ಮಂಗಳವಾರ, ನವೆಂಬರ್ 19, 2019
29 °C
ಬೆಂಗಳೂರು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಭರ್ಜರಿ ತಯಾರಿ

ಭಾವಿ ಎಂಜಿನಿಯರ್‌ಗಳ ಭವಿಷ್ಯದ ಕಾರುಗಳು!

Published:
Updated:

ಮುಗಿದು ಹೋಗುವ ಇಂಧನ ಮೂಲಗಳಿಂದಾಗಿ ಆಟೊಮೊಬೈಲ್‌ ಉದ್ಯಮದ ದಿಕ್ಕು, ದಿಸೆಯೊಂದಿಗೆ ಭವಿಷ್ಯವೂ ಬದಲಾಗುತ್ತಿದೆ. ಈ ಬದಲಾವಣೆಯ ಗಾಳಿಗೆ ಉದ್ಯಮ ಕೂಡ ಮುಕ್ತವಾಗಿ ತೆರೆದುಕೊಂಡಿದೆ. ಇದು ಇಂಧನದ ಹಂಗು ಇಲ್ಲದ ಎಲೆಕ್ಟ್ರಿಕ್‌ ವಾಹನಗಳ ಹೊಸ ಶಕೆ ಆರಂಭಕ್ಕೆ ಮುನ್ನುಡಿ ಬರೆದಿದೆ

ವಾಹನ ತಯಾರಿಕಾ ಕಂಪನಿಗಳು ಹೊಸ ತಲೆಮಾರಿನ ತಂತ್ರಜ್ಞಾನ ಮೊರೆ ಹೋಗುತ್ತಿವೆ. ಆಟೊಮೊಬೈಲ್‌ ಉದ್ಯಮಕ್ಕೆ ಬೇಕಾದ ಸುಸ್ಥಿರ ಮತ್ತು ಹೊಸ ವಿನ್ಯಾಸದ ವಾಹನಗಳ ತಯಾರಿಕೆಗೆ ಯುವ ಪ್ರತಿಭೆಗಳನ್ನು ಉತ್ತೇಜಿಸಲು ಆಟೊಮೊಬೈಲ್‌ ಉದ್ಯಮಗಳು ಮುಂದಾಗುತ್ತಿವೆ. ಈ ನಿಟ್ಟಿನಲ್ಲಿ ಜಾಗತಿಕ ತೈಲ ಮತ್ತು ಅನಿಲ ಕಂಪನಿ ಶೆಲ್‌ ಇಂಡಿಯಾ ಆಯೋಜಿಸುವ ಇಕೋ–ಮ್ಯಾರಾಥಾನ್‌ ಕೂಡ ಒಂದಾಗಿದೆ.

ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕಲ್ಪನೆಗಳ ಅನಾವರಣಗೊಳಿಸಲು ಇಕೋ–ಮ್ಯಾರಾಥಾನ್‌ ಸೂಕ್ತ ವೇದಿಕೆ ಒದಗಿಸಲಿದೆ. ನಗರದ ಆರ್‌.ವಿ ಕಾಲೇಜ್ ಆಫ್‌ ಎಂಜಿನಿಯರಿಂಗ್‌, ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ನ್ಯೂ ಹೊರೈಜನ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿದ್ಯಾರ್ಥಿಗಳು ಬೆಂಗಳೂರನ್ನು ಪ್ರತಿನಿಧಿಸಲಿದ್ದಾರೆ.

ನಗರದ ವಿದ್ಯಾರ್ಥಿಗಳ ಭರ್ಜರಿ ತಯಾರಿ

ಏಷ್ಯಾ 2016 ಶೆಲ್‌ ಇಕೋ– ಮ್ಯಾರಾಥಾನ್‌ನಲ್ಲಿ 9ನೇ ಶ್ರೇಯಾಂಕ ಮತ್ತು ರಾಷ್ಟ್ರಮಟ್ಟದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಸರ್‌ ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ 35 ವಿದ್ಯಾರ್ಥಿಗಳ ತಂಡ ‘ಟೀಮ್‌ ಇನ್‌ಫರ್ನೊ‘ ಈ ಮ್ಯಾರಾಥಾನ್‌ನಲ್ಲಿ ಕಠಿಣ ಸ್ಪರ್ಧೆ ಒಡ್ಡಲು ತಯಾರಾಗಿದೆ.

ಗಂಟೆಗೆ 200 ಕಿ.ಮೀ/ಕಿಲೋ ವ್ಯಾಟ್‌ ಮೈಲೇಜ್‌ ನೀಡುವ ಇಂಧನ ಕ್ಷಮತೆಯ ಎಲೆಕ್ಟ್ರಿಕ್‌ ವೆಹಿಕಲ್‌ ನಿರ್ಮಿಸಿರುವ ತಂಡ, ಹಲವಾರು ಪ್ರಾಥಮಿಕ ಪರೀಕ್ಷೆ ನಡೆಸಿದೆ. ಮ್ಯಾರಾಥಾನ್‌ನಲ್ಲಿ ಇದರ ಪರೀಕ್ಷಾರ್ಥ ಚಾಲನೆ ನಡೆಸಲಿದೆ.

ಸ್ಪರ್ಧೆಯಲ್ಲಿ ಕಠಿಣ ಪೈಪೋಟಿ ನೀಡುವ ಮತ್ತೊಂದು ತಂಡವೆಂದರೆ ಆರ್.ವಿ ಕಾಲೇಜಿನ ‘ಪ್ರೊಜೆಕ್ಟ್‌ ಗರುಡ’ ತಂಡ. 50 ವಿದ್ಯಾರ್ಥಿಗಳ  ಈ ತಂಡ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ಬ್ಯಾಟರಿ ಚಾಲಿತ ಕಾರು ನಿರ್ಮಿಸಿದೆ. ಲಿಥಿಯಂ ಐಯಾನ್‌ ಬ್ಯಾಟರಿ ಅಳವಡಿಸಿರುವ ಕಾರು ಗಂಟೆಗೆ 70–80 ಕಿ.ಮೀ/ಕಿಲೋ ವ್ಯಾಟ್‌ ಮೈಲೇಜ್‌ ನೀಡಬಹುದು ಎಂದು ನಿರೀಕ್ಷಿಸುತ್ತಿದೆ.   


ಹೊಸ ವಿನ್ಯಾಸದ ಪ್ರೋಟೊಟೈಪ್ ಲೈಟ್ ವೆಹಿಕಲ್ ಜತೆ ಕೆಂಬ್ರಿಜ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳ ತಂಡ 'ಟೀಮ್ ರಿವಿಯನ್'

ಕಳೆದ ವರ್ಷ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಎಂಟಿಎಫ್‌ ಇಂಡಿಯಾ ಸ್ಪರ್ಧೆಗೆ ಮೊದಲ ಬಾರಿಗೆ ಪದಾರ್ಪಣೆ ಮಾಡಿದ್ದ ನ್ಯೂ ಹೊರೈಜನ್‌ ಕಾಲೇಜಿನ 11 ವಿದ್ಯಾರ್ಥಿಗಳ ‘ಟೀಮ್‌ ಆಕೃತ್‌’ ಎರಡನೇ ಸ್ಪರ್ಧೆಗೆ ಸಜ್ಜಾಗಿದೆ. ಲಿಥಿಯಂ ಬ್ಯಾಟರಿ ಮತ್ತು ಹಬ್‌ ಮೋಟರ್‌ ಅಳವಡಿಸಿದ ಹಗುರ ವಾಹನವನ್ನು ಆಕೃತ್‌ ತಂಡ ವಿನ್ಯಾಸಗೊಳಿಸಿದೆ. ಈ ವಾಹನ ಗಂಟೆಗೆ 250–300 ಕಿ.ಮೀ/ಕಿಲೋ ವ್ಯಾಟ್‌ ಮೈಲೇಜ್‌ ನೀಡಲಿದೆ ಎಂದು ತಂಡ ಹೇಳಿಕೊಂಡಿದೆ.

ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನ 10 ವಿದ್ಯಾರ್ಥಿಗಳ ತಂಡ ‘ಟೀಮ್‌ ರಿವಿಯನ್‌’ ತಾನು ರೂಪಿಸಿದ ಹೊಸ ವಿನ್ಯಾಸದ ಕಾರಿನೊಂದಿಗೆ ಟ್ರ್ಯಾಕ್‌ಗೆ ಇಳಿಯಲಿದೆ. ಏರೋ ಡೈನಾಮಿಕ್‌ ಡಿಸೈನ್‌ ಕಾನ್ಸೆಪ್ಟ್‌ನಲ್ಲಿ ನಿರ್ಮಿಸಿರುವ ಈ ವಾಹನವನ್ನು ‘ಭವಿಷ್ಯದ ಕಾರು’ ಎಂದು ಬಣ್ಣಿಸಲಾಗಿದೆ. ಲಿಥಿಯಂ ಐಯಾನ್‌ ಫಾಸ್ಪೇಟ್‌ ಬ್ಯಾಟರಿ ಕಾರು ಗಂಟೆಗೆ 500 ಕಿ.ಮೀ/ಕಿವ್ಯಾಟ್‌ ಮೈಲೇಜ್‌ ನೀಡಲಿದೆ ಎಂದು ತಂಡ ಹೇಳಿದೆ. 

ವಿದ್ಯಾರ್ಥಿಗಳ ಕಲ್ಪನೆ ಅನಾವರಣಕ್ಕೆ ಸೂಕ್ತ ವೇದಿಕೆ

ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಲ್ಪನೆ ಮತ್ತು ಪ್ರತಿಭೆ ಅನಾವರಣಕ್ಕೆ ಇದು ಸೂಕ್ತ ವೇದಿಕೆ ಒದಗಿಸಲಿದೆ. ಈ ಮ್ಯಾರಾಥಾನ್‌ನಲ್ಲಿ ಇಂಧನ ಮತ್ತು ವಿದ್ಯುತ್‌ ಕ್ಷಮತೆಯ ವಾಹನಗಳು ಎಲ್ಲರನ್ನೂ ಅಚ್ಚರಿಪಡಿಸಲಿವೆ. ದೇಶದ ಭವಿಷ್ಯದ ಸಾರಿಗೆ ವ್ಯವಸ್ಥೆ ಚಲನಶೀಲವಾಗಿದ್ದು ಆಟೊಮೊಬೈಲ್‌ ಉದ್ಯಮದ ಆವಿಷ್ಕಾರಕ್ಕೆ ನಾಂದಿ ಹಾಡಲಿದೆ.


ಪ್ರೋಟೊಟೈಪ್ ಎಲೆಕ್ಟ್ರಿಕಲ್ ವೆಹಿಕಲ್ ಜತೆ ನ್ಯೂ ಹೊರೈಜನ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ 'ಟೀಮ್ ಆಕೃತ್'

ವಿದ್ಯಾರ್ಥಿಗಳ ಕಲ್ಪನೆಯ ವಾಹನಗಳು

ಎಲ್ಲ ತಂಡಗಳೂ ಭವಿಷ್ಯದ ವಾಹನ ತಯಾರಿಕೆಗೆ ಒತ್ತು ನೀಡಿವೆ. ಪೆಟ್ರೋಲ್‌, ಡಿಸೇಲ್‌ ರಹಿತವಾದ ಮತ್ತು ಹೊಗೆ ಉಗುಳದ ಪರಿಸರ ಸ್ನೇಹಿ ವಾಹನ ಎಲ್ಲ ತಂಡಗಳ ಪ್ರಧಾನ ಥೀಮ್‌.

ಅತಿ ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಲಿಥಿಯಂ ಐಯಾನ್ ಬ್ಯಾಟರಿ ಅಳವಡಿಸಿದ ಮತ್ತು ಹೆಚ್ಚು ಮೈಲೇಜ್‌ ನೀಡುವ ಎಲೆಕ್ಟ್ರಿಕ್‌ ವಾಹನಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಏರೋ ಡೈನಾಮಿಕ್ಸ್‌ ನಿಮಯಗಳ ಚೌಕಟ್ಟುಗಳ ಒಳಗೆ ಸಂಪೂರ್ಣ ಸ್ವದೇಶಿ ವಿನ್ಯಾಸಗಳು ವಿದ್ಯಾರ್ಥಿಗಳ ಕಲ್ಪನೆಯಲ್ಲಿ ಜನ್ಮತಾಳಿವೆ.

ಕಡಿಮೆ ಖರ್ಚು,ಇಂಧನ ಕ್ಷಮತೆ, ಮೈಲೇಜ್‌ ಮತ್ತು ಹಗುರವಾದ ವಾಹನ ತಯಾರಿಸಲು ಹೆಚ್ಚು ಗಮನ ಹರಿಸಿದ ಕಾರಣ ಹೊರ ವಿನ್ಯಾಸಕ್ಕೆ ಆದ್ಯತೆ ಸಿಕ್ಕಿಲ್ಲ. ಇವು ಪ್ರೋಟೊಟೈಪ್‌ ಎಲೆಕ್ಟ್ರಿಕ್‌ ವೆಹಿಕಲ್‌ ಆದ ಕಾರಣ ಹೆಚ್ಚಿನ ವಾಹನಗಳಲ್ಲಿ ಚೌಕಟ್ಟು ಮಾತ್ರ ಕಾಣಲು ಸಿಗುತ್ತದೆ. ವಾಹನಗಳಿಗೆ ಬಳಸಿದ ಟೈರ್‌, ಎಂಜಿನ್‌ ಮತ್ತು ಬ್ಯಾಟರಿ ಬಲಶಾಲಿಯಾಗಿವೆ.

ಭವಿಷ್ಯದ ಸಾರಿಗೆ ಸಮಸ್ಯೆಗಳಿಗೆ ಪರಿಹಾರ

ಭವಿಷ್ಯದ ಸಾರಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ಉತ್ಸಾಹಿ ಯುವ ಎಂಜಿನಿಯರ್‌ಗಳನ್ನು ಪ್ರೋತ್ಸಾಹಿಸಲು ಶೆಲ್‌ ಇಕೋ–ಮ್ಯಾರಾಥಾನ್‌ ಆಯೋಜಿಸಲಾಗಿದೆ. ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಲ್ಪನೆ ಮತ್ತು ಪ್ರತಿಭೆ ಅನಾವರಣಕ್ಕೆ ಇದು ಸೂಕ್ತ ವೇದಿಕೆ ಒದಗಿಸಲಿದೆ. ಈ ಮ್ಯಾರಾಥಾನ್‌ನಲ್ಲಿ ಇಂಧನ ಮತ್ತು ವಿದ್ಯುತ್‌ ಕ್ಷಮತೆಯ ವಾಹನಗಳು ಎಲ್ಲರನ್ನೂ ಅಚ್ಚರಿಪಡಿಸಲಿವೆ. ದೇಶದ ಭವಿಷ್ಯದ ಸಾರಿಗೆ ವ್ಯವಸ್ಥೆ ಚಲನಶೀಲವಾಗಿದ್ದು ಆಟೊಮೊಬೈಲ್‌ ಉದ್ಯಮ ಕ್ಷೇತ್ರದಲ್ಲಿ ಆಮೂಲಾಗ್ರ ಆವಿಷ್ಕಾರಕ್ಕೆ ನಾಂದಿ ಹಾಡಲಿದೆ ಎಂದು ತೈಲ ಕಂಪನಿ ಶೆಲ್‌ ಹೇಳಿದೆ.

ಇದನ್ನೂ ಓದಿ: ನಗರದ ಟ್ರಾಫಿಕ್‌ ಸಮಸ್ಯೆ ‘ಬಿಗ್‌ ಡೇಟಾ’ ಪರಿಹಾರ!

ನ.19 ರಿಂದ ಇಕೋ–ಮ್ಯಾರಾಥಾನ್‌

ಬೆಂಗಳೂರಿನ ಶೆಲ್‌ ಟೆಕ್ನಾಲಜಿ ಸೆಂಟರ್‌ನಲ್ಲಿ ನ.19 ರಿಂದ ನಾಲ್ಕು ದಿನ (22ರವರೆಗೆ) ಇಕೋ–ಮ್ಯಾರಾಥಾನ್‌ ನಡೆಯಲಿದ್ದು, ಇಂಧನ ಮತ್ತು ವಿದ್ಯುತ್‌ ಕ್ಷಮತೆ ಹೊಂದಿರುವ ಭವಿಷ್ಯದ ವಾಹನ ತಂತ್ರಜ್ಞಾನಗಳ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.  ಕಳೆದ ವರ್ಷದಿಂದ ಭಾರತದಲ್ಲಿ ಇಕೋ– ಮ್ಯಾರಾಥಾನ್‌ ಅಭಿಯಾನ ಆರಂಭಿಸಿದ್ದು, ಮೊದಲ ಆವೃತ್ತಿ ಚೆನ್ನೈನಲ್ಲಿ ನಡೆದಿತ್ತು.‘ಮೇಕ್‌ ದ ಫ್ಯೂಚರ್‌ ಲೈವ್‌ ಇಂಡಿಯಾ’ ಧ್ಯೇಯ ವಾಕ್ಯದೊಂದಿಗೆ  ಬೆಂಗಳೂರಿನಲ್ಲಿ ಎರಡನೇ ಆವೃತ್ತಿ ನಡೆಯಲಿದೆ. ದೇಶದ ಹಲವು ಎಂಜಿನಿಯರಿಂಗ್‌ ಕಾಲೇಜುಗಳ 39 ತಂಡಗಳು ತಮ್ಮ ಪ್ರತಿಭೆ ಮತ್ತು ಕಲ್ಪನೆಯನ್ನು ಅನಾವರಣಗೊಳಿಸಲಿವೆ.

ಪ್ರತಿಕ್ರಿಯಿಸಿ (+)