ಜೀವನದಲ್ಲಿ ಕೆಲವೊಂದು ಸಂಬಂಧಗಳು ಅಥವಾ ವ್ಯಕ್ತಿಗಳ ಮೌಲ್ಯ ತಿಳಿಯುವುದೇ ಅವರನ್ನು ನಾವು ಕಳೆದುಕೊಂಡಾಗ. ಜೊತೆಗಿದ್ದಾಗ ಅವರ ಬಗ್ಗೆ ನಾವು ಅಷ್ಟಾಗಿ ಯೋಚಿಸುವುದಿಲ್ಲ. ಆದರೆ ಅವರು ಇಲ್ಲವಾದಾಗ ಉಂಟಾಗುವ ಯಾತನೆ ಇದೆಯಲ್ಲ, ಅದು ಬದುಕಿನಲ್ಲಿ ನಿರ್ವಾತವನ್ನು ಸೃಷ್ಟಿಸಿಬಿಡುತ್ತದೆ.

ನನ್ನ ಬದುಕಿನಲ್ಲಿ ಅದು ಎಂದಿಗೂ ಭಯ ಹುಟ್ಟಿಸುವ ರಾತ್ರಿ. ಆ ಒಂದು ರಾತ್ರಿ ಬರದಿದ್ದರೆ ನನ್ನ ಬದುಕು ಎಷ್ಟು ಸುಂದರವಾಗಿ ಇರುತ್ತಿತ್ತು ಎಂದು ಎಷ್ಟೋ ಬಾರಿ ಅಂದುಕೊಂಡಿದ್ದೇನೆ. ಬಾನಲ್ಲಿ ಚಂದಿರನಿಲ್ಲದ ಗಾಢ ರಾತ್ರಿ. ಹಗಲಿನಲ್ಲಿ ಇದ್ದಂತೆ ರೋಗಿಗಳು ಮತ್ತು ಅವರ ಮನೆಯವರ ಓಡಾಟವಿಲ್ಲದೆ ನಿಶ್ಶಬ್ದವಾಗಿದ್ದ ಆಸ್ಪತ್ರೆ. ಐಸಿಯುನಲ್ಲಿ ಸಾವು– ಬದುಕಿನ ನಡುವೆ ಹೋರಾಡುತ್ತಿದ್ದ ಅಮ್ಮ. ‘ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ ಅಷ್ಟೆ’ ಎಂದು ಲಗುಬಗೆಯಿಂದ ಓಡಾಡುತ್ತಿದ್ದ ವೈದ್ಯರು ಮತ್ತು ನರ್ಸ್ಗಳು. ಆತಂಕದಿಂದ ಐಸಿಯು ಬಾಗಿಲಿನ ಕಡೆ ನೋಡುತ್ತಾ ನಿಂತಿದ್ದ ನಾನು.

ಬದುಕಿನಲ್ಲಿ ಯಾವತ್ತೂ ದೇವರನ್ನು ಅಷ್ಟು ಬೇಡಿಕೊಂಡಿದ್ದೇ ಇಲ್ಲ. ಆದರೆ ಅಂದು ಮಾತ್ರ ಪ್ರತಿಕ್ಷಣವೂ ‘ಅವಳನ್ನು ಉಳಿಸಿಕೊಡು’ ಎನ್ನುವ ನಿವೇದನೆಯಲ್ಲದೆ ಬೇರೇನೂ ಇರಲಿಲ್ಲ. ಅದಕ್ಕೂ ಮೊದಲು ಹಲವಾರು ಬಾರಿ ಬೇರೆಯವರಿಗಾಗಿ ಆಸ್ಪತ್ರೆಯಲ್ಲಿ ಸಲೀಸಾಗಿ ಓಡಾಡಿದ್ದ ನನಗೆ, ಆ ದಿನ ಮಾತ್ರ ಕೈ ಕಾಲುಗಳು ನಡುಗುತ್ತಿದ್ದವು. ಆ ಚಳಿಯ ರಾತ್ರಿಯಲ್ಲೂ ದೇಹ ಬೆವರುತ್ತಿತ್ತು.

ಮಧ್ಯರಾತ್ರಿಯ ಹೊತ್ತಿಗೆ ವೈದ್ಯರೊಬ್ಬರು ಬಂದು ‘ಕಿಡ್ನಿ ಕೆಲಸ ಮಾಡುತ್ತಿಲ್ಲ. ಡಯಾಲಿಸಿಸ್ ಮಾಡಬೇಕು’ ಅಂದಾಗ, ‘ಬೇಗ ಬೇಗ ಮಾಡಿ’ ಎಂದಿದ್ದೆ. ಆಗಲಾದರೂ ಅಮ್ಮ ಬದುಕುತ್ತಾಳೆ ಅನ್ನುವ ನಂಬಿಕೆಯಿಂದ ನಿಟ್ಟುಸಿರುಬಿಟ್ಟಿದ್ದೆ.

ಅದಾಗಿ ಒಂದೆರಡು ತಾಸು ಕಳೆದಿತ್ತಷ್ಟೆ. ಸಪ್ಪೆ ಮೋರೆ ಹಾಕಿಕೊಂಡು ಹೊರಬಂದ ವೈದ್ಯರು ಹೇಳಿದ್ದಿಷ್ಟೇ ‘ಕ್ಷಮಿಸಿ, ಉಳಿಸಿಕೊಳ್ಳಲು ಆಗಲಿಲ್ಲ’. ಆ ಮಾತು ಕೇಳಿದ್ದೊಂದೇ ನೆನಪು. ಮತ್ತೇನಾಯಿತೋ ಗೊತ್ತಿಲ್ಲ. ಮರುದಿನ ಕಣ್ಣು ಬಿಟ್ಟಾಗ, ಮನೆಯೊಳಗೆ ಮಲಗಿಸಿದ್ದ ಅಮ್ಮನ ಶವದ ಎದುರಿಗೆ ಇದ್ದೆ. ಹೃದಯ ಪೂರ್ತಿ ಖಾಲಿಯಾದಂತೆ ಅನ್ನಿಸಿತ್ತು. ಮನದೊಳಗೆ ಅಪಾರವಾದ ನೋವು ಹೆಪ್ಪುಗಟ್ಟಿದ್ದರೂ ಅವಳನ್ನು ಕಳುಹಿಸಿಕೊಡುವುದೊಂದೇ ನಮ್ಮ ಮುಂದಿದ್ದ ಆಯ್ಕೆ.

ಅವಳಿದ್ದಾಗ ಒಂದಿನಿತೂ ಕಾಡದ ಒಂಟಿತನ, ಅವಳು ಬಿಟ್ಟುಹೋದ ಮರುಕ್ಷಣವೇ ಆವರಿಸಿತು. ಅವಳು ಕೊಟ್ಟ ಕೈತುತ್ತು, ತೋರಿದ ಕಾಳಜಿ, ಅವಳ ಅಪ್ಪುಗೆ, ಬೆಚ್ಚಗಿನ ಮಡಿಲು ನೆನಪುಗಳಾಗಿ ಕಾಡಲಾರಂಭಿಸಿದವು.

ಈಗ ಅವಳು ಹೋಗಿ ವರುಷ ಐದಾದರೂ, ಪ್ರತಿದಿನ ಅನಿಸುವುದೊಂದೇ ‘ಅಮ್ಮ ಇರಬೇಕಿತ್ತು’. ಎಲ್ಲರಂತೆ ನಾನೂ ಪ್ರತಿದಿನ ಅಮ್ಮನ ಜೊತೆ ಮಾತನಾಡಬೇಕು, ನನ್ನ ಸುಖ, ಸಂತೋಷವನ್ನು ಹಂಚಿಕೊಳ್ಳಬೇಕು ಎಂಬ ಬಯಕೆ ದಿನದಿನವೂ ಸತ್ತು ಬದುಕುತ್ತದೆ. ಆದರೆ ಆ ಬಯಕೆ ತೀರಿಸಲು ಅವಳು ಮಾತ್ರ ಇಲ್ಲ. ಅಮ್ಮನಿಲ್ಲದ ಊರಿನ ಮನೆ ಎಷ್ಟು ಬರಿದಾಗಿದೆ ಅಂದರೆ, ನೀರವ ಮೌನ ಬಿಟ್ಟು ಬೇರೇನೂ ಅಲ್ಲಿಲ್ಲ. ಕೆಲಸದಿಂದ ರಜೆ ಪಡೆದು, ಆ ಮನೆಗೆ ಬಂದರೆ ಕಾಣುವುದು ಬರೀ ವಸ್ತುಗಳು ಮತ್ತು ಯಾವುದೋ ಮೂಲೆಯಲ್ಲಿ ತನ್ನದೇ ಕೆಲಸದಲ್ಲಿ ನಿರತರಾಗಿರುವ ಅಪ್ಪ ಅಷ್ಟೇ. ಮಗ ಮನೆಗೆ ಬಂದ ಎಂದು ಸಂಭ್ರಮ ಪಡುವವರಿಲ್ಲ, ಕುಳ್ಳಿರಿಸಿ ಮಮತೆ ತೋರುವವರಿಲ್ಲ, ನಿನಗೆ ಇಷ್ಟವಾಗಿದ್ದನ್ನು ಮಾಡಿದ್ದೇನೆ, ತಿನ್ನು ಎನ್ನುವವರಿಲ್ಲ.

ನಾನು ಕಾರು ತೆಗೆದುಕೊಳ್ಳಬೇಕು, ಅದರಲ್ಲಿ ಅಮ್ಮನನ್ನು ಕೂರಿಸಿಕೊಂಡು, ಅವಳು ಇಷ್ಟಪಡುವ ಎಲ್ಲ ಸ್ಥಳಗಳನ್ನೂ ತೋರಿಸಿಕೊಂಡು ಬರಬೇಕು ಎನ್ನುವುದು ನನ್ನ ಬಹುದೊಡ್ಡ ಕನಸಾಗಿತ್ತು. ಆದರೆ ಆಗ ಅಂತಹ ಸ್ಥಿತಿವಂತಿಕೆ ಇರಲಿಲ್ಲ. ಇಂದು ಕಾರು ಕೊಳ್ಳುವ ಸಾಮರ್ಥ್ಯವಿದೆ. ಅದರಲ್ಲಿ ಕುಳಿತು ಸಂಭ್ರಮಿಸಲು ಅವಳಿಲ್ಲ.

ಕಷ್ಟಗಳ ಕೂಪದ ನಡುವೆಯೂ ತನ್ನವರಿಗಾಗಿ ಬದುಕಿದ ಜೀವಕ್ಕೆ ಸುಖದ ದಿನಗಳನ್ನು ನೀಡುವ ಭಾಗ್ಯ ನನಗೆ ಇಲ್ಲದಾಯಿತಲ್ಲ ಎನ್ನುವ ನೋವು ಸದಾ ಕಾಡುತ್ತದೆ. ಅವಳ ಅಗಲಿಕೆಯ ನೋವನ್ನು ಸ್ನೇಹಿತರ ಒಡನಾಟದಲ್ಲಿ ಮರೆಯಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅದು ಸುಲಭವಲ್ಲ. ಯಾಕೆಂದರೆ ಹೆತ್ತತಾಯಿಗೆ ಯಾರಾದರೂ ಸರಿಸಾಟಿಯಾಗಲು ಸಾಧ್ಯವೇ? ಜೀವ ಕೊಟ್ಟು ನಮ್ಮ ಬದುಕಿನಲ್ಲಿ ಒಂದಾಗಿ ಬೆರೆತುಹೋಗುವ ಅಮ್ಮನಿಗೆ ನಮನ ಸಲ್ಲಿಸಲು ‘ಅಮ್ಮಂದಿರ ದಿನ’ ಒಂದು ಸಾಂಕೇತಿಕ ನೆಪವಷ್ಟೆ.

ಯಾಕೆಂದರೆ ಅಮ್ಮ ಎನ್ನುವುದು ಬರಿಯ ಸಂಬಂಧವಲ್ಲ. ಅಲ್ಲಿ ಪ್ರೀತಿ, ಮಮತೆ, ಹುಸಿಮುನಿಸು, ಕಿತ್ತಾಟ, ಜಗಳ, ಬೈಗುಳ ಎಲ್ಲವೂ ಇರುತ್ತದೆ. ಆದರೆ ಅದಕ್ಕಿಂತ ಮಿಗಿಲಾದ ಬಂಧವೊಂದು ಬಿಗಿಯಾಗಿರುತ್ತದೆ. ಎಷ್ಟೇ ಆಸ್ತಿ, ಅಂತಸ್ತು ಇದ್ದರೂ ಆ ಬಂಧ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅದಕ್ಕೇ ಅಮ್ಮನೊಂದಿಗೆ ಆದಷ್ಟೂ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ. ಅವಳಿಗಾಗಿ ಏನಾದರೂ ಮಾಡಬೇಕೆನಿಸಿದರೆ ಇಂದೇ ಮಾಡಿ. ಕಳೆದುಹೋದ ಸಮಯ ಮತ್ತು ಜೀವ ಮತ್ತೆ ಸಿಗವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1118051277

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.