ಗುರುವಾರ , ಡಿಸೆಂಬರ್ 5, 2019
21 °C

ಬಕ್ಲಾವಾ ಎನ್ನುವ ಟರ್ಕಿಶ್‌ ಖಾದ್ಯ

Published:
Updated:

ಬಕ್ಲಾವಾ ಎನ್ನುವುದು ಒಂದು ಟರ್ಕಿಶ್‌ ಪೇಸ್ಟ್ರಿ. ಹೆಸರಾಂತ ಬೇಕರಿ ಖಾದ್ಯ. ಅತ್ಯಂತ ಶ್ರೀಮಂತರ ಖಾದ್ಯ ಎಂದೇ ಇದು ಹೆಸರಾಗಿತ್ತು. ಒಟ್ಟಾವಿಯನ್‌ ದೊರೆಗಳ ರಾಜಮಹಲಿನ ಅಡುಗೆಕೋಣೆಗಳಲ್ಲಿ ಇಂಥ ಸಿಹಿ ಪದಾರ್ಥಗಳನ್ನು ತಯಾರಿಸುತ್ತಿದ್ದರಂತೆ. ಟರ್ಕಿ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈ ಖಾದ್ಯಕ್ಕೆ ಈಗಲೂ ರಾಜಮರ್ಯಾದೆ. ಜನಸಾಮಾನ್ಯರ ಕೈಗೆಟುಕುವ ಬೆಲೆಗೆ ಬೇಕರಿಗಳಲ್ಲಿ ತಯಾರಾಗುವುದು ಶುರುವಾದಾಗಿನಿಂದ ಎಲ್ಲ ವರ್ಗದ ಜನರ ಬಾಯಿರುಚಿ ತಣಿಸತೊಡಗಿದೆ.

ಗೋಧಿ ಅಥವಾ ಮೈದಾ ಹಿಟ್ಟಿನಿಂದ ಮಾಡಿದ ಫಿಲ್ಲೊ, ಕರಗಿಸಿದ ಬೆಣ್ಣೆ, ವಾಲ್‌ನಟ್ಸ್‌, ಸಕ್ಕರೆ, ನೀರು ಮತ್ತು ಲಿಂಬೆ ಹಣ್ಣಿನ ರಸ ಇದಿಷ್ಟೇ ಇದರ ಸಿಂಪಲ್‌ ರೆಸಿಪಿ.

ವಾಲ್‌ನಟ್ಸ್‌ ಮತ್ತು ಪಿಸ್ತಾ ತುರಿದು ಫಿಲ್ಲೊ ಮೇಲೆ ಸುರಿದು ಬೇಕ್‌ ಮಾಡುತ್ತಾರೆ. ಇದರ ಮೇಲೆ ಸಕ್ಕರೆ, ಲಿಂಬೆ ರಸ ಮತ್ತು ತುಪ್ಪದ ಪಾಕವನ್ನು ಎರೆಯುತ್ತಾರೆ. ಪಾಕದೊಂದಿಗೆ ಇದು ಬೆರೆಯಲು ಒಂದಷ್ಟು ಗಂಟೆಗಳ ಕಾಲ ಇದನ್ನು ಪ್ಯಾನ್‌ನಲ್ಲಿ ಇಡುತ್ತಾರೆ. ಆನಂತರದಲ್ಲಿ ಇದು ತಿನ್ನಲು ರೆಡಿ.

ನಗರದ ಫ್ರೇಜರ್‌ಟೌನ್‌ ಮಸೀದಿ ರಸ್ತೆ (ಮಾಸ್ಕ್‌ ರೋಡ್‌)ಯಲ್ಲಿ ಒಂದು ‘ಕೆಫೆ ಅರೇಬಿಕಾ’ ಎನ್ನುವ ಅರೇಬಿಯನ್‌ ಬೇಕರಿ ಇದೆ. ‘ಸೇವರಿ’ ರೆಸ್ಟೊರೆಂಟ್‌ ಎದುರಿಗೆ ಮತ್ತು ಕರಾಮಾ ಅರೇಬಿಯನ್‌ ರೆಸ್ಟೊರೆಂಟ್‌ ಪಕ್ಕದಲ್ಲಿರುವ ಈ ಬೇಕರಿ ಟರ್ಕಿಶ್‌ ಮತ್ತು ಅರೇಬಿಯನ್‌ ಸ್ವೀಟ್ಸ್‌ಗೆ ಹೆಸರಾಗಿದೆ.

ಬಕ್ಲಾವಾ ಖಾದ್ಯ ಸವಿಯುವುದಕ್ಕೆ ನಗರದಲ್ಲಿ ಇರುವ ಬೆರಳೆಣಿಕೆಯ ಬೇಕರಿಗಳಲ್ಲಿ ಇದು ಒಂದು. ಇಲ್ಲಿ ಬೇಕರಿಯ ಇತರ ಖಾದ್ಯಗಳೂ ಲಭ್ಯ. ವಿವಿಧ ಬಗೆಯ ಬ್ರೆಡ್‌, ಕುಕೀಸ್‌, ಕೇಕ್‌, ಬರ್ತ್‌ಡೇ ಕೇಕ್‌, ಟೋಸ್ಟ್‌ ಕೂಡ ಇಲ್ಲಿ ಲಭ್ಯ. ಇದರ ಜೊತೆಗೆ ವಿವಿಧ ಬಗೆಯ ಖರ್ಜೂರಗಳನ್ನು ಇಲ್ಲಿ ಸವಿಯಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು