ಶುಕ್ರವಾರ, ಏಪ್ರಿಲ್ 16, 2021
22 °C

ವರ್ಷದ ಪಾರ್ಟಿಗೆ ಎಚ್ಚರದ ‘ಹನಿ‘ಗಳು

ಥೆರೆಸ್ ಸುದೀಪ್ Updated:

ಅಕ್ಷರ ಗಾತ್ರ : | |

prajavani

ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ನಗರವೆಲ್ಲಾ ಸಜ್ಜಾಗುತ್ತಿದೆ. ಹಲವರು ವಾರಗಳ ಹಿಂದೆಯೇ ಆಚರಣೆಗೆ ಸಿದ್ಧತೆ ನಡೆಸಿರುತ್ತಾರೆ. ಆದರೆ ಬಹುತೇಕರು ಸಂಭ್ರಮದ ನಂತರ ಮನೆಗೆ ಹೇಗೆ ತಲುಪುವುದು ಎಂಬ ಬಗ್ಗೆ ಯೋಚಿಸುವುದೇ ಇಲ್ಲ. ರಾತ್ರಿ ಸಮಾರಂಭಗಳ ನಂತರ ಹಲವರು ಎದುರಿಸುವ ಸಮಸ್ಯೆ ಇದು. ಈ ಬಗ್ಗೆ ಒಂದಿಷ್ಟು ಸಲಹೆಗಳು....

ಗೊತ್ತಿರುವ ಪ್ರದೇಶಕ್ಕೆ ಹೋಗಿ

ಯಾವುದಾದರೂ ಗೊತ್ತಿಲ್ಲದ ಪ್ರದೇಶದಲ್ಲಿ ಹೊಸ ವರ್ಷವನ್ನು ಆಚರಿಸಲು ಹೋಗುತ್ತಿದ್ದರೆ, ಆ ಪ್ರದೇಶದ ಬಗ್ಗೆ ಮಾಹಿತಿ ಕಲೆಹಾಕಿ. ಆ ಪ್ರದೇಶದಲ್ಲಿರುವ ಪ್ರಮುಖ ಸ್ಥಳಗಳು, ಬಸ್‌ ನಿಲ್ದಾಣ, ಆಟೊ ನಿಲ್ದಾಣ, ಮೆಟ್ರೊ ನಿಲ್ದಾಣಗಳ ಮಾಹಿತಿ ತಿಳಿಯಿರಿ. ಗೂಗಲ್ ಮ್ಯಾಪ್ಸ್ ಸಹಾಯದಿಂದ ದಾರಿಯ ಗುರುತನ್ನು ಸೇವ್ ಮಾಡಿ ಇಟ್ಟುಕೊಳ್ಳಿ.

ಸಾರ್ವಜನಿಕ ಸಾರಿಗೆ

ಸುರಕ್ಷಿತ ನಗರ ಸಂಚಾರಕ್ಕೆ ಸಾರ್ವಜನಿಕ ಸಾರಿಗೆಯೇ ಉತ್ತಮ. ಸಂಭ್ರಮಾಚರಣೆಗೆ ಹೋಗುವಾಗ ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನೇ ಬಳಸಿ. ಸಾಧ್ಯವಾದರೆ ಮೊಬೈಲ್‌ನಲ್ಲಿ ಅಥವಾ ಪುಟ್ಟ ಡೈರಿಗಳಲ್ಲಿ ನೀವು ಹೋಗುತ್ತಿರುವ ಪ್ರದೇಶದಿಂದ ನಿಮ್ಮ ಮನೆಗೆ ಸಂಪರ್ಕ ಕಲ್ಪಿಸುವ ಬಸ್‌ಗಳ ಮಾರ್ಗ ಸಂಖ್ಯೆ, ಕೊನೆಯ ಬಸ್‌ ಹೊರಡುವ ಅವಧಿ, ಹಾಗೂ ಮೆಟ್ರೊ ರೈಲಿನ ಅವಧಿಯನ್ನು ಬರೆದಿಟ್ಟುಕೊಳ್ಳಿ.

ಆ್ಯಪ್ ಆಧಾರಿತ ಸಾರಿಗೆ

ರಾತ್ರಿಯಲ್ಲಿ ಸುರಕ್ಷಿತವಾಗಿ ಮನೆಗೆ ತಲುಪುವುದಕ್ಕೆ ಆ್ಯಪ್ ಆಧಾರಿತ ಸಾರಿಗೆ ವ್ಯವಸ್ಥೆ ಉತ್ತಮ. ಹೊಸ ವರ್ಷದ ಅಂಗವಾಗಿ ಹಲವರು ರಾತ್ರಿಯಲ್ಲಿ ಕ್ಯಾಬ್‌ಗಳನ್ನು ಬುಕ್‌ ಮಾಡುತ್ತಾರೆ.  ಸೂಕ್ತ ಸಮಯಕ್ಕೆ ಕ್ಯಾಬ್ ಸಿಗುವುದು ಕಷ್ಟವಾಗಬಹುದು. ಹೀಗಾಗಿ ಮುಂಜಾನೆಯೇ ಕ್ಯಾಬ್ ಬುಕ್ ಮಾಡಿ. ಉಬರ್ ಮತ್ತು ಓಲಾ ಕಂಪನಿಗಳೆರಡೂ ಮೊದಲೇ ಬುಕ್ ಮಾಡುವುದಕ್ಕೆ ಅವಕಾಶ ಕಲ್ಪಿಸಿವೆ. ಕೊನೆಯ ಕ್ಷಣದಲ್ಲಿ ಬುಕ್ ಮಾಡುವುದರಿಂದ ಹೆಚ್ಚುವರಿ ಹಣವನ್ನು ಪಾವತಿಸಬೇಕಾದ ಸಾಧ್ಯತೆಯೂ ಇರುತ್ತದೆ. ಆ್ಯಪ್‌ನಲ್ಲಿ ಬುಕ್‌ ಮಾಡುವಾಗ ತುರ್ತಾಗಿ ದೂರವಾಣಿ ಸಂಖ್ಯೆಯನ್ನು ತಪ್ಪದೇ ನಮೂದಿಸಿ.

ಚಾಲಕರು ಹುಷಾರಾಗಿರಬೇಕು

ಸ್ವಂತ ವಾಹನದಲ್ಲಿ ಹೋಗುವ ಉದ್ದೇಶವಿದ್ದರೆ ಉತ್ತಮ. ಸ್ನೇಹಿತರೆಲ್ಲಾ ಒಟ್ಟಿಗೆ ಹೋಗಬಹುದು. ಆದರೆ ಮನೆಗೆ ಮರಳುವಾಗ ಮದ್ಯವನ್ನು ಸೇವಿಸದವರೇ ವಾಹನ ಚಲಾಯಿಸುವುದು ಒಳಿತು. ಹೋಗುತ್ತಿರುವ ಪ್ರದೇಶದಲ್ಲಿ ವಾಹನ ನಿಲ್ಲಿಸುವುದಕ್ಕೆ ನಿಲುಗಡೆ ಸೌಲಭ್ಯ ಇದೆಯೇ ಎಂದು ಪರಿಶೀಲಿಸಿ. ವಾಹನ ಚಲಾಯಿಸಲು ಆಗದೇ ಇದ್ದರೆ, ಹತ್ತಿರದಲ್ಲಿರುವ ಸ್ನೇಹಿತರು ಅಥವಾ ಸಂಬಂಧಿಕರ ನೆರವು ಪಡೆಯಿರಿ. ರಾತ್ರಿಯಲ್ಲಿ ಕರೆ ಮಾಡಿ ತೊಂದರೆ ಕೊಡುವುದಕ್ಕಿಂತ, ಮೊದಲೇ ಮಾಹಿತಿ ನೀಡುವುದು ಒಳಿತು.

ಆಟೊ ಹತ್ತಿರಿ

ಕ್ಯಾಬ್ ಬುಕ್ ಮಾಡಲು ಆಗದೇ ಇದ್ದರೆ, ಆಟೊ ಬುಕ್‌ ಮಾಡಬಹುದು. ಈಗಾಗಳೇ ಆ್ಯಪ್ ಆಧಾರಿತ ಆಟೊ ಟ್ಯಾಕ್ಸಿ ಸೇವೆ ಲಭ್ಯವಿದೆ. ರಾತ್ರಿಹೊತ್ತಲ್ಲಿ ಆಟೊ ಪ್ರಯಾಣ ದುಬಾರಿಯಾಗಿರುವುದರಿಂದ ಮೊದಲೇ ಬುಕ್ ಮಾಡುವುದು ಒಳ್ಳೆಯದು. ಸಾಧ್ಯವಾದಷ್ಟು ಒಂಟಿಯಾಗಿ ಪ್ರಯಾಣಿಸುವುದನ್ನು ತಪ್ಪಿಸಿ. ಆಟೊ ಹತ್ತಿದ ನಂತರ ಮನೆಯವರಿಗೆ ತಿಳಿಸಿ, ಎಷ್ಟು ಹೊತ್ತಿಗೆ ತಲುಪಬಹುದು ಎಂಬ ಮಾಹಿತಿಯನ್ನು ಚಾಲಕರಿಂದ ಪಡೆಯಿರಿ. ಆಟೊ ಅಥವಾ ಕ್ಯಾಬ್ ಹತ್ತಿದ ಕೂಡಲೇ ಲೈವ್ ಲೊಕೇಷನ್‌ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಡೆದು ಹೋಗುವವರು

ಸಂಭ್ರಮಾಚರಣೆಗೆ ಹೋಗುತ್ತಿರುವ ಪ್ರದೇಶ ಮನೆಗೆ ಹತ್ತಿರವಾಗಿದ್ದರೆ, ನಡೆದುಕೊಂಡು ಹೋಗುವುದು ಉತ್ತಮ. ಆದರೆ ಸ್ನೇಹಿತರೊಂದಿಗೆ ಹೋಗಿದ್ದರೆ, ಮರಳಿ ಸ್ನೇಹಿತರೊಂದಿಗೆ ತೆರಳಬೇಕು. ನಡೆದು ಹೋಗುವಾಗ ಅಪರಿಚಿತರು ಯಾರಾದರೂ ಹಿಂಬಾಲಿಸುತ್ತಿದ್ದಾರೆಯೇ ಎಂಬುದನ್ನೂ ಗಮನಿಸುತ್ತಿರಿ.

ಇನ್ನಷ್ಟು ಸಲಹೆಗಳು

ಸಂಭ್ರಮಾಚರಣೆಗೆ ಸಾಧ್ಯವಾದಷ್ಟು ಡಿಜಿಟಲ್ ಪಾವತಿಯನ್ನೇ ಬಳಿಸಿ. ಆದರೂ ಬೇಕಾಗುವಷ್ಟು ಹಣವನ್ನು ಜೇಬಿನಲ್ಲಿ ಇಟ್ಟುಕೊಂಡಿರಿ. ₹2,000 ಅಥವಾ ₹500ರ ನೋಟು ಇಟ್ಟುಕೊಳ್ಳುವ ಬದಲು, ಸೂಕ್ತ ಚಿಲ್ಲರೆ ಇಟ್ಟುಕೊಳ್ಳುವುದು ಒಳಿತು. ಎಲ್ಲ ಹಣವನ್ನೂ ಒಂದೇ ಪಾಕೆಟ್ ಅಥವಾ ಪರ್ಸ್‌ನಲ್ಲಿ ಇಟ್ಟುಕೊಳ್ಳುವುದೂ ಸಲ್ಲ. ಬಿಡಿಬಿಡಿಯಾಗಿ ಎರಡು–ಮೂರು ಪಾಕೆಟ್‌ಗಳಲ್ಲಿ ಇಟ್ಟುಕೊಂಡಿರಿ.

ಹೋಗುವ ಮುನ್ನ ಮೊಬೈಲ್‌ಫೋನ್ ಸಂಪೂರ್ಣವಾಗಿ ಚಾರ್ಜ್ ಆಗಿದೆಯೇ ಎಂಬುದನ್ನು ಪರಿಶೀಲಿಸಿ, ಸಾಧ್ಯವಾದರೆ ಪವರ್ ಬ್ಯಾಂಕ್ ಕೂಡ ಒಯ್ಯಿರಿ. ಮೊಬೈಲ್‌ಫೋನ್ ಚಾರ್ಜ್ ಆಗಿದ್ದರಷ್ಟೇ ಸ್ನೇಹಿತರೊಂದಿಗೆ, ಸಂಬಂಧಿಕರೊಂದಿಗೆ ಸಂಪರ್ಕದಲ್ಲಿರಲು ಸಾಧ್ಯ.

ಬಹುತೇಕ ಕ್ಲಬ್‌ಗಳಲ್ಲಿ ಕುಡಿದ ಮತ್ತಿನಲ್ಲಿ ಕಿರಿಕಿರಿ ಉಂಟು ಮಾಡುವ ಪ್ರಕರಣಗಳು ವರದಿಯಾಗಿವೆ ಹೀಗಾಗಿ ಪೆಪ್ಪರ್ ಸ್ಪೇ ಜೊತೆಗೆ ಒಯ್ಯುವುದು ಕೂಡ ಉತ್ತಮ. ಆನ್‌ಲೈನ್‌ನಲ್ಲಿ ಅಥವಾ ಹೆಲ್ತ್ ಆ್ಯಂಡ್ ಗ್ಲೊನಂತಹ ಮಳಿಗೆಗಳಲ್ಲಿ ಪೆಪ್ಪರ್ ಸ್ಪೇಗಳು ದೊರೆಯುತ್ತವೆ.

ಮೊಬೈಲ್‌ಫೋನ್ ಬಳಕೆ ಎಚ್ಚರ

ಲೈವ್‌ ಲೊಕೇಷನ್ ಕಳುಹಿಸುವ ಮುನ್ನ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಲೋಕೆಷನ್ ತಿಳಿಯುವುದಕ್ಕೆ ಅನುಮತಿ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ. ಬ್ಯಾಟರಿ ಎಷ್ಟು ಪ್ರಮಾಣದಲ್ಲಿ ಇದೆ ಎಂಬ ಮಾಹಿತಿಯೂ ಇರಲಿ. ಕ್ಯಾಬ್, ಆಟೊಗಳ ಸಂಖ್ಯೆಯನ್ನು ಹತ್ತುವ ಮುನ್ನ ಬರೆದಿಟ್ಟುಕೊಂಡು ಸ್ನೇಹಿತರಿಗೆ ಅಥವಾ ಮನೆಯವರಿಗೆ ತಿಳಿಸಿ.

ಒಟ್ಟಿಗೆ ಹೋಗಿ...

ಎಂ.ಜಿ. ರಸ್ತೆ ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರಲು ಪ್ರತಿ ವರ್ಷ ಸಾವಿರಾರು ಜನ ಸೇರುತ್ತಾರೆ. ರಾತ್ರಿಯಲ್ಲಿ ಕಿಕ್ಕಿರಿದು ತುಂಬಿದ ಜನ ಸಂದಣಿಯಲ್ಲಿ ಹುಷಾರಾಗಿರುವುದು ಒಳಿತು. ಇಲ್ಲಿಗೆ ಬರುವವರು ಸಾಧ್ಯವಾದಷ್ಟು ಸ್ನೇಹಿತರೊಟ್ಟಿಗೆ ಬರುವುದು ಉತ್ತಮ. ಹೊಸ ವರ್ಷಕ್ಕೆ ಸ್ವಾಗತ ಕೋರುವವರೆಗೂ ಒಟ್ಟಿಗೆ ಇದ್ದು, ಖುಷಿಯಿಂದ ನಲಿಯಿರಿ. ನಂತರ ಒಟ್ಟಿಗೆ ಮನೆಗೆ ತೆರಳಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು