ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಟಿಕೆಟ್‌ ದರ ದುಪ್ಪಟ್ಟು: ಪ್ರಯಾಣಿಕರ ಪರದಾಟ

ಕ್ರಿಸ್‌ಮಸ್‌ ರಜೆ, ಹೊಸ ವರ್ಷದ ಪರಿಣಾಮ
Last Updated 24 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಕ್ರಿಸ್‌ಮಸ್‌ ರಜೆ ಮತ್ತುವರ್ಷಾಂತ್ಯದಲ್ಲಿ ಬಸ್‌ ಪ್ರಯಾಣ ದರಗಳು ದುಪ್ಪಟ್ಟಾಗಿವೆ. ಖಾಸಗಿ ಬಸ್‌ ಸಂಸ್ಥೆಗಳು ಟಿಕೆಟ್‌ ದರವನ್ನು ಎರಡು ಪಟ್ಟು ಹೆಚ್ಚಿಸಿವೆ. ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳ ಟಿಕೆಟ್‌ ದರವನ್ನು ಶೇ 10ರಷ್ಟು ಏರಿಕೆ ಮಾಡಿದೆ. ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣಿಕರಿಂದ ಮನಬಂದಂತೆ ಹಣ ಸುಲಿಯುತ್ತಿವೆ.

ಕ್ರಿಸ್‌ಮಸ್‌ ರಜೆ ಕಾರಣಡಿ. 24ರಿಂದ 30ರ ಅವಧಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಸೀಟ್‌ಗಳು ಭರ್ತಿಯಾಗುತ್ತಿವೆ. ಖಾಸಗಿ ಬಸ್‌ ಟಿಕೆಟ್‌ ದರ ಭಯ ಹುಟ್ಟಿಸುವಂತಿವೆ. ಲಾಭ ಮಾಡಿಕೊಳ್ಳಲು ಇದೇ ಒಳ್ಳೆಯ ಸಂದರ್ಭ ಎಂದು ಖಾಸಗಿ ಸಾರಿಗೆ ಸಂಸ್ಥೆಗಳು ಬೇಡಿಕೆಗೆ ಅನುಗುಣವಾಗಿ ಪ್ರಯಾಣ ದರಗಳನ್ನು ಹೆಚ್ಚಿಸುತ್ತಿವೆ. ಜನವರಿ 1ರ ನಂತರ ಪ್ರಯಾಣ ದರಗಳು ಯಥಾಸ್ಥಿತಿಗೆ ಬರುವ ಸಾಧ್ಯತೆ ಇದೆ.

ಬೆಂಗಳೂರಿನಿಂದ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಸಂಚರಿಸುವ ಬಹುತೇಕ ಖಾಸಗಿ ಬಸ್‌ಗಳ ಪ್ರಯಾಣ ದರಗಳು ಬಹುತೇಕ ಎರಡರಷ್ಟಾಗಿದೆ. ‘ಹಬ್ಬದ ಸಮಯದಲ್ಲಿ ಇದು ಸಹಜ. ದೂರದ ಸ್ಥಳಗಳಿಗೆ ಸಂಚರಿಸುವ ಬಸ್‌ಗಳ ಟಿಕೆಟ್‌ ದರವನ್ನು ₹800ರಿಂದ ₹1,000 ಏರಿಸಲಾಗುತ್ತದೆ. ಇದರಲ್ಲಿ ವಿಶೇಷವೇನಿಲ್ಲ’ ಎನ್ನುತ್ತಾರೆ ‘ಮೆಟ್ರೊ’ ಜತೆ ಮಾತನಾಡಿದ ನಗರದ ಖಾಸಗಿ ಬಸ್‌ ಸಂಸ್ಥೆಗಳ ಮ್ಯಾನೇಜರ್‌ಗಳು.

‘ಈ ಅವಧಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಒಂದು ತಿಂಗಳು ಮೊದಲೇ ಟಿಕೆಟ್‌ ಬುಕ್ಕಿಂಗ್‌ ಮಾಡಿದರೂ ಕೂಡ ಇಷ್ಟೇ ಹಣ ನೀಡಬೇಕು. ತಿಂಗಳ ಮೊದಲೇ ಆನ್‌ಲೈನ್‌ನಲ್ಲಿ ದರಗಳನ್ನು ಅಪ್‌ಲೋಡ್‌ ಮಾಡಿರಲಾಗುತ್ತದೆ.ಸಂಚಾರ ದಟ್ಟನೆಯ ನೋಡಿಕೊಂಡು ಕೊನೆಯ ಗಳಿಗೆಯಲ್ಲಿ ಟಿಕೆಟ್‌ ದರ ಹೆಚ್ಚಿಸುವುದಿಲ್ಲ. ಇದು ಪೂರ್ವ ನಿರ್ಧರಿತ’ ಎಂದರು.

ಹೊರ ರಾಜ್ಯಗಳಿಗೆ ಸಂಚರಿಸುವ ರೈಲುಗಳು ಮುಂಚಿತವಾಗಿ ಭರ್ತಿಯಾಗಿವೆ. ಕ್ರಿಸ್‌ಮಸ್‌ ಮತ್ತು ಹೊಸ ವರ್ಷ ಆಚರಿಸಲು ತೆರಳುವ ಜನರು ಮುಂಗಡ ಬುಕ್ಕಿಂಗ್‌ ಮಾಡಿರುತ್ತಾರೆ. ಈ ಬಾರಿ ಸಾಕಷ್ಟು ಟಿಕೆಟ್‌ಗಳು ಸಾಕಷ್ಟು ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಬುಕ್‌ ಆಗಿವೆ. ಕೌಂಟರ್‌ಗಳಿಗೆ ಬಂದು ಮುಂಗಡ ಟಿಕೆಟ್‌ ಕಾಯ್ದಿರಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬೆಂಗಳೂರಿನಿಂದ ಮುಂಬೈ, ಕೋಲ್ಕತ್ತ, ಚೆನ್ನೈ, ಕೇರಳ, ಗೋವಾಕ್ಕೆ ಸಂಚರಿಸುವ ರೈಲುಗಳು ಭರ್ತಿಯಾಗಿವೆ ಎಂಬ ಮಾಹಿತಿಯನ್ನು ನೀಡಿದ್ದು ಕಂಠಿರವ ಸಂಗೊಳ್ಳಿ ರಾಯಣ್ಣ ಸಿಟಿ ರೈಲ್ವೆ ಸ್ಟೇಷನ್‌ನ ಬುಕ್ಕಿಂಗ್‌ ಕೌಂಟರ್‌ ಸಿಬ್ಬಂದಿ. ಕೊನೆಯ ಗಳಿಗೆಯಲ್ಲಿ ಪ್ರಯಾಣ ಹೊರಡುವವರು, ಬಸ್‌ನಲ್ಲಿ ಸೀಟು ಸಿಗದವರು ಟಿಕೆಟ್‌ಗಳಿಗಾಗಿ ಕೌಂಟರ್‌ಗಳಿಗೆ ಬರುತ್ತಾರೆ. ಸೀಟು ಸಿಗದಿದ್ದರೆ ಜನರಲ್‌ ಬೋಗಿಗಳಲ್ಲಿ ಪ್ರಯಾಣಿಸುತ್ತಾರೆ ಎನ್ನುವುದು ಅವರ ಅನುಭವದ ಮಾತು.

‘ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅಂಗವಿಕಲರಿಗೆ ಸೀಟ್‌ ಕಾಯ್ದಿರಿಸಿರುವುದಿಲ್ಲ. ಇದರಿಂದ ದೂರದ ಪ್ರಯಾಣ ಕಷ್ಟ. ಶೌಚಾಲಯದ ತೊಂದರೆ ಎದುರಾಗುತ್ತದೆ. ಹೀಗಾಗಿ ರೈಲು ಪ್ರಯಾಣ ಅನಿವಾರ್ಯ ಎನ್ನುತ್ತಾರೆ’ ಟಿಕೆಟ್‌ ಪಡೆಯಲು ರೈಲು ನಿಲ್ದಾಣಕ್ಕೆ ಬಂದಿದ್ದ ಪೊಲೀಯೊ ಪೀಡಿತ ಮಹಮ್ಮದ್‌.

‘ಬೆಂಗಳೂರಿನಿಂದ ಬೆಳಗಾವಿಗೆ ಕುಟುಂಬ ಸಮೇತ ಪ್ರಯಾಣಿಸಲು ರೈಲು ಟಿಕೆಟ್‌ ಕಾಯ್ದಿರಿಸಿದ್ದೆ. ಇನ್ನೂ ವೇಟಿಂಗ್‌ ಲಿಸ್ಟ್‌ನಲ್ಲಿವೆ. ಸೀಟು ಸಿಗುವ ಗ್ಯಾರಂಟಿ ಇಲ್ಲ. ಬಸ್‌ ಟಿಕೆಟ್‌ ಸಿಗುತ್ತವೆಯೋ ನೋಡಬೇಕು’ ಎಂದುಕೆಎಸ್‌ಆರ್‌ಟಿಸಿ ಬುಕ್ಕಿಂಗ್‌ ಕೇಂದ್ರಕ್ಕೆ ಹೊರಡುವ ಗಡಿಬಿಡಿಯಲ್ಲಿದ್ದ ಪ್ರಥಮೇಶ್‌ ಹೇಳಿದರು.

ಹಬ್ಬದಲ್ಲಿ ಹಗಲು ದರೋಡೆ

ಪ್ರತಿ ವಾರಾಂತ್ಯ, ಸಾಲು, ಸಾಲು ರಜೆಗಳು ಮತ್ತು ಹಬ್ಬಗಳು ಬಂದರೆಖಾಸಗಿ ಬಸ್‌ ಸಂಸ್ಥೆಗಳಿಗೆ ಸುಗ್ಗಿ ಸಮಯ.ಹಣದ ಸುರಿಮಳೆ.

ಖಾಸಗಿ ಬಸ್‌ ಸಂಸ್ಥೆಗಳು ಅಕ್ಷರಶಃ ಪ್ರಯಾಣಿಕರನ್ನು ಹಗಲು ದರೋಡೆ ಮಾಡುತ್ತವೆ. ಹಬ್ಬದ ಸಂದರ್ಭದಲ್ಲಿ ಸ್ವಂತ ಊರುಗಳಿಗೆ ತೆರಳುವವರ ಪರದಾಟ ಹೇಳ ತೀರದು. ಸಂಸಾರ ಸಮೇತ ದೂರದ ಊರಿಗೆ ಹೋಗುವವರು ಅನಿವಾರ್ಯವಾಗಿ ಕೇಳಿದಷ್ಟು ಹಣ ತೆತ್ತು ಪ್ರಯಾಣಿಸುತ್ತಾರೆ.

ಎಷ್ಟೇ ಹಣ ಕೇಳಿದರೂ ಪ್ರಯಾಣಿಕರು ನೀಡುವ ಅನಿವಾರ್ಯತೆಯಲ್ಲಿರುತ್ತಾರೆ ಎನ್ನುವ ವಿಷಯ ಖಾಸಗಿ ಬಸ್‌ ಮಾಲೀಕರಿಗೂ ಗೊತ್ತು. ಇದರಿಂದ ರಾಜಾರೋಷವಾಗಿ ಹಗಲು ದರೋಡೆ ನಡೆಯುತ್ತಿದೆ. ಸರ್ಕಾರದ ಎಚ್ಚರಿಕೆಗೂ ಬೆಲೆ ಇಲ್ಲದಂತಾಗಿದೆ.

ಪ್ರಯಾಣಿಕರಿಂದ ಹಣ ಸುಲಿಗೆ ಮಾಡುವ ಖಾಸಗಿ ಬಸ್‌ ಸಿಬ್ಬಂದಿಯ ಹಗಲು ದರೋಡೆಗೆ ಕಡಿವಾಣ ಇಲ್ಲದಂತಾಗಿದೆ. ಪ್ರಯಾಣಿಕರೊಂದಿಗೆ ಖಾಸಗಿ ಬಸ್‌ ಸಿಬ್ಬಂದಿಯ ಅನಾಗರಿಕ ವರ್ತನೆ ಪ್ರಶ್ನಿಸುವವರು ಇಲ್ಲ. ಒಂದು ವೇಳೆ ಪ್ರಶ್ನಿಸಿದರೂ ಅಂತಹ ಪ್ರಯಾಣಿಕರನ್ನು ಯಾವ ಮುಲಾಜಿಲ್ಲದೆ ದಬಾಯಿಸಿ ಬಾಯಿ ಮುಚ್ಚಿಸುತ್ತಾರೆ. ಕೆಲವೊಮ್ಮೆ ಬಸ್‌ ಸಿಬ್ಬಂದಿ ಒಂದಾಗಿ ಸೀಳು ನಾಯಿಗಳಂತೆ ಪ್ರಯಾಣಿಕರ ಮೈಮೇಲೆ ಮುಗಿ ಬೀಳುತ್ತಾರೆ.ವಾರಾಂತ್ಯ ಮತ್ತು ಹಬ್ಬದ ಸಂದರ್ಭಗಳಲ್ಲಂತೂ ನಡು ರಸ್ತೆಗಳಲ್ಲಿ ಠಳಾಯಿಸುವ ಬಸ್‌ಗಳು ಸಂಚಾರಕ್ಕೆ ಅಡ್ಡಿಪಡಿಸುತ್ತವೆ. ಟ್ರಾಫಿಕ್‌ ಪೊಲೀಸರು ಅವರ ಲೆಕ್ಕಕ್ಕೆ ಇಲ್ಲ!

ಮುಖ್ಯಮಂತ್ರಿ ಹೆಸರಲ್ಲಿ ಬಸ್‌ ಟಿಕೆಟ್‌ ಬುಕ್‌!

ದೀಪಾವಳಿ ಸಂದರ್ಭದಲ್ಲಿ ಖಾಸಗಿ ಬಸ್‌ ದರಗಳು ಮೂರು ಪಟ್ಟು ಏರಿಕೆಯಾಗಿದ್ದವು. ವಾರಾಂತ್ಯ,ಸಾಲು, ಸಾಲು ರಜೆ ಮತ್ತು ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ ಪ್ರಯಾಣ ದರ ಎರಡರಿಂದ ಮೂರು ಪಟ್ಟು ಏರಿಕೆ ಸರ್ವೆ ಸಾಮಾನ್ಯ. ಇದನ್ನು ಪ್ರತಿಭಟಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರಿನಲ್ಲಿ ಬಸ್‌ ಟಿಕೆಟ್‌ ಬುಕ್‌ ಮಾಡಿ ಗಮನ ಸೆಳೆದಿದ್ದರು.

ಬೆಂಗಳೂರಿನಿಂದ ಹೊನ್ನಾವರಕ್ಕೆ ತೆರಳುವ ನಾನ್‌–ಎ.ಸಿ. ಸ್ಲೀಪರ್‌ ಖಾಸಗಿ ಬಸ್‌ನಲ್ಲಿ ಬಿಎಸ್‌ವೈ ಹೆಸರಿನಲ್ಲಿ ಟಿಕೆಟ್‌ ಬುಕ್‌ ಮಾಡಲಾಗಿತ್ತು. ಮುಖ್ಯಮಂತ್ರಿಗಳ ವಿಳಾಸ, ಇ–ಮೇಲ್‌ ಐ.ಡಿ ನೀಡಲಾಗಿತ್ತು. ಸಾಮಾನ್ಯ ದಿನಗಳಲ್ಲಾದರೆ ಬೆಂಗಳೂರಿನಿಂದ ಹೊನ್ನಾವರಕ್ಕೆ ₹420ರಿಂದ ₹580 ದರವಿದೆ. ದೀಪಾವಳಿ ಸಮಯದಲ್ಲಿ ಮೂರು ಪಟ್ಟು ಅಂದರೆ ₹1,520 ರಿಂದ ₹1,800 ಹೆಚ್ಚಾಗಿತ್ತು. ಬಿಎಸ್‌ವೈ ಹೆಸರಿನಲ್ಲಿ ಬುಕ್‌ ಮಾಡಿಸಿದ್ದ ಟಿಕೆಟ್‌ ಅನ್ನು ಸಾಮಾಜಿಕ ಕಾರ್ಯಕರ್ತ ರಾಜೇಶ್ ಶೇಟ್‌ ಎಂಬುವರು, ‘ದೀಪಾವಳಿ ಉಡುಗೊರೆ’ ರೂಪದಲ್ಲಿ ಮುಖ್ಯಮಂತ್ರಿ ಕಚೇರಿಗೆ ತಲುಪಿಸಿದ್ದರು ಕೂಡ!

ಕೆಎಸ್‌ಆರ್‌ಟಿಸಿಯಿಂದ 87 ಹೆಚ್ಚುವರಿ ಬಸ್‌

ಡಿಸೆಂಬರ್‌ ಕೊನೆಯ ವಾರದ ದಟ್ಟನೆ ಗಮನದಲ್ಲಿರಿಸಿಕೊಂಡು ಕೆಎಸ್‌ಆರ್‌ಟಿಸಿ 87 ಹೆಚ್ಚುವರಿ ಬಸ್‌ಗಳ ಸಂಚಾರ ಆರಂಭಿಸಿದೆ. ಬೇಡಿಕೆ ಬಂದರೆ ಇನ್ನೂ ಹೆಚ್ಚುವರಿ ಬಸ್‌ಗಳನ್ನು ಬಿಡುತ್ತೇವೆ ಎನ್ನುತ್ತಾರೆಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು. ‘ಇಂತಹ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಂದ ಮಾತ್ರ ಶೇ 10ರಷ್ಟು ಹೆಚ್ಚುವರಿ ದರ ಪಡೆಯುತ್ತೇವೆ. ಏಕೆಂದರೆ ಈ ಬಸ್‌ಗಳು ಬರುವಾಗ ಖಾಲಿ ಬರಬೇಕು. ಆ ನಷ್ಟವನ್ನು ಸರಿದೂಗಿಸಲು ಸ್ವಲ್ಪ ದುಬಾರಿ ಹಣ ಪಡೆಯುವುದು ಅನಿವಾರ್ಯ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT