ಮಂಗಳವಾರ, ಸೆಪ್ಟೆಂಬರ್ 17, 2019
21 °C
ಪರಿಹಾರ ನಿಧಿಗೆ ಶುಭಕಾರ್ಯದ ಸಾಮಗ್ರಿ

ನೆರೆ ಸಂತ್ರಸ್ತರಿಗಾಗಿ ಗೃಹ ಪ್ರವೇಶ ಕಾರ್ಯ ರದ್ದು!

Published:
Updated:
Prajavani

ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕದ ಜನರು ತೊಂದರೆಗೀಡಾಗಿದ್ದಾರೆ. ಅವರ ಬದುಕು ಬೀದಿಗೆ ಬಿದ್ದಿದೆ. ಇಂತಹ ಹೊತ್ತಿನಲ್ಲಿ ಸಂಭ್ರಮಿಸುವುದು ಮಾನವೀಯತೆ ಅಲ್ಲ ಎಂದು ಬೆಂಗಳೂರಿನ ದಂಪತಿ ತಮ್ಮ ಹೊಸ ಮನೆಯ ಪ್ರವೇಶ ಕಾರ್ಯ ರದ್ದು ಮಾಡಿದ್ದಾರೆ.

ಅಷ್ಟೇ ಅಲ್ಲ, ಶುಭಕಾರ್ಯಕ್ಕೆ ತಂದಿದ್ದ ಸಾಮಗ್ರಿಗಳನ್ನು ಉತ್ತರ ಕರ್ನಾಟಕದ ಸಂತ್ರಸ್ತರ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ. ಬಂಧು–ಬಳಗದವರು ತಮಗೆ ನೀಡಬೇಕು ಎಂದು ಬಯಸಿದ್ದ ಉಡುಗೊರೆ, ಮುಯ್ಯಿಗಳನ್ನು ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರ ನಿಧಿಗೆ ಅರ್ಪಿಸುವಂತೆ ದಂಪತಿ ಮನವಿ ಮಾಡಿದ್ದಾರೆ. 

ವಿಜಯನಗರದ ಚಂದ್ರಾ ಲೇಔಟ್‌ ನಿವಾಸಿಗಳಾದ ಶೇಖರ್‌ ಎ. ಮತ್ತು ಮಹೇಶ್ವರಿ ದಂಪತಿಯ ಕನಸಿನ ಹೊಸ ಮನೆ ‘ಭಾಗ್ಯಮ್ಮ ನಿಲಯ’ ನೈಸ್‌ ರಸ್ತೆಯ ಗೊಲ್ಲರಹಟ್ಟಿಯಲ್ಲಿ ಸಿದ್ಧವಾಗಿದೆ. ಶ್ರಾವಣ ಮಾಸದಲ್ಲಿ ಗೃಹ ಪ್ರವೇಶಕ್ಕೆ ಮುಹೂರ್ತ ನಿಗದಿ ಮಾಡಿಯಾಗಿತ್ತು. ನೆಂಟರಿಷ್ಟರಿಗೆ ಮುಂಚಿತವಾಗಿ ಆಹ್ವಾನ ನೀಡಲಾಗಿತ್ತು. ಇನ್ನುಳಿದ ಸಿದ್ಧತೆಗಳು ಭರದಿಂದ ಸಾಗಿದ್ದವು. 

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಭಾನುವಾರ (ಆಗಸ್ಟ್‌ 18 ರಂದು) ಶೇಖರ್ ಮತ್ತು ಮಹೇಶ್ವರಿ ದಂಪತಿ ತಮ್ಮ ಕನಸಿನ ಮನೆಯನ್ನು ಪ್ರವೇಶಿಸಬೇಕಿತ್ತು. ಬಂಧು–ಬಳಗದೊಂದಿಗೆ ಸಂಭ್ರಮಿಸಬೇಕಿತ್ತು. ಆದರೆ, ದಂಪತಿ ಅಂದುಕೊಂಂಡಂತೆ ನಡೆಯಲಿಲ್ಲ.   

ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂತ್ರಸ್ತರು ಪಡುತ್ತಿರುವ ಬವಣೆಯನ್ನು ಸುದ್ದಿವಾಹಿನಿಗಳಲ್ಲಿ ಕಂಡ ದಂಪತಿಯ ಮನಸ್ಸು ಕರಗಿತು.  ‘ನಮ್ಮದೇ ಜನ ಅಲ್ಲಿ ಸಂಕಷ್ಟದಲ್ಲಿರುವಾಗ ನಾವು ಇಲ್ಲಿ ಸಂಭ್ರಮಿಸುವುದು ಸರಿಯಲ್ಲ’ ಎಂದು ದಂಪತಿ ಗೃಹ ಪ್ರವೇಶ ಕಾರ್ಯ ರದ್ದು ಮಾಡುವ ನಿರ್ಧಾರಕ್ಕೆ ಬಂದರು. 

ಈ ನಿರ್ಧಾರದ ಬಗ್ಗೆ ಬಂಧು, ಬಾಂಧವರಿಗೆ, ಸ್ನೇಹಿತರಿಗೆ ವಾಟ್ಸ್‌ ಆ್ಯಪ್‌ ಮೂಲಕ ಸಂದೇಶ ಕಳಿಸಿ, ದೂರದಿಂದಲೇ ಆಶೀರ್ವದಿಸುವಂತೆ  ಮನವಿ ಮಾಡಿದ್ದಾರೆ. ಶುಭಕಾರ್ಯ ರದ್ದು ಮಾಡುವುದು ಸರಿಯಲ್ಲ ಎಂಬ ಹಿತೈಷಿಗಳ ಕಿವಿಮಾತಿನಿಂದ ದಂಪತಿ ಮನಸ್ಸು ಕದಲಿಲ್ಲ.

ಗೃಹ ಪ್ರವೇಶಕ್ಕೆ ತಂದಿದ್ದ ಅಕ್ಕಿ, ಬೇಳೆ, ರವೆ, ಬೆಲ್ಲ, ಸಕ್ಕರೆ ಇತ್ಯಾದಿ ಸಾಮಗ್ರಿಗಳನ್ನು ಸುದ್ದಿ ವಾಹಿನಿಯೊಂದರ ಪ್ರವಾಹ ಸಂತ್ರಸ್ತರ ನಿಧಿಗೆ ಕೊಟ್ಟು ಬಂದಿದ್ದಾರೆ. ಆಗಸ್ಟ್‌ 24ರಂದು ಕುಟುಂಬ ಸದಸ್ಯರಷ್ಟೇ ಸರಳವಾಗಿ ಪೂಜೆ ನೆರವೇರಿಸಿ ಹೊಸ ಮನೆ ಪ್ರವೇಶಿಸಲು ಸಜ್ಜಾಗಿದ್ದಾರೆ.

‘ಆತ್ಮತೃಪ್ತಿ ತಂದಿದೆ’

‘ಪ್ರಚಾರಕ್ಕಾಗಿ ಈ ಕೆಲಸ ಮಾಡಿಲ್ಲ. ಆತ್ಮತೃಪ್ತಿಗಾಗಿ ಮಾಡಿದ್ದೇವೆ. ಗೃಹ ಪ್ರವೇಶ ರದ್ದು ಮಾಡಿದ ಬಗ್ಗೆ ಬೇಸರವಿಲ್ಲ. ಬದಲಾಗಿ ಗೃಹಪ್ರವೇಶಕ್ಕಿಂತ ಹೆಚ್ಚಿನ ಸಂತೋಷ ಸಿಕ್ಕಿದೆ’ ಎನ್ನುತ್ತಲೇ ಶೇಖರ್‌ ಮತ್ತು ಮಹೇಶ್ವರಿ ದಂಪತಿ ‘ಮೆಟ್ರೊ’ ಜತೆ ಮಾತಿಗಿಳಿದರು. 

‘ಬೆಂಗಳೂರಿನಲ್ಲಿ ಸ್ವಂತದೊಂದು ಸೂರು ಹೊಂದುವ ಕನಸಿತ್ತು. ಅದ್ದೂರಿಯಾಗಿ ಮನೆ ಪ್ರವೇಶ ಕಾರ್ಯ ನಡೆಸುವ ಆಸೆ ಇತ್ತು. ಆದರೆ, ಈ ಸಂದರ್ಭದಲ್ಲಿ ನಮ್ಮ ಆಸೆ, ಆಕಾಂಕ್ಷೆಗಳು ಮುಖ್ಯವಲ್ಲ. ಜನರ ಪ್ರಾಣ ಮತ್ತು ಅವರಿಗೆ ನೆರವಿನ ಹಸ್ತ ಚಾಚುವುದು ಮುಖ್ಯ. ನಮ್ಮ ಕೈಯಿಂದ ದೊಡ್ಡ ಸಹಾಯ ನೀಡುವುದು ಸಾಧ್ಯವಿಲ್ಲ. ನಮ್ಮ ಮಿತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅಳಿಲು ಸೇವೆ ಸಲ್ಲಿಸಿದ್ದೇವೆ’ ಎನ್ನುತ್ತಾರೆ ಮಹೇಶ್ವರಿ. 

ಗೃಹ ಪ್ರವೇಶ ರದ್ದು ಮಾಡಿದ ವಿಷಯ ತಿಳಿಸಲು ದಂಪತಿಯು ತಮ್ಮ ಸಂಬಂಧಿಕರು ಮತ್ತು ಆಪ್ತರಿಗೆ ಕಳಿಸಿದ ವಿಜ್ಞಾಪನೆ ಪತ್ರ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ. ಜನರು ದಂಪತಿಯ ನಿರ್ಧಾರವನ್ನು ತುಂಬು ಮನಸ್ಸಿನಿಂದ ಶ್ಲಾಘಿಸುತ್ತಿದ್ದಾರೆ.

ವೈಭವದ ಮದುವೆ, ನಾಮಕರಣ, ಗೃಹಪ್ರವೇಶ ಇತರ ಕಾರ್ಯಕ್ರಮ ಮಾಡುವ ಇತರರಿಗೂ ದಂಪತಿಯ ಈ ಕಾರ್ಯ ಮಾದರಿಯಾಗಲಿ ಎಂದು ಮನದುಂಬಿ ಹಾರೈಸಿದ್ದಾರೆ. 

ಶೇಖರ್‌ ಅವರು ಚಂದ್ರಾ ಲೇಔಟ್‌ನಲ್ಲಿ ಫ್ಲವರ್‌ ಡೆಕೊರೇಷನ್‌ ಅಂಗಡಿ ಹೊಂದಿದ್ದಾರೆ. ಅವರನ್ನು ಮೊಬೈಲ್‌ ಸಂಖ್ಯೆ 9900277770 ಸಂಪರ್ಕಿಸಬಹುದು.

***

ಉತ್ತರ ಕರ್ನಾಟಕದ ಜನರು ಅಷ್ಟೊಂದು ತೊಂದರೆಯಲ್ಲಿ ಇರಬೇಕಾದರೆ ನಾವು ಸಂಭ್ರಮಿಸುವುದು ಮಾನವೀಯತೆ ಅಲ್ಲ ಎಂದು ಭಾವಿಸಿ ನನ್ನ ನಿರ್ಧಾರವನ್ನು ಮನೆಯವರಿಗೆ ತಿಳಿಸಿದೆ. ಎಲ್ಲರೂ ಸಂತೋಷದಿಂದ ಒಪ್ಪಿಗೆ ಸೂಚಿಸಿದರು. ಅದ್ದೂರಿಯಾಗಿ ಮನೆ ಪ್ರವೇಶ ಮಾಡಿದರೂ ಸಿಗದಷ್ಟು ನೆಮ್ಮದಿ, ಸಂತೋಷ ನಮಗೆ ಸಿಕ್ಕಿದೆ.

- ಶೇಖರ್‌, ಫ್ಲವರ್‌ ಡೆಕೊರೇಷನ್‌ ಅಂಗಡಿ ಮಾಲೀಕ, ಚಂದ್ರಾ ಲೇಔಟ್‌

ಸ್ನೇಹಿತರು, ನೆಂಟರು, ಹಿತೈಷಿಗಳು ನಮ್ಮ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದೇನೂ ದೊಡ್ಡ ಕೆಲಸವಲ್ಲ. ನಮ್ಮಿಂದ ನಾಲ್ಕು ಜನರಿಗೆ ಒಳ್ಳೆಯದಾದರೆ ಅದಕ್ಕಿಂತ ಖುಷಿಯ ವಿಚಾರ ಬೇರೆನಿದೆ. ಈ ಕೆಲಸದಿಂದ ನಮ್ಮಲ್ಲೂ ಧನ್ಯತಾ ಭಾವ ಮೂಡಿದೆ

– ಮಹೇಶ್ವರಿ ಶೇಖರ್‌

Post Comments (+)