ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್‌ ಇಲ್ಲ...ಆದ್ರೂ ಪೆಟ್ರೋಲ್‌ಗೆ ಬರವಿಲ್ಲ

ಕಾಟಾಚಾರದ ಅಭಿಯಾನಕ್ಕೆ ನೀರಸ ಪ್ರತಿಕ್ರಿಯೆ
Last Updated 16 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

‘ಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಇಲ್ಲ’ ಎಂಬ ನಿಯಮ ಆಗಸ್ಟ್‌ ಒಂದರಿಂದ ಜಾರಿಯಲ್ಲಿದೆ. ಪೆಟ್ರೋಲ್‌ ಬಂಕ್‌ಗಳಲ್ಲಿ ಸೂಚನಾ ಫಲಕಗಳನ್ನೂ ನೇತು ಹಾಕಲಾಗಿದೆ. ಹೆಲ್ಮೆಟ್‌ ಧರಿಸದೆ ಪೆಟ್ರೋಲ್‌ ತುಂಬಿಸಿಕೊಳ್ಳಲು ಬಂಕ್‌ಗೆ ಬರುವ ದ್ವಿಚಕ್ರ ವಾಹನ ಸವಾರರು ಪೊಲೀಸರ ಈ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ಈ ಬಗ್ಗೆ ‘ಮೆಟ್ರೊ’ ರಿಯಾಲಿಟಿ ಚೆಕ್‌.

**

ರಸ್ತೆ ಸುರಕ್ಷತೆ ಮತ್ತು ಹೆಲ್ಮೆಟ್‌ ಮಹತ್ವ ಕುರಿತುದ್ವಿಚಕ್ರ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲುಬೆಂಗಳೂರು ಸಂಚಾರ ಪೊಲೀಸರು ಆರಂಭಿಸಿದ ‘ಹೆಲ್ಮೆಟ್‌ ಇಲ್ಲದಿದ್ದರೆ ಪೆಟ್ರೋಲ್‌ ಇಲ್ಲ’ ಎಂಬ ಅಭಿಯಾನಕ್ಕೆ ಆರಂಭದಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೊಯಿಡಾ ಮತ್ತು ಅಲೀಗಡನಲ್ಲಿ ಜಾರಿಗೆ ತರಲಾದ ಇಂಥ ಪ್ರಯೋಗಕ್ಕೆ ಸಿಕ್ಕ ಯಶಸ್ಸಿನಿಂದ ಪ್ರೇರಣೆಗೊಂಡು ಬೆಂಗಳೂರು ಟ್ರಾಫಿಕ್‌ ಪೊಲೀಸರೂವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದರು. ಇದಕ್ಕೆ ಪೆಟ್ರೋಲ್‌ ಬಂಕ್‌ ಮಾಲೀಕರು ಕೂಡ ಕೈಜೋಡಿಸಿದ್ದರು.

‘ಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಇಲ್ಲ’ ಎಂಬ ನಿಯಮ ಆಗಸ್ಟ್‌ ಒಂದರಿಂದ ನಗರದಾದ್ಯಂತ ಜಾರಿಗೆ ಬಂದಿದೆ. ಈ ಬಗ್ಗೆ ಹೆಚ್ಚಿನ ಪೆಟ್ರೋಲ್‌ ಬಂಕ್‌ಗಳಲ್ಲಿ ಸೂಚನಾ ಫಲಕಗಳನ್ನೂ ನೇತು ಹಾಕಲಾಗಿದೆ.

ನೆಪಕ್ಕೆ ಮಾತ್ರ ಈ ಆದೇಶ ಸೀಮಿತವಾಗಿದ್ದು, ಹೆಲ್ಮೆಟ್‌ ಧರಿಸದೆ ಪೆಟ್ರೋಲ್‌ ತುಂಬಿಸಿಕೊಳ್ಳಲು ಬಂಕ್‌ಗೆ ಬರುವ ದ್ವಿಚಕ್ರ ವಾಹನ ಸವಾರರು ಪೊಲೀಸರ ಈ ಆದೇಶಕ್ಕೆ ‘ಕ್ಯಾರೆ’ ಎನ್ನುತ್ತಿಲ್ಲ.

ಹೆಲ್ಮೆಟ್‌ ಧರಿಸುವಂತೆ ಹೇಳುವ ಅಥವಾ ಪೆಟ್ರೋಲ್‌ ಹಾಕಲು ನಿರಾಕರಿಸುವ ಸಿಬ್ಬಂದಿ ಜತೆ ಜಗಳಕ್ಕೆ ನಿಲ್ಲುತ್ತಿದ್ದಾರೆ. ಸುಖಾಸುಮ್ಮನೆ ಸಮಸ್ಯೆ ಮೈಮೇಲೆ ಎಳೆದುಕೊಳ್ಳುವುದು ಏಕೆ ಎಂದು ಬಂಕ್‌ ಸಿಬ್ಬಂದಿ ಕೂಡ ಮರು ಮಾತಿಲ್ಲದೆ ಪೆಟ್ರೋಲ್‌ ತುಂಬಿಸಿ ಕೈತೊಳೆದುಕೊಳ್ಳುತ್ತಿದ್ದಾರೆ.

ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್‌ ಹಾಕದಂತೆ ತಾಕೀತು ಮಾಡಿ ಪೊಲೀಸರು, ಪೆಟ್ರೋಲ್‌ ಬಂಕ್‌ಗಳಲ್ಲಿ ಸೂಚನೆ ಮತ್ತು ಜಾಹೀರಾತು ಅಂಟಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಬಂಕ್‌ ಸಿಬ್ಬಂದಿ ಮತ್ತು ವಾಹನ ಸವಾರರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರಿಂದಾಗಿ ಸಂಚಾರ ಪೊಲೀಸರ ಪ್ರಯತ್ನ ಕಾಟಾಚಾರದ ಅಭಿಯಾನವಾಗಿ ಮಾತ್ರ ಉಳಿದುಕೊಂಡಿದೆ.

ಉಡಾಫೆಯ ಉತ್ತರ

‘ಹೆಲ್ಮೆಟ್‌ ಧರಿಸಲು ಮನವಿ ಮಾಡಿದರೆ ಗ್ರಾಹಕರು ಜಗಳಕ್ಕಿಳಿಯುತ್ತಾರೆ. ನಮ್ಮ ಕೆಲಸ ಬಿಟ್ಟು ಅವರೊಂದಿಗೆ ಜಗಳ ಮಾಡಿಕೊಂಡು ನಿಲ್ಲಬೇಕಾಗುತ್ತದೆ. ಇದರಿಂದ ಉಳಿದ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಟ್ರಾಫಿಕ್‌ ಪೊಲೀಸರ ಮಾತು ಪಾಲಿಸದ ಸವಾರರು ಇನ್ನು ನಮ್ಮ ಮಾತು ಪಾಲಿಸುತ್ತಾರೆಯೇ?’ ಎಂದು ಯಶವಂತಪುರ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ವೊಂದರ ಸಿಬ್ಬಂದಿ ಮರು ಪ್ರಶ್ನೆ ಹಾಕುತ್ತಾರೆ.

ಹೆಚ್ಚಿನ ಪೆಟ್ರೋಲ್‌ ಬಂಕ್‌ ಸಿಬ್ಬಂದಿಗೆ ಇದೇ ರೀತಿಯ ಅನುಭವವಾಗಿದೆ. ಇದೊಂದು ಕಡ್ಡಾಯ ನಿಯಮವಲ್ಲದ ಕಾರಣ ಯಾರೂ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ. ಈ ಬಗ್ಗೆ ಕೇಳಿದರೆ ಗ್ರಾಹಕರು ಮತ್ತು ಬಂಕ್ ಸಿಬ್ಬಂದಿ ಉಡಾಫೆಯಾಗಿ ಮಾತನಾಡುತ್ತಾರೆ.

‘ನಾವು ಹೆಲ್ಮೆಟ್‌ ಧರಿಸುವಂತೆ ಮನವಿ ಮಾಡುತ್ತೇವೆ. ಸಂಚಾರಿ ಪೊಲೀಸರ ಸೂಚನೆಗಳನ್ನು ಅವರಿಗೆ ತೋರಿಸುತ್ತೇವೆ. ಕೆಲವರು ಪಾಲಿಸುತ್ತಾರೆ. ಹೆಚ್ಚಿನ ಗ್ರಾಹಕರು ತಂಟೆ ಮಾಡುತ್ತಾರೆ. ಕಾನೂನು, ನಿಯಮಾವಳಿ ಎಲ್ಲಿವೆ ತೋರಿಸಿ ಎಂದು ನಮ್ಮನ್ನೇ ದಬಾಯಿಸುತ್ತಾರೆ. ತಂಟೆಕೋರ ಗ್ರಾಹಕರಿದ್ದರೆ ಅವರೊಂದಿಗೆವಾದಕ್ಕಿಳಿಯದೆ, ಸುಮ್ಮನೆ ಪೆಟ್ರೋಲ್‌ ಹಾಕಿ ಸಾಗ ಹಾಕುತ್ತೇವೆ. ಕೆಲವರು ನಮ್ಮ ಕಾಯಂ ಗ್ರಾಹಕರು. ಅವರನ್ನು ಕಳೆದುಕೊಳ್ಳುವುದು ನಮಗೆ ಇಷ್ಟವಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ವೊಬ್ಬರು ತಮ್ಮ ಅನುಭವ ತೆರೆದಿಟ್ಟರು.

‘ನಗರದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತದಲ್ಲಿ ಹೆಲ್ಮೆಟ್‌ ಧರಿಸದ ಕಾರಣ ಅನೇಕ ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ. ಇಂಥ ಸಾವುಗಳನ್ನು ತಡೆಗಟ್ಟುವ ಕಳಕಳಿಯಿಂದ ಜನಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಕಡೆಪಕ್ಷ ಹೀಗಾದರೂ ಮಾಡಿ ಜನರನ್ನು ಹೆಲ್ಮೆಟ್‌ ಧರಿಸುವಂತೆ ಮಾಡುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಮಲ್ಲೇಶ್ವರ ಟ್ರಾಫಿಕ್‌ ಸಬ್‌ ಇನ್‌ಸ್ಪೆಕ್ಟರ್‌ ಚನ್ನಕೃಷ್ಣಪ್ಪ.

‘ಸಂಚಾರ ಪೊಲೀಸ್‌ ಠಾಣೆಯ ವ್ಯಾಪ್ತಿಯ ಎಲ್ಲ ಪೆಟ್ರೋಲ್‌ ಬಂಕ್‌ಗಳಿಗೆ ತೆರಳಿ ಜನಜಾಗೃತಿ ಅಭಿಯಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಲಾಗಿತ್ತು. ಅವರಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ಪ್ರತಿದಿನ ಪೊಲೀಸರು ಪೆಟ್ರೋಲ್‌ ಬಂಕ್‌ಗಳಲ್ಲಿನಿಂತು ಸವಾರರು ಹೆಲ್ಮೆಟ್‌ ಧರಿಸಿದ್ದಾರೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಸಾಧ್ಯವಿಲ್ಲ. ಜೀವಗಳು ಅಮೂಲ್ಯ ಎಂಬ ನಮ್ಮ ಕಾಳಜಿಯನ್ನು ಸವಾರರು ಅರ್ಥ ಮಾಡಿಕೊಳ್ಳಬೇಕು. ಇದು ಒತ್ತಾಯದ ಹೇರಿಕೆ ಅಲ್ಲ’ ಎನ್ನುವುದು ಟ್ರಾಫಿಕ್‌ ಪೊಲೀಸರ ವಾದ.

ಈ ನಡುವೆ, ಅಭಿಯಾನ ಆರಂಭಿಸಿದ್ದ ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ) ಪಿ. ಹರಿಶೇಖರನ್‌ ಅವರಿಗೆ ಸಂಚಾರ ಪೊಲೀಸ್‌ ಇಲಾಖೆಯಿಂದ ವರ್ಗವಾಗಿದೆ. ಇದು ಕೂಡ ಅಭಿಯಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಎನ್ನುವುದು ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯ ಅಭಿಪ್ರಾಯ.

ಜೀವ ಅತ್ಯಮೂಲ್ಯ ಎಂಬ ಕಾಳಜಿ ಮತ್ತು ಸದುದ್ದೇಶದಿಂದ ಸಂಚಾರ ಪೊಲೀಸ್‌ ಇಲಾಖೆ ಏನೋ ‘ನೋ ಹೆಲ್ಮೆಟ್‌, ನೋ ಪೆಟ್ರೋಲ್‌’ ಅಭಿಯಾನ ಆರಂಭಿಸಿದೆ. ಆದರೆ, ಗ್ರಾಹಕರು ಮತ್ತು ಪೆಟ್ರೋಲ್‌ ಬಂಕ್‌ ಸಿಬ್ಬಂದಿಯ ನಿರುತ್ಸಾಹದಿಂದಾಗಿ ಇದು ಕಾಟಾಚಾರದ ಅಭಿಯಾನ ಮಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT