ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ನಿವಾರಿಸಿಕೊಳ್ಳಿ ಹೃದಯ ಆರೋಗ್ಯ ಕಾಪಾಡಿ

Last Updated 29 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಹೃದಯದ ಕಾಯಿಲೆಗಳಿಗೆ ಗಂಡಾಂತರಕಾರಿ ಅಂಶವೆಂದರೆ ಕೆಲಸಕ್ಕೆ ಸಂಬಂಧಿಸಿದ ಒತ್ತಡ. ಇದನ್ನು ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸಬೇಕು ಮತ್ತು ಹೃದಯವನ್ನು ಒತ್ತಡದಿಂದ ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ತಜ್ಞ ವೈದ್ಯರು ಇಲ್ಲಿ ಸಲಹೆ ನೀಡಿದ್ದಾರೆ.

ಹೃದಯಕ್ಕೆ ಬೇಡ ಅನಗತ್ಯ ಒತ್ತಡ

ಇಂದಿನ ಆಧುನಿಕ ಜೀವನಶೈಲಿ ಮತ್ತು ಜಂಜಾಟದ ಬದುಕಿನಲ್ಲಿ ಕೆಲಸಗಳಿಗೆ ಸಂಬಂಧಿಸಿದ ಒತ್ತಡ ಸಾಮಾನ್ಯ. ಒತ್ತಡ ಹೆಚ್ಚಾದಷ್ಟು ಹೃದಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೆಲಸದ ಒತ್ತಡದಿಂದ ವಿಶ್ರಾಂತಿ ಪಡೆಯಲು ಸಮಯ ಸಿಗದಂತಾಗಿದೆ. ಕೆಲಸ ಮಾಡುವ ಸ್ಥಳದಲ್ಲಿಯ ಒತ್ತಡ ಅನಿವಾರ್ಯವಾಗಿದೆ. ಇದು ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದೆ. ಒತ್ತಡಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿಂದ ಪ್ರತಿವರ್ಷ ಕೆಲಸದ ದಿನಗಳು ನಷ್ಟವಾಗುವ ಪ್ರಮಾಣವೂ ಹೆಚ್ಚಾಗುತ್ತಿದೆ.

ದೀರ್ಘಕಾಲದ ಒತ್ತಡದಿಂದಾಗಿ ವ್ಯಕ್ತಿಗಳಲ್ಲಿ ಹತಾಶೆ, ಖಿನ್ನತೆ, ಉದ್ವೇಗ, ಮಾನಸಿಕ ಕ್ಷೋಭೆಯಂತಹ ಲಕ್ಷಣಗಳು ಗೋಚರಿಸುತ್ತವೆ. ತಲೆನೋವು, ಕುತ್ತಿಗೆ ನೋವು, ಕಣ್ಣು ನೋವು ಇದರ ಆರಂಭಿಕ ಲಕ್ಷಣಗಳು. ಮಧುಮೇಹ, ಅಧಿಕ ರಕ್ತದೊತ್ತಡ, ಕೂದಲು ಉದುರುವಿಕೆ, ಥೈರಾಯ್ಡ್‌, ಬೊಜ್ಜು, ಸ್ಥೂಲಕಾಯ,ಲೈಂಗಿಕ ನಿರಾಸಕ್ತಿ, ಜಠರ ಹುಣ್ಣು ಇವು ಒತ್ತಡದಿಂದ ಕಾಣಿಸಿಕೊಳ್ಳುವ ದೈಹಿಕ ಸಮಸ್ಯೆಗಳು.

ಒತ್ತಡ ಸಮಸ್ಯೆ ನಿವಾರಣೆ ಹೇಗೆ?

ಒತ್ತಡ ಸಮಸ್ಯೆ ನಿವಾರಣೆಗೆ ಎರಡು ಮಾರ್ಗಗಳಿವೆ. ವ್ಯಾಯಾಮ, ಧ್ಯಾನ, ಯೋಗ ಮತ್ತು ದೀರ್ಘ ಉಸಿರಾಟದ ಮೂಲಕ ದೇಹವನ್ನು ಪ್ರಶಾಂತ ಸ್ಥಿತಿಗೆ ತರಬಹುದು.ಸಂಘಟಿತ ಜೀವನಶೈಲಿ, ಸಮಯ ನಿರ್ವಹಣೆ, ಸಂವಹನ ಕೌಶಲದಂತಹ ಸರಳ ವಿಧಾನಗಳ ಮೂಲಕ ಒತ್ತಡಮುಕ್ತ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳುವುದು ಎರಡನೇ ಮಾರ್ಗ.

ಜೀವನಶೈಲಿ ಬದಲಾವಣೆ ಹೇಗೆ?

ಒತ್ತಡದಿಂದ ಉಂಟಾಗುವ ಹೃದ್ರೋಗ ತಡೆಗಟ್ಟಲು ಜೀವನಶೈಲಿ ಮತ್ತು ಆಹಾರ ಪದ್ಧತಿ ಬದಲಾವಣೆ ಅತ್ಯಂತ ಮುಖ್ಯ.

ಕೂತಲ್ಲೆ ಕೆಲಸ (ಐಟಿ/ಬಿಟಿ, ಕಚೇರಿ ಕೆಲಸ), ವಿಶ್ರಾಂತಿ ರಹಿತ ದುಡಿಮೆ, ದೈಹಿಕ ಚಟುವಟಿಕೆ ಇಲ್ಲದ ಜಡ ಜೀವನಶೈಲಿ ಹೃದಯಾಘಾತ ಹೆಚ್ಚಲು ಪ್ರಮುಖ ಕಾರಣ.ಉತ್ತಮ ನಿದ್ರೆ ಅಗತ್ಯ. ಬೇಗ ಮಲಗಿ, ಬೇಗ ಏಳುವ ಅಭ್ಯಾಸ ರೂಢಿಸಿಕೊಳ್ಳಿ.ಬೋರಲಾಗಿ ಮಲಗುವವರಲ್ಲೂ ಹೃದಯಾಘಾತ ಸಂಭವ ಜಾಸ್ತಿ.

ನಿಯಮಿತವಾಗಿ ದೇಹತೂಕ ತಪಾಸಣೆ ಹಾಗೂ ಪ್ರತಿನಿತ್ಯ 45 ನಿಮಿಷಗಳ ಕಾಲ ವೇಗದ ನಡಿಗೆ ಮಾಡುವ ಮೂಲಕ ಹೃದಯ ಸಂಬಂಧಿ ರೋಗಗಳನ್ನು ನಿಯಂತ್ರಿಸಬಹುದು. ದೂಮಪಾನ, ಮದ್ಯ ಸೇವನೆ ವರ್ಜಿಸಿ.ಕೊನೆಯದಾಗಿ ಸೇವಿಸುವ ಊಟದ ಮೇಲೆ ನಿಯಂತ್ರಣ ಇರಲಿ.ಪೌಷ್ಠಿಕ, ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವಿಸಿ. ಹಣ್ಣು, ಹಂಪಲ, ಹಸಿರು ತರಕಾರಿ, ಹಸಿ ಕಾಳು ಮುಂತಾದ ಕೊಬ್ಬು ರಹಿತ ಪದಾರ್ಥಗಳ ಸೇವನೆ ಉತ್ತಮ. ಕರಿದ ಮತ್ತು ಜಂಕ್‌ ಫುಡ್‌ ಬೇಡವೇ ಬೇಡ.

ನೆನಪಿರಲಿ, ಆಹಾರ ಸೇವಿಸುವಾಗ ಔಷಧಿಯಂತೆ ಸೇವಿಸಿ. ಇಲ್ಲವಾದಲ್ಲಿ ಔಷಧಿಯನ್ನೇ ಆಹಾರವಾಗಿ ಸೇವಿಸಬೇಕಾದ ಅನಿವಾರ್ಯತೆ ಬರಬಹುದು ಎನ್ನುತ್ತಾರೆತಥಾಗತ್ ಹಾರ್ಟ್ ಕೇರ್ ಸೆಂಟರ್ ಹೃದ್ರೋಗ ತಜ್ಞಡಾ.ಮಹಾಂತೇಶ್‌ ಆರ್. ಚರಂತಿಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT