ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಟರ್‌ ಕಲೆಕ್ಷನ್‌

Last Updated 17 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಚಳಿಗಾಲ ಬಂತೆಂದರೆ ಮೈಯಲ್ಲಿ ನಡುಕ ಹುಟ್ಟುತ್ತದೆ. ಆದರೆ ಕುಸಿಯುವ ತಾಪಮಾನಕ್ಕೆ ತಕ್ಕಂತೆ ರಂಗು ರಂಗಿನ ಸುಂದರ ಬಟ್ಟೆಗಳನ್ನು ಧರಿಸಲು ಫ್ಯಾಷನ್ ಪ್ರಿಯರಿಗೆ ಇದು ಸಕಾಲ. ಮೈ ಕೊರೆಯುವ ಚಳಿಗೆ ಧರಿಸಬಹುದಾದ ಕಣ್ಣು ಕೋರೈಸುವಂತಹ ಕೆಲವು ಉಡುಪುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಪಫರ್ ಜಾಕೆಟ್‌

90ರ ದಶದಕದಲ್ಲಿ ಜನಪ್ರಿಯವಾಗಿದ್ದ ಜಾಕೆಟ್ ಇದು. ಇದನ್ನು ಡೌನ್ ಜಾಕೆಟ್ ಎಂದೂ ಕರೆಯುತ್ತಾರೆ. ಸಮುದ್ರ ಮಟ್ಟದಿಂದ ಹೆಚ್ಚು ಎತ್ತರದಲ್ಲಿರುವ ಪರ್ವತ ಪ್ರದೇಶಗಳಲ್ಲಿ ಮತ್ತು ಅತಿ ಹೆಚ್ಚು ಶೀತ ವಾತಾವರಣ ಇರುವಂತಹ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರು ಈ ಜಾಕೆಟ್‌ಗಳನ್ನು ಹೆಚ್ಚಾಗಿ ಧರಿಸುತ್ತಿದ್ದರು. ಆದರೆ ಇಂತಹ ಸುಂದರ ಜಾಕೆಟ್‌ಗಳನ್ನು ಧರಿಸುವ ಮೋಜು ಈಗ ಎಲ್ಲೆಡೆ ವ್ಯಾಪಿಸಿದೆ.

1930ರಲ್ಲಿ ವಸ್ತ್ರ ವಿನ್ಯಾಸಕ ಎಡಿ ಬೌರ್ ಅವರು ಈ ಜಾಕೆಟ್ ಹೊಲಿದು ಪರಿಚಯಿಸಿದರು. ಶೀತ ವಾತಾವರಣದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಲು ನೆರವಾಗುವುದರ ಜತೆಗೆ ನೋಡುವುದಕ್ಕೂ ಚೆಂದವಾಗಿ ಕಾಣುವುದರಿಂದ ಹಲವರಿಗೆ ಇದರ ಮೇಲೆ ಆಸೆ. ವಿವಿಧ ಬಣ್ಣಗಳಲ್ಲಿ, ವಿವಿಧ ವಿನ್ಯಾಸಗಳಲ್ಲಿ ಇಂತಹ ಜಾಕೆಟ್‌ಗಳು ದೊರೆಯುತ್ತವೆ.

ಲೆದರ್ ಜಾಕೆಟ್‌

ಪ್ರತಿಯೊಬ್ಬರೂ ಇಷ್ಟಪಡುವ ಉಡುಪು ಲೆದರ್ ಜಾಕೆಟ್‌. ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಹಲವರ ಮೊದಲ ಆಯ್ಕೆ ಈ ಜಾಕೆಟ್. ಹಲವು ವರ್ಷಗಳ ಹಿಂದೆಯೇ ಈ ಜಾಕೆಟ್ ಪರಿಚಯವಾದರೂ ಈಗಲೂ ಜನಪ್ರಿಯತೆ ಕುಗ್ಗಿಲ್ಲ. ಸೇನೆಗಳಲ್ಲಿ ಕಾರ್ಯನಿರ್ವಹಿಸುವವರು, ಪೈಲಟ್‌ಗಳು ಇದನ್ನು ಹೆಚ್ಚಾಗಿ ಧರಿಸುತ್ತಿದ್ದರು. ಮೊದಲ ವಿಶ್ವಮಹಾಯುದ್ಧದಲ್ಲಿ ಜರ್ಮನಿಯ ವಾಯುಪಡೆಯ ಸಿಬ್ಬಂದಿಗೆ ಲೆದರ್‌ ಜಾಕೆಟ್‌ಗಳನ್ನೇ ಪೂರೈಸಲಾಗಿತ್ತು.

1900ರಲ್ಲೇ ಈ ಜಾಕೆಟ್ ಪರಿಚಯವಾದರೂ 1928ರ ಹೊತ್ತಿಗೆ ವಿವಿಧ ವಿನ್ಯಾಸಗಳಲ್ಲಿ ಫ್ಯಾಷನ್ ಪ್ರಿಯರ ಗಮನ ಸೆಳೆಯಿತು. ಮೋಟರ್‌ಸೈಕಲ್ ಸ್ಪರ್ಧೆಗಳು ಹೆಚ್ಚು ಜನಪ್ರಿಯವಾದ ಮೇಲೆ ಇವಕ್ಕೆ ಮತ್ತಷ್ಟು ಬೇಡಿಕೆ ಬಂತು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ದೇಹಕ್ಕೆ ಹಾನಿಯಾಗದಂತೆ ಈ ಜಾಕೆಟ್‌ ನೆರವಾಗುತ್ತಿತ್ತು ಎಂಬುದು ಒಂದು ಕಾರಣವಾದರೆ, ನೋಡುವುದಕ್ಕೆ ಸುಂದರವಾಗಿರುತ್ತದೆ ಎಂಬುದು ಮತ್ತೊಂದು ಕಾರಣವಾಗಿತ್ತು. ಚಳಿಗಾಲದಲ್ಲಿ ಧರಿಸಬಹುದಾದದ ಕೆಲವು ಉಡುಪುಗಳಲ್ಲಿ ಇದು ಕೂಡ ಒಂದು. ಜೀನ್ಸ್‌ ಪ್ಯಾಂಟ್‌ ಮತ್ತು ಬೂವರ್ ಬೂಟ್‌ಗಳನ್ನು ಧರಿಸಿ ಈ ಜಾಕೆಟ್ ತೊಟ್ಟರೆ ಹೆಚ್ಚು ಆಕರ್ಷಕವಾಗಿರುತ್ತದೆ.

ಚೋರ್ ಕೋಟ್‌

ಕಾರ್ಗೊ ಪ್ಯಾಂಟ್ ಮೇಲೆ ಚೋರ್‌ ಕೋಟ್ ಧರಿಸಿದರೆ ಹೆಚ್ಚು ಆಕರ್ಷಕವಾಗಿ ಕಾಣಿಸಬಹುದು. ಈ ಕೋಟ್‌ ಅನ್ನು ಸೇನೆಗಳಲ್ಲಿ ಕಾರ್ಯನಿರ್ವಹಿಸುವವರಿಗಾಗಿ ತಯಾರಿಸಿದರೂ ಟ್ರೆಂಡ್‌ಗೆ ತಕ್ಕಂತೆ ವಿವಿಧ ವಿನ್ಯಾಸಗಳಲ್ಲಿ ತಯಾರಿ ಶುರುವಾಯಿತು. ಧರಿಸಲು ಸೌಕರ್ಯವಾಗಿರುವುದು ಮತ್ತು ಬಳಕೆಸ್ನೇಹಿ ಆಗಿರುವುದರಿಂದ ಹಲವರು ಇದನ್ನು ಇಷ್ಟಪಡುತ್ತಾರೆ. ಹಲವು ಕಿಸೆಗಳಿರುವುದು ಚೋರ್‌ ಕೋಟ್ ಮತ್ತು ಕಾರ್ಗೊ ಪ್ಯಾಂಟ್‌ಗಳ ಪ್ರಮುಖ ಆಕರ್ಷಣೆ. ಆರ್ಮಿ ಗ್ರೀನ್ ಬಣ್ಣದ ಕೋಟ್ ಮತ್ತು ಪ್ಯಾಂಟ್ ಹೆಚ್ಚು ನಪ್ಪುತ್ತದೆ. ಕಾರ್ಗೊ ಪ್ಯಾಂಟ್‌ಗಳ ಮೇಲೆ ವಿವಿಧ ಬಗೆಯ ಟೀ ಶರ್ಟ್‌ ಮತ್ತು ಶರ್ಟ್‌ಗಳನ್ನೂ ಧರಿಸಬಹುದು. ಕಾರ್ಗೊ ಪ್ಯಾಂಟ್‌ ತೊಟ್ಟಾಗ ಮಿಲಿಟರಿ ಬೂಟ್‌ಗಳನ್ನು ಧರಿಸಿದರೆ ಹೆಚ್ಚು ಆಕರ್ಷಕವಾಗಿರುತ್ತದೆ.

ಪುಲ್‌ಒವರ್‌ಗಳು

ಯುವಸಮುದಾಯ ಹೆಚ್ಚು ಇಷ್ಟಪಡುವ ಉಡುಪುಗಳಲ್ಲಿ ಪುಲ್‌ಓವರ್‌ ಕೂಡ ಒಂದು. ಅದರಲ್ಲೂ ವಿ–ನೆಕ್ ಪುಲ್‌ಓವರ್‌ಗಳಿಗೆ ಹೆಚ್ಚಿನ ಬೇಡಿಕೆ. ಚಳಿಗಾಲಕ್ಕೆ ಹೇಳಿಮಾಡಿಸಿದಂತಿರುವ ಪುಲ್‌ಓವರ್‌ಗಳನ್ನು ಸರಿಯಾದ ಜೋಡಿ ಪ್ಯಾಂಟ್‌ಗಳೊಂದಿಗೆ ಧರಿಸಿದರೆ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ. ಶೇಡ್‌ಗಳು ಇರುವಂತಹ ವಿವಿಧ ವಿನ್ಯಾಸದ ಮತ್ತು ಬಣ್ಣದ ಪುಲ್ಒವರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಜೀನ್ಸ್‌ ಪ್ಯಾಂಟ್‌ಗಳ ಮೇಲೆ ಪುಲ್‌ಒವರ್‌ಗಳನ್ನು ಧರಿಸಿದರೆ ಹೆಚ್ಚು ಆಕರ್ಷಕ.

ಆ್ಯಸಿಡ್ ವಾಷ್‌

ಆ್ಯಸಿಡ್‌ ವಾಷ್‌ ಮಾಡಿರುವ ಉಡುಪುಗಳು ಈಗಿನ ಟ್ರೆಂಡ್‌. ಚಳಿಗಾಲಕ್ಕೂ ಇಂತಹ ಉಡುಗೆಗಳನ್ನು ಧರಿಸಬಹುದು. ಬಟ್ಟೆಗಳ ಮೇಲೆ ಅಲ್ಲಲ್ಲಿ ಬಿಳಿಚಿದ ಕಲೆಗಳು ಮೂಡಿದಂತೆ ಕಂಡರೂ ಆಕರ್ಷಕವಾಗಿಯೇ ಕಾಣುತ್ತವೆ. ಆ್ಯಸಿಡ್‌ ವಾಷ್‌ ಪ್ಯಾಂಟ್‌ಗಳ ಮೇಲೆ ಬಣ್ಣ ಬಣ್ಣದ ಟೀ–ಶರ್ಟ್‌ಗಳು ಸುಂದರವಾಗಿ ಕಾಣುತ್ತವೆ.

(ಲೇಖಕರು ಲೈಮ್‌ರೋಡ್ ಸಂಸ್ಥೆಯ ಸ್ಟೈಲಿಸ್ಟ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT