ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮನಸ್ಸಿನ ಇಂಗ್ಲಿಷ್‌ ಲೇಖಕರು

Last Updated 21 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯ ಸಹೋದರ ಪತ್ರಿಕೆ ‘ಡೆಕ್ಕನ್‌ ಹೆರಾಲ್ಡ್‌’ ಭಾನುವಾರದ ಪುರವಣಿ ‘ಸಂಡೇ ಹೆರಾಲ್ಡ್‌‘ ಏರ್ಪಡಿಸಿದ್ದ ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ನಾಡಿನ 300ಕ್ಕೂ ಹೆಚ್ಚು ಲೇಖಕರು ಭಾಗವಹಿಸಿದ್ದರು. ಬೆಂಗಳೂರು ಕ್ಲಬ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಚ್ಚುಮೆಚ್ಚಿನ ಪುಸ್ತಕ, ಇಷ್ಟದ ಲೇಖಕರು, ಪ್ರಭಾವ ಬೀರಿದ ಕಥೆಗಳು ಹೀಗೆ ಸಾಹಿತ್ಯ, ಸಾಂಸ್ಕೃತಿಕ ಅಭಿರುಚಿಗಳ ಕುರಿತು ವಿಜೇತರು ‘ಮೆಟ್ರೊ’ ಜತೆ ಹರಟೆ ಹೊಡೆದರು.

ತಂತ್ರಜ್ಞಾನ ಜಗತ್ತಿನಅನುಭವ ಮತ್ತು ಬೆಳವಣಿಗೆಗಳಿಗೆ ಅಕ್ಷರ ರೂಪ ನೀಡುವ ಶ್ರೀನಿವಾಸ ಗೋಪಾಲ ಪಿ.ಕೆ., ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿಯೇ ಎಂಜಿನಿಯರ್‌ ಉದ್ಯೋಗ ತೊರೆದ ನಿಖಿಲ್‌ ಡಿ. ಹೆಗ್ಡೆ,ಹಣಕಾಸು ವಹಿವಾಟು ನಡೆಸುವ ಜಾಹೀರಾತು ಕಂಪನಿಯಂತಹ ವಾಣಿಜ್ಯ ಕ್ಷೇತ್ರದಲ್ಲಿದ್ದುಕೊಂಡೇ ಬರವಣಿಗೆಯಲ್ಲಿ ಖುಷಿ ಕಾಣುತ್ತಿರುವ ಸಂಜನಾ ಎಂ. ವಿಜಯಶಂಕರ್‌ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದಿದ್ದಾರೆ. ವೃತ್ತಿ ಮತ್ತು ಕ್ಷೇತ್ರ ಬೇರೆಯಾದರೂ ಸಾಹಿತ್ಯ, ಓದು, ಬರವಣಿಯಂತಹ ಸಮಾನ ಆಸಕ್ತಿ ಮತ್ತು ಪ್ರವೃತ್ತಿ ಇವರೆಲ್ಲರನ್ನೂ ಒಗ್ಗೂಡಿಸಿದೆ. ಇವರೆಲ್ಲ ಅಪ್ಪಟ ಕನ್ನಡ ಮನಸ್ಸಿನ ಇಂಗ್ಲಿಷ್‌ ಲೇಖಕರು. ಯುವ ಲೇಖಕರು ಏನು ಹೇಳಿದ್ದಾರೆ ಎಂದು ಅವರ ಮಾತಲ್ಲೇ ಕೇಳಿ.

ಎಸ್‌ಪಿಬಿ, ರಹಮಾನ್‌ ಅಚ್ಚುಮೆಚ್ಚು

ಸುತ್ತಮುತ್ತಲಿನ ವೈರುಧ್ಯಗಳನ್ನು ಬರವಣಿಗೆ ಮೂಲಕಹಿಡಿದಿಡುವ ಪ್ರಯತ್ನ ಮಾಡುತ್ತಿರುವೆ ಎಂದು ಶ್ರೀನಿವಾಸ ಗೋಪಾಲ ಮಾತು ಆರಂಭಿಸಿದರು.

ಒಬ್ಬರೇ ನಿರ್ದಿಷ್ಟ ಲೇಖಕರ ಕೃತಿಗಳನ್ನು ಓದುವ ಪರಿಪಾಠ ಬೆಳೆಸಿಕೊಂಡಿಲ್ಲ. ಇಷ್ಟವಾದ ಎಲ್ಲವನ್ನೂ ಓದುತ್ತೇನೆ. ಭಾರತೀಯರ ಜೀವನದ ಎಲ್ಲ ಸೂಕ್ಷ್ಮಗಳನ್ನು ಇಂಗ್ಲಿಷ್‌ನಲ್ಲಿ ಬರೆಯುವ ಆರ್‌.ಕೆ. ನಾರಾಯಣ್‌ ಇಷ್ಟವಾಗುತ್ತಾರೆ. ಅಮಿತಾವ್‌ ಘೋಷ್‌ ಇಷ್ಟದ ಮತ್ತೊಬ್ಬ ಇಂಗ್ಲಿಷ್‌ ಲೇಖಕ. ಅವರಿಗೆ ಭಾಷೆಯನ್ನು ದುಡಿಸಿಕೊಳ್ಳುವ ಕಲೆ ಚೆನ್ನಾಗಿ ಗೊತ್ತು. ಅವರ ಬರವಣಿಗೆ ಶೈಲಿ ಚೆನ್ನ.

ಸಿನಿಮಾ ಮತ್ತು ಪುಸ್ತಕಗಳಿಗೆ ಹೋಲಿಸಿದಾಗ ಪುಸ್ತಕಗಳೇ ಹೆಚ್ಚು ಇಷ್ಟವಾಗುತ್ತವೆ. ಅಪರೂಪಕ್ಕೊಮ್ಮೆಸಿನಿಮಾ ನೋಡುತ್ತೇನೆ. ‘ಮಿಲಿಯನ್‌ ಡಾಲರ್‌ ಆರ್ಮ್’ ಮತ್ತು ‘ಮನಿಬಾಲ್‌’ ನನ್ನ ಮೆಚ್ಚಿನ ಇಂಗ್ಲಿಷ್‌ ಚಿತ್ರಗಳು. ಕನ್ನಡ ಮತ್ತು ತಮಿಳು ಸಂಗೀತ ಇಷ್ಟ. ಎ.ಆರ್‌. ರಹಮಾನ್‌ ಮತ್ತು ಎಸ್‌.ಪಿ. ಬಾಲಸುಬ್ರಮಣ್ಯಂ ಅವರ ಸಂಗೀತ ಮತ್ತು ಹಾಡು ಎಂದರೆ ಪಂಚಪ್ರಾಣ.

ಐ ಲವ್‌ ‘ದಿ ಗುಡ್‌, ದಿ ಬ್ಯಾಡ್‌ ಆ್ಯಂಡ್‌ ದಿ ಅಗ್ಲಿ’

ವೃತ್ತಿಯಿಂದ ಜಿಯೋ ಟೆಕ್ನಿಕಲ್‌ ಎಂಜಿನಿಯರ್‌ ಆಗಿದ್ದ ನಿಖಿಲ್‌ ಡಿ. ಹೆಗ್ಡೆ ಬರವಣಿಗೆ ಹವ್ಯಾಸಕ್ಕಾಗಿ ಹತ್ತು ವರ್ಷಗಳಿಂದ ಮಾಡುತ್ತಿದ್ದ ವೃತ್ತಿ ತೊರೆದಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಲಿಯೊ ಟಾಲ್‌ಸ್ಟಾಯ್‌ ಅವರ ‘ವಾರ್‌ ಆ್ಯಂಡ್‌ ಪೀಸ್‌’ ಮತ್ತು ಜೆ.ಕೆ. ರೌಲಿಂಗ್ಸ್‌ ಅವರ ‘ಹ್ಯಾರಿ ಪಾಟರ್‌‘ ಸರಣಿ ಅಚ್ಚುಮೆಚ್ಚು. ಜಾನ್‌ ಗ್ರೀಷಮ್‌ ಮತ್ತು ಅಂಟೋನ್‌ ಚೆಕೋವ್‌ ಮೆಚ್ಚಿನ ಲೇಖಕರು.

'ದಿ ಗ್ಲೇಡಿಯೇಟರ್‌' ನನ್ನ ಮೇಲೆ ಪ್ರಭಾವ ಬೀರಿದ ಇಂಗ್ಲಿಷ್‌ ಸಿನಿಮಾ.‘ದಿ ಗುಡ್‌, ದಿ ಬ್ಯಾಡ್‌ ಆ್ಯಂಡ್‌ ದಿ ಅಗ್ಲಿ’ ಮತ್ತು ‘ದಿ ಸೌಂಡ್‌ ಆಫ್‌ ಮ್ಯೂಸಿಕ್‌’ ಆಲ್‌ಟೈಮ್‌ ಫೇವರಿಟ್‌. ‘ದಿ ಸೌಂಡ್‌ ಆಫ್‌ ಮ್ಯೂಸಿಕ್‌’ ಚಿತ್ರದ ಮ್ಯೂಸಿಕ್‌ ಗಾಢ ಪ್ರಭಾವ ಬೀರಿದೆ.

ಬರವಣಿಗೆಯಲ್ಲಿ ಹಾಸ್ಯಪ್ರಜ್ಞೆ ಅಚ್ಚುಮೆಚ್ಚು

ಜಾಹೀರಾತು ಸಂಸ್ಥೆಯೊಂದರಲ್ಲಿ ಕ್ರಿಯೇಟಿವ್‌ ಸೂಪರ್‌ವೈಸರ್‌ ಹುದ್ದೆಯಲ್ಲಿರುವ ಸಂಜನಾ ವಿಜಯಶಂಕರ್‌ ಬಾಲ್ಯದಿಂದಲೇ ಬರವಣಿಗೆ ಗೀಳು ಅಂಟಿಸಿಕೊಂಡವರು. ಟೆರಿ ಪ್ರಾಚೆಟ್‌ ಮತ್ತು ಓವಿನ್‌ ಕಾಲ್ಫರ್‌ ಹಾಸ್ಯ ಶೈಲಿಯ ಬರವಣಿಗೆಯಿಂದ ಪ್ರಭಾವಿತರಾಗಿದ್ದಾರೆ.

ನೀಲ್‌ ಗೈಮನ್‌ ಮತ್ತು ಆರ್‌.ಕೆ. ನಾರಾಯಣ್‌ ನನ್ನ ಅಚ್ಚುಮೆಚ್ಚಿನ ಲೇಖಕರು. ಈ ಇಬ್ಬರ ಸರಳವಾದ ಬರವಣಿಗೆ ಶೈಲಿ ಇಷ್ಟ. ಇಂಗ್ಲಿಷ್‌ನ ‘ದಿ ಗಾಡ್‌ ಫಾದರ್’ ಮತ್ತು ತಮಿಳಿನ ‘ಮೈಕಲ್‌ ಮದನ್‌ ಕಾಮರಾಜನ್‌’ ನನ್ನ ಆಲ್‌ ಟೈಮ್‌ ಫೇವರಿಟ್‌. ಎಲ್ಲ ಬಗೆಯ ಮ್ಯೂಸಿಕ್‌ ಇಷ್ಟ. ಡೈರ್‌ ಸ್ಟ್ರೇಟ್ಸ್‌, ಕೋಲ್ಡ್‌ಪ್ಲೇ ಮತ್ತು ಅರ್ಜಿತ್‌ ಸಿಂಗ್‌ ಮೆಚ್ಚಿನ ಗಾಯಕರು.

ತೀರ್ಪುಗಾರರು

ಸ್ಪರ್ಧೆಗೆ 300ಕ್ಕೂ ಹೆಚ್ಚು ಉತ್ತಮ ಸಣ್ಣ ಕಥೆಗಳು ಬಂದಿದ್ದವು. ಅವುಗಳಲ್ಲಿ ಅತ್ಯುತ್ತಮವಾದದನ್ನು ಸೋಸಿ, ಹೆಕ್ಕಿ ತೆಗೆಯುವ ಹೊಣೆಯನ್ನು ತೀರ್ಪುಗಾರರು ನಿರ್ವಹಿಸಿದ್ದಾರೆ. ಕನ್ನಡದ ಲೇಖಕ ವಸುಧೇಂದ್ರ, ಲೇಖಕಿ, ಕವಯತ್ರಿ ನಂದಿತಾ ಬೋಸ್‌ ಮತ್ತು ಮಾಧವಿ ಮಹಾದೇವನ್‌ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಬಹುಮಾನ ವಿಜೇತ ಸಣ್ಣ ಕಥೆಗಳು

ಫುಲ್‌ಸ್ಟಾಪ್‌ ಓವರ್‌ ಕಾಮಾ:ಶ್ರೀನಿವಾಸ ಗೋಪಾಲ ಪಿ.ಕೆ. (ಮೊದಲ ಬಹುಮಾನ)

ಫ್ಯಾಟ್‌ ಪಾಲಿಶ್‌ ಮಾಮಾ:ನಿಖಿಲ್‌ ಡಿ. ಹೆಗ್ಡೆ (ಎರಡನೇ ಬಹುಮಾನ)

ಅಂಡರ್‌ ಪ್ರೇಷರ್‌:ಸಂಜನಾ ಎಂ. ವಿಜಯಶಂಕರ್‌ (ಮೂರನೇ ಬಹುಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT