ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿನ ಸಂಚಾರ ದಟ್ಟಣೆಯ ಬಿಸಿ ಯಾರಿಗೆ ತಾನೆ ತಟ್ಟಿಲ್ಲ ಹೇಳಿ? ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಮೆಟ್ರೊ ರೈಲು ಮತ್ತು ಬಸ್‌ಗಳು ಸರಾಗವಾಗಿ ಸಾಗಲು ಇಲ್ಲಿ ಪ್ರತ್ಯೇಕ ಮಾರ್ಗಗಳೇ ನಿರ್ಮಾಣವಾಗಲಿವೆ. ವಿಶೇಷವಾಗಿ,‘ನಮ್ಮ ಮೆಟ್ರೊ’ ಎರಡನೇ ಹಂತದ ಆರ್.ವಿ. ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ ಹಸಿರು ಮತ್ತು ಹಳದಿ ಮಾರ್ಗಗಳು ಒಂದರ ಮೇಲೊಂದು ಸಾಗಲಿವೆ.
ರಾಘವೇಂದ್ರಸ್ವಾಮಿ ಮಠದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಮೇಲ್ಸೇತುವೆ ನಿರ್ಮಾಣವಾಗಲಿದೆ. ಮೇಲ್ಸೇತುವೆಯ ಮೇಲಿನ ಸಾಲಿನಲ್ಲಿ ಮೆಟ್ರೊ ರೈಲು, ಅದರ ಕೆಳಗೆ ಬಸ್ ಸಂಚರಿಸಲಿವೆ.ದಕ್ಷಿಣ ಭಾರತದಲ್ಲಿ ಈ ಮಾದರಿಯ ವಿನ್ಯಾಸ ಮೊದಲು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.
‘ಮೆಟ್ರೊ ಮೊದಲ ಹಂತದ ಮಾರ್ಗದ ಮೇಲೆಯೇ, ಎರಡನೇ ಹಂತದ ಮಾರ್ಗವನ್ನು ಇದೇ ಮೊದಲ ಬಾರಿಗೆ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಮೆಟ್ರೊದ ಬೇರೆ ಯಾವುದೇ ಮಾರ್ಗದಲ್ಲಿ ಹೀಗೆ ಒಂದರ ಮೇಲೊಂದು ಮಾರ್ಗ ಹೋಗುವುದಿಲ್ಲ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದರು.
ಮೇಲ್ಸೇತುವೆ ನಿರ್ಮಾಣ:ಜಯನಗರದ 5ನೇ ಹಂತದ ರಾಘವೇಂದ್ರ ಸ್ವಾಮಿ ಮಠದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಐದು ಕಿ.ಮೀ.ವರೆಗೆ ರಸ್ತೆ ಮತ್ತು ಮೆಟ್ರೊ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಈ ಮಾರ್ಗದ ಎಲ್ಲ ಮೆಟ್ರೊ ನಿಲ್ದಾಣಗಳೂ ಎತ್ತರಿಸಿದ ಮಾರ್ಗದಲ್ಲಿ ನಿರ್ಮಾಣಗೊಳ್ಳಲಿವೆ.
ರಾಘವೇಂದ್ರಸ್ವಾಮಿ ಮಠದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಎತ್ತರಿಸಿದ ರಸ್ತೆಮಾರ್ಗ ನಿರ್ಮಾಣವಾಗಲಿದೆ. ಅಂದರೆ, ಬಸ್‌ಗಳು ಇಲ್ಲಿ ಸಂಚರಿಸಲಿದ್ದು, ಈ ಮಾರ್ಗದಲ್ಲಿ ಯಾವುದೇ ನಿಲುಗಡೆ ಇರುವುದಿಲ್ಲ. ಸೋಮವಾರದಿಂದ ಈ ಕಾಮಗಾರಿ ಪ್ರಾರಂಭವಾಗಿದೆ.
ರಾಘವೇಂದ್ರ ಸ್ವಾಮಿ ಮಠದ ಬಳಿಯರಾಗಿಗುಡ್ಡ ಮೆಟ್ರೊ ನಿಲ್ದಾಣ ನಿರ್ಮಾಣವಾಗಲಿದ್ದು, ಇಲ್ಲಿ ಎತ್ತರಿಸಿದ ರಸ್ತೆ ಮಾರ್ಗವನ್ನು ಸಂಪರ್ಕಿಸುವ ರ‍್ಯಾಂಪ್ ಕೂಡ ತಲೆ ಎತ್ತಲಿದೆ.
ರಾಗಿಗುಡ್ಡ ದೇವಸ್ಥಾನದಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ನಿರ್ಮಾಣವಾಗುವ ಈ ಮೇಲ್ಸೇತುವೆಯ ಕೇಂದ್ರಭಾಗದಲ್ಲಿ, ಅಂದರೆ ಜಯದೇವ ಆಸ್ಪತ್ರೆಯಲ್ಲಿ ಇಂಟರ್‌ಚೇಂಜ್ ನಿಲ್ದಾಣ ತಲೆಎತ್ತಿದೆ. ಈ ನಿಲ್ದಾಣದಲ್ಲಿ ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಕಾರಿಡಾರ್ ಹಾಗೂ ಗೊಟ್ಟಿಗೆರೆ ನಾಗವಾರ ಕಾರಿಡಾರ್‌ಗಳು ಸಂಧಿಸುತ್ತವೆ.
ಮೇಲ್ಸೇತುವೆ ನಿರ್ಮಾಣವಾಗಿ, ಮೆಟ್ರೊ ಸಂಚಾರ ಆರಂಭವಾದರೆ, ನಾಲ್ಕರಿಂದ ಏಳು ನಿಮಿಷಗಳಲ್ಲೇ ಸಿಲ್ಕ್ ಬೋರ್ಡ್ ಜಂಕ್ಷನ್ (5 ಕಿ.ಮೀ. ದೂರ) ಸಂಪರ್ಕಿಸಬಹುದು. ರೂಪೇನ ಅಗ್ರಹಾರದಿಂದ ಈ ಮೇಲ್ಸೇತುವೆ ಬಳಸಿ ಸಂಚರಿಸಿದರೆ ಎಲೆಕ್ಟ್ರಾನಿಕ್ ಸಿಟಿಯನ್ನು 10 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ತಲುಪಬಹುದು. ಅಂದರೆ, ಒಟ್ಟು 25 ಕಿ.ಮೀ. ದೂರವನ್ನು 20 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ತಲುಪಬಹುದಾಗಿದ್ದು, ಈ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಇದರಿಂದ ಪರಿಹಾರ ದೊರೆಯಲಿದೆ.
‘2 ವರ್ಷಗಳಲ್ಲಿ ಪೂರ್ಣ’
ಹಸಿರು ಮಾರ್ಗದ ಮೇಲೆ ಸಾಗುವ ಈ ಹಳದಿ ಮಾರ್ಗದ ಕಾಮಗಾರಿಯು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಜಯ್ ಸೇಠ್ ತಿಳಿಸಿದರು.
‘ಸಿಲ್ಕ್‌ಬೋರ್ಡ್ ಜಂಕ್ಷನ್ ಸಮೀಪ ಎತ್ತರಿಸಿದ ರಸ್ತೆ ಮಾರ್ಗ ನಿರ್ಮಾಣಕ್ಕೆ ಸಾಕಷ್ಟು ಸಮಯ ಬೇಕಾಗಿದೆ. ಈ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂದು ಈಗಲೇ ನಿಖರವಾಗಿ ಹೇಳುವುದು ಕಷ್ಟ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.