ಸೋಮವಾರ, ಜನವರಿ 20, 2020
19 °C

‘ಲಯತರಂಗ’ದ 21ನೇ ವರ್ಷದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಯವಾದ್ಯಗಳ ನಾದವಿನ್ಯಾಸದ ಲಾಲಿತ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಹೊಂದಿರುವ ‘ಲಯತರಂಗ’ ಸಂಗೀತ ತಂಡವು ಡಿ13ರಂದು ಶುಕ್ರವಾರ ಸಂಜೆ 7ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಗೀತದ ರಸದೌತಣ ನೀಡಲಿದೆ. ಪ್ರತಿಭಾವಂತ ಕಲಾವಿದರನ್ನೊಳಗೊಂಡ ತಂಡ ಸಂಗೀತ ರಸಿಕರ ಮನತಣಿಸಲು ಇದೀಗ ಸನ್ನದ್ಧವಾಗಿದೆ.

ವಿವಿಧ ದೇಶಗಳಲ್ಲಿ ಸಂಗೀತ ಸುಧೆಯನ್ನು ಉಣಬಡಿಸಿ ಪ್ರಖ್ಯಾತಿ ಪಡೆದ ‘ಲಯತರಂಗ’ ತನ್ನ ಇಪ್ಪತ್ತೊಂದನೇ ವರ್ಷದ ಸಂಭ್ರಮಾಚರಣೆಯನ್ನು ಸಂಗೀತ ರಸಿಕರೊಂದಿಗೆ ಹಂಚಿಕೊಳ್ಳಲಿದೆ. ಈ ತಂಡದ ವಿಶೇಷವೆಂದರೆ ಎಲ್ಲರೂ ವಿವಿಧ ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರು.

ಈ ತಂಡದ ವಾದಕರು ವಿಶ್ವಖ್ಯಾತಿಯ ಜಾಕೀರ್‌ ಹುಸೇನ್‌, ಪಂಡಿತ್‌ ರವಿ ಶಂಕರ್‌, ಎ.ಆರ್‌. ರೆಹಮಾನ್‌, ಎಲ್‌. ಸುಬ್ರಮಣ್ಯಂ, ಶಂಕರ್‌ ಮಹಾದೇವನ್‌, ವಿಜಯ ಪ್ರಕಾಶ್‌, ಅನುಷ್ಕಾ, ಜಾರ್ಜ್‌ ಬ್ರೂಕ್ಸ್‌, ಜಾನ್‌ ಮೆಕ್ಲಾಫ್‌ಲಿನ್‌, ತ್ರಿಲೋಕ್‌ ಗುರ್ಟು ಅವರಂಥ ದಿಗ್ಗಜರ ಸಂಗೀತಕ್ಕೆ ಸಾಥ್‌ ನೀಡಿ ಹೆಸರಾದವರು.

ಲಂಡನ್‌ ರಾಯಲ್‌ ಫೆಸ್ಟಿವಲ್‌ ಹಾಲ್‌ ಬಾರ್ಬಿಕನ್ ಸೆಂಟರ್‌ ಮತ್ತಿತರ ವಿಶ್ವಖ್ಯಾತ ಸಂಗೀತ ಕಛೇರಿಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ. ಪೊಲಿಶ್‌ ನ್ಯಾಷನಲ್‌ ಆರ್ಕೆಸ್ಟ್ರಾ ಅವರ ಜೊತೆ ಸಹಯೋಗದೊಂದಿಗೆ ಪೊಲ್ಯಾಂಡ್‌ನಲ್ಲಿ ಪ್ರದರ್ಶನ ನೀಡಿದ್ದು ಹೆಮ್ಮೆಯ ವಿಷಯ ಎನ್ನುತ್ತಾರೆ ತಂಡದ ಸದಸ್ಯರು. ಲಯತರಂಗದ ಎಲ್ಲ ಕಲಾವಿದರು 25ರಿಂದ 40ರ ವಯೋಮಾನದವರು. ಬಹುತೇಕರು ಬಾಲ್ಯದಿಂದಲೇ ಸಂಗೀತದ ಗುಂಗು ಹಿಡಿಸಿಕೊಂಡವರು. ಈಗಾಗಲೇ ವಿಶ್ವದ ಸುಮಾರು 25 ರಾಷ್ಟ್ರಗಳನ್ನು ಸುತ್ತಿ ತಮ್ಮ ಸಂಗೀತ ಸುಧೆಯನ್ನು ಹರಿಸಿದವರು.

ಶುಕ್ರವಾರದಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕಿ, ಹಿಂದೂಸ್ತಾನಿ ಮತ್ತು ವಿಶ್ವ ಸಂಗೀತದ ಸಂಗಮದ ಸವಿ ಉಣಬಡಿಸಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ವೇಣುವಾದನದಲ್ಲಿ ರವಿಚಂದ್ರ ಕೂಳೂರ್, ಘಟಂನಲ್ಲಿ ಗಿರಿಧರ ಉಡುಪ, ಮೃದಂಗದಲ್ಲಿ ಜಯಚಂದ್ರ ಕೂಳೂರ್, ಡ್ರಮ್ಸ್‌ನಲ್ಲಿ ಅರಣ್ ಕುಮಾರ್ ಹಾಗೂ ತಬಲಾ ಮತ್ತು ಲಾಟಿನ್ ಪರ್ಕಷನ್‌ನಲ್ಲಿ ಪ್ರಮಥ್ ಕಿರಣ್ ಅವರು ತಮ್ಮ ಲಯವಿನ್ಯಾಸಗಳನ್ನು ಪ್ರಸ್ತುತಪಡಿಸಲಿದ್ದಾರೆ. ಖ್ಯಾತ ಕಲಾವಿದರುಗಳಾದ ಸಿದ್ಧಾರ್ಥ ಬೆಳ್ಮಣ್, ವರುಣ್ ಪ್ರದೀಪ್, ವಿವೇಕ ಸಂತೋಷ್ ಹಾಗೂ ಬೃತ್ವ ಕ್ಯಾಲೆಬ್ ಜತೆಗೂಡಲಿದ್ದಾರೆ. ಹೆಚ್ಚೂ ಕಮ್ಮಿ ಒಂದೂವರೆ ಗಂಟೆಗಳ ಸತತ ಸಂಗೀತದ ಕಾರ್ಯಕ್ರಮವಿದು. 

ಟಿಕೆಟ್‌ಗಳು ಬುಕ್ ಮೈ ಶೋದಲ್ಲಿ ಲಭ್ಯ.

ಪ್ರತಿಕ್ರಿಯಿಸಿ (+)