಿತಿರುವುದು ಏಕೆ ಎನ್ನುವುದು ಸ್ಥಳೀಯರ ಪ್ರಶ್ನೆ. ಮಣ್ಣಿನ ಗುಡ್ಡೆ ಸುರಿದವರು ಯಾರು. ಯಾರಿಗೆ ದಂಡ ವಿಧಿಸಬೇಕು. ಇದನ್ನು ಸಾಗಿಸುವುದು ಯಾರು ಹೊಣೆ ಎಂದು ಜನರು ಕೇಳುತ್ತಿದ್ದಾರೆ. ಉತ್ತರಿಸಬೇಕಾದ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT