ಬೆಂಗಳೂರು, ಮುಂಬಯಿ, ಕೋಲ್ಕತ್ತಾ, ದೆಹಲಿ, ಚೆನ್ನೈ ಮುಂತಾಗಿ ಭಾರತದ ಯಾವ ನಗರಕ್ಕೆ ಹೋದರೂ ವಸಾಹತುಶಾಹಿ ಕಾಲದ ಪಳೆಯುಳಿಕೆಯಾಗಿ ಕೆಲವು ರಚನೆಗಳು ಕಾಣಿಸುತ್ತವೆ. ಕಾಲೇಜು, ಕಚೇರಿ, ವಿಶ್ವವಿದ್ಯಾಲಯ, ನ್ಯಾಯಾಲಯ, ಆಸ್ಪತ್ರೆ, ಸ್ಮಾರಕ, ಸೇತುವೆಯೇ ಮೊದಲಾಗಿ ಲೋಕೋಪಯೋಗಕ್ಕಾಗಿ ಕಟ್ಟಿದ ಕಟ್ಟಡಗಳು ನೂರಾರು ವರ್ಷಗಳ ಬಳಿಕವೂ ಗಟ್ಟಿಮುಟ್ಟಾಗಿದ್ದು, ಮನಸೆಳೆಯುವಂತಿವೆ. ತಮ್ಮ ಹೆಮ್ಮೆಗೋ, ಮೇಲರಿಮೆಗೋ, ವಿಶೇಷ ಬಳಕೆಯ ದೌಲತ್ತಿಗೋ, ಐಷಾರಾಮಕ್ಕೋ ಅಂತೂ ವಸಾಹತುಶಾಹಿ ಆಡಳಿತ ಅದನ್ನು ಯಾತಕ್ಕೇ ಕಟ್ಟಿರಲಿ, ಬೇಡವೆಂದರೂ ಈಗ ನಿರ್ಮಾಣವಾಗುತ್ತಿರುವ ಸರ್ಕಾರಿ ಕಚೇರಿಗಳ ಅಭಿರುಚಿಯ ಬಡತನವನ್ನು ನೆನಪಿಗೆ ತರುತ್ತವೆ. ಅಂದಿನ ವಾಸ್ತುಶಿಲ್ಪಿಗಳ ಶ್ರೀಮಂತ ಕಲ್ಪನಾ ವಿಲಾಸ, ಸೃಜನಶೀಲತೆ, ಅದನ್ನು ಆಗ ಮಾಡುವ ಬದ್ಧತೆ, ಸಾಮರ್ಥ್ಯಗಳ ಆಳುವ ವರ್ಗ ಈಗೇಕಿಲ್ಲ ಎಂಬ ಹೋಲಿಕೆಯು ಬೇಸರವನ್ನು ಮುಂದೊತ್ತುತ್ತದೆ.

ಮುಂಬಯಿಯ ಟೈಮ್ಸ್ ಸ್ಕ್ವೇರ್ ಹಲವು ಐತಿಹಾಸಿಕ ಕಟ್ಟಡಗಳನ್ನು ಹೊಂದಿರುವ ತಾಣ. ಅಲ್ಲಿ ನಿಂತರೆ ಸುತ್ತಮುತ್ತ ಕಾಣುವ ಕಟ್ಟಡ, ಮೂರ್ತಿಗಳು ಯಾವುದೋ ಕಾಲಕ್ಕೆ, ಯಾವುದೋ ನೆಲಕ್ಕೆ ಹೋದ ಭಾಸ ಹುಟ್ಟಿಸುತ್ತವೆ. ಟೈಮ್ಸ್ ಸ್ಕ್ವೇರ್ನಲ್ಲಿರುವ ಫಿರೋಜ್ ಶಾ ಮೆಹ್ತಾ ಮೂರ್ತಿಯ ಆಚೀಚೆ ವಿಕ್ಟೋರಿಯನ್ ಗೊಥಿಕ್ ಶೈಲಿ ಮತ್ತು ಇಂಡೊ ಸರಾಸೆನಿಕ್ ಶೈಲಿಗಳು ಸೇರಿ ಆದ ಇಂಡೊ ಗೋಥಿಕ್ ರಚನೆಗಳು ಸಾಕಷ್ಟಿವೆ. ಟೈಮ್ಸ್ ಸ್ಕ್ವೇರ್ನ ಒಂದು ಪಕ್ಕ ಬೃಹನ್ಮುಂಬಯಿ ಮಹಾನಗರಪಾಲಿಕೆ (ಬಿಎಂಸಿ)ಯ ಆಕರ್ಷಕ ಕಟ್ಟಡವಿದ್ದರೆ, ಅದರ ಎದುರಿಗೆ ಕಣ್ತುಂಬುವಂತೆ ಭಾರತೀಯ ರೈಲ್ವೇಯ ಸೆಂಟ್ರಲ್ ವಿಭಾಗದ ಕೇಂದ್ರ ಕಚೇರಿ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (ಸಿಎಸ್ಸೆಂಟಿ) ಅಥವಾ ಒಂದು ಕಾಲದ ವಿಕ್ಟೋರಿಯಾ ಟರ್ಮಿನಸ್ (ವಿಟಿ) ಕಟ್ಟಡ ಕಂಗೊಳಿಸುತ್ತದೆ.

ಭಾರತದ ಅತ್ಯಂತ ಜನನಿಬಿಡ, ದಟ್ಟಣೆಯ ರೈಲುನಿಲ್ದಾಣಗಳಲ್ಲಿ ಹದಿನೆಂಟು ಪ್ಲಾಟ್ಫಾರ್ಮುಗಳಿರುವ ಮುಂಬಯಿಯ ಸಿಎಸ್ಸೆಂಟಿಯೂ ಒಂದು. 1996ರಲ್ಲಿ ವಿಕ್ಟೋರಿಯಾ ಟರ್ಮಿನಸ್ ಇದ್ದದ್ದು ಛತ್ರಪತಿ ಶಿವಾಜಿ ಟರ್ಮಿನಸ್ (ವಿಟಿ ಬದಲಿ ಸಿಎಸ್ಟಿ) ಆಗಿ, 2017ರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಸೆಂಟಿ) ಆಗಿ ಹೆಸರು ಬದಲಾಗುತ್ತ ಹೋದರೂ, ಹಳೆಯ ಕಟ್ಟಡವು ಮನಮೋಹಕವಾಗಿ ನಗರ ಮಧ್ಯದಲ್ಲಿ ನಿಂತಿದೆ. ಒಂದೂವರೆ ಶತಮಾನದಷ್ಟು ಹಳೆಯ ವಿಟಿ ಕಟ್ಟಡದ ಒಂದು ಭಾಗ ಕಚೇರಿಯಾಗಿ, ರೈಲು ನಿಲ್ದಾಣವಾಗಿ ಈಗಲೂ ಬಳಕೆಯಲ್ಲಿದ್ದರೆ ಮತ್ತೊಂದು ಭಾಗವು ರೈಲ್ವೆ ವಸ್ತು ಸಂಗ್ರಹಾಲಯವಾಗಿದೆ. ಗತದ ಹೆಸರು, ನೆನಪುಗಳನ್ನು ಅಳಿಸಿ ಹೊಸ ಸಂಕೇತಗಳನ್ನು ಸ್ಥಾಪಿಸುವ ಭರದ ನಾಯಕತ್ವವು ವಿಶ್ವವನ್ನೇ ಯುದ್ಧ ವಿನಾಶದ ಭೀತಿಗೆ ದೂಡಿರುವ ಹೊತ್ತಿನಲ್ಲಿ ಇದುವರೆಗೆ ಸಾರ್ವಜನಿಕರಿಗೆ ಪ್ರವೇಶವಿರದ ಒಳಭಾಗಗಳಿಗೆ ಗೈಡೆಡ್ ಟೂರ್ ಮೂಲಕ ಹೋಗಿ ಬಂದ ಅನುಭವ ಇಲ್ಲಿದೆ.

‘ಬಂಬಯಿ’ಯ ಜಿಐಪಿಆರ್

ಬಂಬಯಿಯು ಬಾಂಬೆ ಆಗಿ ಇವತ್ತಿನ ಮುಂಬೈ ಆಗಿರುವುದರ ಹಿಂದೆ ವಾಣಿಜ್ಯ, ರಾಜಕಾರಣ, ಜನ ವಲಸೆ, ಉತ್ಸಾಹ, ಈರ್ಷ್ಯೆ, ಮಹತ್ವಾಕಾಂಕ್ಷೆ, ಮಾದಕ ವಸ್ತು ಸಾಗಣೆಗಳ ಸುದೀರ್ಘ ಚರಿತ್ರೆಯಿದೆ. ವಸಾಹತುಶಾಹಿ ಉನ್ಮಾದದ ಪೋರ್ಚುಗೀಸರು ಮೊದಲು ಮುಂಬಯಿ ದ್ವೀಪ ಸಮೂಹಗಳ ಒಡೆತನ ತಮ್ಮದೆಂದು ಘೋಷಿಸಿಕೊಂಡರು. ಪೋರ್ಚುಗೀಸ್ ರಾಜಕುಮಾರಿ ಕ್ಯಾಥರೀನ್ ಬ್ರಗಾಂಝಳು ಇಂಗ್ಲೆಂಡಿನ ರಾಜಕುಮಾರ ಎರಡನೆಯ ಚಾರ್ಲ್ಸ್ನನ್ನು ಮದುವೆಯಾದಾಗ ವರದಕ್ಷಿಣೆಯಾಗಿ ಏಳು ದ್ವೀಪಗಳ ಸಮೂಹವು ಅಳಿಯನಾಗಲಿದ್ದ ಚಾರ್ಲ್ಸ್ಗೆ ವರ್ಗಾವಣೆಯಾಯಿತು. ಮುಂಬಾ ಆಯಿಯ ಒಕ್ಕಲಾದ ಕೋಳಿ ಜನಾಂಗವು ಮುಖ್ಯವಾಗಿ ವಾಸಿಸುತ್ತಿದ್ದ ದ್ವೀಪ ಸಮೂಹದ ಪ್ರಾಮುಖ್ಯ, ಸಾಧ್ಯತೆಗಳು ಪೋರ್ಚುಗೀಸರಿಗೆ ಮೊದಲು ಹೊಳೆದಿರಲಿಲ್ಲ. ಬ್ರಿಟಿಷರಿಗೂ ಎಷ್ಟೋ ಕಾಲ ಅದರ ಪ್ರಾಮುಖ್ಯದ ಅರಿವಾಗಲಿಲ್ಲ. 1668ರಲ್ಲಿ ಬ್ರಿಟನ್ ರಾಜಸತ್ತೆಯು ಏಳು ದ್ವೀಪಗಳನ್ನು ವರ್ಷಕ್ಕೆ ಹತ್ತು ಪೌಂಡ್ ಬಾಡಿಗೆಗೆ ಈಸ್ಟ್ ಇಂಡಿಯಾ ಕಂಪನಿಗೆ ನೀಡಿತು. ಲಾಭನಷ್ಟಗಳ ಲೆಕ್ಕಾಚಾರದ ಕಂಪನಿಯ ವ್ಯಾಪಾರಿ ಮಿದುಳಿಗೆ ವಿಧವಿಧದ ಸಾಧ್ಯತೆಗಳು ಹೊಳೆದವು.

ಕಂಪನಿಯು 1782ರಲ್ಲಿ ಹಾರ್ನ್ಬಿ ವೆಲ್ಲಾರ್ಡ್ ಯೋಜನೆಯ ಮೂಲಕ ಸಮುದ್ರದ ಕೆಲಭಾಗ ತುಂಬಿಸಿ, ಭೂಭಾಗವನ್ನು ಹೆಚ್ಚಿಸಿ, ಏಳು ದ್ವೀಪಗಳನ್ನು ಸೇರಿಸಿ ಬಂಬಯಿಯನ್ನು ಬಂದರು ನಗರವಾಗಿ ಬೆಳೆಸಿತು. ಚಿಕ್ಕ ಊರು ಇದ್ದದ್ದು ದೊಡ್ಡ ಊರಾಗಿ, ಪಟ್ಟಣವಾಗಿ, ನಗರವಾಗಿ, ಮಹಾನಗರವಾಗಿ ಬೆಳೆದೇ ಬೆಳೆಯಿತು. ಅದುವರೆಗೆ ಅಲ್ಲಿ ಅಗ್ರಿ (ಉಪ್ಪು ತೆಗೆಯುವವರು), ಕೋಳಿ (ಬೆಸ್ತರು) ಮತ್ತು ಭಂಡಾರಿ (ಸೇಂದಿ ಇಳಿಸುವವರು) ಎಂಬ ಮೂರು ಸಮುದಾಯದವರು ವಾಸಿಸುತ್ತಿದ್ದರು. ಪಟ್ಟಣವಾದ ಹೊತ್ತಿನಲ್ಲಿ ಮಹಾವಲಸೆ ಆರಂಭವಾಯಿತು. ಅದು ಇವತ್ತಿಗೂ ಮುಂದುವರೆದಿದೆ. ವಿಶ್ವದೆಲ್ಲೆಡೆಯ, ದೇಶದೆಲ್ಲೆಡೆಯ ಜನರು ಮುಂಬಯಿಗೆ ವಲಸೆ ಬರುತ್ತಲೇ ಇದ್ದು ‘ಆಲ್ಫಾ ಸಿಟಿ’ ಎನಿಸಿಕೊಂಡಿದೆ.

19ನೆಯ ಶತಮಾನದ ವೇಳೆಗೆ ಬೊಂಬಾಯಿಯಲ್ಲಿ ಬೋರಿ ಬಂದರ್ ಅತಿ ದೊಡ್ಡ ವಾಣಿಜ್ಯ ಬಂದರಾಗಿತ್ತು. ದೇಶಿ ಸರಕುಗಳಾದ ಹತ್ತಿ, ಭತ್ತ, ಸಕ್ಕರೆ, ಅಫೀಮು, ಮಸಾಲೆ ಪದಾರ್ಥ, ರೇಷ್ಮೆಗಳನ್ನು ಒಳನಾಡಿನ ವಿವಿಧ ಭಾಗಗಳಿಂದ ಬಂದರಕ್ಕೆ ತರಬೇಕಿತ್ತು. ವಿದೇಶಗಳಿಂದ ಬಂದರಿಗೆ ಬಂದದ್ದನ್ನು ಒಳನಾಡಿಗೆ ಸಾಗಿಸಲು ಉತ್ತಮ ಸಂಪರ್ಕ ಜಾಲ ಅಗತ್ಯವಾಗಿತ್ತು. ರಸ್ತೆ, ರೈಲು, ಜಲಸಾರಿಗೆ ಮಾರ್ಗಗಳೆಲ್ಲ ರೂಪುಗೊಂಡವು. ಕಡಿಮೆ ವೆಚ್ಚದಲ್ಲಿ ಹೆಚ್ಚು ಸಾಗಾಣಿಕೆ ಸಾಧ್ಯ ಮಾಡುವ ರೈಲು ಸಂಪರ್ಕವನ್ನು ಅಭಿವೃದ್ಧಿಪಡಿಸಲು ‘ಗ್ರೇಟ್ ಇಂಡಿಯನ್ ಪೆನಿನ್ಸುಲಾರ್ ರೈಲ್ವೆ’ಯನ್ನು (ಜಿಐಪಿಆರ್) ಆರಂಭಿಸಲಾಯಿತು. ಮುಂಬಯಿಯನ್ನು ಕೇಂದ್ರವಾಗಿರಿಸಿಕೊಂಡು 1849ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಜಿಐಪಿಆರ್ ಅನ್ನು ಅಭಿವೃದ್ಧಿಗೊಳಿಸಿತು.

ಜಿಐಪಿಆರ್ ನಿರ್ದೇಶಕ ಮಂಡಳಿಯಲ್ಲಿ ಹನ್ನೆರಡು ಜನರಿದ್ದರು. ಅವರಲ್ಲಿ ಜಮ್ಷೆಡ್ ಭಾಯಿ ಜೀಜೀಭಾಯಿ ಹಾಗೂ ಜಗನ್ನಾಥ ಶಂಕರ ಶೇಟ್ ಎಂಬ ಮುಂಬಯಿ ಮೂಲದ ಇಬ್ಬರು ಭಾರತೀಯ ವ್ಯಾಪಾರಿಗಳಿದ್ದರು. ಕೇಂದ್ರ ಕಚೇರಿ ಲಂಡನ್ನಿನಲ್ಲಿತ್ತು. ಮೊದಲ ರೈಲು ಬೈಕುಲಾ ಮತ್ತು ಪರೇಲಿನ ನಡುವೆ ಗಂಟೆಗೆ 24 ಕಿಲೋಮೀಟರು ವೇಗದಲ್ಲಿ ಎರಡು ಮೈಲುಗಳಷ್ಟು ಚಲಿಸಿದಾಗ ‘ಆಗ್ ಬೋಟ್’ (ಬೆಂಕಿ ದೋಣಿ) ನೋಡಲು ಸಾವಿರಾರು ಜನರು ಇಕ್ಕೆಲದಲ್ಲಿ ನೆರೆದರು. ಚಲಿಸುವ ಅದರ ಹಿಂದೆಯೇ ಓಡಿದರು. ಸುರಕ್ಷೆಗಾಗಿ ಪೊಲೀಸರನ್ನು ನೇಮಿಸಬೇಕಾಯಿತು. ಬರಬರುತ್ತ ರೈಲು ಪಯಣ ಸುಧಾರಿಸುತ್ತ ಹೋಯಿತು. 56 ಕಿ.ಮೀ. ಉದ್ದದ, ಬಾಂಬೆ, ಖಾಂದೇಶ್-ಬೇರಾರ್ಗಳನ್ನು ಸಂಪರ್ಕಿಸುವ ರೈಲು ಸಂಪರ್ಕ ಆರಂಭಗೊಂಡಿತು. ಬಳಿಕ 2100 ಕಿಲೋಮೀಟರುಗಳ ರೈಲು ರಸ್ತೆ ನಿರ್ಮಾಣವಾಗಿ ಒಳನಾಡು ಮತ್ತು ಮದರಾಸುಗಳಿಗೆ ಸಂಪರ್ಕ ಕಲ್ಪಿಸಿತು. ಯೋಜನೆ ವಿಸ್ತರಿಸುತ್ತ ಹೋದಂತೆ ಕೇಂದ್ರ ಕಚೇರಿ ಲಂಡನ್ನಿನಿಂದ ಮುಂಬಯಿಗೆ ಬಂತು. ಸುಂದರ ವಾಸ್ತುವಿನ್ಯಾಸದ ಕಟ್ಟಡವನ್ನು ಕೇಂದ್ರ ಕಚೇರಿಯಾಗಿ ಕಟ್ಟಲು ನಕಾಶೆ ಸಿದ್ಧವಾಯಿತು.

ಕಲೆಯ ನೆಲೆಯಾದ ಶಿಲೆಯ ಕಟ್ಟಡ

ಹೊಸ ಕಟ್ಟಡಕ್ಕೆ ವಾಸ್ತುವಿನ್ಯಾಸಗಳನ್ನು ಆಹ್ವಾನಿಸಲಾಗಿತ್ತು. ಎಫ್.ಡಬ್ಲ್ಯು. ವಿಲಿಯಮ್ಸ್ ಸಲ್ಲಿಸಿದ ಪ್ರಸ್ತಾವ ಅನುಮೋದನೆ ಪಡೆದುಕೊಂಡಿತು. 1878ರಲ್ಲಿ ಬೋರಿ ಬಂದರಿನಲ್ಲಿ ಕಚೇರಿಯ ನಿರ್ಮಾಣ ಕಾರ್ಯ ಆರಂಭವಾದದ್ದು ಆಮೆಗತಿಯಲ್ಲಿ ಮುಂದುವರೆಯಿತು. ಹತ್ತು ವರ್ಷ ತೆಗೆದುಕೊಂಡ ಕಾಮಗಾರಿಯು 16.14 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 1887ರಲ್ಲಿ ವಿಕ್ಟೋರಿಯಾಳು ರಾಣಿಯಾದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಪೂರ್ಣವಾಯಿತು.

ಕಟ್ಟಡಕ್ಕೆ ಆಕರ್ಷಕವಾದ ಭಾರೀ ಗೋಪುರವಿದೆ. ಅದರ ತುತ್ತತುದಿಯಲ್ಲಿ ಒಂದು ಕೈಯಲ್ಲಿ ಚಕ್ರವನ್ನೂ ಮತ್ತೊಂದರಲ್ಲಿ ದೀಪವನ್ನೂ ಹಿಡಿದ ‘ಸ್ಟಾಚ್ಯೂ ಆಫ್ ಪ್ರೋಗ್ರೆಸ್’ ನಿಲ್ಲಿಸಲಾಯಿತು. ಅದು ಈಗಲೂ ಇದೆ. ಒಮ್ಮೆ ಮಿಂಚು ಹೊಡೆದು ವಿಗ್ರಹಕ್ಕೆ ಕುಂದುಂಟಾದ ಬಳಿಕ ಎತ್ತಿದ ಕೈಯಲ್ಲಿ ಮಿಂಚು ನಿರೋಧಕವನ್ನು ಕೊಡಲಾಗಿದೆ. ಗೋಪುರದಲ್ಲಿ ಈಗಲೂ ಸರಿಯಾದ ಸಮಯ ತೋರಿಸುವ ಗಡಿಯಾರವಿದೆ. ಮೊದಲು ಗಡಿಯಾರದ ಕೆಳಗೆ ವಿಕ್ಟೋರಿಯಾ ರಾಣಿಯ ಮೂರ್ತಿಯಿತ್ತು. ಸ್ವಾತಂತ್ರ್ಯಾನಂತರ 1950ರ ಹೊತ್ತಿಗೆ ವಸಾಹತುಶಾಹಿ ಕುರುಹುಗಳನ್ನೆಲ್ಲ ಅಳಿಸಿಬಿಡುವ ಭರದಲ್ಲಿ ಮೂರ್ತಿಯನ್ನು ತೆಗೆಯಲಾಯಿತು. ಮಳೆಗಾಳಿಗೆ ತೆರೆದುಕೊಂಡು ವಿಕ್ಟೋರಿಯಾ ಸಂಗ್ರಹಾಲಯದ ಬಯಲಲ್ಲಿ ಬಿದ್ದುಕೊಂಡ ಅದು ನಂತರ ಕಾಣೆಯಾಯಿತು. (ಇವತ್ತಿಗೂ ಎಲ್ಲಿದೆಯೋ ಪತ್ತೆಯಾಗಿಲ್ಲ).

ಕಟ್ಟಡದ ಮುಖ್ಯ ದ್ವಾರದ ಎರಡೂ ಕಡೆಗಳಲ್ಲಿ ಸಿಂಹ ಮತ್ತು ಹುಲಿಯ ಮೂರ್ತಿಗಳು ಜನರನ್ನು ಘನತೆಯಿಂದ ಸ್ವಾಗತಿಸುವಂತೆ ಕುಳಿತಿವೆ. ಒಳಹೊಕ್ಕ ಕೂಡಲೇ ತ್ರೀಡಿ ಫೋಟೊದಷ್ಟು ಖಚಿತ ಚಹರೆಯ ಹಲವು ಶಿಲಾಮುಖಗಳು ಕಟ್ಟಡದ ಗೋಡೆಯ ಮೇಲೆ ಕಾಣುತ್ತವೆ. ಅವು ಹನ್ನೆರಡು ಜನ ಬೋರ್ಡ್ ಆಫ್ ಡೈರೆಕ್ಟರುಗಳವು. ಅಲ್ಲದೇ ಆ ಕಾಲದಲ್ಲಿ ಮುಂಬಯಿಯಲ್ಲಿ ವಾಸವಿದ್ದ ಜನಸಮುದಾಯಗಳನ್ನು ಆಯಾ ಸಮುದಾಯಗಳ ಸಾಂಪ್ರದಾಯಿಕ ಉಡುಪುಗಳೊಡನೆ ಸುಂದರವಾಗಿ ಕೆತ್ತಿದ್ದಾರೆ. ಅವು ಕುಂದಿಲ್ಲದೆ ಇವತ್ತಿಗೂ ಇವೆ. (ಈ ಮುಖಶಿಲ್ಪಗಳಲ್ಲಿ ಒಬ್ಬ ಮಹಿಳೆಯ ಮುಖವೂ ಇಲ್ಲದಿರುವುದು ಥಟ್ಟನೆ ಗಮನಸೆಳೆಯುತ್ತದೆ.) ಹೊರಗಣ ಗೋಡೆಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಜಿಐಪಿಆರ್ನ ಲಾಂಛನಗಳನ್ನು (ಕೋಟ್ ಆಫ್ ಆರ್ಮ್ಸ್) ಕೆತ್ತಲಾಗಿದೆ. ಮುಂಬಯಿಯ ಜನಬದುಕನ್ನು, ಸಂಸ್ಕೃತಿ- ವಾಣಿಜ್ಯವನ್ನು ಬಿಂಬಿಸುವಂತೆ ಸಾಕಷ್ಟು ಗೋಡೆಶಿಲ್ಪಗಳಿವೆ. ಬರ್ಮಾದ ತೇಗದ ಮರಗಳಿಂದ ಮಾಡಿದ ಕುಸುರಿ ಕೆತ್ತನೆಯ ಭಾರೀ ಬಾಗಿಲು ದಾಟಿ ಒಳಗೆ ಹೋದರೆ ರೈಲ್ವೆ ವಸ್ತು ಸಂಗ್ರಹಾಲಯವಿದೆ. ಕಟ್ಟಡದ ಇಂಚಿಂಚೂ ವಾಸ್ತು ಸೌಂದರ್ಯವನ್ನು ಸೂರೆಗೊಳಿಸುವಂತೆ ವಿಶಿಷ್ಟವಾಗಿದೆ.

ಚಂದದ ಕಲ್ಲು ಕಟ್ಟಡವನ್ನು ಸೂಕ್ಷ್ಮವಾಗಿ ನೋಡಿದರೆ ಎಲ್ಲೆಡೆ ಪ್ರಾಣಿ, ಪಕ್ಷಿ, ಕೀಟಗಳ ಶಿಲ್ಪಲೋಕ ಅರಳಿಕೊಂಡಿರುವುದು ಎದ್ದು ಕಾಣುತ್ತದೆ. ಪ್ರತಿ ಕಂಬ, ಬೋದಿಗೆ, ತೊಲೆ, ಕಮಾನು, ಜಾಲಂಧ್ರವೂ ಗಿಡಮರಬಳ್ಳಿಗಳನ್ನೂ, ನಾನಾ ಪ್ರಾಣಿಗಳ ಶಿಲ್ಪವನ್ನೂ ಹೊಂದಿವೆ. ಬಿದ್ದ ಮಳೆ ನೀರು ಹೊರಬರಲು ಇರುವ ಕೊಳವೆಯೂ ಹುಲಿ, ಸಿಂಹ, ಚಿರತೆ, ಕುರಿ, ಹಲ್ಲಿ, ಮಂಗ, ಹಂದಿ ಮುಂತಾದ ಪ್ರಾಣಿಗಳ ಮುಖವಾಗಿದೆ. ಹಾವು ಹಿಡಿಯುತ್ತಿರುವ ಮುಂಗುಸಿ, ಇಲಿ ಹಿಡಿಯುತ್ತಿರುವ ಬೆಕ್ಕು, ಹಾರುತ್ತಿರುವ ನವಿಲು, ನೇತುಬಿದ್ದ ಮಂಗ, ಫೂತ್ಕರಿಸುವ ಚಿರತೆ ಇತ್ಯಾದಿ ಪ್ರತಿ ಜೀವಿಯೂ ಯಾವುದೋ ಚಟುವಟಿಕೆಯಲ್ಲಿರುವಂತೆ ಕೆತ್ತಲಾಗಿದೆ. ಸಣ್ಣದೇ ಇರಲಿ, ದೊಡ್ಡದೇ ಇರಲಿ, ಜೀವಿಗಳ ರಾಚನಿಕ ಚಹರೆ ಖಚಿತವಾಗಿದೆ.

ಈ ಕಟ್ಟಡವು ಇಷ್ಟೊಂದು ವನ್ಯಜೀವಿ ಶಿಲ್ಪಗಳನ್ನು ಹೊಂದಿರಲು ಜಾನ್ ಲಾಕ್ವುಡ್ ಕಿಪ್ಲಿಂಗ್ ಕಾರಣರಾಗಿದ್ದಾರೆ. ಆತ ಆಗಷ್ಟೆ ಮುಂಬಯಿಯಲ್ಲಿ ಆರಂಭವಾಗಿದ್ದ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ನ ಪ್ರೊಫೆಸರ್ ಆಗಿದ್ದರು. ನಂತರ ಪ್ರಿನ್ಸಿಪಾಲ್ ಆದರು. ಪರಿಸರಪ್ರಿಯ ಶಿಲ್ಪಿ, ವಿನ್ಯಾಸಕಾರ ಲಾಕ್ವುಡ್ ಕಿಪ್ಲಿಂಗ್, ‘ಜಂಗಲ್ ಬುಕ್’ನಂತಹ ಹತ್ತಾರು ಜನಪ್ರಿಯ ಪುಸ್ತಕಗಳನ್ನು ಬರೆದ ರುಡ್ಯಾರ್ಡ್ ಕಿಪ್ಲಿಂಗ್ ಅವರ ತಂದೆ. ಮಗ ರುಡ್ಯಾರ್ಡ್ನ ಬಹಳಷ್ಟು ಪುಸ್ತಕಗಳಿಗೆ ತಂದೆಯೇ ಚಿತ್ರ ಬರೆದರು. ಭಾಯಿ ರಾಮಸಿಂಗ್ರಂತಹ ಸ್ಥಳೀಯ ಕಲಾವಿದರನ್ನು ತಯಾರು ಮಾಡಿದರು. ಮುಂಬಯಿಯ ಕ್ರಾಫರ್ಡ್ ಮಾರುಕಟ್ಟೆ, ಲಾಹೋರಿನ ವಸ್ತುಸಂಗ್ರಹಾಲಯ, ಲಂಡನ್ನಿನ ವಿಕ್ಟೋರಿಯಾ ಆಲ್ಬರ್ಟ್ ಮ್ಯೂಸಿಯಂಗಳನ್ನು ಚಂದಗೊಳಿಸಿದ ವಿನ್ಯಾಸಕಾರ ಅವರು.

ಕತೆಯಂತೆ ಇತಿಹಾಸ ತಿಳಿಸಿದ ಶ್ರಾವಣಿ

ಈ ಎಲ್ಲ ಕತೆ ಕೇಳುತ್ತ, ಕಣ್ಣರಳಿಸಿ ನೋಡುತ್ತ ಎರಡೂವರೆ ತಾಸು ಕಳೆದದ್ದೇ ತಿಳಿಯಲಿಲ್ಲ. ಮುಂಬಯಿಯ ಮೂರ್ನಾಲ್ಕು ಶತಮಾನಗಳ ಆಧುನಿಕ ಇತಿಹಾಸವನ್ನು ಗೈಡ್ ಆಗಿ ಜೊತೆಯಾದ ಲವಲವಿಕೆಯ ಯುವತಿ ಶ್ರಾವಣಿ ತಿಳಿಸಿಕೊಟ್ಟಳು. ನಮಗೆ ಪ್ರಶ್ನೆಗಳನ್ನು ಕೇಳುತ್ತ, ನಾವು ಕೊಟ್ಟ ಊಹೆಯ ಉತ್ತರಗಳನ್ನು ವಿಶ್ಲೇಷಿಸುತ್ತ ಮುಂಬಯಿ ಎಂಬ ನಗರವು ಇಂದಿನ ನಗರವಾದ ಚರಿತ್ರೆಯನ್ನು ಆಕರ್ಷಕವಾಗಿ ವಿವರಿಸಿದಳು. ರೈಲು ತನ್ನ ಆದಿಮ ಚಕ್ಕಡಿ ಸ್ವರೂಪದಿಂದ ಇಂದಿನ ಬುಲೆಟ್ತನದವರೆಗೆ ಹಾದು ಬಂದದ್ದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದಳು. ರೈಲ್ವೆಯವರು ಬಳಸುತ್ತಿದ್ದ ದುಡ್ಡು ಸಂಗ್ರಹಿಸುವ ಭಾರೀ ಕಬ್ಬಿಣದ ಪೆಟ್ಟಿಗೆಗಳು; ಕಟ್ಟಡದ ಯೋಜನಾ ನಕಾಶೆ; ಅಂದಿನ ರೈಲು ಟಿಕೆಟ್; ಬೆಂಕಿ ನಂದಿಸಲು ಇದ್ದ ನೀರು-, ಮರಳು ತುಂಬಿದ ಗಾಡಿಗಳು; ಹದಿನೈದು ದಿನಕ್ಕೊಮ್ಮೆ ಚಾವಿ ಕೊಟ್ಟು ತಿರುಗಿಸುವ, ಈಗಲೂ ನಡೆಯುತ್ತಿರುವ ಮಾನವ ಚಾಲಿತ ಗಡಿಯಾರ; ಭಾರೀ ಎತ್ತರದ ಸೂರು; ಅದು ನಕ್ಷತ್ರ ಭರಿತ ಇರುಳ ಆಗಸದಂತೆ ಕಾಣಲು ಬಳಿದ ಮುತ್ತಿನಂತಹ ಬಿಳಿಯ ಬಣ್ಣ; ಅದಕ್ಕೆ ಅಂಟಿಸಿದ ಬಂಗಾರ ಬಣ್ಣದ ಲೋಹದ ನಕ್ಷತ್ರಗಳು; ತೂಗುದೀಪ ನೇತು ಹಾಕಲು ಇರುವ ಕೊಕ್ಕೆಗಳು; ಸ್ಟೀಮ್ ಎಂಜಿನ್ನುಗಳಿಗೆ ನೀರು ತುಂಬಿಸುವ ಬೃಹತ್ ಪೈಪುಗಳು; ಭಾರೀ ರೆಕ್ಕೆಗಳಿರುವ ವಿಶಿಷ್ಟ ಪಂಖಗಳೇ ಮೊದಲಾದ ಅಪರೂಪದ ವಸ್ತುಗಳನ್ನು ಕರೆದು, ಕರೆದು ಎಲ್ಲರಿಗೂ ತೋರಿಸಿದಳು. ರಾತ್ರಿ ಹೊತ್ತು ತೂಗುದೀಪದ ಬೆಳಕಿನಲ್ಲಿ ಕಟ್ಟಡದ ಒಳಛಾವಣಿಯು ನಕ್ಷತ್ರ ಮಿನುಗುವ ಇರುಳಾಗಸದಂತೆ ಕಾಣುತ್ತಿತ್ತು ಎಂದವಳು ಹೇಳುವಾಗ ಕಲ್ಪನೆಯಲ್ಲಿ ನಮ್ಮ ಕಣ್ಣುಗಳು ಹೊಳೆದವು.

ಒಂದು ದೊಡ್ಡ ಬಾಗಿಲು ದಾಟಿ ಭಾರೀ ಹಜಾರ ಪ್ರವೇಶಿಸುವಾಗ, ‘ಎಲ್ಲರೂ ನೆಲ ನೋಡುತ್ತಿರಬೇಕು; ನಾನು ಹೇಳಿದಾಗ ಮಾತ್ರ ತಲೆಯೆತ್ತಬೇಕು, ನೋ ಚೀಟಿಂಗ್ ಪ್ಲೀಸ್’ ಎಂದು ವಿನಂತಿಸಿದಳು. ತಲೆತಗ್ಗಿಸಿ ಹಜಾರದೊಳಗೆ ಹೋಗಿ ಬಳಿಕ ತಲೆಯೆತ್ತಿ ಎಂದಾಗ ಮೇಲೆ ನೋಡಿದರೆ ಕಂಡದ್ದು ಸಿಎಸ್ಸೆಂಟಿಯ 300 ಅಡಿ ಎತ್ತರದ ಗುಮ್ಮಟದ ಅಡಿ ಭಾಗ! ಸುರುಳಿಸುರುಳಿಯಾಗಿ ವೃತ್ತಾಕಾರದಲ್ಲಿ ಮೇಲೆ ಹೋಗುವ ಮೆಟ್ಟಿಲುಗಳಡಿ ನಾವು ನಿಂತಿದ್ದೆವು!

ಇತಿಹಾಸವನ್ನು ತಿರುಚಿ ಹೇಳುವ ಕಾಲದಲ್ಲಿ ಅದರ ನಿಜಸ್ವರೂಪವನ್ನು ರೋಚಕವಾಗಿ ಹೇಳುವುದು ಒಂದು ಕಲೆ. ಅದು ಜಾಣೆ ಶ್ರಾವಣಿಗೆ ಇದೆ. ಯುವಜನರು ಇಂತಹ ಹೊಸಹೊಸ ಉದ್ಯೋಗಗಳನ್ನು ಕಂಡುಕೊಳ್ಳಲಿ; ಇತಿಹಾಸವನ್ನು ಅರಿಯುವ, ಅರಗಿಸಿಕೊಳ್ಳುವ ಆಸಕ್ತಿ, ಶ್ರದ್ಧೆಗಳು ಬೆಳೆದು ಸತ್ಯ ಮೆರೆಯಲಿ ಎಂದು ಹಾರೈಸಿ ಹೊರಬಂದೆವು. ಬಂದ ಬಳಿಕವೂ ಸಿಎಸ್ಸೆಂಟಿಯ ಇತಿಹಾಸ, ಚೆಲುವು ಮತ್ತು ಶ್ರಾವಣಿ ನೆನಪಾಗಿ ಸುಳಿಯುತ್ತಲೇ ಇರುವರು.

ಮುಂಬಯಿಗೆ ಹೋದರೆ ಹೇಗಾದರೂ ಸಮಯ ಹೊಂದಿಸಿಕೊಂಡು ನೋಡದಿರುವ ಇಂತಹ ರಚನೆಗಳನ್ನು ನೀವೂ ನೋಡಲೇಬೇಕು.

(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.