ಈ ಮಿಲ್ಕ್‌ಶೇಕ್ ಬೆಲೆ ₹7200!

7

ಈ ಮಿಲ್ಕ್‌ಶೇಕ್ ಬೆಲೆ ₹7200!

Published:
Updated:
Deccan Herald

ಮಿಲ್ಕ್‌ಶೇಕ್‌ಗಳ ರುಚಿಗೆ ಮನಸೋಲದವರು ಯಾರಿದ್ದಾರೆ ಹೇಳಿ? ವೆನಿಲಾ, ಸ್ಟ್ರಾಬೆರಿ, ಬಾಳೆಹಣ್ಣು, ಚಾಕೊಲೇಟ್‌ ಹೀಗೆ ವಿವಿಧ ರುಚಿ ಮತ್ತು ಸ್ವಾದಗಳಲ್ಲಿ ಹಲವು ಬಗೆಯ ಮಿಲ್ಕ್‌ಶೇಕ್‌ಗಳು ದೊರೆಯುತ್ತವೆ. ಆದರೆ ಗಿನ್ನಿಸ್‌ ವಿಶ್ವದಾಖಲೆ ಪುಸ್ತಕದಲ್ಲಿ ಸ್ಥಾನ ಸಂಪಾದಿಸಿರುವ ವಿಶ್ವದ ದುಬಾರಿ ಮಿಲ್ಕ್‌ಶೇಕ್‌ ಬಗ್ಗೆ ಎಂದಾದೂ ಕೇಳಿದ್ದೀರಾ? ಒಂದು ಲೋಟ ಮಿಲ್ಕ್‌ಶೇಕ್‌ ಸವಿಯಬೇಕೆಂದರೆ, ₹7,200 ಪಾವತಿಸಬೇಕು!

‘ಕಾಸಿಗೆ ತಕ್ಕಂತೆ ಕಜ್ಜಾಯ’ ಎಂಬ ಗಾದೆ ಮಾತಿನಂತೆ, ಇದು ಹಲವು ವಿಶೇಷಗಳನ್ನು ಒಳಗೊಂಡಿದೆ. ಇದನ್ನು ಅಮೆರಿಕದ ನ್ಯೂಯಾರ್ಕ್‌ ನಗರದ ರೆಸ್ಟೊರೆಂಟ್‌ವೊಂದರಲ್ಲಿ ಶೆಫ್‌ ಆಗಿ ಕೆಲಸ ಮಾಡುತ್ತಿರುವ ಜೊ ಕ್ಯಾಲ್ಡ್ರಿಯೋನ್‌ ಅವರು ತಯಾರಿಸಿದ್ದಾರೆ. ‘ಲಕ್ಸ್‌ ಮಿಲ್ಕ್‌ಶೇಕ್‌’ ಎಂದು ಇದಕ್ಕೆ ಅವರು ಹೆಸರಿಟ್ಟಿದ್ದಾರೆ.

ಕೊಬ್ಬಿನಾಂಶ ಹೆಚ್ಚಾಗಿರುವ ಹಾಲು ನೀಡುವಂತಹ ಜೆರ್ಸಿ ತಳಿ ಹಸುಗಳ ಹಾಲಿಗೆ, ಇಂಗ್ಲೆಂಡ್‌ನ ಡೆವನ್‌ನಲ್ಲಿ ತಯಾರಿಸುವಂತಹ ವಿಶಿಷ್ಟವಾದ ಗಾಢ ‘ಡೆವನ್‌ಶೈರ್ ಲಕ್ಸುರಿ ಕ್ಲಾಟೆಡ್‌ ಮಿಲ್ಕ್‌ ಕ್ರೀಮ್‌ ಬೆರೆಸಿ, ವೆನಿಲಾ ಸ್ವಾದಕ್ಕಾಗಿ, ಥಿಟಿಯನ್ ತಳಿಯ ವೆನಿಲಾ ಬೀನ್ಸ್‌ಗಳನ್ನು ಬಳಸಿ ತಯಾರಿಸಿರುವ ವೆನಿಲಾ ಐಸ್‌ಕ್ರೀಂ ಬಳಸಲಾಗಿದೆ. ವೆನಿಲಾ ಸ್ವಾದವನ್ನು ಮತ್ತಷ್ಟು ಹೆಚ್ಚಿಸುವುದಕ್ಕಾಗಿ ಮಡಾಗಾಸ್ಕರ್‌ನಲ್ಲಿ ಬೆಳೆಯುವ ವೆನಿಲಾ ಪ್ಲ್ಯಾನಿಫೋಲಿಯಾ ಬೀನ್ಸ್‌ ಕೂಡ ಬೆರೆಸಲಾಗಿದೆ. ಈ ಐಸ್‌ಕ್ರೀಂ ಅನ್ನು ಹಾಲಿನಲ್ಲಿ ಬೆರೆಸುವುದಕ್ಕೂ ಮುನ್ನ 23 ಕ್ಯಾರೆಟ್ ಚಿನ್ನವನ್ನೂ ಲೇಪಿಸಲಾಗುತ್ತದೆ!

ಸಿಹಿ ರುಚಿಗಾಗಿ ಸಕ್ಕರೆ ಮತ್ತು ವೆನಿಲಾ ಮಿಶ್ರಿತ ವಿಪ್ಪ್‌ಡ್‌ ಕ್ರೀಂ ಬಳಸಲಾಗಿದೆ. ಮಿಲ್ಕ್‌ಶೇಕ್‌ ತಯಾರಾದ ನಂತರ ಅದನ್ನು ಲೋಟಕ್ಕೆ ಸುರಿದ ಮೇಲೆ ಮತ್ತೊಮ್ಮೆ ವೆನಿಲಾ ಐಸ್‌ಕ್ರೀಂ ಇಟ್ಟು, ಅದರ ಮೇಲೆ ಚಿನ್ನವನ್ನು ಲೇಪಿಸಲಾಗುತ್ತದೆ. ನಂತರ ‘ಲೀ ಕ್ರೆಮೊಸ್‌ ಬಾಲ್ಡಿಜೋನ್ಸ್‌’ ಎಂಬ ಸಾಸ್‌ ಅನ್ನು ಹಾಕಲಾಗುತ್ತದೆ. ಈ ಸಾಸ್‌ನ ವಿಶೇಷವೆಂದರೆ, ‘ವೆನಿಜುವೆಲಾದಲ್ಲಿ ದೊರೆಯುವ ಕೋಕ, ಹೇಜಲ್‌ನಟ್, ನೀರು ಬೆರೆಸದ ಕತ್ತೆ ಹಾಲು ಮತ್ತು ಕಬ್ಬಿನ ಹಾಲು ಬಳಸಿ ತಯಾರಿಸಲಾಗುತ್ತದೆ. 

ಅಲಂಕಾರಕ್ಕಾಗಿ ಲುಕ್ಸಾರ್ಡೊ ಗಾರ್ಮೆಂಟ್‌ ಮರಾಸ್ಚಿನೊ ಎಂಬ ವಿಶೇಷ ಚೆರ್ರಿ ಹಣ್ಣುಗಳನ್ನು ಹಾಕಲಾಗುತ್ತದೆ. ಈ ಚೆರ್ರಿಗಳನ್ನು ಇಟಲಿಯ ಲುಕ್ಸಾರ್ಡೊ ಎಂಬ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತದೆ. 

ಲೋಟವೂ ವಿಶೇಷ: ಈ ಮಿಲ್ಕ್‌ಶೇಕ್‌ ನೀಡಲು ಬಳಸುವ ಗಾಜಿನ ಲೋಟಕ್ಕೆ 3 ಸಾವಿರಕ್ಕೂ ಹೆಚ್ಚು ವಜ್ರಗಳನ್ನು ಹುದುಗಿಸಲಾಗಿದೆ. ಪ್ರಮುಖ ಆಭರಣ ತಯಾರಿಕಾ ಸಂಸ್ಥೆ ಸ್ವರೋವ್‌ಸ್ಕಿ ಸಂಸ್ಥೆ ಈ ಲೋಟವನ್ನು ವಿನ್ಯಾಸ ಮಾಡಿದೆ. →→→v

Tags: 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !