ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಎಲ್ಲೆಲ್ಲೂ ಹೂವು, ಹಣ್ಣು

Last Updated 6 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಸರಣಿ ರಜೆಯಾದ್ದರಿಂದ ನಗರದಿಂದ ಹೊರಕ್ಕೆ ಹೋದ ಜನರೇ ಹೆಚ್ಚು. ಹೀಗಾಗಿ ರಸ್ತೆಗಳಲ್ಲಿ ಜನರ ಓಡಾಟ, ವಾಹನಗಳ ಭರಾಟೆ ಕಾಣಿಸಲಿಲ್ಲ. ಆದರೆ, ನಗರದ ಹೊರವಲಯದಲ್ಲಿ ಆಯುಧ ಪೂಜೆಯ ಸಿದ್ಧತೆಯಲ್ಲಿ ಕೊಂಚ ಕಳೆ ಹೆಚ್ಚಿತ್ತು.

ನಗರದ ಸರ್ಕಲ್‌ ಮಾರಮ್ಮ ಮತ್ತಿತರ ದೇವಸ್ಥಾನಗಳ ಮುಂದೆ ವಾಹನಗಳ ಪೂಜೆಯ ಸಂಭ್ರಮವಿತ್ತು. ಸೋಮವಾರ ರಜೆಯಾದ್ದರಿಂದ ಭಾನುವಾರದ ಬೆಳಿಗ್ಗೆಯೇ ವಾಹನಗಳ ಪೂಜೆಯ ಕೆಲಸ ಮುಗಿಸಿದ ಕೆಲವರು ಒಂದು ಸಣ್ಣ ಟ್ರಿಪ್‌ಗೆಂದು ನಗರದಿಂದಾಚೆ ಪ್ರಯಾಣ ಬೆಳೆಸಿದ್ದು ವಿಶೇಷವಾಗಿತ್ತು. ಇಂಥವರ ವಾಹನಗಳ ದಂಡಿನಿಂದ ನಗರದ ಕೆಲವು ಟೋಲ್‌ಗಳಲ್ಲಿ ರಶ್‌ ಇತ್ತು.

ಹೊಸಕೋಟೆ, ಬನ್ನೇರುಘಟ್ಟ, ವೈಟ್‌ಫೀಲ್ಡ್‌, ಮಲ್ಲೇಶ್ವರ, ಗಾಂಧಿಬಜಾರ್‌, ಕುಂದಲಹಳ್ಳಿ, ಹೂಡಿ, ಐಟಿಪಿಎಲ್‌, ಮಹದೇವಪುರ ಸುತ್ತಮುತ್ತ ಆಯುಧ ಪೂಜೆಯ ನಿಮಿತ್ತ ರಸ್ತೆಯುದ್ದಕ್ಕೂ ಹೂವು, ಹಣ್ಣು, ಬಾಳೆ ದಿಂಡು ಮತ್ತಿತರ ಪೂಜಾ ಸಾಮಗ್ರಿಗಳ ಪುಟ್ಟ ಅಂಗಡಿಗಳು ಗಮನ ಸೆಳೆದವು. ಆದರೆ, ಕೊಳ್ಳುವವರ ಭರಾಟೆ ಅಷ್ಟಾಗಿ ಕಾಣಿಸಲಿಲ್ಲ. ‘ನಸುಕಿನ ವೇಳೆಯಿಂದ ಎಂಟು ಗಂಟೆಯತನಕ ಸ್ವಲ್ಪ ವ್ಯಾಪಾರ ಜೋರಾಗಿತ್ತು. ಹತ್ತು ಗಂಟೆ ನಂತರದಿಂದ ವ್ಯಾಪಾರ ಡಲ್‌ ಆಗಿದೆ. ಬೆಳಗಿನ ಜಾವವೇ ಹತ್ತಿರದ ಹಳ್ಳಿಗಳಿಂದ ಹೂ, ಹಣ್ಣು, ಬಾಳೆದಿಂಡು, ಕುಂಬಳಕಾಯಿ ಹೊತ್ತು ತಂದೆವು. ಆರಂಭದಲ್ಲಿ ಏನೋ ವ್ಯಾಪಾರ ಚುರುಕಾಗಿ ಭರವಸೆ ಮೂಡಿಸಿತ್ತು. ಈಗ ಕೊಂಚ ಬಿಸಿಲು ಜಾಸ್ತಿಯಾಯಿತು. ವ್ಯಾಪಾರ ತಣ್ಣಗಾಯಿತು. ನಾಳೆ ಒಂದು ದಿನ ಬಾಕಿ ಇರುವುದರಿಂದ ಕಾಯಬೇಕಷ್ಟೇ’ ಎಂದ ವ್ಯಾಪಾರಿಯೊಬ್ಬರ ಮುಖದಲ್ಲಿ ಭರವಸೆಯ ಮಿಂಚಿತ್ತು.

ರಸ್ತೆಯ ಪಕ್ಕದಲ್ಲಿ ಹರವಿಕೊಂಡಿದ್ದ ಹೂ, ಹಣ್ಣು, ಬಾಳೆ ದಿಂಡುಗಳ ಮೇಲಿದ್ದ ತಾಜಾತನ ಬಿಸಿಲಿಗೆ ಬಾಡತೊಡಗಿತ್ತು. ವ್ಯಾಪಾರಿಗಳ ಮುಖಗಳಲ್ಲಿ ಆತಂಕ ಕಾಡಿದಂತೆಯೂ ಇತ್ತು.

ರಜೆಯಾದ್ದರಿಂದ ಹೆಚ್ಚಿನ ಜನ ಮಾಲ್‌ಗಳಿಗೆ ದಾಂಗುಡಿ ಇಡುತ್ತಿರುವುದು ಕಾಣಿಸಿತು. ವಿವಿಧ ಬಗೆಯ ಆಫರ್‌ಗಳಿಂದ ವ್ಯಾಪಾರವೂ ಭರ್ಜರಿಯಾಗಿತ್ತು. ರೆಸ್ಟೊರೆಂಟ್‌ಗಳಲ್ಲಿ ಬೆಳಿಗ್ಗೆ ಇದ್ದ ಜನಸಂದಣಿ ಕ್ರಮೇಣ ಕಾಣಿಸಲಿಲ್ಲ. ‘ಪ್ರತಿ ಶನಿವಾರ, ಭಾನುವಾರ ನಮ್ಮಲ್ಲಿ ಕನಿಷ್ಠ 400ರಿಂದ 600 ಕೆಜಿಯಷ್ಟು ಮಟನ್‌ ಬಿರಿಯಾನಿ ಖಾಲಿಯಾಗುತ್ತಿತ್ತು. ಇವತ್ತು ಸ್ವಲ್ಪ ಕಮ್ಮಿ. ಸಿಟಿಯ ಜನ ತಮ್ಮ ಊರುಗಳಿಗೆ ಹಬ್ಬಕ್ಕೆಂದು ತೆರಳಿದ್ದರಿಂದ ಕೊಂಚ ವ್ಯಾಪಾರ ಕಮ್ಮಿ ಆಗಿದ್ದು ಹೌದು’ ಎನ್ನುತ್ತಾರೆ ಹೊಸಕೋಟೆಯ ಹೆಸರಾಂತ ‘ಆನಂದ್‌ ಬಿರಿಯಾನಿ’ ಮಾಲೀಕ ಆನಂದ್‌.

‘ಒಂದು ಟ್ರಿಪ್‌ಗೆ ಆಗಬೇಕಿದ್ದ ಕನಿಷ್ಠ ಕಲೆಕ್ಷನ್‌ ಕೂಡ ಆಗಿಲ್ಲ. ಜನರ ಓಡಾಟ ಇವತ್ತು ಕಮ್ಮಿ ಆದ್ದರಿಂದ ನಮ್ಮ ಕಲೆಕ್ಷನ್‌ ಕೂಡ ಕಮ್ಮಿ’ ಎನ್ನುತ್ತಾರೆ ಓರ್ವ ಬಿಎಂಟಿಸಿ ಕಂಡಕ್ಟರ್‌. ಬಹುತೇಕ ಅಪಾರ್ಟ್‌ಮೆಂಟ್‌ ಮತ್ತು ವಸತಿ ಸಂಕೀರ್ಣಗಳಲ್ಲಿ ದುರ್ಗಾ ಪೂಜೆ, ನವರಾತ್ರಿಯ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಗುಜರಾತ್‌, ರಾಜಸ್ಥಾನ ಸೇರಿದಂತೆ ಉತ್ತರದ ಹಲವು ರಾಜ್ಯಗಳ ಜನರ ‘ದಾಂಡಿಯಾ ರಾಸ್‌’ದಂಥ ಕಾರ್ಯಕ್ರಮಗಳು ಹಾಗೂ ಬಂಗಾಳಿಗಳ ದುರ್ಗಾ ಪೂಜೆಯಂಥ ಕಾರ್ಯಕ್ರಮಗಳಲ್ಲಿ ಹೆಂಗಳೆಯರ ಸಂಭ್ರಮ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT