ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಿನೋವಿಗೆ ಸರ್ಜರಿ ರಹಿತ ಚಿಕಿತ್ಸೆ!

Last Updated 10 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಹಲವಾರು ವರ್ಷಗಳಿಂದ ಅಸಾಧ್ಯ ಮಂಡಿನೋವು ಇತ್ತು. ಅಲೋಪಥಿ, ಹೋಮಿಯೋಪಥಿ,ಆಯುರ್ವೇದ,ಯುನಾನಿ,ಸಿದ್ಧ ಔಷಧ,ಟಿಬೆಟ್‌ ಚಿಕಿತ್ಸೆ, ಅಕ್ಯುಪಂಕ್ಚರ್‌... ಹೀಗೆ ಎಲ್ಲ ಬಗೆಯ ಚಿಕಿತ್ಸೆ, ಔಷಧ ಮಾಡಿಸಿದರೂ ನೋವು ಜಗ್ಗಲಿಲ್ಲ.ತಾತ್ಕಾಲಿಕವಾಗಿ ವಾಸಿಯಾದಂತೆ ಕಂಡರೂ ನೋವು ಮತ್ತೆ ಮರುಕಳಿಸಿತ್ತು. ಅಸಾಧ್ಯವಾದ ಮಂಡಿನೋವಿನಿಂದ ಜೀವನವೇ ಬೇಜಾರಾಗಿತ್ತು. ಶಸ್ತ್ರಚಿಕಿತ್ಸೆ ಇಲ್ಲದೆ ಮಂಡಿನೋವು, ಸಂಧಿವಾತ ಗುಣಪಡಿಸುವ ಬಗ್ಗೆ ಪತ್ರಿಕೆಯೊಂದರ ಸುದ್ದಿಯೊಂದು ಕಣ್ಣಿಗೆ ಬಿದ್ದಿತು. ಇದನ್ನೊಂದು ಪ್ರಯತ್ನ ಮಾಡಿ ನೋಡೋಣ ಎಂದು ಎಸ್‌ಬಿಎಫ್‌ ಹೆಲ್ತ್‌ ಆಸ್ಪತ್ರೆಗೆ ಹೋದೆ. ಅಲ್ಲಿ ಚಿಕಿತ್ಸೆ ಪಡೆದ ನಂತರ ನಂತರ ಮಂಡಿನೋವು ಮರುಕಳಿಸಿಲ್ಲ. ಚಿಕಿತ್ಸೆ ಪಡೆದು 14 ವರ್ಷಗಳಾಗಿವೆ. ಅದಾದ ನಂತರ 40 ದೇಶ ಸುತ್ತಿದ್ದೇನೆ. ಈ ವಯಸ್ಸಿನಲ್ಲಿಯೂ ಟ್ರಿಕ್ಕಿಂಗ್‌, ಪ್ರವಾಸ, ಸುತ್ತಾಟ ಮಾಡುತ್ತಿದ್ದೇನೆ ಎಂದು ಗಿರಿನಗರ ನಿವಾಸಿ 70 ವರ್ಷದ ಪದ್ಮಿನಿ ಬಲರಾಂ ನಸು ನಕ್ಕರು. ಬ್ಯಾಂಕ್‌ ಆಫ್‌ ಬರೋಡ ಚೀಫ್‌ ಮ್ಯಾನೇಜರ್‌ ಹುದ್ದೆಯಿಂದ ನಿವೃತ್ತರಾಗಿರುವ ಅವರು ಈ ಇಳಿ ವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಉತ್ಸಾಹದ ಬುಗ್ಗೆಯಂತಿದ್ದಾರೆ.

* * *

ಎರಡೂ ಕಾಲುಗಳಲ್ಲಿ ವಿಪರೀತ ಮಂಡಿ, ಕೀಲುನೋವು. ಮಂಡಿಚಿಪ್ಪುಗಳು ಸವೆದ ಕಾರಣ ಸ್ವತಂತ್ರವಾಗಿ ನಡೆದಾಡಲು ಆಗುತ್ತಿರಲಿಲ್ಲ. ವೈದ್ಯರ ಸೂಚನೆಯಂತೆ ಕೃತಕ ಮಂಡಿಚಿಪ್ಪು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಿದ್ಧಳಾಗಿದ್ದೆ. ಶಸ್ತ್ರಚಿಕಿತ್ಸೆ ಇಲ್ಲದೆ ಮಂಡಿನೋವು, ಸಂಧಿವಾತ ಗುಣಪಡಿಸುವ ಸುದ್ದಿ ಕಿವಿಗೆ ಬಿತ್ತು. ಅಲ್ಲಿ ಚಿಕಿತ್ಸೆ ಪಡೆದ ನಂತರ ಸಂಧಿವಾತದಿಂದ ಸಂಪೂರ್ಣ ಮುಕ್ತಿ ಸಿಕ್ಕಿದೆ. ಜೀವನದ ಉದ್ದಕ್ಕೂ ನೋವು ಅನುಭವಿಸುವ ಭಯದಿಂದ ಹೊರಬಂದಿದ್ದೇನೆ. ವಾಕಿಂಗ್‌ ಸ್ಟಿಕ್‌ ಸಹಾಯವಿಲ್ಲದೆ ಸ್ವತಂತ್ರವಾಗಿ ಸಹಜವಾಗಿ ನಡೆದಾಡುತ್ತೇನೆ ಎಂದು ಕ್ಲೇರ್‌ ಪಾಯಿಸ್‌ ವಿವರಿಸಿದರು.

* * *

ಇದು ಕೇವಲ ಈ ಎರಡು ಹಿರಿಯ ಜೀವಿಗಳ ಕತೆಯಲ್ಲ. ಸಾವಿರಾರು ಜನರ ಕತೆ. ಜೆ.ಡಬ್ಲ್ಯೂ. ಮ್ಯಾರಿಯಟ್‌ ಹೋಟೆಲ್‌ನಲ್ಲಿ ಸೇರಿದ್ದ ಸೇರಿದ್ದ ಐದಾರು ಹಿರಿಯರ ಅನುಭವವೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ನಗರದ ವಿವಿಧೆಡೆಯಿಂದ ತಮ್ಮ ಅನುಭವ ಹಂಚಿಕೊಳ್ಳಲು ಬಂದಿದ್ದ ಅವರೆಲ್ಲರ ಮುಖದಲ್ಲಿ ಸಂತಸದ ಜತೆಗೆ ಕೃತಜ್ಞತಾ ಭಾವ ಇತ್ತು.ಇವರಷ್ಟೇ ಅಲ್ಲ, ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಸಂಧಿವಾತ ರೋಗಿಗಳ ಬಾಳಲ್ಲಿ ಸಂತಸ ಅರಳುವಂತೆ ಮಾಡಿದ್ದು ಮಾರತಹಳ್ಳಿ ಮತ್ತು ಜೆ.ಪಿ. ನಗರದ ಎಸ್‌ಬಿಎಫ್‌ ಹೆಲ್ತ್‌ ಆಸ್ಪತ್ರೆಯ ವೈದ್ಯ ವಿಂಗ್‌ ಕಮಾಂಡರ್‌ ಡಾ. ವಿ.ಜಿ. ವಶಿಷ್ಠ.

ಮಂಡಿನೋವಿಗೆ ಕೃತಕ ಮಂಡಿಚಿಪ್ಪು ಅಳವಡಿಕೆಯೊಂದೇ ಪರಿಹಾರ ಎಂಬ ಭಾವನೆ ಎಲ್ಲೆಡೆ ಮನೆ ಮಾಡಿದೆ. ಆದರೆ, ಶಸ್ತ್ರಚಿಕಿತ್ಸೆ ಇಲ್ಲದೇ ಅತ್ಯಂತ ಕಡಿಮೆ ವೆಚ್ಚ ಮತ್ತು ಅವಧಿಯಲ್ಲಿ ಸಂಧಿವಾತ, ಮಂಡಿನೋವಿಗೆ ನೋವು ರಹಿತವಾದ ಸುರಕ್ಷಿತ ಚಿಕಿತ್ಸೆ ಕಂಡು ಹಿಡಿದ ಶ್ರೇಯ ಇವರಿಗೆ ಸಲ್ಲುತ್ತದೆ.ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಬೋಧಕರಾಗಿರುವ ವಶಿಷ್ಠ ಅವರು ಸ್ವತಃ ಅಲೋಪಥಿ ವೈದ್ಯರು. ಸುಮಾರು ವರ್ಷಗಳ ಸಂಶೋಧನೆಯ ಫಲವಾಗಿ ಎಸ್‌ಪಿಎಂಎಫ್‌ ಥೆರಪಿ ಮತ್ತು ಅಟ್ಕಿಸ್‌ ಸೋಮಾ ಎಂಬ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.

ಪ್ರೋಗ್ರಾಂ ಮಾಡಲಾದ ಆಯಸ್ಕಾಂತಗಳನ್ನು ಅಳವಡಿಸಲಾದ ಅಟ್ಕಿಸ್‌ ಸೋಮಾ ಯಂತ್ರ ನೋಡಲು ಥೇಟ್‌ ಎಂಆರ್‌ಐ ಸಾಧನದಂತೆ ಕಾಣುತ್ತದೆ. ಮಂಡಿಯಲ್ಲಿ ಸವೆದುಹೋದ ಅಥವಾ ನಾಶವಾದ ಎಲುಬು ಮತ್ತು ಕೀಲುಗಳ ನಡುವಿನ ಮೃದುವಾದ ಎಲುಬು ಅಥವಾ ಮೃದ್ವಸ್ಥಿಯ ಜೀವಕೋಶಗಳನ್ನು ಎಸ್‌ಪಿಎಂಎಫ್‌ ಥೆರಪಿಯ ಮೂಲಕ ಬೆಳೆಸಲಾಗುತ್ತದೆ. ಸಂಧಿವಾತ ಮತ್ತು ಕೀಲುನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ಪ್ರತಿದಿನ ಒಂದು ಗಂಟೆಯಂತೆ 21 ದಿನ ಹೊರರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ಎರಡೂ ಕಾಲುಗಳ ಚಿಕಿತ್ಸೆಗೆ ಅಂದಾಜು ಒಂದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ.ಮೇಲಾಗಿ ಈ ಚಿಕಿತ್ಸೆಯಿಂದ ಯಾವುದೇ ದುಷ್ಪರಿಣಾಮ ಇಲ್ಲ ಎಂದು ಡಾ. ವಶಿಷ್ಠ ವಿವರಿಸಿದರು.

ಎಸ್‌ಬಿಎಫ್‌ ಹೆಲ್ತ್‌ನಲ್ಲಿ ಇದುವರೆಗೂ ಸುಮಾರು ಎಂಟು ಸಾವಿರ ಜನರು ಈ ಚಿಕಿತ್ಸೆ ಪಡೆದದ್ದು ಅವರಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದ್ದು ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ ಸೇರಿದಂತೆ 34 ರಾಷ್ಟ್ರಗಳ ರೋಗಿಗಳು ಈ ಚಿಕಿತ್ಸೆ ಪಡೆದಿದ್ದಾರೆ ಎಂದರು.ಪೇಸ್‌ ಮೇಕರ್ ಅಳವಡಿಸಿಕೊಂಡಿರುವ ರೋಗಿಗಳನ್ನು ಹೊರತುಪಡಿಸಿ ಮಧುಮೇಹಿಗಳು, ಆಸ್ಟಿಯೊಪೋರೋಸಿಸ್‌ ಅಥವಾ ಟೊಳ್ಳು ಎಲುಬು ಸಮಸ್ಯೆ, ಸಂಧಿವಾತ ಉರುಯೂತ ಸಮಸ್ಯೆ ಹೊಂದಿರುವವರೂ ಈ ಚಿಕಿತ್ಸೆ ಪಡೆಯಬಹುದು. ಈ ಚಿಕಿತ್ಸೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಅನುಮತಿ ಸಿಕ್ಕಿದೆ. ಅಮೆರಿಕ ಸೇರಿದಂತೆ 36 ರಾಷ್ಟ್ರಗಳ ಪೇಟೆಂಟ್‌ ಮತ್ತು ಅಂತರರಾಷ್ಟ್ರೀಯ ಪ್ರಮಾಣೀಕರಣ ಪಡೆಯಲಾಗಿದೆ.

ಅಮೆರಿಕ, ಯುರೋಪ್‌ ಸೇರಿದಂತೆ ಜಗತ್ತಿನಾದ್ಯಂತ ಶೀಘ್ರದಲ್ಲಿ ಒಂದು ಸಾವಿರ ಚಿಕಿತ್ಸಾ ಕೇಂದ್ರ ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ಡಾ.ವಶಿಷ್ಠ ‘ಮೆಟ್ರೊ’ ಜತೆ ತಮ್ಮ ಯೋಜನೆ ಹಂಚಿಕೊಂಡರು.ಅಟ್ಕಿಸ್‌ ಸೋಮಾ ಯಂತ್ರದಲ್ಲಿಯ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ತರಂಗಾಂತರಗಳು ಎಂಆರ್‌ಐ ಮತ್ತು ಮೊಬೈಲ್‌ ತರಂಗಾಂತರಗಳಿಗಿಂತ ನೂರು ಪಟ್ಟು ಕಡಿಮೆಯಾಗಿರುತ್ತವೆ. ಹೀಗಾಗಿ ದುಷ್ಪರಿಣಾಮ ಇರುವುದಿಲ್ಲ. ಚಿಕಿತ್ಸೆಯ ವೆಚ್ಚವೂ ಜನಸಾಮಾನ್ಯರ ಕೈಗೆಟಕುವಂತಿದೆ. ಮೇಲಾಗಿ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಶೇ 80ರಷ್ಟಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT