ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಗನ್ನಡ ವ್ಯಾಮೋಹ!

Last Updated 29 ಜನವರಿ 2020, 20:00 IST
ಅಕ್ಷರ ಗಾತ್ರ

ಆನುಂ ದುಶ್ಯಾಸನನುಂ
ನೀನುಂ ಮೂವರೆ ದಲಾತನುಂ ಕೞಿದ ಬೞಿ
ಕ್ಕಾನುಂ ನೀನೆ ದಲೀಗಳ್
ನೀನುಮಗಲ್ದೆತ್ತವೋದೆಯಂಗಾಧಿಪತಿ

ತಾತ್ಪರ್ಯ: ಅಂಗಾಧಿರಾಜ! ನಾನೂ ದುಶ್ಯಾಸನನೂ ನೀನೂ ತ್ರಿಮೂರ್ತಿಗಳಂತಿದ್ದವರಲ್ಲವೇ? ದುಶ್ಯಾಸನನ ಸಾವಿನ ಬಳಿಕ ನಾವಿಬ್ಬರಲ್ಲವೇ ಉಳಿದವರು? ಈಗಲಾದರೋ ನೀನೂ ನನ್ನನ್ನು ಅಗಲಿ ಎಲ್ಲಿಗೆ ಹೊರಟು ಹೋದೆ?

ರನ್ನನ ಗದಾಯುದ್ಧದಲ್ಲಿ ಕರ್ಣನ ಶವದ ಮುಂದೆ ದುರ್ಯೋಧನ ಅಳುವ ಪ್ರಸಂಗ ಈ ಬಾಲೆಯ ನಾಲಿಗೆ ಮೇಲೆ ನಲಿದಾಡುತ್ತದೆ. ಬಾಳೆ ಹಣ್ಣು ಸುಲಿದು ತಿಂದಷ್ಟೇ ನಿರ್ಗಳವಾಗಿ ಉಚ್ಚಾರ ಮಾಡುವ ಕಲೆಗಾರಿಕೆ ಈಕೆಗೆ ಸಿದ್ಧಿಸಿದೆ.

ಹೌದು; ಹನ್ನೊಂದು ವರ್ಷದ ಪೋರಿ ಸಮೃದ್ಧಿ ಯಾದವ್‌, ರನ್ನ ಹಾಗೂ ಶ್ರೀವಿಜಯ ರಚನೆಯ ಕೆಲ ಪದ್ಯಗಳ ಪ್ರಸಂಗಗಳನ್ನು ಓದಿ ಅರ್ಥೈಯಿಸಿಕೊಂಡಿದ್ದಾಳೆ. ಕನ್ನಡ ಕಲಿಯಲು ತಿಣುಕಾಡುವ ಸಮಯದಲ್ಲಿ ಈ ಬಾಲೆ ಹಳಗನ್ನಡ ಕಲಿಯುತ್ತಿರುವುದಾದರೂ ಹೇಗೆ? ಇದಕ್ಕೆ ಉತ್ತರ ತನ್ನ ಅಮ್ಮ ಭಾರತಿ ಎಂದು ಥಟ್ಟನೇ ಹೇಳುತ್ತಾಳೆ.

ಆಂಗ್ಲ ಮಾಧ್ಯಮದ ಮಕ್ಕಳು ಕನ್ನಡ ಕಲಿಯುತ್ತಿಲ್ಲ. ಸ್ಥಳೀಯ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ ಎಂಬ ಗಂಭೀರ ಆರೋಪದ ನಡುವೆ ಸಮೃದ್ಧಿ ಕನ್ನಡದ ಗಂಧ ತೇಯುತ್ತಿದ್ದಾಳೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಓದುವ ಈ ಪೋರಿಗೆ ಹಳಗನ್ನಡ ಕಲಿಕೆ ಫ್ಯಾಷನ್‌ ಆಗಿದೆ.

ಮೊಬೈಲ್‌, ವಿಡಿಯೊಗೇಮ್‌ಗಳಲ್ಲಿ ಮುಳುಗಿ ಹೋಗಿರುವ ಈಗಿನ ಮಕ್ಕಳಿಗೆ ಹೋಲಿಸಿದರೆ ನಡೆ ಮತ್ತು ಅಭಿರುಚಿಯಲ್ಲಿ ಸಮೃದ್ಧಿ ವಿಭಿನ್ನ. ವಯಸ್ಸಿಗೆ ತಕ್ಕಂತೆ ಆಟ, ಪಾಠದಲ್ಲೂ ಮುಂದು. ಹಳೆಗನ್ನಡವನ್ನು ಕ್ರಮಬದ್ಧವಾಗಿ ಕಲಿಯುವ ಹವ್ಯಾಸವನ್ನೂ ರೂಢಿಸಿಕೊಂಡಿದ್ದಾಳೆ. ಅಚ್ಚ ಕನ್ನಡದಲ್ಲಿ ಮಾತನಾಡುವ ನಿರೂಪಕಿ ಆಗುವ ಕನಸಿದೆ. ಇದಕ್ಕೆ ನಿರೂಪಕಿ ಅರ್ಪಣಾ ಪ್ರೇರಣೆ ಎಂದು ವಿಶ್ವಾಸದ ನಗೆ ಬೀರಿದಳು.

‘ಅಮ್ಮ ಭಾರತಿ ಹೈಕೋರ್ಟ್‌ನಲ್ಲಿ ಉದ್ಯೋಗಿ. ಬಿಡುವಿನ ಸಮಯದಲ್ಲಿ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುತ್ತಾರೆ. ರನ್ನನ ಗದಾಯುದ್ಧ ಓದುವಾಗ ಕೆಲ ಪ್ರಸಂಗಗಳನ್ನು ರೆಕಾರ್ಡ್ ಮಾಡಿಕೊಂಡು ಬಾಯಿ ಪಾಠ ಮಾಡಿದೆ. ನಿಧಾನವಾಗಿ ಓದುವ ಅಭ್ಯಾಸ ಬೆಳೆಸಿಕೊಂಡೆ. ಈಗ ಹಳಗನ್ನಡ ಪದ್ಯಗಳನ್ನು ಯಾವ ಎಡರು ತೊಡರು ಇಲ್ಲದೆ ನಿರರ್ಗಳವಾಗಿ ಓದುತ್ತೇನೆ. ಇದೊಂದು ಹವ್ಯಾಸವಾಗಿ ಬೆಳೆದಿದೆ’ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾಳೆ.

ಜೀ ವಾಹಿನಿಯ ‘ಕನ್ನಡ ಕಣ್ಮಣಿ’ ರಿಯಾಲಿಟಿ ಷೋನಲ್ಲಿ ಭಾಗವಹಿಸಿದ್ದ ಸಮೃದ್ಧಿ, ಹಳಗನ್ನಡದ ಕೆಲ ಪದ್ಯಗಳನ್ನು ಓದಿ ಎಲ್ಲರ ಗಮನ ಸೆಳೆದ ಪ್ರತಿಭೆ. ಅನ್ಯ ಭಾಷಿಕರ ಪ್ರಭಾವಕ್ಕೆ ಒಳಗಾಗಿರುವ ಬೆಂಗಳೂರಿಗರ ಸ್ಥಿತಿ ಬಗ್ಗೆಯೂ ಮುದ್ದಾಗಿ ಮಾತನಾಡುತ್ತಾಳೆ.

ಲಿಮ್ಕಾ ಬುಕ್ ಆಫ್ ರೆಕಾರ್ಡ್‌: ಫೋಸ್ಟ್‌ ಕಾರ್ಡ್‌ ಮೇಲೆ 852ಸಲ ‘ಕನ್ನಡ ಕಣ್ಮಣಿ’ ಎಂದು ಬರೆದು ನವೆಂಬರ್ 30, 2019ರಂದು ಲಿಮ್ಕಾ ಬುಕ್ ಆಫ್‌ ರೆಕಾರ್ಡ್‌ನಲ್ಲಿ ದಾಖಲಾಗಿದ್ದಾಳೆ. ವಿಶ್ವ ವಿದ್ಯಾನಿಕೇತನ ಮಾಡ್ರನ್‌ ಇಂಗ್ಲಿಷ್‌ ಶಾಲೆಯಲ್ಲಿ 6ನೇ ತರಗತಿ ಕಲಿಯುತ್ತಿರುವ ಸಮೃದ್ಧಿ ಸಾಧನೆಗೆ ಶಾಲಾ ಸಹ‍ಪಾಠಿಗಳು, ಶಿಕ್ಷಕರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ವಿಭಕ್ತ ಕುಟುಂಬಗಳ ಪಾಡು, ಮೂಢನಂಬಿಕೆ, ಕಾಲ್ ಸೆಂಟರ್‌ ಉದ್ಯೋಗಿಗಳ ಬವಣೆ ಬಗ್ಗೆ ಭಾಷಣ ಮಾಡುವ ಕೌಶಲವೂ ಇದೆ. ‘ಬಿಡುವು ಇದ್ದಾಗಷ್ಟೇ ಕಲಿಯುತ್ತಾಳೆ. ಯಾವುದೇ ಒತ್ತಡ ಇಲ್ಲ’ ಎನ್ನುತ್ತಾರೆ ತಾಯಿ ಭಾರತಿ ಮತ್ತು ತಂದೆ ಅನಿಲ್‌ ಕುಮಾರ್ ಯಾದವ್.

ಹಾಲಿನಷ್ಟು ಪರಿಶುದ್ಧವಾದ ಭಾಷೆ ಕನ್ನಡ. ಸಮಯ ಸಿಕ್ಕಾಗ ಹಳಗನ್ನಡ ಓದುತ್ತೇನೆ. ನಿರೂಪಣೆ, ಡ್ಯಾನ್ಸ್‌, ಹಾಡುಗಾರಿಕೆಯೂ ಇಷ್ಟ ಎನ್ನುತ್ತಾಳೆ ಸಮೃದ್ಧಿ. ನ್ಯಾಯಾಧೀಶೆ ಆಗುವ ಕನಸು ಅವಳದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT