‘ಅಂಕಲ್ ಮುಟ್ಟಿದ್ದು ಇಷ್ಟ ಆಗಲಿಲ್ಲ ಅಮ್ಮಾ’

‘ಟೀಚರ್ ಅವ್ರ ರೂಮಿಗೆ ಕರೆದು ಏನೋ ಮಾಡಿದ್ರು. ತುಂಬಾ ನೋವಾಯ್ತು ಅಮ್ಮ’

‘ಹೋಗೋಲೋ! ಗಂಡು ಹುಡುಗ್ರಿಗೆ ಏನೂ ಆಗಲ್ಲ. ನಾನು ಮಾಡಿದ್ದು ಯಾರಿಗಾದ್ರೂ ಹೇಳಿದ್ರೆ ಹುಷಾರ್!’

‘ನೀನೇನು ಗಂಡೋ, ಹೆಣ್ಣೋ? ನಿನಗೆ ಏನಾದ್ರೆ ಯಾರೇನ್ ಮಾಡ್ತಾರೆ. ಸುಮ್ನೆ ನಾವು ಹೇಳ್ದಂಗೆ ಕೇಳ್ಕೊಂಡು ಮಾಡಬೇಕಷ್ಟೆ’.

ನನಗೆ ಹೀಗೆ ಆಯ್ತು, ಮುಜುಗರವಾಯ್ತು, ತೊಂದರೆಯಾಯ್ತು, ಕೆಟ್ಟದು ಅನಿಸಿತು ಅಂತ ಮಕ್ಕಳು ದೊಡ್ಡವರ ಹತ್ತಿರ ಹೇಳಿದರೆ ಹೇಳಲು ಯತ್ನಿಸಿದರೆ ಹೇಳದೇನೇ ಇದ್ದರೆ?

ಇಂತಹವುಗಳಿಗೆ ತೀರಾ ಇತ್ತೀಚಿನವರೆಗೆ ಕೇಳಿಬರುತ್ತಿದ್ದ ಪ್ರತಿಕ್ರಿಯೆ, ‘ದೊಡ್ಡವರ ಬಗ್ಗೆ ಹಾಗೆಲ್ಲಾ ಹೇಳ್ತಾರಾ? ಸುಮ್ನಿರು. ಯಾರಾದ್ರೂ ಕೇಳಿಸ್ಕೊಂಡ್ರೆ ಏನಂತಾರೆ ಆಮೇಲೆ?’ ಅಂತ ಮಕ್ಕಳ ಬಾಯಿ ಮುಚ್ಚಿಸುವುದು. ಮಕ್ಕಳಿರಲಿ, ದೊಡ್ಡವರು ಹೇಳಿದರೂ ಕೇಳದಂತಹ, ನಂಬದಂತಹ ಪರಿಸ್ಥಿತಿ.

ಎಷ್ಟೋ ಮಕ್ಕಳಿಗೆ ತಮಗೆ ಆದದ್ದು ಏನು ಎಂಬ ಕಲ್ಪನೆಯೇ ಇಲ್ಲದಿರಬಹುದು. ಆದರೆ ಏನೋ ಸರಿಯಲ್ಲದ್ದು, ತನಗೆ ಹಿತವಲ್ಲದ್ದು ಆಯಿತು ಎನ್ನುವ ಚಿತ್ರಣವಂತೂ ಬಂದಿರುತ್ತದೆ. ಅದನ್ನು ಅವರು ಹೇಳುವ ರೀತಿ, ವಿಧಾನ ಬೇರೆ ಬೇರೆಯದ್ದು ಇರಬಹುದು. ಅಹಿತವಾಗುವಂತೆ ಮುಟ್ಟುವ, ತಟ್ಟುವ, ಲೈಂಗಿಕ ಅಂಗವನ್ನು ಹಿಡಿಯುವ, ತೂರಿಸುವ ವಿವಿಧ ಕೃತ್ಯಗಳಿಗೆ ವಯಸ್ಕರು ಮಕ್ಕಳನ್ನು ಗುರಿಪಡಿಸಿದಾಗ ಕೆಲವು ಮಕ್ಕಳು ಏನಾಯಿತು ಎಂದು ತಮ್ಮ ಹತ್ತಿರದವರಿಗೆ, ಅದು ಅಮ್ಮ, ಅಪ್ಪ, ಅಥವಾ ಇತರರ ಬಳಿ ವಿವರವಾಗಿಯೂ ಹೇಳಿರಬಹುದು. ಅಥವಾ ತಮ್ಮ ದಿನನಿತ್ಯದ ಚಟುವಟಿಕೆಯಿಂದ ವಿಮುಖರಾಗಬಹುದು. ಮೌನವಾಗಬಹುದು. ಅನಾರೋಗ್ಯಕ್ಕೆ, ಮಾನಸಿಕ ಆಘಾತಕ್ಕೆ ತುತ್ತಾಗಬಹುದು. ಮತ್ತೆ ಅದೇ ಪ್ರಶ್ನೆ ಇಂತಹವುಗಳನ್ನು ಮಕ್ಕಳು ಹೇಳಿದಾಗ, ಅಥವಾ ಯಾರೋ ಮಗುವಿಗೆ ಲೈಂಗಿಕವಾಗಿ ತೊಂದರೆ ಕೊಟ್ಟರು ಎಂದರೆ ಅದನ್ನು ನಂಬುವ ಮನಸ್ಸನ್ನು ದೊಡ್ಡವರು ತೋರುತ್ತಿದ್ದಾರಾ?

ಮಕ್ಕಳ ಮೇಲೆ ಲೈಂಗಿಕ ಶೋಷಣೆ ಬೃಹದಾಕಾರವಾಗಿ ಬೆಳೆದು ನಮ್ಮ ಇಡೀ ಸಮಾಜವನ್ನು ಹೆದರಿಸಲು ಮೂಲ ಕಾರಣ ‘ನಾವು ಮಕ್ಕಳ ಮಾತನ್ನು ಆಲಿಸದಿರುವುದು. ನಂಬದಿರುವುದು’, ಕ್ರಮ ಕೈಗೊಳ್ಳಲು ಮುಂದಾಗದಿರುವುದು.

ರಾಷ್ಟ್ರೀಯ ಅಪರಾಧ ಕೃತ್ಯಗಳ ದಾಖಲೆಯ (NCRB) 2022ರ ದತ್ತಾಂಶಗಳಂತೆ ಕರ್ನಾಟಕದಲ್ಲಿ ಪೋಕ್ಸೊ ಕಾಯ್ದೆಯಡಿ 2019ರಲ್ಲಿ 2,197 ಪ್ರಕರಣಗಳು ದಾಖಲಾಗಿದ್ದು, ನವೆಂಬರ್ 2025ರ ಹೊತ್ತಿಗೆ ಅದರ ಸಂಖ್ಯೆ 4000ದ ಗಡಿ ದಾಟಿದೆ. ಸುಮಾರು 11ರಿಂದ 15 ವರ್ಷದೊಳಗಿನವರೇ ಅತ್ಯಧಿಕ ಸಂಖ್ಯೆಯಲ್ಲಿ ಲೈಂಗಿಕ ಶೋಷಣೆಗೆ ಗುರಿಯಾದವರು ಎನ್ನಲಾಗಿದೆ. ಕರ್ನಾಟಕದಲ್ಲಿ ಹೆಚ್ಚು ಪ್ರಕರಣಗಳು ಬೆಂಗಳೂರು, ಮೈಸೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ದಾಖಲಾಗಿದೆ.

ದೀರ್ಘಕಾಲದಿಂದ ಕಂಡುಬಂದಿರುವುದು ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಪ್ರಕರಣಗಳಲ್ಲಿ, ಮಕ್ಕಳ ಮಾತನ್ನು ಯಾರೂ ನಂಬುತ್ತಿರಲಿಲ್ಲ. ಹಾಗೆಯೇ ವಿವಿಧ ಕಾರಣಗಳಿಂದ ಪೊಲೀಸ್ ಠಾಣೆಯ ತನಕ ಹೋಗುತ್ತಿರಲಿಲ್ಲ. ಅಧ್ಯಯನಗಳು ತೋರುವಂತೆ, ಬಹುತೇಕ ಪ್ರಕರಣಗಳಲ್ಲಿ (ಶೇ.90ರಷ್ಟು) ಮಕ್ಕಳ ಕುಟುಂಬದವರು, ಸಂಬಂಧಿಕರು, ಸ್ನೇಹಿತರು, ತಿಳಿದವರು, ಪರಿಚಿತರು, ನಂಬಿಕಸ್ಥರೇ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿರುತ್ತಾರೆ. ಇಷ್ಟೇ ಅಲ್ಲದೆ ಮಕ್ಕಳು ತಮ್ಮ ಮೇಲೆ ಆದ ಶೋಷಣೆಯನ್ನು ಅದು ತೀವ್ರ ಸ್ವರೂಪದಲ್ಲಿ ಆಗಿರದಿದ್ದರೆ ಅಥವಾ ಕಾಣುವಂತೆ ಮಗುವಿಗೆ ದೈಹಿಕ, ಮಾನಸಿಕ ನೋವು, ಗಾಯ ಆಗಿಲ್ಲದಿದ್ದರೆ ತಕ್ಷಣವೇ ಹೇಳುವುದಿಲ್ಲ ಅಥವಾ ಪಾಲಕರಿಗೂ ತಿಳಿಯುವುದಿಲ್ಲ. ಅದು ವರ್ಷಗಟ್ಟಲೆ ತಡವಾಗಿ ಬೆಳಕಿಗೆ ಬರುವುದು, ಇತ್ಯಾದಿಗಳಿಂದಾಗಿ ಶಿಶು/ಮಕ್ಕಳ ಪೀಡಕರು ಕಾನೂನಿನ ಪರಿಶೀಲನೆಗೆ, ಶಿಕ್ಷೆಗೆ ಒಳಪಡುವುದೇ ಇಲ್ಲ. ಹೀಗಾಗಿ ವರದಿಯಾಗುವ ಅಥವಾ ಪೊಲೀಸ್ ದೂರು ದಾಖಲಾಗುವ ಸಂಖ್ಯೆಗಿಂತಲೂ ಹತ್ತು ಪಟ್ಟು ಹೆಚ್ಚು ಕೃತ್ಯಗಳು ನಡೆಯುತ್ತಿದ್ದರೂ ಅವುಗಳು ಕಾನೂನಿನ ಪರಿಧಿಗೆ ಒಳಪಡುತ್ತಿಲ್ಲ ಎನ್ನಲಾಗಿದೆ.

ಲೈಂಗಿಕವಾಗಿ ಶಿಶು/ಮಕ್ಕಳ ಪೀಡನೆಯ ಸಂದರ್ಭಗಳಲ್ಲಿ ಕುಟುಂಬಗಳ ಹಿರಿಯರು, ಶಾಲೆ, ಹಾಸ್ಟೆಲ್, ಪೂಜಾಸ್ಥಳ, ಆಶ್ರಮ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳ ವ್ಯವಸ್ಥಾಪಕರು ಮಕ್ಕಳ ದೂರುಗಳನ್ನು ಮೊದಮೊದಲು ಒಪ್ಪಿಕೊಳ್ಳುವುದೇ ಇಲ್ಲ. ಅಥವಾ ಇಂತಹದ್ದು ತಮ್ಮಲ್ಲಿ ಸಾಧ್ಯವೇ ಇಲ್ಲ ಎಂದು ವಾದಿಸಲು ಮುಂದಾಗುತ್ತಾರೆ. ಅಥವಾ ಲೈಂಗಿಕ ಶೋಷಣೆ ತೀವ್ರ ಸ್ವರೂಪದ್ದಾಗಿಲ್ಲದಿದ್ದಲ್ಲಿ ಪ್ರಕರಣವನ್ನು ಅಲ್ಲಿಯೇ ಕೈಬಿಡಲು, ಇಲ್ಲವೇ ಕೃತ್ಯದಲ್ಲಿ ಭಾಗಿಯಾದವರನ್ನು ಕೆಲಸದಿಂದ ತೆಗೆದುಬಿಡುವುದು, ಅಥವಾ ಚಿಕ್ಕಪುಟ್ಟ ಪ್ರಮಾಣದ ಶಿಸ್ತುಕ್ರಮ ಕೈಗೊಳ್ಳುವುದು, ರಾಜಿ ಮಾಡಿಸುವುದು, ಇಲ್ಲವೇ ಏನಾದರೂ ಪರಿಹಾರ ಕೊಡಿಸುವುದು ಅಥವಾ ತೊಂದರೆಗೀಡಾದ ಮಗುವನ್ನು ಸಂಸ್ಥೆ/ಶಾಲೆ ಇತ್ಯಾದಿಗಳಿಂದ ಬಿಡಿಸಿಬಿಡುವುದರಲ್ಲೇ ತೃಪ್ತಿಪಟ್ಟುಕೊಳ್ಳುತ್ತಾರೆ. ಪರಿಸ್ಥಿತಿ ಶಾಂತ ಮಾಡುತ್ತಾರೆ. ಶಿಶು ಪೀಡನೆಯ ವಿಚಾರ ಬಹಿರಂಗವಾದರೆ ಕುಟುಂಬಗಳು ಒಡೆದು ಹೋಗುತ್ತವೆ. ಸಂಸ್ಥೆಗಳಿಗೆ ಕೆಟ್ಟ ಹೆಸರು. ಇಂತಹುದಕ್ಕೆ ಈ ಮಗು ಕಾರಣವಾಗಿದೆ ಎಂದು ಪುರುಷರೇ ಏಕೆ, ಸಂಸ್ಥೆಯ/ ಕುಟುಂಬದ ಮಹಿಳಾ ಸಂಬಂಧಿಗಳೇ ಇಡೀ ಪ್ರಕರಣವನ್ನು ತಿರುಗಿಸಿಬಿಡಲು ಯತ್ನಿಸುತ್ತಾರೆ. ಆರೋಪ ಮಾಡಿದ ಮಗುವಿನ ಬಾಯಿ ಮುಚ್ಚಿಸುತ್ತಾರೆ. ಶೋಷಣೆ ಮಾಡಿದ ತಂದೆಯೋ, ತಾತನೋ, ಚಿಕ್ಕಪ್ಪ ದೊಡ್ಡಪ್ಪನೋ, ಮಾವನೋ, ಅಣ್ಣನೋ ಅಥವಾ ಅಂತಹ ಸಂಬಂಧಿಗಳು, ಸ್ನೇಹಿತರು, ಪರಿಚಿತರನ್ನು ರಕ್ಷಿಸುತ್ತಾರೆ. ಹಲವು ಸಂದರ್ಭಗಳಲ್ಲಿ ಕುಟುಂಬದ ಮರ್ಯಾದೆ ಬೀದಿಗೆ ಬರುತ್ತದೆಯೆಂದು ಲೈಂಗಿಕ ದೌರ್ಜನ್ಯಕ್ಕೆ ಈಡಾದ ಮಗು ಮತ್ತು ತಂದೆತಾಯಿಯ ಜೊತೆ ಸಂಬಂಧವನ್ನೇ ಮುರಿದುಕೊಂಡು, ಕುಟುಂಬದಿಂದಲೇ ಬಹಿಷ್ಕಾರ ಹಾಕುವಂತಹ ಪರಿಸ್ಥಿತಿ ಸೃಷ್ಟಿಸಿ, ಆಪಾದಿತರಿಗೆ/ಪೀಡಕರಿಗೆ ಇದರ ಬಿಸಿಯೂ ತಟ್ಟದಂತೆ ಕಾಪಾಡುತ್ತಾರೆ.

ಶಾಲಾ ಆರೋಗ್ಯ ಮತ್ತು ಯೋಗಕ್ಷೇಮ ಕಾರ್ಯಕ್ರಮಗಳು ಅಥವಾ ಲೈಂಗಿಕ ಆರೋಗ್ಯ ಶಿಕ್ಷಣದ ಮೂಲಕ ‘ಮಕ್ಕಳಿಗೆ ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶ’ ಕುರಿತು ಅರಿವು ಕೊಟ್ಟ ಮೇಲೆ ಮತ್ತು ವಿಶೇಷವಾಗಿ ತಮಗಾದ ಮುಜುಗರ, ತೊಂದರೆ ಕುರಿತು ಚೈಲ್ಡ್ಲೈನ್ 1098ಕ್ಕೆ ದೂರು ಕೊಡಬಹುದು ಎಂಬ ಮಾಹಿತಿ ಪಸರಿಸಿದ ಮೇಲೆ ಶಾಲಾ ವಯಸ್ಸಿನ ಮಕ್ಕಳು ತಮಗಾದ ಲೈಂಗಿಕ ಶೋಷಣೆಗಳನ್ನು ಕುರಿತು ಮಾತನಾಡಲಾರಂಭಿಸಿರುವುದು ಕಂಡು ಬಂದಿದೆ. ಇದು ಮನೆ, ಸಾರ್ವಜನಿಕ ಸ್ಥಳ (ಬಸ್/ರೈಲು ನಿಲ್ದಾಣ, ಜಾತ್ರೆ, ಸಂತೆ, ಅಂಗಡಿ, ಪೂಜಾಸ್ಥಳಗಳು, ಜನ ಸೇರುವ ಕಾರ್ಯಕ್ರಮಗಳು, ಇತ್ಯಾದಿ), ಆಟದ ಮೈದಾನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಶಾಲಾ ವಾಹನ, ಸಾರ್ವಜನಿಕ ವಾಹನ, ಶಾಲೆ, ಹಾಸ್ಟೆಲ್, ಮಕ್ಕಳ ಪಾಲನಾ ನಿಲಯಗಳು, ಇತ್ಯಾದಿಯೆಡೆ ತಮಗಾದ ಮುಜುಗರಗಳು, ಅಸುರಕ್ಷಿತ ಸ್ಪರ್ಶಗಳನ್ನು ಕುರಿತು ಹೇಳುವುದು, ದೂರು ದಾಖಲಿಸಲು ಮುಂದಾಗುವುದು ಕಂಡು ಬಂದಿದೆ.

ವಾಸ್ತವವಾಗಿ ಎಲ್ಲೆಡೆ ‘ಪಾಶ್ - ಕೆಲಸದ ಸ್ಥಳಗಳಲ್ಲಿ ಲೈಂಗಿಕ ಶೋಷಣೆ ತಡೆ ನೀತಿ’ಯಂತೆ ‘ಮಕ್ಕಳ ರಕ್ಷಣಾ ನೀತಿ’ಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂಬ ಅರಿವು ಇಲ್ಲದಿರುವುದೂ ಮಕ್ಕಳ ಮೇಲಾಗುವ ಲೈಂಗಿಕ ಶೋಷಣೆಗಳನ್ನು ತಡೆಗಟ್ಟಲು ಮತ್ತು ಶೋಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅಡ್ಡಿಯಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ

‘ಮಕ್ಕಳನ್ನು ಕುರಿತು ಜವಾಬ್ದಾರಿ ಹೊಂದಿರುವ ವಯಸ್ಕರು, ಸಂಬಂಧದಿಂದ, ಅಧಿಕಾರದ ಸ್ಥಾನದಲ್ಲಿರುವವರು, ಮಕ್ಕಳ ವಯಸ್ಸು ಅಥವಾ ಬೆಳವಣಿಗೆಯ ಹಂತಗಳ ದುರುಪಯೋಗ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗುವ ಸಾಧ್ಯತೆಗಳು ಇವೆ. ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಎಂದರೆ, ತಮಗೆ ಏನಾಗುತ್ತಿದೆ ಎಂದು ಅರ್ಥವಾಗದ ಮತ್ತು ಪರಿಣಾಮಗಳ ಬಗ್ಗೆ ಅರಿವಿಲ್ಲದ ಹಾಗೂ ತಿಳಿವಳಿಕೆಯಿಂದ ಒಪ್ಪಿಗೆಯನ್ನು ನೀಡಲು ಅಸಮರ್ಥರಾದ ಮಕ್ಕಳನ್ನು ಗುರಿಯಾಗಿಸಿಕೊಂಡು ವಯಸ್ಕರು ಅಥವಾ ವಯಸ್ಸಿನಲ್ಲಿ ಹಿರಿಯರಾದ ಇತರ ಮಕ್ಕಳು ನಡೆಸುವ ಲೈಂಗಿಕ ಕ್ರಿಯೆ ಅಥವಾ ಯಾವ ಲೈಂಗಿಕ ಕ್ರಿಯೆ ನಡೆಸಲು ಮಗು ಇನ್ನೂ ದೈಹಿಕವಾಗಿ ವಿಕಾಸವಾಗಿಲ್ಲವೋ ಅಂತಹ ಮಕ್ಕಳ ಮೇಲಿನ ಕ್ರೌರ್ಯ ಅಥವಾ ಮಕ್ಕಳನ್ನು ರಕ್ಷಿಸಲು ಸಮುದಾಯ / ಸರ್ಕಾರ ನಿರ್ಮಿಸಿರುವ ಕಾನೂನುಗಳು ಅಥವಾ ಸಾಮಾಜಿಕ ಕಟ್ಟುಪಾಡುಗಳನ್ನು ವಯಸ್ಕರು ಉಲ್ಲಂಘಿಸುವುದು’. (ವಿಶ್ವ ಆರೋಗ್ಯ ಸಂಸ್ಥೆ, 2006).

ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವ ಕಾಯಿದೆ (POCSO), 2012 ಮಕ್ಕಳ ಮೇಲೆ ಸಂಭವಿಸುವ ವಿವಿಧ ರೀತಿಯ ಲೈಂಗಿಕ ಅಕೃತ್ಯಗಳನ್ನು ಗುರುತಿಸಿದೆ. ಅದು ಅಸುರಕ್ಷಿತ ಸ್ಪರ್ಶವಷ್ಟೇ ಅಲ್ಲ, ಲೈಂಗಿಕ ಅರ್ಥದ ಮಾತುಗಳು, ಶಬ್ದಗಳು, ಚಿತ್ರಗಳನ್ನು ತೋರುವುದು, ಲೈಂಗಿಕ ಅಂಗಗಳನ್ನು ಮುಟ್ಟುವುದು, ಮುಟ್ಟಿಸಿಕೊಳ್ಳುವುದು, ಲೈಂಗಿಕ ಸಂಭೋಗ, ಇತ್ಯಾದಿ.

ತೀವ್ರ ಸ್ವರೂಪದಲ್ಲಿ ಲೈಂಗಿಕ ಶೋಷಣೆ, ಆಘಾತ ಆದ ಸಂದರ್ಭದಲ್ಲಿ ರಕ್ತಸ್ರಾವದಿಂದ ಅಥವಾ ದೈಹಿಕ ಭಾರದ ಒತ್ತಡದಿಂದ ಮಕ್ಕಳು ಮೃತಪಟ್ಟಿರುವ, ಅಂಗವಿಕಲತೆಗೆ ಈಡಾಗಿರುವ ಮತ್ತು ಲೈಂಗಿಕ ಕೃತ್ಯ ಮಾಡಿದವರು ಸಾಕ್ಷ್ಯ ನಾಶದ ಉದ್ದೇಶದಿಂದ ಮಕ್ಕಳನ್ನು ಕೊಂದಿರುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇಷ್ಟಲ್ಲದೆ ಚಿಕ್ಕವಯಸ್ಸಿನ ಮಕ್ಕಳು ಗರ್ಭ ಧರಿಸುವುದು ಮತ್ತು ಅದರೊಂದಿಗಿನ ಅಪಾಯಗಳಿಗೆ ಗುರಿಯಾಗುವುದೂ ಸಾಮಾನ್ಯವೇ ಆಗಿದೆ. ಸಾಮಾನ್ಯವಾಗಿ ಇಷ್ಟು ಭಯಂಕರವಾಗಿ ಇಲ್ಲವೇ ಅಪಾಯಕಾರಿ ಆಗುವ ತನಕ ಶಿಶು ಪೀಡಕರನ್ನು ಗುರುತಿಸುವ, ಕಾನೂನಿನ ವ್ಯಾಪ್ತಿಗೆ ತರುವ ಪ್ರಯತ್ನಗಳು ಆಗದಿರುವುದೇ ವಿಷಾದಕರ.

ಶಿಶು/ಮಕ್ಕಳ ಶೋಷಣೆ ಮಾಡುವವರು ಮತ್ತು ಶೋಷಣೆಗೆ ಗುರಿಯಾದವರಲ್ಲಿ ಹೆಣ್ಣು ಗಂಡು ಮತ್ತು ಇತರ ಲಿಂಗಿಗಳು ಮತ್ತು ಕೆಲವು ತಿಂಗಳುಗಳ ಮಕ್ಕಳಿಂದ ಹಿಡಿದು 18ರ ತನಕದ ಮಕ್ಕಳ ತನಕವೂ ವ್ಯಾಪಿಸಿರುವುದನ್ನು ಪಾಕ್ಸೋ ಕಾಯಿದೆ ಗುರುತಿಸುತ್ತದೆ. ಮಕ್ಕಳ ಮೇಲೆ ಲೈಂಗಿಕ ಶೋಷಣೆ ಮಾಡುವವರ ವಿರುದ್ಧ ದೂರು ದಾಖಲಿಸಿ, ತನಿಖೆ ನಡೆಸಿ ಪೋಕ್ಸೊ ನ್ಯಾಯಾಲಯ ಶಿಕ್ಷೆ ವಿಧಿಸುತ್ತದೆ. ಇಂತಹ ಲೈಂಗಿಕ ಅಕೃತ್ಯ ಮಾಡಿದವರು ಜವಾಬ್ದಾರಿಯಿರುವವರು, ಅದರಲ್ಲೂ ಪೋಷಕರು, ಪಾಲಕರು, ನಂಬಿಕೆಗರ್ಹವಾದ ಪಾತ್ರದಲ್ಲಿರುವವರು, ಶಿಕ್ಷಕರು, ತರಬೇತಿದಾರರು, ವಾರ್ಡನ್, ವೈದ್ಯ, ಪೊಲೀಸ್, ಸೈನ್ಯದಂತಹ ವೃತ್ತಿ ಪಾತ್ರದಲ್ಲಿರುವರಾದರೆ ಅವರ ವಿಕೃತಿ ತೀವ್ರ ಸ್ವರೂಪದ್ದು ಎಂದು ಹೇಳಿ ಹೆಚ್ಚಿನ ಶಿಕ್ಷೆಯನ್ನು ಕಾಯಿದೆ ವಿಧಿಸಿದೆ. ಅದರಲ್ಲೂ ೧೨ ವರ್ಷದೊಳಗಿನವರ ಮೇಲಿನ ಲೈಂಗಿಕ ಅಕೃತ್ಯಗಳನ್ನು ಅಕ್ಷಮ್ಯದ ದೃಷ್ಟಿಕೋನದಿಂದ ಬಿಡುಗಡೆಯೇ ಇಲ್ಲದಂತಹ ಶಿಕ್ಷೆ ವಿಧಿಸಲಾಗುತ್ತದೆ.

ಸುರಕ್ಷಿತ ಸ್ಪರ್ಶ / ಸೇಫ್ ಟಚ್ ಮತ್ತು ಅಸುರಕ್ಷಿತ ಸ್ಪರ್ಶ / ಅನ್ಸೇಫ್ ಟಚ್ ಎಂದರೇನು? ಇದನ್ನು ಮಕ್ಕಳಿಗೆ ಗೊಂದಲವಿಲ್ಲದಂತೆ ತಿಳಿಸುವುದು ಪ್ರಮುಖವಾದುದು.

ಸೇಫ್ ಟಚ್: ಮುಜುಗರವಾಗದಂತೆ ಮತ್ತು ತೊಂದರೆ ಕೊಡದ ಸ್ಪರ್ಶಗಳು. ಉದಾ. ಅಮ್ಮ ಮತ್ತು ಅಂತಹ ಪಾತ್ರ ವಹಿಸುವವರು ಮಕ್ಕಳನ್ನು ತಬ್ಬಿ ಮಲಗಿಸುವುದು, ಸ್ನಾನ ಮಾಡಿಸುವುದು, ಮಲಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಮಗುವನ್ನು ತೊಳೆದು ಶುದ್ಧ ಮಾಡುವುದು, ಡಾಕ್ಟರ್ ಅಪ್ಪ- ಅಮ್ಮನ ಎದುರು ಮಗುವನ್ನು ಮುಟ್ಟಿ ತಪಾಸಣೆ ಮಾಡುವುದು, ಶಿಕ್ಷಕರು, ಹಿರಿಯರು ಎಲ್ಲರೆದುರು ಪ್ರಶಂಸಿಸಲು ತಲೆ ಸವರುವುದು ಇಲ್ಲವೇ ಬೆನ್ನು ತಟ್ಟುವುದು, ಹಸ್ತಲಾಘವವನ್ನು ಕೊಡುವುದು, ಆಟ, ನೃತ್ಯ ಸಂದರ್ಭದಲ್ಲಿ ಭಂಗಿಗಳನ್ನು ಹೇಳಿಕೊಡುವಾಗ ಮಗುವಿನ ಒಪ್ಪಿಗೆ ಪಡೆದು ಮುಜುಗರವಾಗದಂತೆ ಮೈ ಕೈ ಕಾಲುಗಳನ್ನು ಮುಟ್ಟುವುದು.

ಅನ್ಸೇಫ್ ಟಚ್: ಮಕ್ಕಳನ್ನು ಯಾರಾದರೂ ಮುಜುಗರವಾಗುವಂತೆ ದೇಹವನ್ನು ಸವರುವುದು, ಒಳಉಡುಪು ಮುಚ್ಚುವ ಜಾಗ (ಮೂತ್ರ ವಿಸರ್ಜನೆ ಮಾಡುವ ಅಂಗಗಳು, ಎದೆ, ಪೃಷ್ಟ) ಮುಟ್ಟುವುದು, ಮುತ್ತು ಕೊಡುವುದು, ಅಂತಹ ಸ್ಪರ್ಶಗಳನ್ನು ಕುರಿತು ಯಾರಿಗೂ ಹೇಳಬೇಡ ಎಂದು ಪುಸಲಾಯಿಸುವುದು ಅಥವಾ ಹೆದರಿಸುವುದು, ಅಂತಹವುಗಳ ಫೋಟೊ/ವಿಡಿಯೊ ತೆಗೆಯುವುದು, ಮತ್ತೆ ಮತ್ತೆ ತಾನು ಕೇಳಿದಾಗ ಇಂತಹದರಲ್ಲಿ ಸಹಕರಿಸಲೇಬೇಕು ಎಂದು ಒತ್ತಾಯ ಮಾಡುವುದು.

ಮಕ್ಕಳಿಗೆ ಈ ರೀತಿಯ ಅರಿವು ನೀಡುವ ಸಂದರ್ಭದಲ್ಲಿ, ತೊಂದರೆ ಎನಿಸಿದರೆ ಏನು ಮಾಡಬೇಕು ಎಂಬುದನ್ನೂ ವಿವರಿಸಬೇಕು.

ಮೂರು ನಿಯಮಗಳು

ಒಳಉಡುಪು ನಿಯಮ: ಒಳಉಡುಪು ಮುಚ್ಚುವ ದೇಹದ ಲೈಂಗಿಕ ಭಾಗಗಳು (ಯೋನಿ, ಶಿಶ್ನ, ಪೃಷ್ಟ ಮತ್ತು ಎದೆ) ಯಾರೇ ಆಗಲಿ ಮುಜುಗರವಾಗುವಂತೆ ಮುಟ್ಟುವುದು ಸುರಕ್ಷಿತವಲ್ಲ ಎಂಬುದು ಮಕ್ಕಳಿಗೆ ತಿಳಿಯಬೇಕು.

‘ಬೇಡ’ ಎನ್ನಿ ನಿಯಮ: ಮುಜುಗರವಾಗುತ್ತಿದೆ, ಸರಿಯಿಲ್ಲ ಎನಿಸಿದಾಗ ಇಷ್ಟ ಇಲ್ಲ, ಹಾಗೆ ಮಾಡಬೇಡಿ, ‘ಬೇಡ, ಬಿಡು’ ಎಂದು ಜೋರಾಗಿ ಹೇಳುವ ಹಕ್ಕು ಮಗುವಿಗಿದೆ. ಇದನ್ನು ಮಕ್ಕಳಿಗೆ ಹಿರಿಯರು ಹೇಳಿಕೊಡಬೇಕು.

ಬೇರೆಯವರಿಗೆ ಹೇಳಿ ನಿಯಮ: ಯಾರಾದರೂ ಮಕ್ಕಳನ್ನು ಅಸುರಕ್ಷಿತವಾಗಿ ಮುಟ್ಟಿದರೆ, ಬಲವಂತಪಡಿಸಿದರೆ ತಕ್ಷಣ ಮಕ್ಕಳು ತಾವು ನಂಬಬಹುದಾದ ದೊಡ್ಡವರಿಗೆ ಹೇಳಬೇಕು.

ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಯಾಕೆ?

ಪಠ್ಯ ಮತ್ತು ಸಹ ಪಠ್ಯ: ಮಕ್ಕಳಿಗೆ ಕಲಿಕೆಯ ವಾತಾವರಣ ಇರುವುದು ಶಾಲೆಗಳಲ್ಲಿ. ಸಾಮಾನ್ಯವಾಗಿ ಪೋಷಕರಿಗೆ ಲೈಂಗಿಕತೆ, ಲೈಂಗಿಕ ಅಂಗಗಳನ್ನು ಕುರಿತು ಸಹಜವಾಗಿ ಮಾತನಾಡುವುದು, ಮಕ್ಕಳಿಗೆ ತಿಳಿಸುವ ಕ್ರಮ ತಿಳಿದಿರುವುದಿಲ್ಲ ಅಥವಾ ಅವುಗಳನ್ನು ಕುರಿತು ಮಾತನಾಡಲು ಅವರಿಗೇ ಮುಜುಗರವಾಗುತ್ತದೆ. ಶಾಲೆಗಳಲ್ಲಿ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ದೇಹ, ಆಹಾರ, ಆರೋಗ್ಯ, ಸಾಮಾಜಿಕ ನಡವಳಿಕೆ, ರಕ್ಷಣೆ, ಎಚ್ಚರಿಕೆ ವಿಚಾರಗಳೊಡನೆ ಲೈಂಗಿಕ ಶಿಕ್ಷಣವನ್ನು ಅಂತರ್ಗತಗೊಳಿಸಲೇಬೇಕು. ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ 2021ರಲ್ಲಿ ನಡೆಸಿರುವ ಸಮೀಕ್ಷೆ ಶೇ.7.2% ಪೋಷಕರು ‘ಇದೆಲ್ಲ ಕೆಟ್ಟ ವಿಷಯ, ಮಕ್ಕಳಿಗೆ ಹೇಳಬಾರದು’ ಎಂಬ ನಿಲುವಿರುವುದನ್ನು ಗುರುತಿಸಿದೆ. ಹೀಗಾಗಿ ಶಾಲೆಯಲ್ಲಿ ಲೈಂಗಿಕ ಶಿಕ್ಷಣ ವಿಚಾರ ಮಕ್ಕಳೊಂದಿಗೆ ಮಾತನಾಡದಿದ್ದರೆ ಬೇರೆ ಯಾರೂ ಆರೋಗ್ಯಕರವಾಗಿ ಹೇಳಿಕೊಡುವುದಿಲ್ಲ.

ತಡೆ ಸಾಧ್ಯ: UNICEFನ ಪ್ರಕಾರ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ ಕುರಿತು ಅರಿತುಕೊಂಡ 6ರಿಂದ 8 ವರ್ಷದೊಳಗಿನ ಮಕ್ಕಳು ಶೋಷಣೆಯ ಅನುಭವಕ್ಕೆ ಬಂದಲ್ಲಿ, ಅವರಲ್ಲಿ ಶೇ.80 ಮಕ್ಕಳು ತಡ ಮಾಡದೆ ಅದರ ಬಗ್ಗೆ ಪೋಷಕರ ಬಳಿ ಹೇಳಿಕೊಳ್ಳುತ್ತಾರೆ. ಇಲ್ಲಿನ ಪ್ರಮುಖ ಅಂಶ ತಡೆಯಲು ಸಾಧ್ಯ ಎನ್ನುವ ನಂಬಿಕೆ. ಮಕ್ಕಳು ಇಲ್ಲದ್ದೆಲ್ಲಾ ಹೇಳುತ್ತಾರೆ, ಏನೇನೋ ಕಲ್ಪಿಸಿಕೊಳ್ಳುತ್ತಾರೆ ಎನ್ನುವ ವರ್ಗ ಇದ್ದರೂ, ಪರಿಶೀಲನೆಗಳಲ್ಲಿ ಕಂಡುಬಂದಿರುವುದು ಮಕ್ಕಳು ಸುಳ್ಳು ಆರೋಪಗಳನ್ನು ಮಾಡುವುದಿಲ್ಲ ಎನ್ನುವುದು. ಹೀಗೆ ಸುಳ್ಳು ಸಮಜಾಯಿಶಿ ಕೊಡುವವರು ತಮ್ಮ ಅಪರಾಧವನ್ನು ಮುಚ್ಚಿಕೊಳ್ಳಲೇ ಮಾಡುತ್ತಾರೆ.

ಪೋಕ್ಸೊ ಕಾಯ್ದೆ 2012 ಕುರಿತು ಶಾಲೆಗಳಲ್ಲಿ ಜಾಗೃತಿ: ಕಾಯಿದೆಯ ಜಾರಿ ಬದ್ಧತೆಯ ಒಂದು ಪ್ರಮುಖ ಅಂಶ, ಪಾಕ್ಸೋ ಕುರಿತು ವಯಸ್ಕರಲ್ಲದೆ, ಎಲ್ಲಾ ಮಕ್ಕಳಿಗೂ ಶಾಲಾ ಮಟ್ಟದಲ್ಲಿಯೇ ಮಾಹಿತಿಯನ್ನು ವೈಜ್ಞಾನಿಕವಾಗಿ ತಲುಪಿಸುವುದು.

ಉಚ್ಚ ನ್ಯಾಯಾಲಯದ ನಿರ್ದೇಶನ

ಉತ್ತರ ಕನ್ನಡ ಜಿಲ್ಲೆಯಲ್ಲಿನ ಹದಿವಯಸ್ಕ ಬಾಲಕ ಬಾಲಕಿಯರ ಒಂದು ಜೋಡಿ ಕಣ್ಮರೆಯಾಗಿದ್ದರು (2015). ಪೊಲೀಸ್ ಪ್ರಕರಣ ದಾಖಲಾಗಿತ್ತು. ಹುಡುಕುವ ಯತ್ನಗಳಿಗೆ ಫಲ ಸಿಕ್ಕಿರಲಿಲ್ಲ. ಎರಡು ವರ್ಷಗಳ ನಂತರ ಹಸುಗೂಸುವಿನೊಡನೆ ಅವರು ಹಿಂದಿರುಗಿದರು. ಪ್ರಕರಣ ಸ್ಥಳೀಯ ನ್ಯಾಯಾಲಯದ ಹಂತದಿಂದ ಧಾರವಾಡ ಉಚ್ಚ ನ್ಯಾಯಾಲಯಕ್ಕೆ ತಲುಪಿತ್ತು. ಪ್ರಕರಣವನ್ನು ವಿಲೇವಾರಿ ಮಾಡುವಾಗ ನ್ಯಾಯಾಲಯ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಗೆ ಈ ಮುಂದಿನಂತೆ ಕಡ್ಡಾಯ ನಿರ್ದೇಶನ ನೀಡಿತು (2022). ‘ಪೋಕ್ಸೊ ಕಾಯಿದೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ದೇಶದ ಇತರ ಕಾಯಿದೆಗಳಲ್ಲಿ ಯಾವ ಯಾವ ಕೃತ್ಯಗಳನ್ನು ಶಿಕ್ಷಾರ್ಹ ಎಂದು ಪರಿಗಣಿಸಿದೆಯೋ ಅಂತಹ ವಿಚಾರಗಳನ್ನು ಮುಖ್ಯವಾಗಿ 9ನೇ ತರಗತಿಯಿಂದ ಆರಂಭಿಸಿ 12ನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಪೋಕ್ಸೊ ಕಾಯಿದೆ, ಲೈಂಗಿಕ ಶೋಷಣೆ, ಹಾಗೂ ಅದರ ಪರಿಣಾಮಗಳನ್ನು ಕುರಿತು ಶಿಕ್ಷಣ ಸಾಮಗ್ರಿಗಳನ್ನು ಸಿದ್ಧಪಡಿಸಲು ಸಮಿತಿಯೊಂದನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ರಚಿಸಬೇಕು. ಅಂತಹ ಸಾಮಗ್ರಿ ಬಳಸಿ ಸರ್ಕಾರದ ಮತ್ತು ಸರ್ಕಾರೇತರ ಶಾಲೆಗಳಲ್ಲಿ ಪೋಕ್ಸೊ ಕಾಯಿದೆಯ ಉಲ್ಲಂಘನೆ ಮಾಡಿದ್ದಲ್ಲಿ ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ಕುರಿತು ಶಿಕ್ಷಕರ ಮೂಲಕ ಮಾಹಿತಿ ಕೊಡಿಸಲೇಬೇಕು. ಈ ಬೆಳವಣಿಗೆಗಳನ್ನು ಕುರಿತು ನ್ಯಾಯಾಲಯಕ್ಕೆ ಮಾಹಿತಿ ಒದಗಿಸಬೇಕು’.

ಕರ್ನಾಟಕದಲ್ಲಿ ನಡೆದಿರುವ ಪ್ರಯತ್ನಗಳು

ಮಕ್ಕಳನ್ನು ಲೈಂಗಿಕ ಶೋಷಣೆಯ ವಿರುದ್ಧ ರಕ್ಷಿಸಬೇಕು ಎನ್ನುವ ಪ್ರಚಾರಾಂದೋಲನ ಕರ್ನಾಟಕದಲ್ಲಿ 1990ರ ದಶಕದಿಂದಲೇ ಸ್ವಯಂಸೇವಾ ಸಂಘಟನೆಗಳಿಂದ ನಡೆದಿದೆ. ಮಕ್ಕಳ ಮೇಲಾಗುವ ಆಪರಾಧಿಕ ಕತ್ಯಗಳು ವರದಿಯಾದಾಗ ಪ್ರತಿಭಟನೆ ಮತ್ತು ನ್ಯಾಯಬದ್ಧ ತನಿಖೆಗೆ ಒತ್ತಾಯ, ಶಾಲಾ ಮಕ್ಕಳಿಗೆ, ಪೋಷಕರಿಗೆ ಹಾಗೂ ಶಿಕ್ಷಕ ವರ್ಗಕ್ಕೆ ಈ ಕುರಿತು ಮಕ್ಕಳ ಹಕ್ಕುಗಳ ದೃಷ್ಟಿಕೋನದಲ್ಲಿ ಶಿಕ್ಷಣ, ಮಾಹಿತಿ ಒದಗಿಸಲು ಪ್ರಯತ್ನಗಳನ್ನು ನಡೆಸಿವೆ.

ಸಮಗ್ರ ಶಿಕ್ಷಣ ಕರ್ನಾಟಕ ಅಡಿಯಲ್ಲಿ ಶಿಕ್ಷಣ ಇಲಾಖೆ ‘ಮಕ್ಕಳ ಸಾರಥಿ’ ಹೆಸರಿನಲ್ಲಿ ಸರ್ಕಾರಿ ಶಾಲೆಗಳಲ್ಲಿ 6-8ನೇ ತರಗತಿಯ ವಿದ್ಯಾರ್ಥಿಗಳಿಗೆ ಕತೆಗಳು, ಚಿತ್ರಗಳ ಮೂಲಕ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ ವಿಚಾರಗಳನ್ನು ತಲುಪಿಸುವ ಯತ್ನವನ್ನು ನಡೆಸಿತು. ಉಚ್ಚ ನ್ಯಾಯಾಲಯದ ನಿರ್ದೇಶನದಂತೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯವು [DSERT] ಪೋಕ್ಸೊ ಕುರಿತು ರಚಿಸಲಾದ ತರಬೇತಿ ಕೈಪಿಡಿ ಬಳಸಿ ರಾಜ್ಯದಾದ್ಯಂತ ಶಿಕ್ಷಕರ ತರಬೇತಿ ನಡೆಸುತ್ತಿದೆ [ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ - ತರಬೇತಿ ಮಾಡ್ಯೂಲ್ಗಳು]. ಅವರ ಮೂಲಕ ಮಕ್ಕಳಿಗೆ ಮತ್ತು ಪೋಷಕರಿಗೆ ಪಾಕ್ಸೋ ಮತ್ತು ಸಂಬಂಧಿತ ವಿಚಾರಗಳು, ಚೈಲ್ಡ್ಲೈನ್ 1098, ದೂರು ಕೊಡುವುದು ಹಾಗೂ ಶಾಲೆಗಳನ್ನು ಮಕ್ಕಳ ಸ್ನೇಹಿಯನ್ನಾಗಿಸುವ ದಿಶೆಯಲ್ಲಿ ಕ್ರಮಗಳು ನಡೆಯುತ್ತಿವೆ.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ: ಲೈಂಗಿಕ ಶೋಷಣೆಗೆ ಈಡಾದ ಸಂತ್ರಸ್ತ ಮಕ್ಕಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ‘ನೆರವು ನೀಡುವ ವ್ಯಕ್ತಿ’ಗಳನ್ನು ನೇಮಿಸುತ್ತದೆ. ಸಂತ್ರಸ್ತ ಮಗು ಮತ್ತು ಕುಟುಂಬಕ್ಕೆ ಅತ್ಯಾವಶ್ಯಕವಾಗಿರುವ ಆಪ್ತಸಮಾಲೋಚನೆ, ಕಾನೂನು ಮಾಹಿತಿ, ವೈದ್ಯಕೀಯ ನೆರವು ಹಾಗೂ ನ್ಯಾಯಾಲಯದ ಪ್ರಕ್ರಿಯೆಗಳನ್ನು ಕುರಿತು ಇವರು ಸಹಾಯ ಮಾಡುತ್ತಾರೆ. ಸಂತ್ರಸ್ತ ಮಕ್ಕಳಿಗೆ ಸರ್ಕಾರದಿಂದ ಪರಿಹಾರ ಮತ್ತು ಪುನರ್ವಸತಿಗಾಗಿ ಧನ ಸಹಾಯವನ್ನೂ ನೀಡಲಾಗುತ್ತದೆ.

ಶಾಲಾ ಸುರಕ್ಷತಾ ಸಮಿತಿ: ರಾಜ್ಯದ ಸರಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (SDMC) ಮತ್ತು ಸರ್ಕಾರೇತರ ಶಾಲೆಗಳಲ್ಲಿ ಶಾಲಾ ಉಸ್ತುವಾರಿ ಸಮಿತಿ (SMC) ಕಡ್ಡಾಯವಾಗಿ ಇದ್ದು, ಅದರಲ್ಲಿ ಪೋಷಕರು ಮತ್ತು ಮಕ್ಕಳ ಪ್ರತಿನಿಧಿಗಳು ಇರಲೇಬೇಕು. ಈ ಸಮಿತಿಗಳಲ್ಲಿ ಮಕ್ಕಳ ರಕ್ಷಣೆ ಕುರಿತು ಮುಕ್ತ ಚರ್ಚೆಗಳು ನಡೆಯಲೇಬೇಕು. ಜೊತೆಗೆ ಶಾಲೆಗಳಲ್ಲಿ ಕರ್ನಾಟಕ ಸರ್ಕಾರ ನಿರ್ದೇಶಿಸಿರುವಂತೆ, “ಶಾಲಾ ಮಕ್ಕಳ ರಕ್ಷಣಾ ನೀತಿ” ಜಾರಿಯಲ್ಲಿರಬೇಕು.

ನಡವಳಿಕೆ–ಭಾಷೆ ಬದಲಿಸಲೇಬೇಕು

ಮೊತ್ತ ಮೊದಲನೆಯದಾಗಿ ಮಕ್ಕಳೊಡನೆ ಮುಕ್ತವಾಗಿ ಮಾತನಾಡುವುದನ್ನು ಎಲ್ಲ ಪೋಷಕರು ಕಲಿತುಕೊಳ್ಳಬೇಕು, ಅದನ್ನು ಅಳವಡಿಸಿಕೊಳ್ಳಲೇಬೇಕು. ಎರಡನೆಯದಾಗಿ ಮಕ್ಕಳು ಏನಾದರೂ ಹೇಳುವಾಗ ಅದನ್ನು ಪೂರ್ಣವಾಗಿ ಕೇಳಬೇಕು ಮತ್ತು ನಂಬಬೇಕು. ‘ಸುಳ್ಳು ಹೇಳ್ತೀಯಾ’ ಎನ್ನಬೇಡಿ. ಇಲ್ಲವಾದರೆ ತಮ್ಮ ಮೇಲೆ ಏನೋ ಬೇಡದ್ದು ಆದಾಗ ನಂಬುವ ಮನೋಭಾವವಿಲ್ಲದ ಪೋಷಕರಿಗೆ ಏನೂ ಹೇಳದೇ ಇರಬಹುದು. ಮಕ್ಕಳು ತಮ್ಮ ಕೆಟ್ಟ ಅನುಭವ ಕುರಿತು ಹೇಳಿದಾಗ, ನೀನೇ ಏನೋ ತಪ್ಪು ಮಾಡಿದ್ದೀಯ, ಕೆಟ್ಟದು ಮಾಡಿಬಿಟ್ಟಿರುವೆ ಎನ್ನುವಂತಹ ಭಾವನೆ ತೋರಲೇಬಾರದು. ಗಾಬರಿಬಿದ್ದು ಎಲ್ಲರನ್ನೂ ಹೆದರಿಸಿ, ಆಕಾಶ ತಲೆ ಮೇಲೆ ಬಿದ್ದಂತೆ ವರ್ತಿಸಬಾರದು. ‘ನೀನು ನನಗೆ ಹೇಳಿದ್ದು ಒಳ್ಳೆಯದಾಯಿತು. ಇದರಲ್ಲಿ ನಿನ್ನ ತಪ್ಪು ಏನೂ ಇಲ್ಲ’ ಎನ್ನಲೇಬೇಕು ಮತ್ತು ರಕ್ಷಣೆಗೆ ಕ್ರಮ ಕೈಗೊಳ್ಳಲು ಮುಂದಾಗಬೇಕು.

‘ಮಕ್ಕಳ ಲೈಂಗಿಕ ಶೋಷಣೆ’ ಮಕ್ಕಳ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಇದರಿಂದ ಮಕ್ಕಳ ಮತ್ತು ಕುಟುಂಬಗಳ ಮೇಲೆ ದೀರ್ಘಕಾಲಿಕ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆಘಾತ, ಇಡೀ ಕುಟುಂಬ ಅವಮಾನಕ್ಕೀಡಾಗುವ, ಖಿನ್ನತೆಗೆ ಜಾರುವ, ಪ್ರಾಣಾಪಾಯವನ್ನೂ ಮಾಡಿಕೊಳ್ಳುವ ಸಂಭವವಿರುತ್ತದೆ. ವಿವಿಧೆಡೆ ಆಗಬಹುದಾದ ಮತ್ತು ಆಗುತ್ತಿರುವ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯವನ್ನು ಗುರುತಿಸಲು, ತಡೆಯಲು, ವರದಿ ಮಾಡಲು ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ವಿವಿಧ ಹಿತಾಸಕ್ತಿದಾರರ ಸಾಮರ್ಥ್ಯವನ್ನು ಬೆಳೆಸಲು ಸಂಬಂಧಿಸಿದವರೆಲ್ಲಾ ಈ ಕುರಿತು ತರಬೇತಿಗಳಲ್ಲಿ ಭಾಗವಹಿಸಬೇಕು ಮತ್ತು ಇನ್ನೂ ಅರಳುತ್ತಿರುವ ಮತ್ತು ಬೆಳೆಯುತ್ತಿರುವ ಮಕ್ಕಳನ್ನು ರಕ್ಷಿಸಲು ಲೈಂಗಿಕ ಶೋಷಣೆ ವಿಚಾರಗಳನ್ನು ತಡೆಯಲು ಮುಕ್ತವಾಗಿ ಮಾತನಾಡಲೇಬೇಕು. [ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಉಚಿತ ದೂರವಾಣಿ ಸಂಖ್ಯೆ 14416 - ಟೆಲಿಮನಸ್ ಸಂಪರ್ಕಿಸಿ].

ಮೌನ ಅಥವಾ ಏನೂ ಕ್ರಮ ಕೈಗೊಳ್ಳದಿರುವುದು ಯಾಕೆ ಅಪಾಯ?

ಮಕ್ಕಳ ಮೇಲಾಗಿರುವ ಲೈಂಗಿಕ ಶೋಷಣೆ ಕುರಿತು ತಿಳಿದ ಯಾರೇ ಆಗಲಿ ಅದನ್ನು ಮುಚ್ಚಿಟ್ಟರೆ ಆರೋಪಿ ಇನ್ನಷ್ಟು ಮಕ್ಕಳಿಗೆ ತೊಂದರೆ ಕೊಡುವ ಸಾಧ್ಯತೆಯಿದೆ. ಶೋಷಣೆಗೊಳಗಾದ ಮಗು ಆತಂಕ, ಖಿನ್ನತೆಗೆ ಒಳಗಾಗಬಹುದು, ಆತ್ಮಹತ್ಯೆಗೆ ಪ್ರಯತ್ನಿಸಬಹುದು. ಇಲ್ಲವೇ ಶಿಕ್ಷಣದಿಂದ ವಿಮುಖವಾಗುವುದು, ತೀವ್ರ ಲೈಂಗಿಕಾಸಕ್ತಿ ಅಥವಾ ಅದಕ್ಕೆ ವಿರುದ್ಧವಾಗಿ ವಯಸ್ಕರಾದ ಮೇಲೂ ಲೈಂಗಿಕ ಕ್ರಿಯೆಯೆಂದರೆ ಭಯ ಬೆಳೆಸಿಕೊಂಡು ಇನ್ನಷ್ಟು ತೊಂದರೆಗೆ ಸಿಲುಕಬಹುದು. ಮಕ್ಕಳೊಡನೆ ಮಾತುಕತೆಯ ಮೂಲಕ, ಆಪ್ತ ಸಮಾಲೋಚನೆ ಒದಗಿಸಿ, ವೈದ್ಯಕೀಯ ಮತ್ತು ಕಾನೂನಾತ್ಮಕವಾಗಿ ಮಕ್ಕಳನ್ನು ರಕ್ಷಿಸಬಹುದು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ/ಶೋಷಣೆ ಆಗಿರುವುದು ತಿಳಿದೂ ದೂರು ದಾಖಲಿಸದಿರುವವರಿಗೆ ಪಾಕ್ಸೋ ಕಾಯಿದೆಯಂತೆ ಆರು ತಿಂಗಳ ಜೈಲುವಾಸದ ಶಿಕ್ಷೆ ವಿಧಿಸಬಹುದು.

ಬಹಳ ಮುಖ್ಯವಾಗಿ ನಿಮ್ಮ ಮಕ್ಕಳು ಕಲಿಯುವ ಶಾಲೆ ಕಾಲೇಜಿನಲ್ಲಿ ‘ಮಕ್ಕಳ ರಕ್ಷಣಾ ನೀತಿ’ ಮತ್ತು ‘ಮಕ್ಕಳ ರಕ್ಷಣಾ ಸಮಿತಿ’ ಇರುವುದನ್ನು ಹಾಗೂ ಶಾಲೆ ಕಾಲೇಜಿನ ಆವರಣದಲ್ಲಿ ಈ ಕುರಿತು ಚೈಲ್ಡ್ಲೈನ್ 1098 ಸಂಖ್ಯೆಯೊಡನೆ ಭಿತ್ತಿಪತ್ರ, ಫಲಕಗಳನ್ನು ಹಾಕಿರುವುದನ್ನು ಖಾತರಿಪಡಿಸಿಕೊಳ್ಳಿ. ಮನೆಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿ.

(ಲೇಖಕರು: ಡಾ ಎನ್.ವಿ. ವಾಸುದೇವ ಶರ್ಮಾ, ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು)

ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ‘ಸುಧಾ’ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.