ಗುರುವಾರ , ಅಕ್ಟೋಬರ್ 17, 2019
24 °C

ಅಕ್ಟೋಬರ್ 11ಕ್ಕೆ ಶಂಕರ್‌–ಜೈಕಿಶನ್‌ಗೆ ಗೀತನಮನ

Published:
Updated:

ಆಕಾಶವಾಣಿಯ ಬಿನಾಕಾ ಗೀತ್‌ ಮಾಲಾ, ಭೂಲೇ ಬಿಸ್ರೇ ಗೀತ್‌, ಆಪ್‌ ಕಿ ಫರ್ಮಾಯಿಷ್‌ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಪುರಾನಾ ಹಿಂದಿ ಚಿತ್ರಗೀತೆಗಳು ಎಲ್ಲರಿಗೂ ಅಚ್ಚುಮೆಚ್ಚು.

ಆ ಕಾಲದ ಪ್ರಸಿದ್ಧ ಸಂಗೀತ ನಿರ್ದೇಶಕ ಜೋಡಿಗಳಾದ ಖ್ಯಾತ ಶಂಕರ್‌–ಜೈಕಿಶನ್‌ ನಿರ್ದೇಶನದಲ್ಲಿ ಗಾಯಕಿ ಸುಮನ್‌ ಕಲ್ಯಾಣಪುರ್‌ ಹಾಡಿದ ಎಷ್ಟೋ ಸುಮಧುರ ಹಾಡುಗಳನ್ನು ಹಳೆ ಜಮಾನಾದ ಜನರು ಇಂದಿಗೂ ಗುನುಗುತ್ತಾರೆ. ಅಂದಿನ ಆ ಹಾಡುಗಳನ್ನು ಲೈವ್‌ ಆಗಿ ಕೇಳುವ ಅವಕಾಶವನ್ನು ಪೀಣ್ಯದ ರೋಟರಿ ಸಂಸ್ಥೆಯು ಬೆಂಗಳೂರು ಸಂಗೀತ ಪ್ರಿಯರಿಗೆ ಒದಗಿಸಿದೆ. 

ಅಕ್ಟೋಬರ್‌ 11ರಂದು ನಗರದ ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ಶಂಕರ್‌–ಜೈಕಿಶನ್‌ ಸಂಗೀತ ಸಂಜೆ ಆಯೋಜಿಸಿದ್ದು, ಸುಮನ್‌ ಕಲ್ಯಾಣಪುರ್‌ ಈ ರಸಮಂಜರಿ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರಬಿಂದು.

ಈ ದಿಗ್ಗಜರ ಸಂಗೀತ ನಿರ್ದೇಶನದಲ್ಲಿ ಸುಮನ್‌ ಅವರು ನೆನಪಿನಲ್ಲಿ ಉಳಿಯುವ ಅನೇಕ ಇಂಪಾದ ಹಾಡು ಹಾಡಿದ್ದಾರೆ. ಆ ಪೈಕಿ ಕೆಲವು ಹಾಡುಗಳನ್ನು ಸ್ವತಃ ಸುಮನ್‌ ಹಾಡುವ ಮೂಲಕ ಬೆಂಗಳೂರು ಸಂಗೀತ ಪ್ರೇಮಿಗಳಿಗೆ ರಸದೌತಣ ಬಡಿಸಲಿದ್ದಾರೆ.  

81 ವರ್ಷದ ಸುಮನ್‌ ಕಲ್ಯಾಣಪುರ್‌ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಜೋಡಿ ಶಂಕರ್–ಜೈಕಿಶನ್‌ ಅವರಿಗೆ ಸಂಗೀತ ನಮನ  ಸಲ್ಲಿಸಲಿದ್ದಾರೆ. ಇದೇ ವೇಳೆ ಈ ಜೋಡಿ ಜತೆಗಿನ ತಮ್ಮ ಒಡನಾಟವನ್ನು ಮಂಗಳಾ ಖಾಡಿಲ್ಕರ್‌ ಜತೆ ಮೆಲುಕು ಹಾಕಲಿದ್ದಾರೆ. 

ರಾಕ್‌ ಎನ್‌ ರೋಲ್‌ ಗುಂಗು

ಶಂಕರ್‌–ಜೈಕಿಶನ್‌ ಎಂದರೆ ಥಟ್ಟನೆ ನೆನಪಾಗುವುದು 70ರ ದಶಕದ ರಾಕ್‌ ಎನ್‌ ರೋಲ್‌ ಸಂಗೀತ. ಒಂದು ಕ್ಷಣ ಶಮ್ಮಿ ಕಪೂರ್‌ ಚಿತ್ರದ ಹಾಡು, ಸಂಗೀತ ಮತ್ತು ನೃತ್ಯಗಳು ಕಣ್ಮುಂದೆ ಹಾದು ಹೋಗುತ್ತವೆ.

ಎಲ್ಲರನ್ನೂ ಕುಣಿಯುವಂತೆ ಮಾಡುವ ಅಂಥದೊಂದು ಮಾಂತ್ರಿಕ ಶಕ್ತಿ ಅವರ ಸಂಗೀತಕ್ಕಿತ್ತು. ಸುಮನ್‌ ಕಲ್ಯಾಣಪುರ್‌ ಮಧುರವಾದ ಕಂಠಸಿರಿ ಆ ಸಂಗೀತಕ್ಕೆ ಮತ್ತಷ್ಟು ಮೆರುಗು ನೀಡುತ್ತಿತ್ತು. 60–70ರ ದಶಕದಲ್ಲಿ ಈ ಕಾಂಬಿನೇಶನ್‌ನಲ್ಲಿ ಬಹಳ ಕಾಲ ನೆನಪಿನಲ್ಲಿ ಉಳಿಯುವ ಅನೇಕ ಹಾಡುಗಳು ಮೂಡಿ ಬಂದವು. ಸುಮನ್‌ ಅವರ ಧ್ವನಿಯನ್ನು ಲತಾ ಮಂಗೇಶ್ಕರ್‌ ಧ್ವನಿ ಎಂದೇ ಜನರು ತಪ್ಪಾಗಿ ಭಾವಿಸುತ್ತಿದ್ದರು. ಇಬ್ಬರ ಧ್ವನಿಯೂ ಅಷ್ಟು ಹೋಲಿಕೆಯಾಗುತ್ತಿತ್ತು.

ಆ ಅವಧಿಯಲ್ಲಿ ತೆರೆಕಂಡ ಹೆಚ್ಚಿನ ಸಿನಿಮಾಗಳಿಗೆ ಶಂಕರ್‌–ಜೈಕಿಶನ್‌ ಸಂಗೀತ ಮತ್ತು ಸುಮನ್‌ ಧ್ವನಿ ಇರುತ್ತಿತ್ತು. ಚಿತ್ರಕ್ಕೆ ಅವರ ಸಂಗೀತ ಇದೆ ಎಂದರೆ ಅದು ಸೂಪರ್‌ ಹಿಟ್‌ ಎಂದೇ ಲೆಕ್ಕ.  

ಹಿಂದಿ ಚಿತ್ರರಂಗದ ಶೋಮ್ಯಾನ್‌ ಎಂದು ಖ್ಯಾತರಾಗಿದ್ದ ರಾಜ್‌ ಕಪೂರ್‌ ಅವರಿಂದ ಶಮ್ಮಿ ಕಪೂರ್‌ವರೆಗೆ ಬೆಳ್ಳಿತೆರೆಯಲ್ಲಿ ವಿಜೃಂಭಿಸಿದ ಎಲ್ಲ ನಾಯಕರ ಚಿತ್ರಗಳಿಗೂ ಈ ಜೋಡಿಯ ಸಂಗೀತ ಇರುತ್ತಿತ್ತು. ಶಮ್ಮಿ ಕಪೂರ್‌ ಯಶಸ್ಸಿನಲ್ಲಿ ಈ ಜೋಡಿಯ ಬಹುಮುಖ್ಯ ಪಾತ್ರವಿದೆ. 

ಕೇವಲ ರಾಕ್‌ ಎನ್‌ ರೋಲ್‌ ಮಾತ್ರವಲ್ಲ, ರಾಗ, ತಾಳ ಬಹುಮುಖ್ಯವಾದ ಭಾವಪರವಶವಾಗುವಂತಹ ಸಂಗೀತವನ್ನೂ ಅವರು ಉಣಬಡಿಸಿದರು. ಜತೆಗೆ ಅರೆ ಶಾಸ್ತ್ರೀಯ ಸಂಗೀತ, ಜಾನಪದ, ಟುಮ್ರಿ, ಭಾವತೀವ್ರತೆಯ ಸಂಗೀತವನ್ನೂ ಉಣಬಡಿಸಿದ್ದಾರೆ.  

ರಸಮಂಜರಿ ಕಾರ್ಯಕ್ರಮದಿಂದ ಸಂಗ್ರಹವಾದ ಹಣವನ್ನು ರೋಟರಿ ಸಂಸ್ಥೆಯು ತನ್ನ ಜೈಪುರ ಕೃತಕ ಕಾಲು ಜೋಡಣೆ ಮತ್ತು ಸಾಕ್ಷರತಾ ಯೋಜನೆಗಳಂತಹ ಸದುದ್ದೇಶಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿದೆ.

Post Comments (+)