ಶನಿವಾರ, ಡಿಸೆಂಬರ್ 14, 2019
23 °C
ಕಡಿಮೆ ಅವಧಿಯಲ್ಲಿ ಶಾಶ್ವತ ಸೂರು ಕಲ್ಪಿಸುವ ‘ಲೈಟ್‌ ಸ್ಟೀಲ್ ತಂತ್ರಜ್ಞಾನ’

ಮೂರೇ ದಿನದಲ್ಲಿ ಸ್ವಂತ ಮನೆ ನಿರ್ಮಿಸಿ

ಮನೋಹರ್‌.ಎಂ Updated:

ಅಕ್ಷರ ಗಾತ್ರ : | |

Prajavani

ಸ್ವಂತ ಮನೆ ಹೊಂದುವುದು ಪ್ರತಿ ಕುಟುಂಬದ ಕನಸು. ಮನೆ ನಿರ್ಮಾಣಕ್ಕೆ ಭೂಮಿ ಪೂಜೆಯಿಂದ ಮನೆಯ ಗೃಹಪ್ರವೇಶ ಆಗುವಷ್ಟರಲ್ಲಿ ವರ್ಷಗಳೇ ಕಾಯಬೇಕು. ಆದರೆ, ‘ಲೈಟ್‌ ಸ್ಟೀಲ್ ತಂತ್ರಜ್ಞಾನ’ ಎಂಬ ನೂತನ ವಿಧಾನ ಬಳಸಿ ಕನಿಷ್ಠ ನೂರು ದಿನದಲ್ಲಿ ನಿರ್ಮಾಣವಾಗುವ ಮನೆ ಈಗ ಮೂರೇ ದಿನದಲ್ಲಿ ತಯಾರಾಗಲಿದೆ.

ರಾಷ್ಟ್ರೀಯ ರಿಯಲ್ ಎಸ್ಟೇಟ್‌ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯ ಸೊಸೈಟಿ ಫಾರ್ ಡೆವಲಪ್‌ಮೆಂಟ್ ಆಫ್‌ ಕಾಂಪೋಸಿಟ್ಸ್‌ (ಎಸ್‌ಡಿಸಿ) ಸಹಯೋಗದಲ್ಲಿ ‘ಫೋನಿಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌’ ಸಂಸ್ಥೆಯು ಇಂತಹ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ.

ಸಾಮಾನ್ಯವಾಗಿ ಮನೆ ನಿರ್ಮಿಸಲು ಇಟ್ಟಿಗೆ, ಸಿಮೆಂಟ್‌ ಹಾಗೂ ಸ್ಟೀಲ್‌ ವಸ್ತುಗಳನ್ನು ಪ್ರಧಾನವಾಗಿ ಬಳಸುತ್ತಾರೆ. ಆದರೆ, ‘ಹಗುರ ಸ್ಟೀಲ್‌ ಕಟ್ಟಡ ತಂತ್ರಜ್ಞಾನ’ದ ಮೂಲಕ ಇಟ್ಟಿಗೆ ರಹಿತ, ಕಡಿಮೆ ನೀರು ಹಾಗೂ ಕಡಿಮೆ ಪ್ರಮಾಣದ ಸಿಮೆಂಟ್‌ ಬಳಸುವ ಮೂಲಕ ಮೂರೇ ದಿನದಲ್ಲಿ ನಿಮ್ಮ ಕನಸಿನ ಮನೆ ಕಟ್ಟಿಕೊಳ್ಳಬಹುದು.

ಇಲ್ಲಿ ಇಟ್ಟಿಗೆಗಿಂತ ಹಗುರವಾದ ಸ್ಟೀಲ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುವುದು. ಇವು ಶಾಶ್ವತ ಮನೆಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ತಯಾರಾಗುತ್ತವೆ. ಈ ಮನೆಗಳು ದೀರ್ಘಕಾಲ ಬಾಳಿಕೆ ಬರುವ ಜೊತೆಗೆ ಸಾಮಾನ್ಯ ಮನೆಗಳಿಗೆ ಸೆಡ್ಡು ಹೊಡೆಯುವಂತೆ ಕಾಣುತ್ತವೆ. ಇಟ್ಟಿಗೆ, ಸಿಮೆಂಟ್‌ ರಹಿತವಾಗಿ ಮನೆಗೆ ಹಗುರವಾದ ಉಕ್ಕು ಬಳಸಿ ಮೆಟ್ಟಿಲುಗಳನ್ನು ನಿರ್ಮಿಸಬಹುದು.

‘ ಕಳೆದ ವರ್ಷ ಮಡಿಕೇರಿ ಹಾಗೂ ಪಕ್ಕದ ಕೇರಳ ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ ಅಲ್ಲಿನ ಎಷ್ಟೋ ಮನೆಗಳು ಕುಸಿದು ನೆಲಸಮವಾದವು. ಇಂತಹ ಪ್ರವಾಹ ಪೀಡಿತ ಸ್ಥಳಗಳಲ್ಲಿ ಒಂದು ವೇಳೆ ಅನಾಹುತ ಸಂಭವಿಸಿದರೆ, ತ್ವರಿತವಾಗಿ ಮನೆ ನಿರ್ಮಿಸಿಕೊಳ್ಳಲು ಈ ತಂತ್ರಜ್ಞಾನ ಹೆಚ್ಚು ಸಹಕಾರಿಯಾಗಲಿದೆ’ ಎನ್ನುತ್ತಾರೆ ರಾಷ್ಟ್ರೀಯ ರಿಯಲ್ ಎಸ್ಟೇಟ್‌ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯ ಕರ್ನಾಟಕ ವಲಯದ ಅಧ್ಯಕ್ಷ ಎಂ.ಸತೀಶ್‌ ಕುಮಾರ್‌.

‘ಸಾಮಾನ್ಯವಾಗಿ ಮನೆಯ ಒಂದು ಗೋಡೆ ನಿರ್ಮಿಸಲು ಎರಡು ದಿನ ಬೇಕು. ಆದರೆ ಈ ತಂತ್ರಜ್ಞಾನದ ಮೂಲಕ ಗೋಡೆಗಳಿಗೆ ಉಕ್ಕು ಬಳಸುತ್ತೇವೆ. ಫ್ರೇಮ್‌ಗಳಲ್ಲಿ ಥರ್ಮೋಫೋಮ್‌ ಅನ್ನು ತುಂಬಿಸಲಾಗುವುದು. ನಂತರ ಇದರ ಹೊರಗೂ ಒಳಗೂ ಕಾಂಕ್ರೀಟ್‌ ಬಳಸಿ ಆರು ಇಂಚುಗಳಷ್ಟು ದಪ್ಪವಾದ ಗೋಡೆ ನಿರ್ಮಿಸಲಾಗುವುದು. ಇತರೆ ಮನೆಗಳಿಗಿಂತ ಈ ಮನೆಯ ಗೋಡೆಗಳು ಹೆಚ್ಚು ತಂಪಾಗಿರುತ್ತವೆ. ಇದೆಲ್ಲ ಸಂಪೂರ್ಣ ಡಿಜಿಟಲೀಕರಣ ಪ್ರಕ್ರಿಯೆ’ ಎಂದು ವಿವರಿಸಿದರು. 

ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಲು ಸರ್ಕಾರ ವರ್ಷಾನುಗಟ್ಟಲೆ ಕಾಯಬೇಕಾದ ಪಡಿಪಾಟಲಿಗೆ ಈ ತಂತ್ರಜ್ಞಾನ ತಡೆ ನೀಡಲಿದೆ. ಸಂತ್ರಸ್ತರಿಗೆ ಶೀಘ್ರವಾಗಿ ಪುನರ್ವಸತಿ ಕಲ್ಪಿಸಲು ಈ ಮನೆಗಳನ್ನೇ ನಿರ್ಮಿಸಬಹುದು. ಈ ತಂತ್ರಜ್ಞಾನದ ಮೂಲಕ 72 ಗಂಟೆಗಳಲ್ಲಿ ಮೂಲ ಸೌಕರ್ಯಗಳನ್ನೊಳಗೊಂಡ ಮನೆ ನಿರ್ಮಾಣ ಆಗಲಿದೆ. ಹಾಗೂ 48 ಗಂಟೆಗಳಲ್ಲಿ ಮನೆಯ ಮೇಲ್ಛಾವಣಿ ಮೇಲೆ ಪ್ರತ್ಯೇಕ ಮನೆ ನಿರ್ಮಿಸಬಹುದು. ಸಾಮಾನ್ಯ ಮನೆಗೆ ನಿರ್ಮಾಣಕ್ಕೆ ಸದ್ಯ ಮಾರುಕಟ್ಟೆ ದರ ಪ್ರತಿ ಚದರ ಅಡಿಗೆ ₹1,500ರಿಂದ ₹2,000ರಷ್ಟಿದೆ. ಈ ಮನೆಗೂ ಅಷ್ಟೇ ವೆಚ್ಚ ಬೀಳಬಹುದು. ಗ್ರಾಹಕರ ವಿನ್ಯಾಸ ಮತ್ತು ಅಭಿರುಚಿಗೆ ತಕ್ಕಂತೆ ದರ ನಿರ್ಧರಿಸಲಾಗುವುದು‘ ಎಂದರು.

ಲೈಟ್‌ ಸ್ಟೀಲ್ ತಂತ್ರಜ್ಞಾನ ಹೇಗೆ?
ಲೈಟ್‌ ಸ್ಟೀಲ್‌ ತಂತ್ರಜ್ಞಾನದ ಮೂಲಕ ಮನೆ ನಿರ್ಮಿಸಲು ಎಲ್ಲ ಅಗತ್ಯ ವಸ್ತುಗಳು ಸಿದ್ಧವಸ್ತುಗಳೇ ಆಗಿರುತ್ತವೆ. ನಿಮ್ಮಿಷ್ಟದಂತೆ ಮನೆ ವಿನ್ಯಾಸ ಮಾಡಿಕೊಳ್ಳಬಹುದು. ಈ ಮನೆಗೆ ಬಳಸುವ ಗೋಡೆ, ಕಮಾನು, ಮೆಟ್ಟಿಲುಗಳು, ಕಿಟಕಿ ಬಾಗಿಲುಗಳು ಸಂಪೂರ್ಣ ‘ರೆಡಿಮೇಡ್‌’ ವಸ್ತುಗಳು (ಸಿದ್ಧ ವಸ್ತುಗಳು).

ಮನೆಗೆ ಬೇಕಾದ ಎಲ್ಲ ವಸ್ತುಗಳು ಸಿದ್ಧವಾಗಿರುತ್ತವೆ. ಅದನ್ನು ತ್ವರಿತವಾಗಿ ಜೋಡಿಸಿ ಅಂದವಾದ ಮನೆ ನಿರ್ಮಾಣವಾಗಲಿದೆ. ಸಾಮಾನ್ಯ ಮನೆಗಳಿಗಿಂತ ಕಡಿಮೆ ವೆಚ್ಚದಲ್ಲಿ ಲೈಟ್‌ ಸ್ಟೀಲ್ ಮನೆಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ: 9845112889, 8217332109

*
ಪ್ರವಾಹ ಪೀಡಿತ ಸ್ಥಳಗಳಲ್ಲಿ ಸಂತ್ರಸ್ತರಿಗೆ ಈ ತಂತ್ರಜ್ಞಾನದ ಮೂಲಕ ಮನೆಗಳನ್ನು ಶೀಘ್ರವಾಗಿ ಕಟ್ಟಬಹುದು. ಕಡಿಮೆ ಸಮಯದಲ್ಲಿ ಮನೆ ನಿರ್ಮಾಣ ಆಗಬೇಕು ಎನ್ನುವವರಿಗೆ ಲೈಟ್‌ ಸ್ಟೀಲ್‌ ಮನೆಗಳನ್ನು ಹೊಂದಬಹುದು.
-ಎಂ.ಸತೀಶ್‌ ಕುಮಾರ್‌, ರಾಷ್ಟ್ರೀಯ ರಿಯಲ್ ಎಸ್ಟೇಟ್‌ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯ ಕರ್ನಾಟಕ ವಲಯದ ಅಧ್ಯಕ್ಷ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು