ಸೋಮವಾರ, ಸೆಪ್ಟೆಂಬರ್ 23, 2019
27 °C

ರಾಜಕಾಲುವೆಗಳಿಗೆ ಸೆನ್ಸರ್‌ ಕಣ್ಗಾವಲು

Published:
Updated:
Prajavani

ರಾಜಕಾಲುವೆಗಳಲ್ಲಿ ಹರಿಯುವ ನೀರಿನ ಮಟ್ಟದ ಮೇಲೆ ಕಣ್ಗಾವಲಿಗೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಂವೇದಕಗಳನ್ನು (ಸೆನ್ಸರ್‌) ಅಳವಡಿಸಿದೆ. ನಗರದ 18 ಅತಿ ಸೂಕ್ಷ್ಮ ರಾಜಕಾಲುವೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಳೆಗಾಲದಲ್ಲಿ ಈ ರಾಜಕಾಲುವೆಗಳು ಉಕ್ಕಿ ಹರಿದು ಅವಾಂತರ ಸೃಷ್ಟಿಸಬಹುದು. ಇಲ್ಲಿ ಅಳವಡಿಸಿದ ಸೆನ್ಸರ್‌ಗಳು ನೀಡುವ ಸಂದೇಶಗಳಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. 

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಎಂಡಿಸಿ) ಉಚಿತವಾಗಿ ಈ ‘ರಿಯಲ್‌ ಟೈಮ್‌ ವಾಟರ್‌ ಲೆವೆಲ್‌ ಸೆನ್ಸರ್‌‘ ಸಾಧನ ಅಳವಡಿಸಿದೆ.ಪ್ರತಿ ಸಂವೇದಕಗಳಿಗೆ ಸೌರಫಲಕ ಅಳವಡಿಸಲಾಗಿದ್ದು, ವಿದ್ಯುತ್‌ ಬೇಕಿಲ್ಲ. ಒಂದು ಸಂವೇದಕ ಅಳವಡಿಸಲು ಅಂದಾಜು ₹35 ಸಾವಿರ ವೆಚ್ಚವಾಗುತ್ತದೆ. ಇದಕ್ಕೆ ಪಾಲಿಕೆ ಹಣ ನೀಡಿಲ್ಲ.

ಪ್ರತಿನಿತ್ಯ ರಾಜಕಾಲುವೆಗಳಲ್ಲಿ ಹರಿಯುವ ನೀರಿನ ಮಟ್ಟದ ಮಾಹಿತಿಯನ್ನು ಸಂವೇದಕಗಳು ಅಂತರ್ಜಾಲದ ಮೂಲಕ ಕೆಎಸ್‌ಎನ್‌ಡಿಎಂಸಿ ನಿಯಂತ್ರಣ ಕೊಠಡಿಗೆ ರವಾನಿಸುತ್ತವೆ. ಅಲ್ಲಿಂದ ಬಿಬಿಎಂಪಿ ನಿಯಂತ್ರಣ ಕೊಠಡಿಗಳಿಗೆ ತಲುಪುತ್ತದೆ. 

ಕ್ಷಣ ಕ್ಷಣದ ಮಾಹಿತಿ

ರಾಜಕಾಲುವೆಗಳಲ್ಲಿ ನೀರಿನ ಹರಿವು ಪ್ರಮಾಣವನ್ನು ಸಾಮಾನ್ಯ, ಮಧ್ಯಮ ಮತ್ತು ಅಪಾಯದ ಸೂಚನೆಯನ್ನು ಸುಲಭವಾಗಿ ತಿಳಿಸಲು ಬಣ್ಣಗಳನ್ನು ಬಳಸಲಾಗಿದೆ. ನೀರಿನ ಹರಿವು ಹಸಿರು ಮತ್ತು ನೀಲಿ ಬಣ್ಣದ ಮಟ್ಟದಲ್ಲಿದ್ದರೆ ಅಪಾಯವಿಲ್ಲ. ಅಪಾಯದ ಸ್ಥಿತಿಯ ಬಗ್ಗೆ ಎಚ್ಚರಿಸಲು ಕೆಂಪು ಬಣ್ಣದ ಸಂದೇಶ ನೀಡಲಾಗುತ್ತದೆ. ಕಪ್ಪು ಬಣ್ಣಕ್ಕೆ ತಿರುಗಿದರೆ ಪ್ರವಾಹ ಸ್ಥಿತಿ ಎಂದರ್ಥ. 

ಪ್ರವಾಹ ಉಂಟಾಗುವ ರಾಜಕಾಲುವೆಗಳ ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಮುಂಚಿತವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲು ಅನುಕೂಲವಾಗುತ್ತದೆ. ಇದರಿಂದ ಪ್ರವಾಹದಿಂದ ಆಗುವ ಅನಾಹುತ ತಪ್ಪಿಸಬಹುದು. 

Post Comments (+)