ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷೆಯಲ್ಲಿ ಪ್ಲಾಸ್ಟಿಕ್‍: ದಂಡವೇ ದಶಗುಣ…

Last Updated 29 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಸ್ಥಳೀಯ ಪರಿಸರಪ್ರಿಯರು, ಸಂಘಟನೆಯ ಪ್ರಮುಖರು ಪರಿಷೆ ಆರಂಭವಾಗುವ ಸುಮಾರು 15 ದಿನಗಳ ಮೊದಲೇ ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು. ಪ್ಲಾಸ್ಟಿಕ್‍ ನಿಷೇಧ ಕಡ್ಡಾಯವಾಗಿದ್ದರಿಂದ ಈ ಪರಿಷೆಯಲ್ಲಿ ಅದನ್ನು ಕಟ್ಟು ನಿಟ್ಟಾಗಿ ಜಾರಿಗೆ ತನ್ನಿ ಎಂದು ಒತ್ತಾಯಿಸಿದ್ದರು. ಈ ಸಾಂಘಿಕ ಪ್ರಯತ್ನದಿಂದ ಆದ ಪರಿಣಾಮದ ಬಗ್ಗೆ ಒಂದು ವರದಿ.

ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿಗಳ ತಳಿ ವೈವಿಧ್ಯ, ರುಚಿ ಪರಿಚಯಿಸಿದ್ದು ಒಂದು ಮುಖ. ಕಡಲೆ ಕಾಯಿ ಖರೀದಿಸಿ ಪ್ಲಾಸ್ಟಿಕ್‍ನಲ್ಲಿ ತುಂಬುತ್ತಿದ್ದವರಿಗೆ ದಂಡದ ಪಾಠ ಹೇಳಿದ್ದು ಈ ಬಾರಿಯ ವಿಶೇಷತೆ.

ಐದು ವರ್ಷಗಳಿಂದ ಈ ಭಾಗದಲ್ಲಿ ಸ್ವಚ್ಛತೆ ಕಾಪಾಡುವುದು, ಪ್ಲಾಸ್ಟಿಕ್‍ ಬಳಕೆ ಮಾಡದಂತೆ ಪರಿಪರಿಯಾಗಿ ಬೇಡಿಕೊಂಡರೂ ವ್ಯಾಪಾರಿಗಳು ಮತ್ತು ಗ್ರಾಹಕರು ಗಣನೆಗೆ ತೆಗೆದುಕೊಂಡಿರಲಿಲ್ಲ. ಬಿಬಿಎಂಪಿಯೂ ಇಷ್ಟು ಕಾಲ ಜಾಣ ಮೌನ ವಹಿಸಿತ್ತು. ಈ ಬಾರಿ ಹಾಗಾಗಲಿಲ್ಲ.

ಸ್ಥಳೀಯ ಪರಿಸರ ಪ್ರಿಯರು ಸಂಘಟನೆಯ ಪ್ರಮುಖರು ಪರಿಷೆ ಆರಂಭವಾಗುವ ಸುಮಾರು 15 ದಿನಗಳ ಮೊದಲೇ ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ತಂದರು. ಪ್ಲಾಸ್ಟಿಕ್‍ ನಿಷೇಧ ಕಡ್ಡಾಯವಾಗಿದ್ದರಿಂದ ಈ ಪರಿಷೆಯಲ್ಲಿ ಅದನ್ನು ಕಟ್ಟು ನಿಟ್ಟಾಗಿ ಜಾರಿಗೆ ತನ್ನಿ ಎಂದು ಒತ್ತಾಯಿಸಿದರು.

ಪರಿಷೆಯಲ್ಲಿ ಪ್ಲಾಸ್ಟಿಕ್‌ ನಿಷೇಧ ಸಂದೇಶ ಹೊತ್ತ ಬಿಬಿಎಂಪಿ ಆಟೊ
ಪರಿಷೆಯಲ್ಲಿ ಪ್ಲಾಸ್ಟಿಕ್‌ ನಿಷೇಧ ಸಂದೇಶ ಹೊತ್ತ ಬಿಬಿಎಂಪಿ ಆಟೊ

ಕ್ರಮ ಹೇಗೆ?

ಪರಿಸರವಾದಿ, ಬೆಂಗಳೂರು ಇಕೊ ಟೀಂ ಸದಸ್ಯ ಆನಂದತೀರ್ಥ, ಪರಿಷೆ ಸಂದರ್ಭ ಅನುಷ್ಠಾನಗೊಳಿಸಿದ ಯೋಜನೆಯನ್ನು ತೆರೆದಿಟ್ಟರು. ಕಡಲೆ ಕಾಯಿ ವ್ಯಾಪಾರಿಗಳಿಗೆ ಆ ಪ್ರದೇಶದಲ್ಲಿ ಸರಣಿ ಮಳಿಗೆಗಳು ಅಥವಾ ವ್ಯಾಪಾರದ ಸ್ಥಳ ಸೂಚಿಸಲಾಯಿತು. ಶೇ 100ರಷ್ಟು ಅಲ್ಲವಾದರೂ ಇಷ್ಟು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ವ್ಯವಸ್ಥೆ ಉತ್ತಮವಾಗಿಯೇ ಇತ್ತು.

ಬಿಬಿಎಂಪಿಯ ಪೌರ ಕಾರ್ಮಿಕರು ಗಮನ ಸೆಳೆಯುವ ರೀತಿಯಲ್ಲಿ ಪ್ಲಾಸ್ಟಿಕ್‍ ನಿಷೇಧ ಫಲಕ ಸಿದ್ಧಪಡಿಸಿ ಅಲ್ಲಲ್ಲಿ ನಿಲ್ಲಿಸಿದರು. ಆದರೆ ಇವೆಲ್ಲ ನೋಟಕ್ಕಷ್ಟೇ ಸೀಮಿತ ಎನ್ನುವುದು ಜನರ ಮನೋಭಾವ.

ಬಿತ್ತು ದುಬಾರಿ ದಂಡ

ಇಷ್ಟೆಲ್ಲಾ ಶ್ರಮಪಟ್ಟರೂ ಜನ ಬುದ್ಧಿ ಬಿಡಲಿಲ್ಲ, ಈಗ ದಂಡ ಪ್ರಯೋಗದ ಸರದಿ. ಬಿಬಿಎಂಪಿ ಸಿಬ್ಬಂದಿ ದಂಡ ವಿಧಿಸುವ ಪುಟ್ಟ ಯಂತ್ರ ಹಿಡಿದುಕೊಂಡು ಪರಿಷೆಯ ತುಂಬಾ ಓಡಾಡಿದರು. ವ್ಯಾಪಾರಿಗಳ ಪ್ಯಾಕಿಂಗ್‍ ಸಾಮಗ್ರಿಗಳನ್ನು ಖುದ್ದಾಗಿ ಪರಿಶೀಲಿಸಿದರು. ಅವರು ಮುಚ್ಚಿಟ್ಟಾಗ ಗ್ರಾಹಕರನ್ನು ವಿಚಾರಿಸಿ ಪ್ಲಾಸ್ಟಿಕ್‍ ವಿತರಣೆಯ ಮೂಲ ಪತ್ತೆ ಹಚ್ಚಿದರು. ಕನಿಷ್ಠ ₹500ರಿಂದ ದಂಡ ಪ್ರಯೋಗ ಆರಂಭವಾಯಿತು. ಜಾತ್ರೆ ಮುಗಿಯುವ ವೇಳೆಗೆ ಬಸವನಗುಡಿ, ಸುಂಕೇನಹಳ್ಳಿ ಭಾಗಗಳಿಂದ ₹14 ಸಾವಿರ ದಂಡ ಸಂಗ್ರಹ ಆಯಿತು. 20 ಕೆ.ಜಿ ಪ್ಲಾಸ್ಟಿಕ್‍ ಅನ್ನು ವಶಪಡಿಸಿಕೊಳ್ಳಲಾಯಿತು.

ಪೌರ ಕಾರ್ಮಿಕರು, ಮಾರ್ಷಲ್‍ಗಳು, ಮುಟ್ಟುಗೋಲು ಸಿಬ್ಬಂದಿ ನೆರವಿನಿಂದ ಈ ಅರಿವು ಮೂಡಿಸಲು ಸಾಧ್ಯವಾಯಿತು ಎಂದರು ಆನಂದತೀರ್ಥ. ಮುಂದಿನ ವರ್ಷ ಈ ಜಾತ್ರೆ ಸಂಪೂರ್ಣ ಪ್ಲಾಸ್ಟಿಕ್‍ ಮುಕ್ತವಾಗಿ ಕಾಣುವ ಆಶಯವಿದೆ ಎನ್ನುವ ಆಶಾವಾದವೂ ಅವರದಾಗಿದೆ.

ಇನ್ನೊಂದಿಷ್ಟು ಯೋಚನೆಗಳಿದ್ದವು…

ವ್ಯಾಪಾರಿಗಳು ಬಟ್ಟೆಯ ಚೀಲದಲ್ಲೇ ಕಡಲೆ ಕಾಯಿ ಹಾಕಿಕೊಡುವ ಚಿಂತನೆ ಇತ್ತು. ಕಳೆದ ವರ್ಷ ಸರ್ಕಾರೇತರ ಸಂಘಟನೆಯೊಂದು ಚೀಲಗಳನ್ನು ಕೊಡಲು ಮುಂದೆ ಬಂದಿತ್ತು. ಈ ಬಾರಿ ಯಾಕೋ ದರ ಹೊಂದಿಕೆ ಆಗಲಿಲ್ಲ. ಹೀಗಾಗಿ ಅದನ್ನು ಕೈಬಿಡಬೇಕಾಯಿತು. ಕಂದು ಬಣ್ಣದ ದಪ್ಪ ಕವರ್‌ಗಳು, ಹಳೆ ಪತ್ರಿಕೆಗಳು ಪ್ಯಾಕಿಂಗ್‍ ಸಲಕರಣೆಗಳಾಗಿ ಬಳಕೆಯಾದವು ಎಂದು ಆನಂದತೀರ್ಥ ವಿವರಿಸಿದರು.

ಅಂತೂ ಪರಿಸರಸ್ನೇಹಿ ಪರಿಷೆಯ ಅರಿವು ಮೂಡಿಸುವಲ್ಲಿ ಯಶಸ್ಸಿನ ಪುಟ್ಟ ಹೆಜ್ಜೆ ಇಟ್ಟಿದ್ದೇವೆ. ಅದು ಇನ್ನೂ ಮುಂದುವರಿಯಬೇಕು ಎಂದೂ ಅವರು ಆಶಿಸಿದರು.

ಜಾತ್ರೆಯಲ್ಲೊಂದು ಸ್ವಚ್ಛತೆಯಂತ್ರ ಪ್ರದರ್ಶನ

ಜಾತ್ರೆಯಲ್ಲಿ ಕಸ ಗುಡಿಸುವ ಮಾನವಚಾಲಿತ ಯಂತ್ರ ವ್ಯಾಪಕವಾಗಿ ಕೆಲಸ ಮಾಡಿತು. ವಿದ್ಯುತ್‍, ಡೀಸೆಲ್‍, ಪೆಟ್ರೋಲ್‍ ಏನನ್ನೂ ಬೇಡದ ಐ ಕ್ಲೀನ್‍ ಎಕ್ಸ್ ಈ ಜಾತ್ರೆಯ ಪ್ರಮುಖ ಆಕರ್ಷಣೆ. ಮೂರು ಗಾಲಿಯ ಈ ಯಂತ್ರವನ್ನು ಸುಮ್ಮನೆ ತಳ್ಳಿಕೊಂಡು ಹೋದರೆ ಸಾಕು. ಯಂತ್ರದಲ್ಲಿರುವ ಬ್ರಷ್‍ಗಳು ಆ ಪ್ರದೇಶವನ್ನೆಲ್ಲಾ ಗುಡಿಸಿ ಕಸವನ್ನು ಅದರ ಹೊಟ್ಟೆಯೊಳಗೆ ತುಂಬಿಕೊಂಡು ಬಿಡುತ್ತವೆ. ಯಂತ್ರದ ಪ್ರಾತ್ಯಕ್ಷಿಕೆಯೂ ಆಯಿತು. ಪರಿಷೆ ಪ್ರದೇಶದ ಸ್ವಚ್ಛತೆಯೂ ಆಯಿತು. ಹೊಸದುರ್ಗದ ಪ್ರಕಾಶ್‍ ಎನ್ನುವ ಎಂಜಿನಿಯರ್‍ ಟ್ರಿಯಾಂಗಲ್‍ ಇನ್ನೋವೇಷನ್ಸ್‌ ಪ್ರೈವೇಟ್‍ ಲಿಮಿಟೆಡ್‍ ಹೆಸರಿನ ನವೋದ್ಯಮದ ಮೂಲಕ ತಯಾರಿಸಿದ್ದಾರೆ. ಯಂತ್ರದ ಯಶಸ್ಸು ಬಿಬಿಎಂಪಿಯ ಗಮನವನ್ನೂ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT