ನಾವು ಗೆಳೆಯರು, ಭೂತಾನದ ಪಾರು ನಗರದ ಹೊರವಲಯದಲ್ಲಿರುವ ಅತಿಥಿಗೃಹದಲ್ಲಿ ಬಿಡಾರ ಬಿಟ್ಟಿದ್ದೆವು. ಕೋಣೆಯ ಕಿಟಕಿ ತೆಗೆದರೆ ಎದುರಾ ಎದುರು, ಆಗಸಕ್ಕೆ ಗೋಡೆ ಕಟ್ಟಿದಂತೆ ಪರ್ವತವೊಂದು ಆಕ್ರಮಣ ಮಾಡುವ ಯೋಧನಂತೆ ನಿಂತಿರುವುದು ಕಾಣುತ್ತಿತ್ತು. ಅದುವೇ ಭೂತಾನ್ ಪ್ರವಾಸೋದ್ಯಮದ ಆಕರ್ಷಣೆಯ ಬಿಂದುವಾಗಿರುವ ಟೈಗರ್ನೆಸ್ಟ್. ಅದರಲ್ಲಿ ಮೇಲ್ಮುಖವಾಗಿ ನಿಲ್ಲಿಸಿದ ಮೆಕ್ಕೆಜೋಳದ ತೆನೆಗಳಂತೆ ಮೂರು ಶಿಖರಗಳಿದ್ದವು. ನಡುವಣ ಶಿಖರದ ತುದಿ ಒಡೆದು ಬಾಯಿಬಿಟ್ಟಂತ್ತಿತ್ತು. ಅಲ್ಲಿನ ವಿಹಾರದ ಕಡುಬಣ್ಣದ ಪಗೋಡ ಮತ್ತು ಗೋಡೆಗಳಿಂದ ಅದು ಶಿಖರಕ್ಕಾದ ಗಾಯದಂತೆಯೂ ತೋರುತ್ತಿತ್ತು. ಗುಹೆಯ ಕೆಳಗಿನ ಕಡಿದಾದ ಬಂಡೆಗಳು ಸೀಳಿ ಹೊಳಕೆಗಳಾಗಿ ಉದುರಿದ್ದು, ಹುಲಿಯ ಬಾಯಿಯಂತೆಯೂ ಕಾಣುತ್ತವೆ. ಆದರೆ ನನಗದು ಹಲ್ಲುದುರಿದ ವೃದ್ಧಭಿಕ್ಕುವಿನ ಬೊಚ್ಚುಬಾಯಾಗಿ ಕಂಡಿತು.

ಟೈಗರ್ನೆಸ್ಟಿನ ಈ ಗುಹೆಯೇ 8ನೇ ಶತಮಾನದಲ್ಲಿ, ಭಾರತದಿಂದ ಧಮ್ಮವನ್ನು ಟಿಬೆಟ್-ಭೂತಾನಗಳಿಗೆ ಕೊಂಡೊಯ್ದ ಗುರು ಪದ್ಮಸಂಭವ ಯೋಗಸಾಧನೆಯ ತಾಣ. ಗುರು ರಿಂಪೋಚೆ ಎಂದು ಕರೆಯಲಾಗುವ ಪದ್ಮಸಂಭವನು ಟಿಬೆಟ್ಟಿನ ಸ್ಥಳೀಯ ಮಾಂತ್ರಿಕಶಕ್ತಿಗಳನ್ನು ಪಳಗಿಸಿದವನೆಂಬ ಖ್ಯಾತಿಯುಳ್ಳವನು. ಎರಡನೇ ಬುದ್ಧನೆನಿಸಿಕೊಂಡವನು. ಇವನು ನೆಲೆಸಿದ್ದ ಈ ಗುಹೆಯನ್ನು ಭೂತಾನಿಗರು ತಕ್ತ್ಸಂಗ್ (ಹುಲಿಗುಹೆ) ಎನ್ನುವರು. ಈ ಹುಲಿಯ ಬಗ್ಗೆ ಒಂದು ಮಿತ್ ಇದೆ. ವಜ್ರಯಾನಿ ಪಂಥದ ಪದ್ಮಸಂಭವನು ಯೋಗಿನಿಯರನ್ನು ಹುಲಿಯಾಗಿ ರೂಪಾಂತರಿಸಿ ಈ ಗುಹೆಗೆ ಹಾರಿಬಂದು ತಾಂತ್ರಿಕ ಸಾಧನೆ ಮಾಡಿದವನಂತೆ. ಈ ರೂಪಕಕತೆಯಲ್ಲಿ ನಾರೀಯೋಗದ ಅಥವಾ ವಜ್ರಯಾನದ ರಹಸ್ಯ ತತ್ವಗಳು ಅಡಗಿರುವಂತಿವೆ. ಎಡಗೈಯಲ್ಲಿ ಕಪಾಲವನ್ನೂ ಬಲಗೈಯಲ್ಲಿ ಮುದ್ರೆಯನ್ನೂ ಧರಿಸಿ ಕಮಲಪೀಠದಲ್ಲಿ ಕೂತಿರುವ ಪದ್ಮಸಂಭವನ ಪಟಗಳನ್ನು ನಾನು ಮುಂಡಗೋಡಿನ ಟಿಬೆಟನ್ ವಿಹಾರದಲ್ಲಿ ಕಂಡಿರುವೆ. ಪದ್ಮಸಂಭವನಿಗೆ ಈ ಹೆಸರು ಬಂದಿದ್ದೇ ಆತ ಕಮಲದೊಳಗೆ ಜನಿಸಿದ್ದರಿಂದ. ಆತ ರಾಜಕುಮಾರಿ ಮಂದಾರವಾಗೆ ಗುಪ್ತವಾದ ತಾಂತ್ರಿಕಯೋಗವನ್ನು ಕಲಿಸಿದನೆಂದು ಕತೆಯಿದೆ. ಪದ್ಮಸಂಭವ ಯೋಗಸಾಧನೆ ಮಾಡಿದ ಮತ್ತೊಂದು ಗುಹೆ ಭೂತಾನದಲ್ಲಿದೆ. ನೇಪಾಳದಲ್ಲೂ ಇದೆ. ಒಟ್ಟಿನಲ್ಲಿ ಆತ ಗುಹೇಶ್ವರ.

ಟೈಗರ್ನೆಸ್ಟ್ ಭೂತಾನಿ ಬೌದ್ಧರ ಪವಿತ್ರ ಯಾತ್ರಾಸ್ಥಳ. ಈ ಗುಹಾವಿಹಾರಕ್ಕೆ ಕಡಿದಾದ ಪರ್ವತವನ್ನೇರಿ ಭೂತಾನಿನ ಭಿಕ್ಕುಗಳು- ಉಪಾಸಕರು ಇರುವೆಗಳಂತೆ ಪಾಳಿಗಟ್ಟಿ ಹೋಗುವರು. ಹಿಮಾಲಯ ಸೆರಗಿನಲ್ಲಿರುವ ಬಹುತೇಕ ವಿಹಾರಗಳು ಕಡಿದಾದ ಪರ್ವತಗಳಲ್ಲಿವೆ. ಲಡಾಖಿನಲ್ಲಂತೂ ಅವು ಹತ್ತುವುದಕ್ಕೆ ಕಷ್ಟಕರವಾದ ಎತ್ತರದಲ್ಲಿವೆ. ಹತ್ತು ಸಾವಿರ ಅಡಿ ಎತ್ತರದಲ್ಲಿರುವ ಟೈಗರ್ನೆಸ್ಟಿನ ಚಾರಣ, ಹೋಗಿಬರುತ್ತ ಹದಿನಾಲ್ಕು ಕಿಲೋಮೀಟರ್ ಫಾಸಲೆ. ಸಾಮಾನ್ಯವಾಗಿ ಚಾರಣಿಗರು ಬೆಳಗಿನ ಜಾವವೇ ನಡಿಗೆ ಆರಂಭಿಸುವರು. ನಾವು ಪರ್ವತದ ಬಡ್ಡೆಗೆ ಬರುವ ಹೊತ್ತಿಗೆ ಯೂರೋಪಿನ ಚಾರಣಿಗರು ಏರಲು ಶುರುಮಾಡಿದ್ದರು. ಏರುಗರು ಪರ್ವತದ ಬುಡದಲ್ಲಿ ಮಾರುವ ದೊಣ್ಣೆಗಳನ್ನು ಖರೀದಿಸುವರು. ಭೂತಾನ್ ಸರ್ಕಾರವು ಟೈಗರ್ನೆಸ್ಟಿಗೆ ಬೇಕೆಂದೇ ರಸ್ತೆ ನಿರ್ಮಿಸಿಲ್ಲ. ಮೆಟ್ಟಿಲು ಕೂಡ ಪೂರ್ಣ ಇಲ್ಲ. ಚಾರಣದ ರಸ್ತೆಯಿರುವ ಪರ್ವತದ ಮೈ ಮನುಷ್ಯರ ತುಳಿತಕ್ಕೆ ಒಳಗಾಗಿ ದೂಳಾಗಿತ್ತು. ಸಡಿಲಗೊಂಡ ಮಣ್ಣು ಮಳೆಗೆ ಕೆಳಕ್ಕೆ ಹರಿದುಹೋಗಿ ಕೊರಕಲು ಬಿದ್ದಿದ್ದವು.

ಟೈಗರ್ನೆಸ್ಟ್ ಚಾರಣವು ಖುಷಿ ಕೊಡುವುದು- ತೀಡುವ ತಂಗಾಳಿಗೆ ಮತ್ತು ಅಲ್ಲಿರುವ ವರ್ಣರಂಜಿತ ವನರಾಶಿಗೆ. ಚಳಿಗಾಲದಲ್ಲಿ ಇಲ್ಲಿನ ಕಾನನವೆಲ್ಲ ಬಿಳಿಚಿಕೊಂಡ ರೋಗಿಯಂತೆ ಹಿಮವಸ್ತ್ರ ಧರಿಸಿಬಿಡುತ್ತವೆಯಂತೆ. ನಾವು ಹೋಗಿದ್ದು ಬೇಸಿಗೆಗೆ. ಶಾವಿಗೆಯಂತೆ ಪಾಚಿ ಇಳಿಬಿದ್ದು ಮರಗಳೆಲ್ಲ ಜೂಲುಜೂಲಾಗಿದ್ದವು. ಮಹಾಜೇಡವೊಂದು ತನ್ನ ಜಾಲದಿಂದ ವನವನ್ನೇ ಬಂಧಿಸಿದಂತಿದ್ದ ಈ ಜೂಲುಗಳು, ವಾರೆಯಾಗಿ ತೂರುವ ಸೂರ್ಯರಶ್ಮಿಯಲ್ಲಿ ಹೊಳೆಯುತ್ತ, ಕಾಡನ್ನು ಲಗ್ನಮಂಟಪ ಮಾಡಿದ್ದವು. ಕೆಚ್ಚನೆಯ ಕಪ್ಪನೆಯ ಗಿಳಿಹಸಿರಿನ ಎಲೆಗಳು: ಪರ್ಣವರ್ಣರಂಜಿತ. ಕೆಂಪೆಲೆಯ ಮರಗಳಂತೂ ಸೂರ್ಯರಶ್ಮಿಯಲ್ಲಿ ನೆತ್ತರ ಜಳಕ ಮಾಡಿದಂತಿದ್ದವು. ಎತ್ತರಕ್ಕೆ ಬೆಳೆದ ಅಪರಿಚಿತವಾದ ನೂರಾರು ಹಳೆಯ ಮರಗಳು. ಅದೊಂದು ಪವಿತ್ರವನ. ಮರ ಕಡಿಯುವಂತಿಲ್ಲ.

ಟೈಗರ್ನೆಸ್ಟ್ ವಿಹಾರಕ್ಕೆ ಮೊದಲು ಎರಡು ಚೂಪಾದ ಕೋಡುಗಲ್ಲುಗಳ ನಡುವಿನ ಇಕ್ಕಟ್ಟಾದ ಕಲ್ಲುಸಂದಿಯಿದೆ. ಆ ಹಾದಿಯ ಮೂಲಕ ಒಂದು ಶಿಖರದಿಂದ ಇನ್ನೊಂದು ಶಿಖರಕ್ಕೆ ದಾಟಬೇಕು. ಎರಡೂ ಪರ್ವತ ಕೋಡುಗಳ ನಡುವೆ ಭೋರ್ಗರೆಯುತ್ತ ಬೀಳುವ ಜಲಪಾತ. ನನ್ನ ಚಾರಣದ ಅನುಭವದಲ್ಲಿ ಇಷ್ಟೊಂದು ರುದ್ರಸೌಂದರ್ಯದ ತಾಣ ಕಾಣಲಿಲ್ಲ. ಜಲಪಾತ ದಾಟಿದರೆ ಪದ್ಮಸಂಭವ ವಿಹಾರ. ಹಕ್ಕಿ ನೋಟದಲ್ಲಿ ಕಾಣುವ ವೃತ್ತಪತ್ರಿಕೆಯನ್ನು ಉದ್ದಕ್ಕೆ ಹಾಸಿದಂತೆ ಪಾರು ನಗರದ ದೃಶ್ಯ. ಕೆಳಗೆ 90 ಡಿಗ್ರಿ ಇಳಿಜಾರಿನಲ್ಲಿರುವ ಎದೆ ಝಲ್ಲೆನಿಸುವ ಬಂಡೆ ಪ್ರಪಾತ. ಅದರ ತುಂಬ ಕಿಕ್ಕಿರಿದ ಪೈನ್ಕಾಡು. ಕೆಲವು ಪ್ರವಾಸಿಗಳು ಇಲ್ಲಿ ಜಾರಿ ಬಿದ್ದು ಪ್ರಾಣ ಹೋಗಿರುವುದುಂಟಂತೆ.

ಅದೊಂದು ಕಟ್ಟಿಗೆಯಿಂದ ಗೇದ ವಿಹಾರ. ಸುತ್ತಲೂ ಧಮ್ಮಮಂತ್ರದ ಸಿಲಿಂಡರುಗಳು. ಕೆಂಬಣ್ಣ ಎಲ್ಲೆಲ್ಲೂ ಕಣ್ಣಿಗೆ ತಿವಿಯುತ್ತಿತ್ತು. ಬೌದ್ಧಮಂತ್ರ ಬರೆದ ಪತಾಕೆಯ ಹಾರಗಳು ಗಾಳಿಗೆ ಪಟಪಟಿಸುತ್ತಿದ್ದವು. ಅಲ್ಲಿರುವ ತರುಣ ತರುಣಿಯರಾದ ಗೈಡುಗಳಿಗೆ ಇರುವ ಧಮ್ಮದ ಜ್ಞಾನವು ಬೆರಗುಗೊಳಿಸಿತು. ನಾವು ಮಧ್ಯಾಹ್ನದ ಹೊತ್ತಿಗೆ ಕೆಳಗಿಳಿಯಬೇಕೆಂದೂ ನಮ್ಮ ಮಾರ್ಗದರ್ಶಿ ಸೋನು ಸೋನಂ ಹೇಳಿದ್ದನು. ಆತ ಮನೆಯಿಂದ ಕಟ್ಟಿಕೊಂಡು ಬಂದ ಬುತ್ತಿ ಇಟ್ಟುಕೊಂಡು ಪರ್ವತದ ಬುಡದಲ್ಲಿ ನಮಗಾಗಿ ಕಾಯುತ್ತಿದ್ದನು. ಸರಸರ ಇಳಿಯತೊಡಗಿದೆವು. ಏರುವಿಕೆಯೇ ಕಷ್ಟ. ಇಳಿವಲ್ಲ. ಆದರೂ ಹಾದಿಯ ದೃಶ್ಯಗಳಿಗೆ ಮರುಳಾಗಿ ತಡವಾಯಿತು. ಬಹಳ ಹೊತ್ತು ಕಾದ ಸೋನಂ, ಆತಂಕದಿಂದ ಅರ್ಧದಾರಿ ಹತ್ತಿ ಬಂದಿದ್ದನು. ಅವನ ಮಗನೂ ಅವನ ಗರ್ಭಿಣಿ ಹೆಂಡತಿಯೂ ಹಸಿದಿರಬೇಕು. ನಮಗಾಗಿ ತಡೆದುಕೊಂಡಿದ್ದರು. ಹ್ಞಾಂ! ಭೂತಾನ್ನಲ್ಲಿ ನಾವು ಕಂಡ ಅತ್ಯಂತ ಸುಂದರಜೋಡಿ ಸೋನಂ ದಂಪತಿಗಳದ್ದು. ಸೋನಂ, ಹುಲಿ ಸವಾರಿ ಮಾಡಿದ ಪದ್ಮಸಂಭವನಂತೆ ತಾಂತ್ರಿಕ ಯೋಗಿಯಲ್ಲ. ಚೆಲುವಾದ ಹೆಣ್ಣನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿ, ಪ್ರೀತಿಯ ಮಕರಂದವನ್ನು ಹೃತ್ಕಮಲದೊಳಗೆ ತುಂಬಿಕೊಂಡು ಬಾಳುತ್ತಿರುವ ಸಾಮಾನ್ಯ ಗೃಹಸ್ಥ; ಬೇಂದ್ರೆ ಕವನದ ನಾಯಕನಂತೆ ‘ಏಳುಮೆಟ್ಟಿನ ಹುಲಿಯ ಬೀರಬೇಂಟೆಯ ಬಿಡಿಸಿ ಮಗುವ ಮುದ್ದಾಡುವೊಲು ಮಾಡಿದಾಕೆ’ ಎಂದು ಅವಳನ್ನು ಸದಾ ಕೀರ್ತಿಸುವ ಪ್ರೇಮಯೋಗಿ.

ಟೈಗರ್ನೆಸ್ಟಿನ ಶಿಖರದಲ್ಲಿ ಕಂಡ ಜಲಪಾತವು ಕೆಳಗೆ ತೊರೆಯಾಗಿ ಹರಿಯುತ್ತಿತ್ತು. ಅದರ ದಡದಲ್ಲಿ ಕೂತು ಸ್ಥಳೀಯ ಭೋಜನವನ್ನು ಸವಿದೆವು. ಹುಲಿಯ ಹಾಲೆಂದು ತೊರೆಯ ಜಲವನ್ನು ಈಂಟಿದೆವು. ಕೇದಾರ ಯಮುನೋತ್ರಿ ಟೈಗರ್ನೆಸ್ಟ್ ಬಾಬಾಬುಡನ್ಗಿರಿ ಮುಳ್ಳಯ್ಯನಗಿರಿ ಮೊದಲಾದ ಯಾತ್ರಾಸ್ಥಳಗಳು ಎತ್ತರದಲ್ಲಿವೆ. ಏರುವಾಗ ದೇಹ ದಣಿದು ಮುದುಡುತ್ತದೆ. ಶಿಖರಾಗ್ರ ಮುಟ್ಟಿದ ಬಳಿಕ ಮನಸ್ಸು ಅರಳುತ್ತದೆ. ದಣಿದ ದೇಹ-ಅರಳಿದ ಮನಸ್ಸಿನ ಈ ಸಾಮರಸ್ಯವೇ ಒಂದು ಆಧ್ಯಾತ್ಮಿಕ ಅನುಭವ. ಆದರೆ ಟೈಗರ್ನೆಸ್ಟಿನಲ್ಲಿ ಶಿಖರದಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಆನಂದ ಏರುವ ಹಾದಿಯಲ್ಲೂ ಸಿಗುತ್ತದೆ. ಒಮ್ಮೆ ಚಳಿಗಾಲದಲ್ಲಿ ಟೈಗರ್ನೆಸ್ಟನ್ನು ಏರಬೇಕು. ಆಗ ಬಹುಶಃ ಜಲಪಾತ ಹೆಪ್ಪುಗಟ್ಟಿರುತ್ತದೆ. ಕಾಡು ಬೇರೆ ಹಿಮಚ್ಛಾದಿತ ಶ್ವೇತವರ್ಣಕ್ಕೆ ತಿರುಗಿರುತ್ತದೆ. ಸೋನಂ ದಂಪತಿಗಳಿಗೆ ಇನ್ನೊಂದು ಮಗುವಾಗಿರುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-2044732798

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.