ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ನಡೆಯಲು ಯೋಗ್ಯವಲ್ಲದ ಪಾದಚಾರಿ ರಸ್ತೆಗಳು !

ನಮ್ಮ ರಸ್ತೆಗಳು ಎಷ್ಟು ಸುರಕ್ಷಿತ?
Last Updated 26 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ವಾಹನಗಳ ಭರಾಟೆಯಿಂದ ತುಂಬಿ ಹೋದ ರಸ್ತೆ ಮತ್ತು ಅವೈಜ್ಞಾನಿಕ ಪಾದಚಾರಿ ಮಾರ್ಗಗಳು ಎಷ್ಟು ಸುರಕ್ಷಿತ ಎಂಬ ಜಿಜ್ಞಾಸೆ ಹೊಸದಲ್ಲ. ಜಾಗತಿಕ ಅಂಕಿ,ಅಂಶಗಳ ಪ್ರಕಾರ ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ ಶೇ 22ರಷ್ಟು ಜನರು ಪಾದಚಾರಿಗಳಾಗಿರುತ್ತಾರೆ. ಲಕ್ಷಾಂತರ ಪಾದಚಾರಿಗಳು ಗಾಯಗೊಂಡು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ.

ಬೆಂಗಳೂರಲ್ಲಿವೆ 387 ಸಿಗ್ನಲ್‌

ನಗರದಲ್ಲಿರುವ 387ಕ್ಕೂ ಹೆಚ್ಚು ಸಿಗ್ನಲ್‍ಗಳಲ್ಲಿ ಪಾದಚಾರಿಗಳಿಗೆ ರಸ್ತೆದಾಟಲು ಅನುಕೂಲವಾಗುವಂತೆ ಟೈಮರ್‌ ಅಳವಡಿಸಿ ಕನಿಷ್ಟ 15 ರಿಂದ 30 ಸೆಕೆಂಡ್ ಕಾಲಾವಧಿ ನಿಗದಿ ಮಾಡಲಾಗಿದೆ. ಇದರಿಂದ ಜಂಕ್ಷನ್‍ಗಳಲ್ಲಿ ಜನರು ಮತ್ತು ವಾಹನಗಳ ಸಂಘರ್ಷ ಕಡಿಮೆಯಾಗುತ್ತದೆ.ಜನರು ರಸ್ತೆ ದಾಟಲು ಮೀಸಲಾದ ಅವಧಿಯಲ್ಲೂ ಕೆಲವು ವಾಹನ ಸವಾರರು ಕೆಂಪುದೀಪದ ಸಿಗ್ನಲ್‌ ಉಲ್ಲಂಘಿಸಿ ಮುನ್ನುಗ್ಗುವ ಆತಂಕ ಇದ್ದೇ ಇದೆ.
ನಗರದಲ್ಲಿ 600ಕ್ಕೂ ಹೆಚ್ಚು ‘ಪೆಲಿಕಾನ್ ಸಿಗ್ನಲ್ ಲೈಟ್‍’ಗಳಿವೆ. ಜನರು ಜಂಕ್ಷನ್‌ಗಳಲ್ಲಿ ಹಾಕಿರುವ ಹಸಿರು ಗುಂಡಿ ಒತ್ತಿದಾಗ ಸಿಗ್ನಲ್‌ನಲ್ಲಿ ಕೆಂಪುದೀಪ ಕಾಣುತ್ತದೆ. ಚಾಲಕರು ವಾಹನ ನಿಲ್ಲಿಸಿ ಜನರು ರಸ್ತೆ ದಾಟಲು ಅವಕಾಶ ಮಾಡಿ ಕೊಡುತ್ತಾರೆ. ಸಂಚಾರ ದಟ್ಟಣೆ ವಾಣಿಜ್ಯ ಪ್ರದೇಶಗಳಲ್ಲಿರುವ ಶಾಲೆಗಳ ಬಳಿಯ ಸಿಗ್ನಲ್‌ ಜಂಕ್ಷನ್‌ಗಳಲ್ಲಿ ಪೆಲಿಕಾನ್‌ ಸಿಗ್ನಲ್‌ ಲೈಟ್‌ ಅಳವಡಿಸಲಾಗಿದೆ. ಜನರಿಗೆ, ಶಾಲೆಯ ವಿದ್ಯಾರ್ಥಿಗಳು ಮತ್ತು ವಾಹನ ಸವಾರರಿಗೆ ಈ ಬಗ್ಗೆ ಇನ್ನೂ ಸಾಕಷ್ಟು ಜಾಗೃತಿ ಮೂಡಿಸಬೇಕಿದೆ.

ಅಂಗವಿಕಲರಿಗೂ ತೊಂದರೆ!

ಸಾಮಾನ್ಯ ಜನರ ಪಾಡೇ ಹೀಗಾದರೆ ಅಂಗವಿಕಲರ ಪರಿಸ್ಥಿತಿ ಇನ್ನೂ ಗಂಭೀರ.ರಸ್ತೆ ದಾಟಲು ಸಾಮಾನ್ಯರಿಗಿಂತ ಹೆಚ್ಚಿನ ಕಾಲ ತೆಗೆದುಕೊಳ್ಳುತ್ತಾರೆ. ಫುಟ್‌ಪಾತ್‌ಗಳು ಸರಿಯಾಗಿ ಇಲ್ಲದಿದ್ದರೆ ಅಂಗವಿಕಲರಿಗೆ ಹೆಚ್ಚಿನ ತೊಂದರೆಯಾಗುತ್ತದೆ. ರಸ್ತೆ ಬದಿಯ ಎತ್ತರಿಸಿದ ಅಂಚು ಇದ್ದರಂತೂ ಅದನ್ನು ಹತ್ತಲು ಬಹಳ ಪರಿಶ್ರಮ ಪಡಬೇಕು. ಕೆಲವು ಅಂಗವಿಕಲರು ಸರಿಯಾಗಿ ಕಣ್ಣು ಕಾಣದೆ, ಕಿವಿ ಕೇಳದೆ ರಸ್ತೆಯ ಮೇಲೆ ಪರಿತಪಿಸುವ ದೃಶ್ಯಗಳು ಸಾಮಾನ್ಯ.ರಸ್ತೆ ಹಾಗೂ ಫುಟ್‌ಪಾತ್‌ಗಳನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದರೆ ಅಂಗವಿಕಲರು ಅದನ್ನು ಗ್ರಹಿಸಿ ರಸ್ತೆಯ ಮೇಲೆ ಇಳಿಯುವುದನ್ನು ನಿಯಂತ್ರಿಸಿಕೊಳ್ಳುತ್ತಾರೆ. ಅವರು ರಸ್ತೆ ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಜನರ ಜವಾಬ್ದಾರಿ ಏನು?

ರಸ್ತೆ ಬಳಸುವ ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯುತವಾಗಿ ವರ್ತಿಸಬೇಕು. ಹಾಗೆಂದ ಮಾತ್ರಕ್ಕೆ ವಾಹನ ಚಾಲನೆ ಮಾಡುವ ಚಾಲಕ ಮತ್ತು ಸವಾರರ ಜವಾಬ್ದಾರಿ ಏನೂ ಇಲ್ಲವೆಂದು ಅರ್ಥವಲ್ಲ. ರಸ್ತೆಗಳು ಸುರಕ್ಷಿತ ವಲಯಗಳಾಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಜನರ ಸುರಕ್ಷತೆ ಆದ್ಯತೆಯಾಗಬೇಕು.ಜನರು ಕೂಡ ರಸ್ತೆದಾಟಲು ಸೈಡ್‍ವಾಕ್,ಎತ್ತರಿಸಿದ ಮೀಡಿಯನ್,ಸ್ಕೈವಾಕ್‌, ಜೀಬ್ರಾಪಟ್ಟಿ ಬಳಸಬೇಕು. ಸಂಚಾರ ನಿಯಮ ಪಾಲಿಸಬೇಕು.ಚಾಲಕರ ಅನಾಗರಿಕ ವರ್ತನೆಗೆ ಅಂಕುಶ ಹಾಕಬೇಕು. ಪಾನಮತ್ತ ಚಾಲನೆ, ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಗೆ ದಂಡ ವಿಧಿಸಬೇಕು.ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು. ಇದರಿಂದ ರಸ್ತೆಗಳು ಸುರಕ್ಷಿತ ವಲಯಗಳಾಗುತ್ತವೆ.

ಜನರಿಗೂ ಸಿಗಲಿ ಆದ್ಯತೆ

ರಸ್ತೆಗಳನ್ನು ವಾಹನಗಳ ಒಡಾಟ ಪ್ರಧಾನವಾಗಿಟ್ಟುಕೊಂಡು ರೂಪಿಸಲಾಗುತ್ತದೆ. ಜನರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ರಸ್ತೆ ವಿನ್ಯಾಸಗೊಳಿಸಬೇಕು ನಗರ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪಾದಚಾರಿಗಳಿಗೆ ಪ್ರತ್ಯೇಕ ಮಾರ್ಗ ಕಲ್ಪಿಸಬೇಕು. ಅತಿವೇಗವಾಗಿ ಚಲಿಸುವ ರಸ್ತೆಗಳಲ್ಲಿ ಜನರಿಗೂ ಸುರಕ್ಷಿತವಾಗಿ ರಸ್ತೆದಾಟಲು ಸೂಕ್ತ ಪುಟ್ ಓವರ್ ಬ್ರೀಡ್ಜ್, ಸ್ಕೈವಾಕ್, ಪೆಡಸ್ಟ್ರೀಯನ್ ಸಬ್‍ವೇ ನಿರ್ಮಾಣವಾಗಬೇಕು.

ಬದುಕುಳಿಯುವ ಸಾಧ್ಯತೆ ಕಡಿಮೆ

ವಾಹನವು ಗಂಟೆಗೆ 30 ಕಿ.ಮೀ ಅಥವಾ ಅದಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದಾಗ ಪಾದಚಾರಿಗೆ ಡಿಕ್ಕಿ ಹೊಡೆದರೆ ಆತ ಬದುಕುಳಿಯುವ ಸಾಧ್ಯತೆ ಶೇ 90ರಷ್ಟು ಇರುತ್ತದೆ. ಇದೇ ರೀತಿ ಗಂಟೆಗೆ 45 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ಕಾರು ರಸ್ತೆಯಲ್ಲಿರುವ ವ್ಯಕ್ತಿಗೆ ಡಿಕ್ಕಿ ಹೊಡೆದಲ್ಲಿ ಆತ ಬದುಕುಳಿಯುವ ಸಾಧ್ಯತೆ ಶೇ 50ರಷ್ಟು ಮಾತ್ರ.

ಅಪಘಾತಕ್ಕೆ ಕಾರಣಗಳು

* ಪ್ರತ್ಯೇಕ ಫುಟ್‌ಪಾತ್‌ಗಳ ಕೊರತೆ

* ಬೀದಿಬದಿಯ ದೀಪ ಇಲ್ಲದೇ ಇರುವುದು

* ಪಾದಚಾರಿಗಳು ರಾತ್ರಿ ವಾಹನದ ಬೆಳಕಿಗೆ ಪ್ರತಿಫಲಿಸುವ ಬಟ್ಟೆ ಧರಿಸದಿರುವುದು

* ಪರಿಣಾಮಕಾರಿ ಸಂಚಾರ ನಿಯಮ ಜಾರಿ ಕೊರತೆ

* ರಸ್ತೆಯಲ್ಲಿ ಮೊಬೈಲ್ ಬಳಕೆ ಹೆಚ್ಚಳ

* ಚಾಲಕರು ನಿದ್ದೆಗೆಟ್ಟು ವಾಹನ ಚಾಲನೆ

* ಪಾದಚಾರಿಗಳಿಗೆ ಶ್ರವಣದೋಷ

* ವಾಹನದ ಹೆಡ್ ಲೈಟ್‍ಗಳಿಂದ ವೃದ್ದರ ಕಣ್ಣು ಮಂಜಾಗಿ ಅಪಘಾತ

* ವಾಹನ ರಿವರ್ಸ್ ತೆಗೆದುಕೊಳ್ಳುವಾಗ ಮುನ್ನೆಚ್ಚರಿಕೆ ಕೊರತೆ

* ಚಾಲಕರು ರೈಟ್ ಆಫ್ ವೇ ಅನ್ನು ಪಾದಚಾರಿಗಳಿಗೆ ನೀಡದಿರುವುದು, ಫುಟ್‌ಪಾತ್‌ಗಳಿಗೆ ನುಗ್ಗುವುದು

* ವಾಹನಗಳ ಬ್ರೇಕ್, ಲೈಟ್, ವೈಪರ್, ಇತ್ಯಾದಿಗಳು ಸರಿಯಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲ

ಪಾದಚಾರಿ ಸ್ನೇಹಿ ವಾಹನ ವಿನ್ಯಾಸ

ವಾಹನ ತಯಾರಿಕೆ ವೇಳೆ ಪ್ರಯಾಣಿಕರು ಹಾಗೂ ಚಾಲಕರ ಸುರಕ್ಷತೆಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಳ್ಳಲಾಗುತ್ತದೆ.ಅಪಘಾತದ ವೇಳೆ ಪಾದಚಾರಿಗಳ ಸುರಕ್ಷತೆಗಾಗಿ ಯಾವ ವಿನ್ಯಾಸವೂ ಇಲ್ಲ ಎಂಬುದು ಗಮನಿಸಬೇಕಾದ ಸಂಗತಿ.ಹೊಸ ವಾಹನ ತಯಾರಿಸುವಾಗ ಪಾದಚಾರಿಗಳಿಗೆ ಅನುಕೂಲವಾಗುವಂತೆ ಅವುಗಳ ವಿನ್ಯಾಸಗಳನ್ನು ಮಾರ್ಪಾಡು ಮಾಡುವುದು ಮುಖ್ಯ.

ವಿದೇಶಗಳಲ್ಲಿ ‘ಬ್ರೇಕ್‌ ಅಸಿಸ್ಟ್‌’ ಎನ್ನುವ ಎರ್ಮಜೆನ್ಸಿ ಬ್ರೇಕಿಂಗ್ ಸಿಸ್ಟಂ ಅಳವಡಿಸಲಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಇದು ಸ್ವಯಂಚಾಲಿತವಾಗಿ ಕಾರ್ಯೋನ್ಮುಖವಾಗಿ ವಾಹನ ನಿಲ್ಲಿಸಲು ಸಹಕರಿಸುತ್ತದೆ. ಕೆಲವು ವಾಹನಗಳಲ್ಲಿ Autonomus Emergency Breaking (AEB) ಎನ್ನುವ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.AEB ಹೊಂದಿರುವ ಕಾರುಗಳು ಸೆನ್ಸರ್‌ ಹೊಂದಿದ್ದು, ವಾಹನ ಚಲಿಸುತ್ತಿರುವಾಗ ರಸ್ತೆಯ ಮುಂದಿನ ಪಾದಚಾರಿಗಳನ್ನು ಚಾಲಕರಿಗಿಂತ ಮುಂಚೆಯೆ ಗ್ರಹಿಸುತ್ತವೆ. ಈ ಸೆನ್ಸರ್‌ಗಳು ಚಾಲಕನಿಗೆ ತುರ್ತು ಸಂದೇಶ ಕಳಿಸಿ, ತಮ್ಮಷ್ಟಕ್ಕೆ ತಾವೇ ಸ್ವಯಂಚಾಲಿತವಾಗಿ ಬ್ರೇಕ್‍ ಹಾಕಿ, ವಾಹನ ನಿಲ್ಲಿಸುತ್ತವೆಎನ್ನುತ್ತಾರೆಟ್ರಾಫಿಕ್‌ ಇನ್‌ಸ್ಪೆಕ್ಟರ್‌ಡಾ.ಅನಿಲ್‍ಕುಮಾರ್ ಪಿ. ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT