ಕಾಳ್ಗಿಚ್ಚು ತಡೆಗೆ ಸಿಬ್ಬಂದಿ ನಿಯೋಜಿಸಲು ಸೂಚನೆ

ಬುಧವಾರ, ಮಾರ್ಚ್ 20, 2019
25 °C
ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಂದ ಪ್ರಗತಿ ಪರಿಶೀಲನಾ ಸಭೆ

ಕಾಳ್ಗಿಚ್ಚು ತಡೆಗೆ ಸಿಬ್ಬಂದಿ ನಿಯೋಜಿಸಲು ಸೂಚನೆ

Published:
Updated:
Prajavani

ಚಾಮರಾಜನಗರ: ಬೇಸಿಗೆಯಲ್ಲಿ ಅರಣ್ಯ ಪ್ರದೇಶದಲ್ಲಿ ಸಂಭವಿಸುವ ಬೆಂಕಿ ಅನಾಹುತಗಳನ್ನು ತಪ್ಪಿಸಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶುಕ್ರವಾರ ಸೂಚಿಸಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಸಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. 

‘ಬೇಸಿಗೆಯಲ್ಲಿ ಅಗ್ನಿ ಅನಾಹುತ ಪ್ರಕರಣಗಳು ವರದಿಯಾಗುತ್ತಿವೆ. ಬೆಂಕಿ ತೀವ್ರವಾಗಿ ಹರಡದಂತೆ ಸಾಕಷ್ಟು ಪೂರ್ವ  ಸಿದ್ಧತೆ ಮಾಡಿಕೊಂಡಿರಬೇಕು’ ಎಂದರು.

‘ಅರಣ್ಯ ಪ್ರದೇಶದಲ್ಲಿ ಇರುವ ಕೆರೆ, ಇತರೆ ನೀರಿನ ಮೂಲಗಳ ಸಮರ್ಪಕ ನಿರ್ವಹಣೆ ಮಾಡಬೇಕು. ಪ್ರಾಣಿಪಕ್ಷಿಗಳಿಗೆ ನೀರು ಲಭ್ಯ ಆಗಬೇಕು. ನೀರಿನ ಸೌಕರ್ಯಗಳಿಗೆ ವಿಶೇಷ ಗಮನ ನೀಡಬೇಕು’ ಎಂದು ಸಲಹೆ ನೀಡಿದರು.

ದಾಸ್ತಾನು ಮಾಡಿ: ‘ಜಿಲ್ಲೆಯಲ್ಲಿ ಮೇವು ದಾಸ್ತಾನು ಮಾಡಬೇಕು. ಈಗಾಗಲೇ ಮೇವು ಕಿಟ್ಟನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ. ಎಷ್ಟು ಪ್ರಮಾಣದಲ್ಲಿ ಬೆಳೆಯಲಾಗಿದೆ ಎಂಬ ಬಗ್ಗೆ ವರದಿ ನೀಡಿ’ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರಿಗೆ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ‘ಮೇವು ಕಿಟ್ ವಿತರಣೆ ಹಾಗೂ ಮೇವು ಬೆಳೆದ ಕುರಿತು ಸಮಗ್ರವಾಗಿ ಛಾಯಾಚಿತ್ರಗಳೊಂದಿಗೆ ವರದಿ ಸಲ್ಲಿಸಬೇಕು. ಮುಂದೆ ಜಿಲ್ಲೆಯ ಯಾವ ಯಾವ ಭಾಗಗಳಲ್ಲಿ ಮೇವು ಕಿಟ್ ವಿತರಣೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನೂ ನೀಡಬೇಕು’ ಎಂದರು. 

ಕೃಷಿ ಇಲಾಖೆ ಕೈಗೊಂಡಿರುವ ಇಲಾಖೆ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದ ಸಚಿವರು, ‘ಬಾಕಿ ಇರುವ ಬೆಳೆ ವಿಮೆ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೆರವು ಇಲಾಖೆ ವತಿಯಿಂದ ನೀಡಬೇಕು’ ಎಂದು ತಿಳಿಸಿದರು.

‌ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೊಳಚೆ ನಿರ್ಮೂಲನಾ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಲೋಕೋಪಯೋಗಿ ಇಲಾಖೆ, ಸಾಮಾಜಿಕ ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಲಾಯಿತು.

ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

‘ರಸ್ತೆ ಕಾಮಗಾರಿ ತ್ವರಿತಗೊಳಿಸಿ’
ಚಾಮರಾಜನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಚಾಮರಾಜನಗರ ಪಟ್ಟಣದಲ್ಲಿಯೂ ಅಪೂರ್ಣಗೊಂಡಿರುವ ಕಡೆ ರಸ್ತೆ ಕೆಲಸ ಶೀಘ್ರವಾಗಿ ಪೂರೈಸಬೇಕು. ನಗರಸಭೆ ಅಧಿಕಾರಿಗಳು, ಹೆದ್ದಾರಿ ಇಲಾಖೆ ಅಧಿಕಾರಿಗಳು ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪುಟ್ಟರಂಗಶೆಟ್ಟಿ ತಾಕೀತು ಮಾಡಿದರು.

ನೀರು ಸೌಲಭ್ಯ ಒದಗಿಸಿ: 'ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು. ಸಮಸ್ಯೆ ಇರುವ ಪ್ರದೇಶಗಳಿಗೆ ಆದ್ಯತೆ ಮೇರೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಸಣ್ಣ ನೀರಾವರಿ ಇಲಾಖೆ, ಕಾವೇರಿ ನೀರಾವರಿ ನಿಗಮದ ವತಿಯಿಂದ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಕಾಮಗಾರಿ ಸಹ ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಸಚಿವರು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !