ಔರಂಗಬಾದ್‌ ನಗರದಲ್ಲೂ ‘ತಾಜ್‌ಮಹಲ್‌’

ಭಾನುವಾರ, ಮಾರ್ಚ್ 24, 2019
31 °C

ಔರಂಗಬಾದ್‌ ನಗರದಲ್ಲೂ ‘ತಾಜ್‌ಮಹಲ್‌’

Published:
Updated:

ಆಗ್ರಾದಲ್ಲಿ ತಾಜ್‌ಮಹಲ್‌ ಇದೆ. ಮಹಾರಾಷ್ಟ್ರದ ಔರಂಗಬಾದ್‌ ನಗರದಲ್ಲೂ ಅಂಥದ್ದೇ ತಾಜ್‌ಮಹಲ್‌ ಇದೆ. ಆದರೆ ಇದು ಮಿನಿ ತಾಜ್‌ಮಹಲ್ ಎಂದೇ ಪ್ರಸಿದ್ಧಿ. ಇದನ್ನು ‘ಬೀಬಿ ಕಾ ಮಕ್ಬರಾ’ (Tomb of the lady) ಎಂದೂ ಕರೆಯುತ್ತಾರೆ. ಇದರರ್ಥ ಮಹಿಳೆಯ ಸಮಾಧಿ ಎಂದು ಹೇಳಲಾಗುತ್ತದೆ.

ನೋಡಲು ಥೇಟ್ ಆಗ್ರಾದ ತಾಜ್‌ಮಹಲ್‌ನಂತೆಯೇ ಕಾಣುತ್ತದೆ. ಅದರ ವಿಶಾಲವಾದ ಕಮಾನು, ಪ್ರವಾಸಿಗರನ್ನು ಕೈ ಮಾಡಿ ಕರೆಯುತ್ತದೆ. ಕಮಾನನ್ನು ಪ್ರವೇಶಿಸಿದರೆ ಸ್ವಚ್ಛ ಹಾಲಿನಂತಹ ಬಣ್ಣದ ಈ ಸ್ಮಾರಕ ನೋಡುಗರನ್ನು ಸೆಳೆಯುತ್ತದೆ. ಮುಖ್ಯ ಸ್ಮಾರಕವನ್ನು ತಲುಪುವವರೆಗೆ ಅಕ್ಕಪಕ್ಕದಲ್ಲಿರುವ ಕಾರಂಜಿಗಳು ಸ್ವಾಗತ ಕೋರಿದಂತೆ ಭಾಸವಾಗುತ್ತದೆ. ಸ್ಮಾರಕದ ಸುತ್ತಲೂ ವಿಶಾಲವಾದ ಹೂದೋಟವಿದೆ.

ಅಮೃತಶಿಲೆಯಿಂದ ಈ ಸ್ಮಾರಕ ನಿರ್ಮಾಣವಾಗಿದೆ. ಮಿನಿ ತಾಜ್‌ಮಹಲ್‌ನ ಕೇಂದ್ರ ಭಾಗದಲ್ಲಿ ಔರಂಗಜೇಬನ ಪತ್ನಿಯ ಸಮಾಧಿ ಇದೆ. ಇದನ್ನು ಔರಂಗಜೇಬನ ಮಗ ಕಟ್ಟಿಸಿದ್ದಾನೆ. ಸಮಾಧಿಯ ಪಕ್ಕದಲ್ಲಿ ಮಸೀದಿ ಇದೆ. ಇದನ್ನು ಹೈದರಾಬಾದ್ ನಿಜಾಮ ಕಟ್ಟಿಸಿದನೆಂದು ಹೇಳಲಾಗುತ್ತದೆ. ಇಲ್ಲಿ ಆಗಿನ ಕಾಲದಲ್ಲಿ ಪ್ರಾರ್ಥನೆ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ. ನೀರಿನ ಸರಬರಾಜು ಚೆನ್ನಾಗಿರುವಂತೆ ಹೂದೋಟದ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಮಾರಕದ ಸುತ್ತಲೂ ನಾಲ್ಕು ಮಿನಾರ್‌ಗಳಿವೆ.

ಕಟ್ಟಡದ ನಿರ್ಮಾಣ
ಇದನ್ನು ಕಟ್ಟಿಸಿದವನು ಆಜಂಶಾ. ಈತ ಔರಂಗಜೇಬನ ಮಗ. ತನ್ನ ತಾಯಿ ರುಬಿಯಾ ಉದ್ ದೌರಾನಿ ಉರ್ಫ್ ದಿಲ್ರಾಜ್ ಬಾನು ಬೇಗಂ ಸ್ಮರಣಾರ್ಥ ಈ ಬೃಹತ್ ಕಟ್ಟಡ ಕಟ್ಟಿಸಿದ್ದಾನೆ. ಸುಮಾರು 1651 ರಿಂದ 1661ರವರೆಗೆ ಈ ಕಟ್ಟಡದ ನಿರ್ಮಾಣ ಕಾರ್ಯ ನಡೆದಿದೆ. ಶಹಜಹಾನ್ ತನ್ನ ಪ್ರೀತಿಯ ಮಡದಿ ಮುಮ್ತಾಜಳ ನೆನಪಿಗಾಗಿ ಆಗ್ರಾದಲ್ಲಿ ತಾಜಮಹಲ್‌ ಕಟ್ಟಿಸಿದ. ಇಲ್ಲಿ ಮಗ ತನ್ನ ತಾಯಿಯ ನೆನಪಿನಲ್ಲಿ ಕಟ್ಟಿಸಿದ್ದಾನೆ. ಇದು ಮೊಗಲ್ ವಾಸ್ತು ಕಲೆಯ ವಿನ್ಯಾಸವನ್ನು ಹೊಂದಿದೆ.

ಪ್ರವೇಶ ದ್ವಾರದ ಮೇಲೆ ಇರುವ ಶಾಸನದ ಪ್ರಕಾರ ಅತಾವುಲ್ಲ ಎಂಬ ವಾಸ್ತುಶಿಲ್ಪಿ ಹಾಗೂ ಹನ್ಸಪತ್ ರೈ (Hanspat Rai) ಎಂಬ ಎಂಜಿನಿಯರ್‌ ಈ ಕಟ್ಟಡದ ನಿರ್ಮಾಣಕ್ಕೆ ಮೂಲ ಕಾರಣರಾಗಿದ್ದಾರೆ. ಇದನ್ನು ‘ದಖನಿ ತಾಜಮಹಲ್’ ಎಂದೂ ಕರೆಯುತ್ತಾರೆ. ಅತಾವುಲ್ಲಾ, ತಾಜಮಹಲ್‌ ವಿನ್ಯಾಸಕ ಉಸ್ತಾದ್ ಅಹಮದ್ ಲಾಹೋರಿ ಮಗ. ಹೀಗಾಗಿ ಅಜಂ ಶಾ ಮಿನಿ ತಾಜ್‌ಮಹಲ್‌ ನಿರ್ಮಾಣ ಕಾರ್ಯವನ್ನು ಅತಾಉಲ್ಲಾನಿಂದಲೇ ಮಾಡಿಸಿದ್ದಾನೆ.

ಹೀಗಿದೆ ಇತಿಹಾಸ
1637 ರಲ್ಲಿ ರಾಜಕುಮಾರಿ ದಿಲ್ರಾಜ್ ಬಾನು ಬೇಗಂ, ಔರಂಗಜೇಬನನ್ನು ಆಗ್ರಾದಲ್ಲಿ ಮದುವೆಯಾದಳು. ಈಕೆ ಔರಂಗಜೇಬನ ಮೊದಲನೆಯ ಪತ್ನಿ. ಆಕೆ ಪ್ರೀತಿಯ ಹೆಂಡತಿ. ಈಕೆಗೆ ಐವರು ಮಕ್ಕಳು. ಐದನೆಯ ಮಗು ಹುಟ್ಟಿ, ಒಂದು ತಿಂಗಳ ನಂತರ ಆಕೆ ಮರಣ ಹೊಂದಿದಳು. ತಾಯಿಯನ್ನು ಕಳೆದುಕೊಂಡ ಅಜಂ ಶಾ ತೀವ್ರ ಆಘಾತಕ್ಕೆ ಒಳಗಾಗಿದ್ದ ಎಂದು ಹೇಳಲಾಗುತ್ತದೆ. ಆದ್ದರಿಂದ ತನ್ನ ಪ್ರೀತಿಯ ತಾಯಿಯ ನೆನಪಿಗಾಗಿ ಅಜಂ ಶಾ ಮಿನಿ ತಾಜ್‌ಮಹಲ್‌ ಕಟ್ಟುವ ಕಾರ್ಯ ಕೈಗೊಂಡ.

ವಾಸ್ತುಶಿಲ್ಪದಲ್ಲಿ ಅಷ್ಟಾಗಿ ಆಸಕ್ತಿ ಹೊಂದದ ಔರಂಗಜೇಬ್, ಈ ಮಹಲ್‌ ನಿರ್ಮಾಣಕ್ಕೆ ಏಳು ಲಕ್ಷವನ್ನು ಹಣ ನೀಡಿದ್ದನೆಂದು ಹೇಳಲಾಗುತ್ತದೆ. ಸ್ಮಾರಕಕ್ಕೆ ಬಳಸಲಾದ ಮಾರ್ಬಲ್ ಜೈಪುರದಿಂದ ತರಿಸಿದ್ದು. ಹೆಚ್ಚು ಹಣ ವ್ಯಯಿಸಿದ ಕಟ್ಟಿದ ಹಾಗೂ ತಾಜ್‌ನಷ್ಟು ಉತ್ಕೃಷ್ಟ ವಾಸ್ತುಶಿಲ್ಪವಲ್ಲದ ಕಾರಣ ಇದನ್ನು ‘ಬಡವನ ತಾಜ್‌ಮಹಲ್’ (ಗರೀಬ್ ಆದ್ಮಿ ಕಾ ತಾಜ್‌ಮಹಲ್)ಎಂದೂ ಕರೆಯಲಾಗುತ್ತದೆ.

ತಲುಪುವುದು
ಬೆಂಗಳೂರಿನಿಂದ ಔರಂಗಾಬಾದ್‌ಗೆ ನೇರವಾಗಿ ವಿಮಾನ, ರೈಲು ಹಾಗೂ ಬಸ್‌ ಸೌಲಭ್ಯಗಳಿವೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಪುಣೆಗೆ ತಲುಪುವ ವ್ಯವಸ್ಥೆ ಇದ್ದರೆ, ಅಲ್ಲಿಂದ ಔರಂಗಾಬಾದ್‌ಗೆ ಸುಲಭವಾಗಿ ಸೇರಬಹುದು. ಔರಂಗಬಾದ್‌ ನಗರದಿಂದ ಐದು ಕಿಮೀ ದೂರದಲ್ಲಿರುವ ಈ ತಾಜ್‌ಮಹಲ್‌ ತಲುಪಲು ಸಾಕಷ್ಟು ರಿಕ್ಷಾ, ಖಾಸಗಿ ವಾಹನಗಳು ಲಭ್ಯವಿವೆ.

**

ಇನ್ನಷ್ಟು ಪ್ರೇಕ್ಷಣೀಯ ತಾಣಗಳು
ಔರಂಗಾಬಾದ್‌ನಲ್ಲಿ 36ಕ್ಕೂ ಹೆಚ್ಚು ಪ್ರವಾಸಿ ಸ್ಥಳಗಳಿವೆ. ಅದರಲ್ಲಿ ಮುಖ್ಯವಾಗಿ ಎಲ್ಲೋರ ಗುಹೆಗಳು, ಅಜಂತಾ ಗುಹೆಗಳು, ಘೃಷ್ಣೇಶ್ವರ ಜ್ಯೋತಿರ್ಲಿಂಗ, ಔರಂಗಾಬಾದ್ ಗುಹೆಗಳು, ಭದ್ರ ಮಾರುತಿ, ಜೈನ ದೇವಾಲಯ ಖುಲ್ದಾಬಾದ್, ದೌಲತಾಬಾದ್ ಕೋಟೆ, ಪಾಂಚಕ್ಕಿ. ಈ ಎಲ್ಲ ತಾಣಗಳು ಔರಂಗಬಾದ್‌ ಕೇಂದ್ರದಿಂದ ನೂರರಿಂದ ನೂರೈವತ್ತು ಕಿ.ಮೀ ಒಳಗೆ ಇವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !