ಉಗ್ರರ ದಮನಕ್ಕೆ ಪಾಕಿಸ್ತಾನ ಸಿದ್ಧತೆ

ಗುರುವಾರ , ಮಾರ್ಚ್ 21, 2019
30 °C
ಪುಲ್ವಾಮಾ ದಾಳಿಗೂ ಮುನ್ನ ಕಾರ್ಯತಂತ್ರ ರೂಪಿಸಲಾಗಿದೆ: ಸಚಿವ ಫವಾದ್‌ ಚೌಧರಿ

ಉಗ್ರರ ದಮನಕ್ಕೆ ಪಾಕಿಸ್ತಾನ ಸಿದ್ಧತೆ

Published:
Updated:

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ನೆಲೆಯಾಗಿರುವ ಉಗ್ರಗಾಮಿ ಸಂಘಟನೆಗಳನ್ನು ದಮನ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಅಲ್ಲಿನ ವಾರ್ತಾ ಸಚಿವ ಫವಾದ್‌ ಚೌಧರಿ ಹೇಳಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ನ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿ 40 ಯೋಧರ ಬಲಿ ಪಡೆದ ಬಳಿಕ ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚಾಗಿದೆ. 

ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಏನೂ ಇಲ್ಲ ಎಂದು ಫವಾದ್‌ ಪುನರುಚ್ಚರಿಸಿದ್ದಾರೆ. 

ಉಗ್ರರ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬ್ರಿಟನ್‌ ಮತ್ತು ಅಮೆರಿಕ ದೇಶಗಳು ಪಾಕಿಸ್ತಾನದ ಮೇಲೆ ಒತ್ತಡ ಹೇರಿವೆ. ಭಾರತದ ವಿರುದ್ಧ ಭಯೋತ್ಪಾದನೆ ಚಟುವಟಿಕೆ ನಡೆಸುವ ಉಗ್ರರಿಗೆ ಯಾವುದೇ ನೆರವು ನೀಡು
ತ್ತಿಲ್ಲ ಎಂದು ಪಾಕಿಸ್ತಾನ ಹೇಳುತ್ತಲೇ ಬಂದಿದೆ. 

ಭಾರತ ವಿರೋಧಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನವು ಹಿಂದೆಯೂ ಭರವಸೆ ನೀಡಿತ್ತು. ಆದರೆ, ನಿಷೇಧಿತ ಭಯೋತ್ಪಾದನಾ ಸಂಘಟನೆಗಳ ಮುಖಂಡರು ಮತ್ತು ಉಗ್ರರು ಪಾಕಿಸ್ತಾನದಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿದ್ದಾರೆ. 

ಭದ್ರತಾ ಯೋಜನೆಗಳು, ವಿದೇಶಾಂಗ ನೀತಿ ಮತ್ತು ಭಾರತದ ಜತೆಗಿನ ಸಂಬಂಧದ ವಿಚಾರದಲ್ಲಿ ಪಾಕಿಸ್ತಾನದ ಸೇನೆಯ ಮಾತಿಗೆ ಹೆಚ್ಚು ಬೆಲೆ. ಹಾಗಾಗಿ ಸರ್ಕಾರದ ನಿರ್ಧಾರಗಳು ಸೇನೆಯ ನಿರ್ಧಾರದ ಮೇಲೆಯೇ ಅವಲಂಬಿತವಾಗಿರುತ್ತದೆ. 

ಭಯೋತ್ಪಾದಕರನ್ನು ದಮನ ಮಾಡಬೇಕು ಎಂಬ ನಿರ್ಧಾರವನ್ನು ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಪುಲ್ವಾಮಾ ದಾಳಿಗೂ ಮೊದಲೇ ಈ ಸಭೆ ನಡೆದಿತ್ತು ಎಂದು ಚೌಧರಿ ಹೇಳಿದ್ದಾರೆ. 

‘ಸಮಗ್ರವಾದ ಕಾರ್ಯತಂತ್ರವನ್ನು ಈಗ ಜಾರಿಗೊಳಿಸಲಾಗಿದೆ. ಬೇರೆ ಬೇರೆ ಗುಂಪುಗಳಿಗೆ ಭಿನ್ನವಾದ ಕಾರ್ಯ
ತಂತ್ರ ರೂಪಿಸಲಾಗಿದೆ. ಸರ್ಕಾರದ ನಿರ್ಧಾರಗಳು ಜಾರಿಯಾಗಬೇಕು ಎಂಬುದು ನಮ್ಮ ಮುಖ್ಯ ಗುರಿ. ನಮ್ಮ ನೆಲದಲ್ಲಿ ಉಗ್ರಗಾಮಿ ಗುಂಪುಗಳು ಸಕ್ರಿಯವಾಗಿದ್ದರೆ ಅವನ್ನು ನಿರ್ಮೂಲನ ಮಾಡಬೇಕು’ ಎಂದು ಅವರು ಹೇಳಿದ್ದಾರೆ. 

ಭಯೋತ್ಪಾದನಾ ಗುಂಪುಗಳನ್ನು ದಮನಿಸುವ ಕ್ರಮ ಅನಿವಾರ್ಯವಾಗಿದೆ. ಇಂತಹ ಕ್ರಮಗಳು ಶೀಘ್ರವೇ ಗೋಚರಿಸಲಿವೆ ಎಂದು ಮೂಲವೊಂದು ತಿಳಿಸಿದ್ದಾಗಿ ಪಾಕಿಸ್ತಾನದ ಪತ್ರಿಕೆ ‘ಡಾನ್‌’ ಕೂಡ ವರದಿ ಮಾಡಿದೆ. 

ಉಗ್ರಗಾಮಿ ಗುಂಪುಗಳ ತೀವ್ರವಾದಿ ಕಾರ್ಯಾಚರಣೆಯನ್ನು ಕೊನೆಗೊಳಿಸಿ ಈ ಗುಂಪುಗಳು ರಾಜಕಾರಣದಲ್ಲಿ ಸಕ್ರಿಯವಾಗುವಂತೆ ಮಾಡಲು ಪಾಕಿಸ್ತಾನದ ಸೇನೆ ನಿರ್ಧರಿಸಿದೆ ಎಂದು 2017ರಲ್ಲಿ ವರದಿಯಾಗಿತ್ತು. 

ಮುಂಬೈ ಮೇಲೆ 2008ರಲ್ಲಿ ನಡೆದ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ಹೊಸ ಪಕ್ಷವನ್ನು ಘೋಷಿಸಿದ್ದ. ಇದನ್ನು ಆಗಿನ ಸರ್ಕಾರ ಮತ್ತು ನಾಗರಿಕ ಗುಂಪುಗಳು ಟೀಕಿಸಿದ್ದವು. 

2014ರಲ್ಲಿ ಪಾಕಿಸ್ತಾನವು ರಾಷ್ಟ್ರಿಯ ಕ್ರಿಯಾ ಯೋಜನೆಯನ್ನು (ಎನ್‌ಎಪಿ) ರೂಪಿಸಿತ್ತು. ಆರ್ಥಿಕ, ರಾಜಕೀಯ ಮತ್ತು ಆಡಳಿತಾತ್ಮಕ ಕಾರ್ಯತಂತ್ರದ ಮೂಲಕ ಉಗ್ರರನ್ನು ಮಟ್ಟ ಹಾಕುವುದು ಇದರ ಉದ್ದೇಶವಾಗಿತ್ತು.

ಆದರೆ, ಭಾರತವನ್ನು ಗುರಿಯಾಗಿಸಿ ಕೆಲಸ ಮಾಡುತ್ತಿರುವ ಉಗ್ರರ ವಿರುದ್ಧ ಎನ್‌ಎಪಿಯನ್ನು ಅನ್ವಯಿಸಲಾಗಿಲ್ಲ ಎಂದು ಭದ್ರತಾ ವಿಶ್ಲೇಷಕರು ಹೇಳುತ್ತಿದ್ದಾರೆ.  

ವಾಯುಪಡೆಗೆ ಸೂಚನೆ: ದೇಶವು ಎದುರಿಸುತ್ತಿರುವ ಸವಾಲು ಇನ್ನೂ ಮುಗಿದಿಲ್ಲ, ಹಾಗಾಗಿ ಗರಿಷ್ಠ ಎಚ್ಚರದಲ್ಲಿ ಇರಬೇಕು ಎಂದು ಪಾಕಿಸ್ತಾನದ ವಾಯುಪಡೆ ಮುಖ್ಯಸ್ಥ ಮುಜಾಹಿದ್‌ ಅನ್ವರ್‌ ಖಾನ್‌ ಅವರು ಹೇಳಿದ್ದಾರೆ. 

ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಷಮ ಪರಿಸ್ಥಿತಿ ಸೃಷ್ಟಿಯಾಗಿದೆ. ಸೇನಾ ನೆಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದ್ದಾರೆ. 

ವೀಸಾ ನಿರಾಕರಣೆ: ಅಜ್ಮೀರ್‌ನ ದರ್ಗಾಕ್ಕೆ ಭೇಟಿ ನೀಡಲು ಬಯಸಿದ್ದ ಪಾಕಿಸ್ತಾನದ 500 ಯಾತ್ರಾರ್ಥಿಗಳಿಗೆ ವೀಸಾ ನೀಡಲು ಭಾರತ ನಿರಾಕರಿಸಿದೆ ಎಂದು ಧಾರ್ಮಿಕ ವ್ಯವಹಾರಗಳ ಸಚಿವ ನೂರ್‌–ಉಲ್‌–ಹಕ್‌ ಖಾದ್ರಿ ಸೋಮವಾರ ತಿಳಿಸಿದ್ದಾರೆ.

ಎಚ್ಚರವಿರಲಿ: ವಾಯುಪಡೆಗೆ ಸೂಚನೆ

ದೇಶವು ಎದುರಿಸುತ್ತಿರುವ ಸವಾಲು ಇನ್ನೂ ಮುಗಿದಿಲ್ಲ, ಹಾಗಾಗಿ ಗರಿಷ್ಠ ಎಚ್ಚರದಲ್ಲಿ ಇರಬೇಕು ಎಂದು ಪಾಕಿಸ್ತಾನದ ವಾಯುಪಡೆ ಮುಖ್ಯಸ್ಥ ಮುಜಾಹಿದ್‌ ಅನ್ವರ್‌ ಖಾನ್‌ ಅವರು ಹೇಳಿದ್ದಾರೆ. 

ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಷಮ ಪರಿಸ್ಥಿತಿ ಸೃಷ್ಟಿಯಾಗಿದೆ.  ಸೇನಾ ನೆಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದ್ದಾರೆ. 

ದೇಶದ ಮಂದೆ ಇನ್ನೂ ಸವಾಲು ಇದೆ. ಹಾಗಾಗಿ ಎಚ್ಚರದಿಂದ ಇರಬೇಕು. ವೈರಿ ದೇಶದಿಂದ ಯಾವುದೇ ಅತಿಕ್ರಮಣ ಉಂಟಾದರೆ ಅದನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಖಾನ್‌ ಹೇಳಿದ್ದಾಗಿ ‘ಡಾನ್‌’ ಪತ್ರಿಕೆ ವರದಿ ಮಾಡಿದೆ. 

ಭಾರತದ ಜತೆಗೆ ಇತ್ತೀಚೆಗೆ ನಡೆದ ಸಂಘರ್ಷದಲ್ಲಿ ವಾಯುಪಡೆಯು ವಹಿಸಿದ ಪಾತ್ರದ ಬಗ್ಗೆ ಇಡೀ ಪಾಕಿಸ್ತಾನ ಹೆಮ್ಮೆ ಪಟ್ಟಿದೆ ಎಂದೂ ಅವರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 10

  Happy
 • 4

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !