ಬುಧವಾರ, ಅಕ್ಟೋಬರ್ 23, 2019
21 °C
ಸೌತ್ ಏಷಿಯನ್‌ ಸಿಂಫೋನಿ ಫೌಂಡೇಷನ್‌ ‘ಚಿರಾಗ್‌’ ಸ್ವರಮೇಳ ಉತ್ಸವ

ಅ.5 ರಿಂದ ಬೆಂಗಳೂರಿನಲ್ಲಿ ‘ಚಿರಾಗ್’ ಸಂಗೀತಮೇಳ

Published:
Updated:

ಸಂಗೀತವೆಂಬುದು ಜಗದ ಎಲ್ಲ ಕ್ರೌರ್ಯಗಳಿಂದ ನಮ್ಮನ್ನು ಮುಚ್ಚಿಡುವ, ಬಚ್ಚಿಡುವ, ಮತ್ತಷ್ಟು ಮುದಗೊಳಿಸುವ, ಮುಗ್ಧಗೊಳಿಸುವ ಅಮ್ಮನ ಸೆರಗಿದ್ದಂತೆ. ಸಂಗೀತಕ್ಕೆ ಸಂತೈಸುವ ಶಕ್ತಿ ಇದೆ; ನಮ್ಮನ್ನು ಇನ್ನಷ್ಟು ಮಾನವೀಯಗೊಳಿಸುವ ಮಾಂತ್ರಿಕತೆಯೂ ಇದೆ. ದೇಶ, ಭಾಷೆ, ಜಾತಿ, ಜನಾಂಗಗಳ ತರತಮದ ವಿಷಜಾಲಗಳಲ್ಲಿ ನಲುಗುತ್ತಿರುವ ಮಾನವೀಯತೆಯ ಎಳೆಗಳು ನಾದ ನಿನಾದದ ನಾರಿನಲ್ಲಿ ಒಂದಾಗಿ ಬಿಗಿದುಕೊಳ್ಳುವ ಪರಿಯೇ ಒಂದು ಸೋಜಿಗ.

ಹಲವು ತಲ್ಲಣಗಳಿಂದ ತೊಳಲುತ್ತಿರುವ ಈ ಜಗತ್ತಿಗೆ ಬೇಕಿರುವುದು ಸ್ವರ ಸಾಂತ್ವನ. ‘ಸೌತ್‌ ಏಷಿಯನ್‌ ಸಿಂಫೋನಿ ಫೌಂಡೇಷನ್‌’ ಇದೇ ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ‘ಚಿರಾಗ್’ ಸಂಗೀತಮೇಳ ಕೂಡ ಇಂಥದ್ದೊಂದು ಪ್ರಯತ್ನ.

ಸಂಗೀತವೇ ಸಾರ್ವಕಾಲಿಕ ಭಾಷೆಯಿಲ್ಲಿ. ಎಲ್ಲ ಬಗೆಯ ಗಡಿಗಳ ದಾಟಿದ ಸ್ವರಗಳೇ ಇಲ್ಲಿ ಮಾತನಾಡುತ್ತವೆ. ದೇಶ– ದೇಶಗಳ ನಡುವಿನ ವೈಮನಸ್ಸು ಸಪ್ತಸ್ವರದ ರಿಂಗಣಕ್ಕೆ ತಲೆಬಾಗುತ್ತದೆ. ಫೌಂಡೇಷನ್‌ನಿಂದ ಆಯೋಜನೆಗೊಳ್ಳುವ ವಿನೂತನ ಸ್ವರಮೇಳವೇ ‘ಚಿರಾಗ್- ದಿ ಸೌತ್‌ ಏಷಿಯನ್‌ ಸಿಂಫೋನಿ ಆರ್ಕೆಸ್ಟ್ರಾ’.

ಏನಿದು ಚಿರಾಗ್‌?

ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಅಫ್ಗಾನಿಸ್ತಾನ, ಬಾಂಗ್ಲಾದೇಶ, ಭೂತಾನ್‌, ಭಾರತ, ಮಾಲ್ಡೀವ್ಸ್‌, ನೇಪಾಳ, ಪಾಕಿಸ್ತಾನ, ಶ್ರೀಲಂಕಾದ ಸಾಂಸ್ಕೃತಿಕ ಸಮಗ್ರತೆಯನ್ನು ಪರಿಚಯಿಸುವ ಮೂಲಕ ಶಾಂತಿಯನ್ನು ಪಸರಿಸಲು‘ಚಿರಾಗ್‌’ ಸ್ವರಮೇಳವನ್ನು ಆಯೋಜಿಸುತ್ತಿದೆ. ನಿವೃತ್ತ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್‌ ಮತ್ತು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಈ ಫೌಂಡೇಷನ್‌ನ ಸ್ಥಾಪಕ ಟ್ರಸ್ಟಿಗಳು. 

ಈ ಬಗ್ಗೆ ನಿರುಪಮಾ ರಾವ್‌ ಹೇಳುವುದು ಹೀಗೆ, ‘ಸೌತ್ ಏಷ್ಯಾ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಗಟ್ಟಿಗೊಳಿಸಬೇಕಿದೆ. ಈ ದೇಶಗಳ ನಡುವೆ ವಾತಾವರಣ, ನೈಸರ್ಗಿಕ ಸಂಪತ್ತು, ಪ್ರಾಕೃತಿಕ ರಚನೆ, ಭೌಗೋಳಿಕ ಪ್ರದೇಶಗಳು, ಮಾತಾನಾಡುವ ಭಾಷೆ, ಅನುಸರಿಸುವ ಧರ್ಮ ಹೀಗೆ ಹಲವು ವಿಚಾರಗಳಲ್ಲಿ ಸಾಮ್ಯತೆ ಇದೆ. ಇವೆಲ್ಲವನ್ನೂ ನೆನಪಿಸಿಕೊಳ್ಳಲು ಸಕಾಲವಿದು’ ಎಂದು ಈ ಸ್ವರಮೇಳದ ಹಿಂದಿನ ಉದ್ದೇಶವನ್ನು ಅರುಹುತ್ತಾರೆ.

‘ಸ್ವರಮೇಳವು ಭಿನ್ನ ದೇಶಗಳ ಸಂಗೀತ ಕಲಾವಿದರನ್ನು ಹತ್ತಿರ ತರುತ್ತದೆ. ಒಟ್ಟಾಗಿ ಕುಳಿತು ಊಟ ಮಾಡುತ್ತ, ಸ್ವರ ಮಟ್ಟುಗಳ ಕುರಿತ ಜಿಜ್ಞಾಸೆ ಮಾಡುತ್ತ, ಪಟ್ಟಾಂಗ ಹೊಡೆಯುತ್ತ ಸ್ನೇಹಿತರಾಗುತ್ತಾರೆ. ಇಲ್ಲಿ ಅವರು ಹಂಚಿಕೊಳ್ಳುವುದು ಊಟವನ್ನಷ್ಟೇ ಅಲ್ಲ, ಬದುಕಿನತ್ತ ಹೊರಳು ನೋಟವನ್ನೂ. ಮುಂದೆ ಅವರು ಹುಟ್ಟುಹಾಕುವ ಟ್ಯೂನ್‌ಗಳಲ್ಲಿ ಅದು ವ್ಯಕ್ತವಾಗುತ್ತದೆ’ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.

‘ಸೌತ್ ಏಷ್ಯಾ ರಾಷ್ಟ್ರಗಳು ಸಂಗೀತದ ನೆಲೆಯಲ್ಲಿ ಒಗ್ಗೂಡಿದರೆ ಸಾಂಸ್ಕೃತಿಕ ಬಹುತ್ವವನ್ನು ಗೌರವಿಸಿದರೆ ಇಡೀ ವಿಶ್ವಕ್ಕೆ ಇದಕ್ಕಿಂತ ದೊಡ್ಡ ಸಂದೇಶ ಬೇರೇನಿದೆ? ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಹೆಚ್ಚಿಸುವ ಸೌಹಾರ್ದತೆಗೆ ಆಯಸ್ಸು ಜಾಸ್ತಿ. ಅಷ್ಟೇ ಅಲ್ಲದೇ ನಮ್ಮ ನಡುವೆ ಇರುವ ಗೋಡೆಗಳನ್ನು ಒಡೆಯಲು ಸಂಗೀತಕ್ಕಿಂತ ದೊಡ್ಡ ಸಾಧನವಿಲ್ಲ’ ಎನ್ನುವ ನಂಬಿಕೆ ಅವರದ್ದು. 

 ಈ ಬಾರಿಯ ಚಿರಾಗ್ ಹೇಗಿರುತ್ತೆ? 

‘ಚಿರಾಗ್‌ ಅಂಬೆಗಾಲಿಡುತ್ತಿರುವ ಶಿಶು. 2019ರ ಏಪ್ರಿಲ್‌ನಲ್ಲಿ ಮುಂಬೈನಲ್ಲಿ ಒಂದು ಕಾರ್ಯಕ್ರಮ ನೀಡಲಾಗಿದೆ. ಈ ಸಲ ತಮಿಳು ಮೂಲದ ಶ್ರೀಲಂಕಾದ ಸಂಗೀತಗಾರ ಅಲ್ವಿನ್‌ ಅರ್ಮುಗಂ ಭಾಗವಹಿಸುತ್ತಿದ್ದಾರೆ. ಜತೆಗೆ ಭಾರತ, ಅಫ್ಗಾನಿಸ್ತಾನ, ನೇಪಾಳ, ಶ್ರೀಲಂಕಾ, ಭಾರತ ಮತ್ತು ದಕ್ಷಿಣ ಏಷ್ಯಾ ಮೂಲದ ಅಮೆರಿಕ ಮತ್ತು ಸಿಂಗಪುರದ ಸಂಗೀತಗಾರರು ಭಾಗವಹಿಸುತ್ತಿರುವುದು ಖುಷಿಯ ಸಂಗತಿ’ ಎಂದು ನಿರುಪಮಾ ಹೇಳಿಕೊಂಡರು. 

ಈ ಬಾರಿಯ ಚಿರಾಗ್‌ನಲ್ಲಿ ಸುಮಾರು 65 ಸಂಗೀತಗಾರರು ಭಾಗವಹಿಸುತ್ತಿದ್ದಾರೆ. ಆದರೆ, ಸದ್ಯಕ್ಕೆ ಪಾಕಿಸ್ತಾನ ಮತ್ತು ಮಾಲ್ಡೀವ್ಸ್‌ನ ಸಂಗೀತಗಾರರು ಭಾಗವಹಿಸುತ್ತಿಲ್ಲ.

ಗಾಂಧಿಯಿಂದ ಬಿಥೋವನ್‌ 

‘ಗಾಂಧಿಯಿಂದ ಬಿಥೋವನ್‌ ವರೆಗೆ –ಸ್ವಾತಂತ್ರ್ಯಕ್ಕಾಗಿ ಕರೆ’ ಎನ್ನುವ ಕಲ್ಪನೆ ಇಟ್ಟುಕೊಂಡು ಸ್ವರಮೇಳ ಪ್ರಸ್ತುತಿಗೊಳ್ಳಲಿದೆ. ಮಹಾತ್ಮ ಗಾಂಧಿಯ 150ನೇ ಜನ್ಮದಿನಾಚರಣೆಯ ನೆನಪಿನಾರ್ಥ ಸ್ವರ ಆರಾಧನೆ ನಡೆಯಲಿದೆ. ಭಾರತೀಯ ಮೂಲದ ಯುವ ಸಂಗೀತ ನಿರ್ದೇಶಕ ಆನಂದ ನಜರತ್‌ ಅವರು ಗಾಂಧಿಯನ್ನು ಸಂಗೀತದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಿದ್ದಾರೆ. 19ನೇ ಶತಮಾನದ ಕ್ರಾಂತಿಕಾರಿ ಸಂಗೀತ ನಿರ್ದೇಶಕ ಲುಡ್ವಿಗ್‌ ವ್ಯಾನ್‌ ಬಿಥೋವನ್‌ ಅವರ ಸಂಗೀತದ ಆತ್ಯಂತಿಕ ಗುರಿ ಸ್ವಾತಂತ್ರ್ಯವೇ ಆಗಿತ್ತು. ಸ್ವಾತಂತ್ರ್ಯದ ದ್ಯೋತಕವಾಗಿ ಈ ಎರಡು ಮಹಾನ್‌ ಚೇತನಗಳನ್ನು ನೆನಪಿನಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. 

ದಕ್ಷಿಣ ಏಷ್ಯಾ ಹಾಗೂ ಪಾಶ್ಚಿಮಾತ್ಯ ಸಂಗೀತಗಳೆರಡೂ ಮಿಳಿತಗೊಂಡ ಕಾರ್ಯಕ್ರಮವಿದು. ವಿಶಿಷ್ಟ, ಚೈತನ್ಯ ಉಕ್ಕಿಸುವ ಸಂಗೀತದ ಹೊಸ ಸಂಯೋಜನೆಗಳು ಪ್ರಸ್ತುತಗೊಳ್ಳಲಿವೆ. ಸಂಗೀತ ಮಾಂತ್ರಿಕ ಅಲ್ವಿನ್‌ ಅರ್ಮುಗಂ ಈ ಸ್ವರಮೇಳದ ನೇತೃತ್ವ ವಹಿಸಲಿದ್ದಾರೆ. 

ಈ ಸ್ವರಮೇಳದಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ಸಂಗೀತಗಾರರು ಭಾಗವಹಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಕೇರಳದ ಪಿಯಾನೊ ವಾದಕ ಜೂಲಿಯನ್‌ ಕ್ಲೆಪ್‌, ಕ್ಯಾಲಿಫೋರ್ನಿಯಾದ ವಯಲಿನ್‌ ವಾದಕಿ ಪ್ರಿಯಾಂಕಾ ವೆಂಕಟೇಶ, ಇಂಗ್ಲೆಂಡ್‌ನ ರಾಯಲ್‌ ಒಪೆರಾ ಹೌಸ್‌ನಲ್ಲಿ ಕಾರ್ಯಕ್ರಮ ನೀಡಿರುವ ಪಿಟೀಲು ವಾದಕಿ ಗೀತಾ ನಜರತ್‌, ಯುವ ಕೊಳಲು ವಾದಕಿ ಮೀರಾ ಗುಡಿಪಾಟಿಯೂ ಚಿರಾಗ್‌ನಲ್ಲಿ ಭಾಗವಹಿಸುತ್ತಿರುವುದು ವಿಶೇಷ.

’ಮುಂದೆಯೂ ಇದೇ ಮಾದರಿಯ ಸ್ವರಮೇಳಗಳನ್ನು ಆಯೋಜಿಸುವ ಇರಾದೆಯಿದೆ. ನಮ್ಮ ತಂಡದಲ್ಲಿರುವ ಸಂಗೀತಗಾರರಿಗೆ ಹೆಚ್ಚಿನ ತರಬೇತಿ ನೀಡಲಾಗುವುದು. ಜನವರಿಯಲ್ಲಿ ಅಮೃತಸರದಲ್ಲಿರುವ ಪಾರ್ಟಿಷಿಯನ್‌ ಮ್ಯೂಸಿಯಂನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಿದ್ದೇವೆ’ ಎನ್ನುತ್ತಾರೆ ನಿರುಪಮಾ ರಾವ್‌.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)