ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾನಿಕ್‌! ಕಬ್ಬನ್ ಪಾರ್ಕ್ ಸಮೀಪವೇ ಬೃಹತ್ ಮದ್ಯದಂಗಡಿ

Last Updated 9 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಟಾನಿಕ್‌! ಇದು ನಗರದಲ್ಲಿ ಈಚೆಗೆ ಬಾಗಿಲು ತೆರೆದಿರುವ ಮದ್ಯದಂಗಡಿಯ ಹೆಸರು. ಮದ್ಯದ ಅಂಗಡಿ ಎಂದರೆ ಸಾಮಾನ್ಯ ಮದ್ಯದಂಗಡಿ ಅಲ್ಲ. ಮದ್ಯಪ್ರಿಯರಿಗೆ ನಾನಾ ಬಗೆಯ ‘ಟಾನಿಕ್‌’ ದೊರೆಯುವ ಸುರೆಯ ಸ್ವರ್ಗ!

ಬಾಗಿಲು ದೂಡಿ ಒಳಗೆ ಕಾಲಿಟ್ಟರೆಒಪ್ಪ ಓರಣವಾಗಿ ಜೋಡಿಸಿಟ್ಟ ಮದ್ಯದ ಬಾಟಲಿಗಳ ಹೊಸ ಮಧುಲೋಕವೇ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ.ಮದ್ಯದಲ್ಲೂ ಇಷ್ಟೊಂದು ವೆರೈಟಿಗಳಿವೆಯಾ ಎಂದು ಚಕಿತರಾಗುವಷ್ಟು ಬ್ರ್ಯಾಂಡ್‌ ಮದ್ಯಗಳು ಇಲ್ಲಿವೆ.

ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂ ಸರ್ಕಲ್‌ ಬಳಿ ರತ್ನಂ ಕಾಂಪ್ಲೆಕ್ಸ್‌ನಲ್ಲಿ ಎರಡು ತಿಂಗಳ ಹಿಂದೆ ಈ ‘ಟಾನಿಕ್‌’ ಬಾಗಿಲು ತೆರೆದಿದೆ.ಎಂ.ಜಿ. ರಸ್ತೆ, ಕಸ್ತೂರ್‌ ಬಾ ರಸ್ತೆ ಮತ್ತು ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಕೂಡುವ ಸರ್ಕಲ್‌ನಲ್ಲಿ ಐಕಾನಿಕ್‌ ಲ್ಯಾಂಡ್‌ಮಾರ್ಕ್‌ ಆಗಿದ್ದ ‘ಜುವೆಲ್ಸ್‌ ಡಿ ಪ್ಯಾರಗಾನ್’ ಚಿನ್ನಾಭರಣ ಮಳಿಗೆ ಬಾಗಿಲು ಮುಚ್ಚಿದ ಮೇಲೆ ಅದೇ ಸ್ಥಳದಲ್ಲಿ ಈಗ ‘ಟಾನಿಕ್‌‘ ಎಂಬ ದೊಡ್ಡ ಬೋರ್ಡ್‌ ಎದ್ದು ನಿಂತಿದೆ.

ಹೆಸರಾಂತ ಹೋಟೆಲ್‌, ಬಾರ್‌, ಪಬ್‌ಗಳ ತಾಣವಾಗಿರುವ ಬೆಂಗಳೂರಿನ ವಿಶೇಷತೆಗಳ ಪಟ್ಟಿಗೆ ‘ಟಾನಿಕ್‌’ ಒಂದು ಹೊಸ ಸೇರ್ಪಡೆ. ಇದು ಏಷ್ಯಾದ ದೊಡ್ಡ ಮದ್ಯದ ಮಳಿಗೆ ಎಂಬ ಹೆಗ್ಗಳಿಕೆ ಹೊಂದಿದೆ. ದೇಶ, ವಿದೇಶಗಳ ಸಾವಿರಾರು ಬಗೆಯ ಮದ್ಯಗಳಿರುವ ಮದ್ಯದ ಮ್ಯೂಸಿಯಂ ಎಂದು ಇದನ್ನು ಬಣ್ಣಿಸಲಾಗುತ್ತಿದೆ.

ನಗರದಲ್ಲಿ ಈಗಾಗಲೇ ಕ್ಲಾಸಿಕ್‌ ಗ್ರೂಪ್‌ನ ‘ನಾಟ್‌ ಜಸ್ಟ್‌ ವೈನ್‌ ಆ್ಯಂಡ್‌ ಚೀಸ್‌‘ (ಎನ್‌ಜೆಡಬ್ಲ್ಯೂಸಿ), ಮಧುಲೋಕ, ಹೌಸ್‌ ಆಫ್‌ ಸ್ಪಿರಿಟ್ಸ್‌, ಡ್ರಾಪ್ಸ್‌ ಟೋಟಲ್‌ ಸ್ಪಿರಿಟ್ಸ್‌,ದೇವರ್ಸ್‌, ಸೈಬರ್‌ ವೈನ್ಸ್‌, ಇಂದಿರಾನಗರದ ‘ಲಾ ಕೇವ್‌‘ ಮಧುಪ್ರಿಯರ ದಾಹ ತಣಿಸುತ್ತಿವೆ.‘ಟಾನಿಕ್‌‘ ಇವೆಲ್ಲಕ್ಕಿಂತ ಭಿನ್ನ ಮತ್ತು ಸ್ಟೈಲಿಶ್‌ ಆಗಿದೆ.

ಮದ್ಯದ ಅಂಗಡಿ ಎಂದರೆ ಮೂಗು ಮುರಿಯುವವರು ಒಮ್ಮೆ ಈ ಮಳಿಗೆಯ ಹೊಕ್ಕರೆ ‘ಮಧುಲೋಕ‘ ಇಷ್ಟೊಂದು ವಿಭಿನ್ನವಾಗಿದೆಯಾ ಎಂಬ ಆಶ್ಚರ್ಯಚಕಿತ ಅನುಭವದೊಂದಿಗೆ ಹೊರ ಬರುವುದು ಗ್ಯಾರಂಟಿ.

ಟಾನಿಕ್ ವಿಶೇಷತೆ ಏನು? ಅಂದಾಜು 30 ಸಾವಿರ ಚದರ ಅಡಿಯಲ್ಲಿ ಹರಡಿಕೊಂಡಿರುವ ಎರಡು ಅಂತಸ್ತಿನ ವಿಶಾಲವಾದ ‘ಲಿಕ್ಕರ್‌ ಮಾಲ್‌’ ವಿಮಾನ ನಿಲ್ದಾಣಗಳಲ್ಲಿರುವ ವೈಭವೋಪೇತ ಲಿಕ್ಕರ್‌ ಅಂಗಡಿಗಳನ್ನು ನೆನಪಿಸುತ್ತದೆ. ಈ ಲಕ್ಸುರಿ ಮಳಿಗೆಯನ್ನು ಒಂದು ಸುತ್ತು ಹಾಕಲು ಕನಿಷ್ಠ ಅರ್ಧ ಗಂಟೆ ಬೇಕಾಗುತ್ತದೆ.

ಒಂದೇ ಸೂರಿನಡಿ ದೇಶ, ವಿದೇಶಗಳ 1500 ಬಗೆಯ ಅಪರೂಪದಲ್ಲಿ ಅಪರೂಪದ ಮದ್ಯಗಳನ್ನು ನೀವೊಮ್ಮೆ ರುಚಿ ನೋಡಬಹುದು.

ಮೊದಲ ಮಹಡಿ ‘ಹೌಸ್‌ ಆಫ್‌ ಸ್ಪಿರಿಟ್ಸ್‌ ಆ್ಯಂಡ್ ಬಿಯರ್‌’ ಸಂಪೂರ್ಣವಾಗಿ ವೈನ್‌, ಶಾಂಪೇನ್‌ ಮತ್ತು ಬಿಯರ್‌ಗಳಿಗಾಗಿಯೇ ಮೀಸಲಾಗಿಡಲಾಗಿದೆ.ಸ್ಪಿರಿಟ್‌ ವಿಭಾಗದಲ್ಲಿ 600–700 ಬ್ರ್ಯಾಂಡ್‌ಗಳಿವೆ. ಸಾವಿರಕ್ಕೂ ಹೆಚ್ಚು ವೈನ್‌, 50ಕ್ಕೂ ಹೆಚ್ಚು ಬ್ರ್ಯಾಂಡ್‌ನ ಬಿಯರ್‌ ಮತ್ತು ಸಿಂಗಲ್‌ ಮಾಲ್ಟ್‌ ಮದ್ಯ ಸಿಗುತ್ತವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊರೆಯುವ 30 ರೀತಿಯ ಶಾಂಪೇನ್‌ ಮತ್ತು ವೈನ್‌, 55 ತರಹದ ವಿಸ್ಕಿ, 27 ಬಗೆಯ ವೊಡ್ಕಾ, 20 ಬ್ರ್ಯಾಂಡ್‌ಗಳ ಜಿನ್‌, 23 ಲೇಬಲ್‌ಗಳ ಟೆಕಿಲಾಗಳನ್ನು ಬೆಂಗಳೂರಿಗರು ಖರೀದಿಸಬಹುದು.ಶೀಘ್ರ ಇನ್ನೂ 40 ಬ್ರ್ಯಾಂಡ್‌ನ ಬಿಯರ್‌ ಮತ್ತು 10 ಬಗೆಯ ಟಾನಿಕ್‌ ವಾಟರ್‌ ಪರಿಚಯಿಸಲಾಗುತ್ತಿದೆ.

ಮೆಟ್ಟಿಲು ಏರಿ ಮೊದಲ ಮಹಡಿಗೆ ಕಾಲಿಟ್ಟರೆ ಫ್ರಾನ್ಸ್‌, ಇಟಲಿ, ನ್ಯೂಜಿಲೆಂಡ್‌ನ ಇಂಪೋರ್ಟೆಡ್‌ವಿಸ್ಕಿ, ವೊಡ್ಕಾ, ಕೊನ್ಯಾಕ್‌, ಬಿಯರ್‌, ಜಿನ್‌, ರಮ್‌, ಜಪಾನಿನ ಸೇಕ್‌ನಿಂದ ಇಟಲಿಯ ಪ್ರೊಸೆಕ್ಕೊ ಮದ್ಯಗಳು ನಿಮ್ಮನ್ನು ಹೊಸ ಲೋಕದಲ್ಲಿ ತೇಲಾಡಿಸುತ್ತವೆ.

ಕನಿಷ್ಠ ಐದುನೂರು ರೂಪಾಯಿಯಿಂದ ಆರಂಭವಾಗಿ ಐದು ಲಕ್ಷ ರೂಪಾಯಿವರೆಗಿನ ಅತ್ಯಂತ ದುಬಾರಿ ಮದ್ಯ ಗ್ರಾಹಕರಿಗಾಗಿ ಕಾಯ್ದಿವೆ. ಆರು ಕೋಟಿ ರೂಪಾಯಿಗೂ ಅಧಿಕ ಮೊತ್ತದ ಮದ್ಯದ ಸಂಗ್ರಹ ಇಲ್ಲಿದೆ.

ವಿಶಾಲವಾದ ವುಡನ್‌ ಫ್ಲೋರ್‌,ರ‍್ಯಾಕ್‌ಗಳಲ್ಲಿ ಒಪ್ಪ ಓರಣವಾಗಿ ಹೊಂದಿಸಿಟ್ಟ ಬಾಟಲ್‌ಗಳು, ಹಾಲ್‌ಗಳಲ್ಲಿ ಹರಡಿರುವ ಸುವಾಸನೆ, ಮೇಲುಧ್ವನಿಯ ಮ್ಯೂಸಿಕ್‌, ಮಂದ ಬೆಳಕು ಮದ್ಯ ಖರೀದಿಯ ಅನುಭವವನ್ನು ಬೆಚ್ಚಗಾಗಿಸುತ್ತದೆ.

ಯಾವುದೇ ಗಡಿಬಿಡಿ, ಗದ್ದಲ ಇಲ್ಲದೆ ಆರಾಮವಾಗಿ ಶಾಪಿಂಗ್‌ ಮಾಡಬಹುದು. ಗ್ರಾಹಕರಿಗೆ ನೆರವಾಗಲು ಪರಿಣತ ಸಿಬ್ಬಂದಿ ಇದೆ. ಸ್ಟೋರ್‌ನಲ್ಲಿಯೇ ವೈನ್‌ ರುಚಿ ನೋಡಿ ಖರೀದಿಸಬಹುದು. ಬೇಕರಿ, ಚೀಸ್‌ ವಿಭಾಗಗಳಿವೆ. ಲಿಕ್ಕರ್‌ ಚಾಕ್‌ಲೇಟ್‌ ಸವಿಯಲು ಸಿಗುತ್ತದೆ. ಗ್ರಾಹಕರಿಗೆ ಮದ್ಯದ ಗುಣಗಳ ಬಗ್ಗೆ ಮಾಹಿತಿ ನೀಡಲು ಪರಿಣತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಗ್ರಾಹಕರ ಅಭಿರುಚಿ, ಆಯ್ಕೆ ಮತ್ತು ಬಜೆಟ್‌ಗೆ ಅನುಗುಣವಾಗಿ ಯಾವ ಮದ್ಯ ಖರೀದಿಸಬಹುದು ಎಂದುನುರಿತ ಸಿಬ್ಬಂದಿ ಶಿಫಾರಸು ಮಾಡುತ್ತಾರೆ.

ಬೆಳಿಗ್ಗೆ 10.30ಯಿಂದ ರಾತ್ರಿ 10ಗಂಟೆವರೆಗೆ ‘ಟಾನಿಕ್’ ಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT