ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ: ನೆರವಿಗೆ ನಿಂತ ಯುವ ಸಮೂಹ

Last Updated 12 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ನೆರೆ ಹಾವಳಿಯಿಂದ ಬೀದಿಗೆ ಬಿದ್ದಿರುವ ಉತ್ತರ ಕರ್ನಾಟಕದ ಸಂತ್ರಸ್ತರು ಬದುಕು ಕಟ್ಟಿಕೊಳ್ಳುವ ಕೆಲಸಕ್ಕೆ ಕೈಜೋಡಿಸಲು ಬೆಂಗಳೂರಿನ ವಿದ್ಯಾರ್ಥಿಗಳು ಬೀದಿಗೆ ಇಳಿದಿದ್ದಾರೆ!

ಮಲ್ಲೇಶ್ವರದ ಕಾಲೇಜೊಂದರ ವಿದ್ಯಾರ್ಥಿಗಳು ಐದಾರು ತಂಡಗಳಲ್ಲಿ ಸ್ವಯಂ ಪ್ರೇರಣೆಯಿಂದ ಬೀದಿ, ಬೀದಿಯಲ್ಲಿ ತಿರುಗಿ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಇವರಿಗೆ ದೇಣಿಗೆ ಸಂಗ್ರಹಿಸುವಂತೆ ಕಾಲೇಜಿನವರಾಗಲಿ ಇಲ್ಲವೇ ಸಂಘ, ಸಂಸ್ಥೆಯವರಾಗಲಿ ಹೇಳಿಲ್ಲ. ಪ್ರವಾಹ ಸಂತ್ರಸ್ತರ ಸ್ಥಿತಿಯನ್ನು ಕಂಡ ಎಳೆಯ ಹೃದಯಗಳು ಸ್ವಯಂ ಪ್ರೇರಣೆಯಿಂದಲೇ ಈ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಯುವ ಸಮೂಹಕ್ಕೆ ಮಾದರಿಯಾಗಿ ನಿಂತಿದ್ದಾರೆ.

‘ದೇಣಿಗೆ ಸಂಗ್ರಹಕ್ಕೂ ನಮ್ಮ ಕಾಲೇಜಿಗೂ ಸಂಬಂಧವಿಲ್ಲ. ಸಾಮಾಜಿಕ ಕಳಕಳಿಯುಳ್ಳ ಸಹಪಾಠಿಗಳು ಸೇರಿ ತೆಗೆದುಕೊಂಡ ನಿರ್ಧಾರವಿದು’ ಎನ್ನುವ ವಿದ್ಯಾರ್ಥಿಗಳ ವಯಸ್ಸು ಇನ್ನೂ 19ನ್ನೂ ಮೀರಿಲ್ಲ. ವಿದ್ಯಾರ್ಥಿನಿಯರು ಈ ತಂಡದ ಮುಂಚೂಣಿಯಲ್ಲಿದ್ದಾರೆ.

ಐದಾರು ತಂಡಗಳು ಪೆಟ್ರೋಲ್‌ ಬಂಕ್‌, ಮಾರುಕಟ್ಟೆ, ಮೆಜೆಸ್ಟಿಕ್‌ಗಳಲ್ಲಿ ಬಾಕ್ಸ್‌ ಹಿಡಿದು ಅಲೆಯುತ್ತಿರುವ ಕಾಲೇಜು ಮಕ್ಕಳಿಗೆದಾನಿಗಳು ಕೂಡ ಉದಾರವಾಗಿಯೇ ದಾನ ನೀಡುತ್ತಿದ್ದಾರೆ. ಕಳೆದ ವರ್ಷ ಕೊಡಗು ಮತ್ತು ಕೇರಳ ಪ್ರವಾಹ ಸಂತ್ರಸ್ತರಿಗೂ ಇದೇ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹಿಸಿದ್ದರು.

‘ರಜೆ ದಿನಗಳಲ್ಲಿ ಸಿಟಿ ಬಸ್‌ನಲ್ಲಿ ನಗರದ ನಾನಾ ಭಾಗಗಳಿಗೆ ತೆರಳಿ ಹಣ ಸಂಗ್ರಹಿಸುತ್ತೇವೆ. ಸಂಗ್ರಹವಾದ ಹಣದಲ್ಲಿ ಅಕ್ಕಿ, ಬೇಳೆ, ಪಡಿತರ, ಕಂಬಳಿ, ಔಷಧಿ, ಬಟ್ಟೆ ಖರೀದಿಸಿ ಉತ್ತರ ಕರ್ನಾಟಕಕ್ಕೆ ಕಳಿಸುತ್ತೇವೆ.ಉಳಿದ ಹಣವನ್ನು ಪರಿಹಾರ ನಿಧಿಗೆ ಅರ್ಪಿಸುತ್ತೇವೆ’ ಎನ್ನುವ ವಿದ್ಯಾರ್ಥಿಗಳುಈ ಹಣದಲ್ಲಿ ಚಿಕ್ಕಾಸನ್ನೂ ಮುಟ್ಟುವುದಿಲ್ಲ ಎಂಬ ಸಂಕಲ್ಪ ತೊಟ್ಟಿದ್ದಾರೆ.

ಉತ್ತರ ಕರ್ನಾಟಕ ನೆರವು ಅಭಿಯಾನ

ಉತ್ತರ ಕರ್ನಾಟಕ ನವನಿರ್ಮಾಣ ವೇದಿಕೆ ಸದಸ್ಯರು ಸಂತ್ರಸ್ತರಿಗೆ ಕಳಿಸಲು ರಾಜಾಜಿ ನಗರದ ಭಾಷ್ಯಂ ಸರ್ಕಲ್‌ನಲ್ಲಿ ಆಹಾರ ಸಾಮಗ್ರಿ ಸಂಗ್ರಹಿಸುತ್ತಿದ್ದಾರೆ.

ಈಗಾಗಲೇ ಸಾವಿರಾರು ರೊಟ್ಟಿ, ಚಪಾತಿ ಮಾಡಿ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಕಳಿಸಿದ್ದಾರೆ. ಸಂಘದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ನೂರಾರು ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸಂತ್ರಸ್ತರಿಗೆ ಅಡುಗೆ ತಯಾರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT