ಶುಕ್ರವಾರ, ಡಿಸೆಂಬರ್ 13, 2019
26 °C

ಬನ್ನೇರುಘಟ್ಟ ಉದ್ಯಾನ ಇರಲಿ ಮಾನವೀಯ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾರಾಂತ್ಯದ ರಜೆಯ ಮಜ ಸವಿಯಲು ಇರುವ ತಾಣಗಳಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಅತ್ಯಂತ ಪ್ರಮುಖ. ಇದು ಹಲವು ವರ್ಷಗಳಿಂದ ತನ್ನ ಆಕರ್ಷಣೆಯನ್ನು ಕಾಯ್ದುಕೊಂಡಿದೆ. ನಗರಕ್ಕೆ ಸಮೀಪದ ಸುಂದರ ಕಾಡು ಪ್ರದೇಶವೆಂದೇ ಇದನ್ನು ವಿಶೇಷ ಅಕ್ಕರೆಯಿಂದ ಕಾಣಲಾಗುತ್ತಿದೆ. ನಗರವಾಸಿಗಳು ಮತ್ತು ಹೊರಗಿನಿಂದ ಬಂದವರಿಗೆ ಬನ್ನೇರುಘಟ್ಟ ಉದ್ಯಾನ ಅಚ್ಚುಮೆಚ್ಚು.

ವಾರಾಂತ್ಯದಲ್ಲಿ ಇಲ್ಲಿ ಜನಜಂಗುಳಿ ಇರುತ್ತದೆ. ಇದರ ಪ್ರಮುಖ ಲಾಭ ಉದ್ಯಾನದ ಜೀವ ವೈವಿಧ್ಯ ವೀಕ್ಷಣೆಯ ವ್ಯವಸ್ಥೆಗೆ. ಸಫಾರಿ ಮಾದರಿಯಲ್ಲಿ ಸರ್ಕಾರಿ ವಾಹನಗಳಲ್ಲಿ ಜನರಿಗೆ ವನ್ಯಜೀವಿಗಳ ಸಾಕ್ಷಾತ್‌ ದರ್ಶನ ಮಾಡಿಸಲಾಗುತ್ತದೆ. ಇಂಥದೊಂದು ಥ್ರಿಲಿಂಗ್‌ ಅನುಭವಕ್ಕೆ ಜನ ಹಾತೊರೆಯುತ್ತಾರೆ ಕೂಡ. ಹೀಗೆ ಬರುವ ಜನರಿಗೆ ಉದ್ಯಾನ ನೀಡುವ ಸವಲತ್ತು ಎಂಥದು ಎನ್ನುವುದು ಪ್ರಶ್ನೆ.

ಇಲ್ಲಿ ಸಫಾರಿಗೆ ಹೆಚ್ಚು ಬೇಡಿಕೆ. ಅದಕ್ಕೆಂದೇ ಸಾವಿರಾರು ಜನ ಇಲ್ಲಿಗೆ ದಾಂಗುಡಿ ಇಡುತ್ತಾರೆ. ಹಾಗೆ ಬಂದವರೆಲ್ಲ ತಮ್ಮ ಸಫಾರಿ ಸರದಿಗಾಗಿ ಕಾಯಬೇಕು. ಒಂದಷ್ಟು ಕಾಲ ವಿಶ್ರಮಿಸಲು, ಸರದಿಗಾಗಿ ಕಾಯ್ದು ಒಂದೆಡೆ ಕುಳಿತುಕೊಳ್ಳಲು ವ್ಯವಸ್ಥೆಯೇನೋ ಇದೆ. ತುಂಬ ಜನ ಸೇರುವುದರಿಂದ ಆ ವ್ಯವಸ್ಥೆ ಕೂಡ ದನದ ಕೊಟ್ಟಿಗೆಯಂತೆಯೇ ಭಾಸವಾಗುತ್ತದೆ.

ಸರದಿ ಸಾಲಿನಲ್ಲಿ ಕೌಂಟರ್‌ಗಳ ಬಳಿ ಕಾದು ಟಿಕೆಟ್‌ ಕೊಂಡು ಮೇನ್‌ ಗೇಟ್‌ನಿಂದ ಒಳಕ್ಕೆ ಬರಲು ಮತ್ತೆ ಸಾಲುಗಟ್ಟಿ ನಿಲ್ಲಬೇಕು. ಅಲ್ಲಿಂದ ಕೆಲವೇ ಜನರಿಗೆ ಕೂರಲು ವ್ಯವಸ್ಥೆ. ಅಲ್ಲಿಗೆ ಒಂದಷ್ಟು ಜನರನ್ನು ಒಳಕ್ಕೆ ಬಿಟ್ಟುಕೊಟ್ಟ ನಂತರ ಒಬ್ಬ ಜವಾನ ಅಕ್ಷರಶಃ ಹಗ್ಗದಿಂದ ಅಡ್ಡಲಾಗಿ ಹಿಡಿದು ತಳ್ಳುತ್ತಾನೆ. ಪ್ರಾಣಿಗಳನ್ನು ಪಳಗಿಸಲು ಬಳಸುವ ತಂತ್ರದ ಮಾದರಿಯಲ್ಲಿ ಈ ಹಗ್ಗ ಹಿಡಿದು ನಿಂತವರನ್ನು ಕಂಡಾಗ ಮನುಷ್ಯರಿಗೂ ಮತ್ತು ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವೇನಿಲ್ಲ ಅನಿಸುತ್ತದೆ. ಒಂಚೂರು ಪ್ರೊಫೆಷನಲ್‌ ಆದ ಭಿನ್ನ ವ್ಯವಸ್ಥೆಯ ನಡೆ ಸೂಕ್ತ ಎನಿಸುತ್ತದೆ.

ಒಂದೊಂದು ಬ್ಯಾಚ್‌ ಸಫಾರಿ ವ್ಯಾನ್‌ಗೆ ಸಾಗುತ್ತಿದ್ದಂತೆ ಮತ್ತಷ್ಟು ಜನ ಅಲ್ಲಿಗೆ ಸೇರುತ್ತಾರೆ. ಕುಡಿಯುವ ನೀರಿನ ವ್ಯವಸ್ಥೆಯೂ ಇದೆ. ದೊಡ್ಡ ಫಿಲ್ಟರ್‌ ಟ್ಯಾಂಕ್‌ ಬಳಿ ಒಂದಷ್ಟು ಸ್ಟೀಲ್‌ ಲೋಟಗಳಿವೆ. ಅವುಗಳಿಗೆ ಚೈನ್‌ ಕಟ್ಟಲಾಗಿದೆ. ಅಷ್ಟು ದೂರದಿಂದ ಬಾಯಾರಿ ಬಂದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ಸೂಕ್ತವೇ. ಆದರೆ ಅದನ್ನು ಇನ್ನಷ್ಟು ಸೌಜನ್ಯಯುತ ಆಗಿಸಬಹುದಿತ್ತು.

ಸಫಾರಿ ವಾಹನಗಳು ತಕ್ಕಮಟ್ಟಿನ ರಕ್ಷಣಾ ವ್ಯವಸ್ಥೆಯನ್ನೇನೊ ಹೊಂದಿವೆ. ನುರಿತ ಡ್ರೈವರ್‌ಗಳು ಸಫಾರಿಯುದ್ದಕ್ಕೂ ಸಂಯಮದಿಂದ ನಡೆದುಕೊಳ್ಳುತ್ತಾರೆ. ಕೆಲವರಿಗೆ ಮೊಬೈಲ್‌ ಕ್ಯಾಮೆರಾಗಳಲ್ಲಿ ಕಾಡಿನ ಅನುಭವ ಸೆರೆ ಹಿಡಿಯುವುದಕ್ಕೆ ನೆರವಾಗುತ್ತಾರೆ. ಅಲ್ಲಲ್ಲಿ ಅಪರೂಪಕ್ಕೆ ಕಾಣಿಸುವ ವನ್ಯಜೀವಿಗಳನ್ನು ತಕ್ಷಣಕ್ಕೆ ಗ್ರಹಿಸಿ ಎಲ್ಲರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಾರೆ. ಡ್ರೈವರ್‌ಗಳಿಗೆ ಒಂದು ಸಣ್ಣ ಮೈಕ್‌ ಸಿಸ್ಟಂ ನೀಡಿದ್ದರೆ ಹಿಂದೆ ಕುಳಿತವರಿಗೆ ಆತ ವೀಕ್ಷಕ ವಿವರಣೆಯ ತರಹ ವಿವರಿಸಲು ಸಾಧ್ಯವಾಗಬಹುದಿತ್ತು. ಸಫಾರಿಗೆ ಬಳಸುವ ಈಗಿನ ವಾಹನಗಳಿಗೆ ಆಧುನಿಕ ಸ್ಪರ್ಶ ಅಥವಾ ಹೊಸ ವಾಹನಗಳ ವ್ಯವಸ್ಥೆ ಮಾಡಿದರೆ ಇನ್ನೂ ಚೆನ್ನ.

ಚಿಟ್ಟೆ ಪಾರ್ಕ್‌

ಈ ಪಾರ್ಕ್‌ ವ್ಯವಸ್ಥೆ ಸೊಗಸಾಗಿದೆ. ಆದರೆ ವೈವಿಧ್ಯಮಯ ಚಿಟ್ಟೆಗಳದ್ದೇ ಕೊರತೆ. ಆಗೊಮ್ಮೆ ಈಗೊಮ್ಮೆ ಒಂದಷ್ಟು ಚಿಟ್ಟೆಗಳು ಕಾಣಿಸುತ್ತವೆ. ಇಲ್ಲಿನ ಒಳಾಂಗಣ ವಿನ್ಯಾಸ ಚೆನ್ನಾಗಿರುವುದರಿಂದ ಒಂದು ಸುಂದರ ಸುತ್ತಾಟ ಆಗಬಹುದಷ್ಟೇ.

ಶಾಪಿಂಗ್‌ ಏರಿಯಾ

ಉದ್ಯಾನ ತಲುಪುತ್ತಿದ್ದಂತೆ ಆರಂಭದಲ್ಲಿ ಇರುವ ಅಂಗಡಿಗಳ ಸಾಲುಗಳನ್ನು ನೋಡಿದರೆ ಇದೊಂದು ಅಕ್ಷರಶಃ ಚಿಕ್ಕಪೇಟೆಯ ಅಪರಾವತಾರದಂತೆನಿಸುತ್ತದೆ. ಅಂಗಡಿಗಳ ಮಾಲೀಕರಿಂದ ಗ್ರಾಹಕರಿಗಾಗಿ ಕೂಗಾಟ, ಚೀರಾಟ ಇಡೀ ವಾತಾವರಣದ ಪ್ರಶಾಂತತೆಯನ್ನು ಕದಡುವಂತಿರುತ್ತದೆ. ಕಬ್ಬಿನ ಹಾಲು, ಹಣ್ಣಿನ ಅಂಗಡಿ, ತಿಂಡಿಯ ಹೋಟೆಲ್‌ಗಳು, ಆಟಿಕೆಯ ವಸ್ತುಗಳ ಸಣ್ಣ ಮಳಿಗೆಗಳು ಇಡೀ ಪ್ರದೇಶವನ್ನು ಒಂದು ಶಾಪಿಂಗ್‌ ಏರಿಯಾವನ್ನಾಗಿ ಮಾರ್ಪಡಿಸಿವೆ.

ಅಭಿರುಚಿ ಬದಲಾಗಲಿ

ಸರ್ಕಾರಿ, ಖಾಸಗಿ ವಾಹನಗಳ ಭರಾಟೆ ಮತ್ತೊಂದೆಡೆ. ಇವುಗಳ ಎಂಜಿನ್‌ ಸದ್ದು, ಹಾರ್ನ್‌ ಸದ್ದುಗಳಿಂದ ಕಾಡಿನಲ್ಲಿ ವಾಸಿಸುವ ಪ್ರಾಣಿಗಳಿಗೆ ಎಷ್ಟೊಂದು ಶಬ್ದ ಮಾಲಿನ್ಯ! ನಾವು ಅವುಗಳನ್ನು ನೋಡಲು ಇಷ್ಟು ಅಬ್ಬರದಿಂದ ಹೋಗುವುದು ಅವುಗಳ ಖಾಸಗಿತನಕ್ಕೆ ನಾವು ಮಾಡುವ ಭಂಗವೇ ಆಗುತ್ತದೆ ಒಂದರ್ಥದಲ್ಲಿ. ಅದರ ಮೇಲೆ ನಮ್ಮಿಂದ ಈ ತರಹದ ಶಬ್ದ ಮಾಲಿನ್ಯದ ಕಿರಿ ಕಿರಿ, ವನ್ಯಜೀವಿಗಳ ಬದುಕಿಗೆ ನೀಡುವ ತೊಂದರೆಯೇ ಆಗುತ್ತದಲ್ಲವೇ? ಇಲ್ಲಿ ಹಾರ್ನ್‌ಮುಕ್ತ ಪ್ರದೇಶದ ಅಗತ್ಯವಿದೆ. ಭಾರಿ ಸದ್ದು ಮಾಡುವ ಎಂಜಿನ್‌ಗಳುಳ್ಳ ವಾಹನಗಳ ಪ್ರವೇಶಕ್ಕೂ ಕಡಿವಾಣ ಹಾಕಿದರೆ ಸೂಕ್ತವೆನಿಸಬಹುದು.

ಇದನ್ನೂ ಓದಿ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: ಇಎಸ್‌ಜೆಡ್‌ ಕಡಿತ

ಸಫಾರಿಗೆಂದು ಬರುವವರನ್ನು ನೋಡಿಕೊಳ್ಳುವ ವಿಧಾನ ಮತ್ತು ಈ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವ ಸಿಬ್ಬಂದಿ ಅಭಿರುಚಿಯಲ್ಲಿ ಬದಲಾವಣೆ ಆಗಬೇಕಿದೆ. ವನ್ಯಜೀವಿಗಳ ವೀಕ್ಷಣೆಗೆ ಬರುವವರ ಅಭಿರುಚಿ ಕೂಡ ಬದಲಾಗಬೇಕಿದೆ. ಮನುಷ್ಯರಾದವರು ವನ್ಯಜೀವಿಗಳು ವಾಸಿಸುವ ಪ್ರದೇಶಕ್ಕೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಹೆಚ್ಚು ಸೂಕ್ಷ್ಮತೆ ಮತ್ತು ಸೌಜನ್ಯದ ನಡೆ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ.

ಪ್ರತಿಕ್ರಿಯಿಸಿ (+)