ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹10 ಲಕ್ಷದ ಗಣಪನಿಗೆ ₹16 ಲಕ್ಷದ ಭರ್ಜರಿ ಸೆಟ್‌!

ಮಿಲ್ಕ್ ಕಾಲೊನಿ ಗಣೇಶ
Last Updated 29 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಗಣೇಶ ಹಬ್ಬಕ್ಕಾಗಿ ನಗರದ ಮಿಲ್ಕ್‌ ಕಾಲೊನಿಯಲ್ಲಿ ಸಿನಿಮಾ ಸೆಟ್‌ಗಳನ್ನೂ ನಾಚಿಸುವಂಥ ಭರ್ಜರಿ ಸೆಟ್‌ ತಲೆ ಎತ್ತಿದೆ. ಹಾಸನದ ಬಿಚೇಶ್ವರ ದೇವಾಲಯವನ್ನು ಹೋಲುವ ಈ ಸೆಟ್‌ ನಿರ್ಮಾಣಕ್ಕಾಗಿ ಸ್ವಸ್ತಿಕ್‌ ಯುವಕ ಸಂಘಅಂದಾಜು ₹16 ಲಕ್ಷ ವೆಚ್ಚ ಮಾಡಿದೆ.

ಹೊಯ್ಸಳ ಶ್ರೀಮಂತ ಕಲಾಕೃತಿಯ ಕನ್ನಡಿಯಂತಿರುವ ಬಿಚೇಶ್ವರ ದೇವಸ್ಥಾನದ ವೈಭವವನ್ನು ಕನ್ನಡ ಚಿತ್ರರಂಗದ ಕಲಾ ನಿರ್ದೇಶಕ ಮೋಹನ್‌ ಬಿ. ಕೆರೆ ನೇತೃತ್ವದ ತಂಡ ಮರು ಸೃಷ್ಟಿಸುತ್ತಿದೆ.

ಒರಾಯನ್‌ ಮಾಲ್‌ ಹಿಂಬದಿಯ ಪಾರ್ಕ್‌ ಬಳಿ ನಿರ್ಮಾಣವಾಗುತ್ತಿರುವ ದೇವಾಲಯದ ಬೃಹತ್‌ ಸೆಟ್‌ ನಿರ್ಮಾಣವಾಗುತ್ತಿದೆ.ಕಲಾವಿದ ಮಹೇಶ್‌ ಮುರಗೋಡ ಮತ್ತು ಮುಂಬೈ ಕಲಾವಿದರು ತಯಾರಿಸಿರುವ5.7 ಅಡಿ ಎತ್ತರದ ಗಣೇಶನನ್ನು ಹುಬ್ಬಳ್ಳಿಯಿಂದರೈಲಿನಲ್ಲಿ ಗುರುವಾರ ನಗರಕ್ಕೆ ತರಲಾಗಿದೆ.

ಅದಕ್ಕಾಗಿ ರೈಲಿನ ಒಂದು ಬೋಗಿಯನ್ನು ಬಾಡಿಗೆ ಪಡೆಯಲಾಗಿತ್ತು. ಒಂದಿಷ್ಟೂ ಮುಕ್ಕಾಗದಂತೆ ಅದನ್ನು ತರುವುದೇ ದೊಡ್ಡ ಸವಾಲು ಎನ್ನುತ್ತಾರೆ ಸ್ವಸ್ತಿಕ್‌ ಯುವಕ ಸಂಘದ ಸದಸ್ಯರು. ಮೂರ್ತಿ ತಯಾರಿಸಲುಮೊದಲು ₹10 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ನಮ್ಮ ನಿರೀಕ್ಷೆ ಮೀರಿ ಹೆಚ್ಚು ಹಣ ಖರ್ಚಾಗಿದೆ ಎಂದು ವಿವರಿಸಿದರು.

ಕೆಂಪು, ಹಸಿರು, ನೇರಳೆ, ಹಳದಿ ಮತ್ತು ಬಿಳಿ ಬಣ್ಣದ ಒಟ್ಟು 60 ಕೆ.ಜಿ. ಕೃತಕ ವಜ್ರ (ಅಮೆರಿಕನ್‌ ಡೈಮಂಡ್‌) ಮತ್ತು ಹರಳುಗಳಿಂದ ಕಂಗೊಳಿಸುತ್ತಿರುವ ಮೂರ್ತಿಯ ಬೆಲೆ ಕೇಳಿದರೆ ಯಾರೇ ಆದರೂ ಚಕಿತಗೊಳ್ಳುವುದು ಖಚಿತ. ಮೂರ್ತಿ ತಯಾರಿಸಲು ₹10 ಲಕ್ಷಕ್ಕೂ ಮಿಕ್ಕಿ ಹಣ ಖರ್ಚಾಗಿದೆಯಂತೆ! ಈ ಐಶ್ಚರ್ಯ ಗಣಪತಿಯ ತೂಕ 100 ಕೆ.ಜಿ.

ಎರಡು ತಿಂಗಳ ಮೊದಲೇ ಸಿದ್ಧತೆ

‘ಗಣೇಶ ಹಬ್ಬಕ್ಕೂ ಎರಡು ತಿಂಗಳ ಮೊದಲೇ ಸಿದ್ಧತೆ ಆರಂಭವಾಗುತ್ತದೆ. ಯಾವ ರೀತಿಯ ಸೆಟ್‌ ಹಾಕಬೇಕು ಎಂದು ಆಗಲೇ ನಿರ್ಧಾರವಾ ಗುತ್ತದೆ. ಸೆಟ್‌ಗೆ ಹೊಂದಾಣಿಕೆಯಾಗುವಂತೆ ಮೂರ್ತಿ ತಯಾರಿಸಲು ಕಲಾವಿದ ಮುರಗೋಡ ಅವರಿಗೆ ಆರ್ಡರ್‌ ನೀಡಲಾಗುತ್ತದೆ.ಪ್ರತಿ ವರ್ಷ ಅವರಿಂದಲೇ ಮೂರ್ತಿ ಖರೀದಿಸಿ ತರಲಾಗುವುದು. ಹಬ್ಬಕ್ಕೂ 15 ದಿನ ಮೊದಲೇ ಸೆಟ್‌ ನಿರ್ಮಾಣದ ಕೆಲಸ ಶುರುವಾಗುತ್ತದೆ’ ಎಂದು ವಿವರಿಸಿದರು.

ಕೊನೆಯ ದಿನ ಒಂದು ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಪಟಾಕಿ, ಸಿಡಿಮದ್ದು ಸುಡಲಾಗುತ್ತದೆ. ಐದು ದಿನಗಳ ವೈಭವದ ಗಣೇಶ ಉತ್ಸವಕ್ಕೆ ಅಂದಾಜು ₹65 ರಿಂದ ₹70 ಲಕ್ಷ ಖರ್ಚಾಗುತ್ತದೆ. ಮಿಲ್ಕ್‌ ಕಾಲೊನಿ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರದ ನಿವಾಸಿಗಳು, ವರ್ತಕರು ಮತ್ತು ಭಕ್ತರು ಉದಾರವಾಗಿ ದೇಣಿಗೆ ನೀಡುತ್ತಾರೆ. ಹೆಚ್ಚುವರಿ ಖರ್ಚುಗಳನ್ನು ಸ್ವಸ್ತಿಕ್ ಯುವಕರ ಸಂಘ ನಿಭಾಯಿಸುತ್ತದೆ.

‘ಇಷ್ಟು ಎತ್ತರದ ಗಣೇಶ ವಿಗ್ರಹವನ್ನುಬೆಂಗಳೂರಿನಲ್ಲಿ ಇದುವರೆಗೂ ಯಾರೂ ಪ್ರತಿಷ್ಠಾಪಿಸಿಲ್ಲ. ಅದ್ಧೂರಿತನ ಮತ್ತು ಹೊಸತನಗಳಿಗೆ ಮತ್ತೊಂದು ಹೆಸರೇ ಮಿಲ್ಕ್‌ ಕಾಲೊನಿಯ ಗಣೇಶ ಉತ್ಸವ ಎನ್ನುವಷ್ಟು ಮನೆಮಾತಾಗಿದೆ. ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮುಂದಾಳತ್ವದಲ್ಲಿ 34 ವರ್ಷಗಳಿಂದ ಗಣೇಶ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ’ ಎಂದು ಸಂಘದ ಸದಸ್ಯರು ಹೇಳುತ್ತಾರೆ.

ಈ ಹಿಂದೆ ನಿರ್ಮಿಸಲಾಗಿದ್ದ ಬೇಲೂರು ಚನ್ನಕೇಶವ ದೇವಾಲಯ,ಬಾದಾಮಿ–ಐಹೊಳೆಯ ಗುಹಾಂತರ ದೇವಾಲಯ, ಅಮೃತೇಶ್ವರ ದೇವಾಲಯಗಳ ಪ್ರತಿಕೃತಿಗಳು ಎಲ್ಲರ ಮನಗೆದ್ದಿದ್ದವು. ಆ ಅದ್ಧೂರಿ ಸೆಟ್‌ಗಳು ಮುಂಬೈ, ಪುಣೆ ಹಾಗೂ ಬೆಳಗಾವಿ, ಹುಬ್ಬಳ್ಳಿ–ಧಾರವಾಡದ ಗಣೇಶ ಉತ್ಸವವನ್ನೂ ನಾಚಿಸುವಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT