ಮನೋಲ್ಲಾಸಕ್ಕಷ್ಟೇ ಅಲ್ಲ ಮನೋಚಿಕಿತ್ಸೆಗೂ ಬಳಕೆಯಾಗುತ್ತದೆ ನೃತ್ಯ. ಅಂತಹದ್ದೊಂದು ಚಿಕಿತ್ಸೆಯನ್ನು ಆ ಹೆಣ್ಣುಮಕ್ಕಳು ಹೇಗೆ ಸ್ವೀಕರಿಸಬಹುದು? ಮನೋವೈದ್ಯೆಯೂ ಆಗಿರುವ ನೃತ್ಯ ಶಿಕ್ಷಕಿಯ ಅನುಭವಗಾಥೆ ಇಲ್ಲಿದೆ...

ಅಲ್ಲಿದ್ದದ್ದು ದೊಡ್ಡದೊಂದು ಅಂಗಳ. 6ರಿಂದ 18 ವರ್ಷದವರೆಗಿನ ಹುಡುಗಿಯರು ಆ ಅಂಗಳದಲ್ಲಿದ್ದರು. ಕೆಲವರು ವಿವಿಧ ಸಮಸ್ಯೆಗಳಿಗೆ ಸಿಲುಕಿ ಮನೆಯಿಂದ ದೂರವಿದ್ದವರು. ಮತ್ತೆ ಕೆಲವರು ಕೆಲ ದಿನಗಳಿಗೆ ಎಂದು ಅಲ್ಲಿ ಇರುವವರು. ನಾನು ಅಲ್ಲಿಗೆ ಹೋದದ್ದು, ಚಲನೆಯನ್ನೇ ಚಿಕಿತ್ಸೆಯಾಗಿಸಿ ಅವರ ಮನಸ್ಸನ್ನು ಅರಳಿಸುವ ಪ್ರಯತ್ನಕ್ಕಾಗಿ.

ನೃತ್ಯ ಮತ್ತು ಚಲನೆಯ ಚಿಕಿತ್ಸೆ ಯೋಜನೆಗಾಗಿ ನಡೆಸಿದ 24 ಅವಧಿಗಳ ಮೂರು ತಿಂಗಳ ನೃತ್ಯ ಪ್ರಯತ್ನದ ಆರಂಭಿಕ ದಿನ ಈಗಲೂ ಮನಸ್ಸಿನಲ್ಲಿ ಹಚ್ಚಹಸುರಾಗಿದೆ. ‘ಇವರು ಡಾನ್ಸ್ ಟೀಚರ್ ಅಂತೆ, ಮೂರು ತಿಂಗಳು ನಮಗೆ ಡಾನ್ಸ್ ಪಾಠ ಮಾಡುತ್ತಾರಂತೆ’ ಎಂಬ ಕುತೂಹಲದ, ಆಶ್ಚರ್ಯದ, ಸ್ವಲ್ಪ ಅನುಮಾನದ, ಸ್ವಲ್ಪ ನಗೆಯಿಂದ ಕೂಡಿದ ಮಾತುಗಳು ಕೇಳಿಸಿದ್ದವು. ಪ್ರತಿವಾರ ಎರಡು ದಿನ ಒಂದೊಂದು ಗಂಟೆಯಂತೆ ಆ ಹೆಣ್ಣುಮಕ್ಕಳನ್ನು ನಾನು ನರ್ತನಕ್ಕಾಗಿ ಹಿಡಿದಿಡಬೇಕಿತ್ತು.

ನನ್ನ ನೃತ್ಯ ಸಂಸ್ಥೆಯ ತರಗತಿಗಳಲ್ಲಿ ಮಕ್ಕಳಿಗೆ ನೃತ್ಯ ಹೇಳಿಕೊಡುವ ಅನುಭವಕ್ಕಿಂತ ಇದು ಬಲು ಭಿನ್ನವಾಗಿತ್ತು. ಅಲ್ಲಿ ನೃತ್ಯ ಕಲಿಯಲೆಂದೇ, ವೇದಿಕೆ ಹತ್ತಲೆಂದೇ, ನೃತ್ಯ ಪರೀಕ್ಷೆ ಕಟ್ಟಲೆಂದೇ ತಮ್ಮ ಅಪ್ಪ– ಅಮ್ಮನ ಜೊತೆಗೂಡಿ ಮಕ್ಕಳು ನನ್ನನ್ನು ಹುಡುಕಿಕೊಂಡು ಬಂದರೆ, ಇಲ್ಲಿ ತದ್ವಿರುದ್ಧ ಪರಿಸ್ಥಿತಿ. ನೃತ್ಯ ಮತ್ತು ಚಲನೆಯ ಮೂಲಕ ಭಾವನೆಗಳನ್ನು ಅರಳಿಸಲು, ಹುದುಗಿಕೊಂಡಿರುವ ಅವ್ಯಕ್ತ ಭಾವನೆಗಳನ್ನು ಹೊರಹಾಕಿಸಲು ಬಾಲಕಿಯರ ಬಾಲಮಂದಿರಕ್ಕೆ ನಾನೇ ಅವರನ್ನು ಹುಡುಕಿಕೊಂಡು ಹೋಗಿದ್ದೆ.

ಕಾರ್ಯಾಗಾರ ನಡೆಸುವ ಸಂಸ್ಥೆಯ ಅಧಿಕಾರಿಗಳ ಅನುಮತಿ ಒಂದೇ ನನಗಿದ್ದದ್ದು. ಮಕ್ಕಳಿಗೆ ನೃತ್ಯ ಕಲಿಯುವ ಆಸಕ್ತಿ ಇದೆಯೋ ಇಲ್ಲವೋ ನನಗೆ ಗೊತ್ತಿರಲಿಲ್ಲ. ಮಕ್ಕಳು ನನ್ನೊಡನೆ ಹೇಗೆ ಬೆರೆಯಬಹುದು, ಸ್ಪಂದಿಸಬಹುದು ಎಂಬ ಕುತೂಹಲ ಇತ್ತು. ಅವರು ನನ್ನನ್ನು ಪೂರ್ತಿಯಾಗಿ ತಿರಸ್ಕರಿಸಿಯೇ ಬಿಡಬಹುದಾದ ಸಾಧ್ಯತೆಯೂ ಇತ್ತು. ಹೀಗಾಗಿ, ನನ್ನಂತಹ ಮನೋವೈದ್ಯೆಗೂ ಆತಂಕ ಕಾಡತೊಡಗಿತ್ತು.

ಈ ಮಕ್ಕಳನ್ನು ಬೆಳಿಗ್ಗೆ 7 ಗಂಟೆ ಹೊತ್ತಿಗೆ, ಶಾಲೆಗೆ ಅವರು ತಯಾರಾಗಲು ಕೆಲ ಸಮಯ ಮೊದಲು ಹಿಡಿದಿಡುವುದೆಂದರೆ, ಕಪ್ಪೆಗಳನ್ನು ತಕ್ಕಡಿಗೆ ಹಾಕಿದಂತೆಯೇ! ಮೊದಮೊದಲು ನಾನು ಮಾಡಿದ ಉಪಾಯವೆಂದರೆ, ಕನ್ನಡ ಕಾವ್ಯದಿಂದ ಆಯ್ದ ಸ್ವಾರಸ್ಯಕರ ಪ್ರಸಂಗವನ್ನು ಆಧರಿಸಿದ 10 ನಿಮಿಷದ ಕಿರು ನೃತ್ಯವೊಂದನ್ನು ಅವರ ಮುಂದೆ ಪ್ರದರ್ಶಿಸಿದ್ದು; ಒಮ್ಮೆ ಅವರ ಗಮನವನ್ನು ಹಿಡಿದಿಟ್ಟು, ಆಮೇಲೆ ಅವರು ನರ್ತಿಸುವಂತೆ ಮಾಡುವ ನಿರ್ಧಾರಕ್ಕೆ ಬಂದದ್ದು.

ಬರಬರುತ್ತಾ ನಾನು ಬಾಗಿಲ ಹೊರಗೆ ಕಾಲಿಡುವ ವೇಳೆಗೆ ‘ನಮಸ್ತೆ ಅಕ್ಕಾ’ ಎಂಬ ಕೋರಸ್ ನನ್ನನ್ನು ಸ್ವಾಗತಿಸತೊಡಗಿತು. ಕ್ರಮೇಣ ಪುಟ್ಟ ಹುಡುಗಿಯರು ದುಃಖ, ಸಿಟ್ಟು, ಸಂತೋಷ, ಆಶ್ಚರ್ಯ, ಅಸಹ್ಯ, ಭಯ, ಉತ್ಸಾಹದಂತಹ ಭಾವನೆಗಳನ್ನು ಅನಾಯಾಸವಾಗಿ ಅಭಿನಯಿಸಲು ಆರಂಭಿಸಿಬಿಟ್ಟರು. ಎಲ್ಲರೂ ಒಟ್ಟಾಗಿ ಮಾಡುವಾಗ ಅವರೆಲ್ಲರ ಫೇವರಿಟ್ ಹಾಡು, ಬೇಂದ್ರೆಯವರ ‘ಕುಣಿಯೋಣು ಬಾರ’ ಮತ್ತು ‘ಕೂಡಿ ಓದಿ, ಕೂಡಾಡಿ, ಕೂಡಿ| ಅರಿಯೋಣ ಕೂಡಿ ಕೂಡಿ’. ಆ ಬಾಲಮಂದಿರದ ಆವರಣದ ಮಧ್ಯೆ ಇರುವ ಆಲದ ಮರದ ಸುತ್ತ ಅವರೆಲ್ಲರೂ ತಿರುಗಿ ತಿರುಗಿ ನರ್ತಿಸುತ್ತಿದ್ದರೆ ನಾನು ಮೂಕಪ್ರೇಕ್ಷಕಿ!

ಮೂರು ತಿಂಗಳ ಕೊನೆಯಲ್ಲಿ 24 ಅವಧಿಗಳನ್ನು ಮುಗಿಸಿದಾಗ ಸಂತಸದ ಜೊತೆಗೆ ನನ್ನನ್ನು ವಿಷಾದವೂ ಆವರಿಸಿಕೊಂಡಿತ್ತು. ‘ಅಕ್ಕಾ’ ಎಂದು ದುಂಬಾಲು ಬೀಳುತ್ತಿದ್ದ ಚಂದದ ಈ ಹುಡುಗಿಯರು, ನಾನೇ ಹೇಳಿಕೊಟ್ಟಿದ್ದ ನೃತ್ಯದ ಚಲನೆಯ ನಡೆಗಳನ್ನು ಮಾಡುತ್ತಲೇ ಇಡೀ ಹಾಸ್ಟೆಲ್ನ ತುಂಬಾ ಓಡಾಡುತ್ತಿದ್ದದ್ದು ಮನಸ್ಸಿಗೆ ಕೊಡುತ್ತಿದ್ದ ಸಂತಸ ಅಷ್ಟಿಷ್ಟಲ್ಲ. ಮಧ್ಯೆ ಮಧ್ಯೆ ಅಡ್ಡಿಗಳು ಇರಲಿಲ್ಲ ಎಂದಲ್ಲ. ಕೆಲ ಮಕ್ಕಳು ಅಳುತ್ತಾ ಕುಳಿತುಬಿಟ್ಟರೆ, ಮತ್ತೆ ಕೆಲವರು ಏನು ಮಾಡಿದರೂ ಎಷ್ಟೇ ಒತ್ತಾಯಿಸಿದರೂ ಇದ್ದಕ್ಕಿದ್ದಂತೆ ನೃತ್ಯ ಮಾಡಲು ನಿರಾಕರಿಸುತ್ತಾ ಕೊಠಡಿಯೊಳಗೆ ಹೋಗಿಬಿಡುತ್ತಿದ್ದರು. ಇವೆಲ್ಲವೂ ನಾನು ನಡೆಸುತ್ತಿದ್ದ ಅಧ್ಯಯನಕ್ಕೆ ಮಹತ್ವದ ಅಂಶಗಳೇ ಎಂದು ನನಗೆ ಅನ್ನಿಸುತ್ತಿತ್ತು.

ಕುಣಿಯುವುದು ಎಂದರೆ ಅಷ್ಟು ಸುಲಭವಲ್ಲ; ಅದು ನಮ್ಮ ಭಾವನೆಗಳನ್ನು ಮತ್ತೊಬ್ಬರಿಗೆ ತಿಳಿಯಪಡಿಸುವ ಸವಾಲು. ಇನ್ನೊಬ್ಬರ ಎದುರಿಗೆ ಮುಸುಕು ಹಾಕಿ ಮುಚ್ಚಿಡಬಹುದಾದಂತಹ ಮನಸ್ಸಿನೊಳಗಿನ ಭಾವಗಳನ್ನು ನೃತ್ಯದ ಮೂಲಕ ಹೊರಹಾಕಲು ಸಾಕಷ್ಟು ಧೈರ್ಯ ಬೇಕು ಎಂದು ನನಗನ್ನಿಸಿತು. ಕೊನೆಯ ದಿನ ಮಕ್ಕಳಿಗೆ ಕಾರ್ಯಕ್ರಮವನ್ನು ಮಾಡಿಸಿ, ತಿಂಡಿ– ಕಾಫಿ ಕುಡಿಸಿ, ಜೊತೆಗೆ ಕಥೆ ಪುಸ್ತಕ, ಜಾಮಿಟ್ರಿ ಬಾಕ್ಸ್ ಕೊಡುವಾಗ ಮಕ್ಕಳಿಗೆ ಹೆಚ್ಚು ಖುಷಿಯಾಯಿತೋ ನನಗೆ ಹೆಚ್ಚು ಖುಷಿಯಾಯಿತೋ ಹೇಳುವುದು ಕಷ್ಟ.

ಹದಿಹರೆಯದ ಹೆಣ್ಣುಮಕ್ಕಳ ಜೊತೆಗಿನ ಈ ವಿಶಿಷ್ಟ ಅನುಭವವನ್ನು ಜೊತೆಗಿಟ್ಟುಕೊಂಡು ನಾನು ಮುನ್ನಡೆದದ್ದು, ಅದರ ಪಕ್ಕದಲ್ಲಿಯೇ ಇರುವ ಮಹಿಳಾ ನಿಲಯಕ್ಕೆ. ಅಲ್ಲಿದ್ದದ್ದು ವಿವಿಧ ಬಗೆಯ ದೈಹಿಕ ಮತ್ತು ಮಾನಸಿಕ ಅಸಾಮರ್ಥ್ಯವಿದ್ದ 74 ಮಹಿಳೆಯರು. ಕೆಲವರಿಗೆ ಕೈಕಾಲು ಆಡಿಸಲು ಕಷ್ಟ, ಮತ್ತೆ ಕೆಲವರಿಗೆ ಮಾನಸಿಕ ಅಸ್ವಾಸ್ಥ್ಯ, ಒಂದೊಮ್ಮೆ ಯಾವ ಅಸ್ವಸ್ಥತೆಯೂ ಇಲ್ಲ ಎನ್ನುವವರಿಗೂ ಮನೆಯಿಂದ, ತಮ್ಮವರಿಂದ ದೂರ ಇದ್ದೇನೆ ಎಂಬ ಬೇಸರ. ಸುಮಾರು 20 ವರ್ಷದವರಿಂದ ಹಿಡಿದು 75 ವರ್ಷ ವಯಸ್ಸಿನವರೆಗಿನ ಮಹಿಳೆಯರು ಅಲ್ಲಿದ್ದರು.

ಮಕ್ಕಳಿಗೆ ನೃತ್ಯ ಕಲಿಸುವ ಅನುಭವ ಬೇರೆ, ದೊಡ್ಡವರಿಗೆ ನೃತ್ಯವನ್ನು ಕಲಿಸುವ ಸವಾಲು ಬೇರೆಯೇ. ಕಾಲು ನೋವು, ಕೈ ನೋವು, ಮಂಡಿ ನೋವು, ಏಕಾಗ್ರತೆಯ ಕೊರತೆ ಇವೆಲ್ಲದರ ನಡುವೆ ನೃತ್ಯದ ಚಲನೆಗಳನ್ನು ಉಪಯೋಗಿಸಿ ಅವರು ನರ್ತಿಸುವಂತೆ, ಮುಕ್ತವಾಗಿ ತಮ್ಮ ಭಾವನೆಗಳನ್ನು ಹೊರಹಾಕುವಂತೆ ಮಾಡುವ ಪ್ರಯತ್ನ ನನ್ನದಾಗಿತ್ತು. ಒಂದು ತಿಂಗಳು ಪ್ರತಿನಿತ್ಯ ಹೋಗಿ ಕಲಿಸುವಾಗ, ಅವರೊಡನೆ ನಾನೂ ಹೆಜ್ಜೆ ಹಾಕುತ್ತ ‘ಕುಣಿಯಿರಿ, ಹಗುರಾಗಿರಿ, ಸಂತಸಪಡಿ’ ಎಂದು ಮತ್ತೆ ಮತ್ತೆ ಪ್ರೋತ್ಸಾಹಿಸುವಾಗ, ಅವರಿಂದ ನಾನು ಅದೆಷ್ಟು ಕಲಿತೆ ಎಂಬುದು ವಿಸ್ಮಯ ತಂದ ಸಂಗತಿ. ನನ್ನ ಮನಸ್ಸಿನಲ್ಲಿದ್ದ ‘ಈ ಮಹಿಳೆಯರು ಅದೆಷ್ಟು ಕಲಿತಾರು? ನಾನು ಮಾಡುವ ನೃತ್ಯ ಮಕ್ಕಳಿಗೆ ಅರ್ಥವಾದಂತೆ ಇವರಿಗೆ ಅರ್ಥವಾದೀತೆ?’ ಎಂಬ ಪೂರ್ವಗ್ರಹ ಎರಡೇ ದಿನಗಳಲ್ಲಿ ಬಿದ್ದು ಹೋಗಿತ್ತು! ಒಂದು ತಿಂಗಳ ಕೊನೆಗೆ ಅವರೆಲ್ಲರೂ ಮಾಡಿದ ಚಲನೆಗಳು, ಅದರಲ್ಲಿದ್ದ ಸಂತಸ, ಉತ್ಸಾಹ ನನ್ನನ್ನು ಮರುಳುಗೊಳಿಸಿತ್ತು. ನೃತ್ಯದ ಚಲನೆಗಳು ಪರಿಪೂರ್ಣವಾಗಿ ಹೊರಹೊಮ್ಮಬೇಕು ಎನ್ನುವ ಗುರಿ ತನ್ನಿಂತಾನೇ ಬದಲಾಗಿ ‘ಆನಂದವೇ ಆರೋಗ್ಯ’ ಎನ್ನುವಂತಾಗಿತ್ತು.

ನೃತ್ಯವನ್ನು ಕಲಿಸುವ- ನನ್ನದೇ ಕಲಿಕೆಯೂ ಆದ ಈ ಎರಡು ಅನುಭವಗಳು ‘ಮಾನಿನಿಯ ಮನೋಲ್ಲಾಸಕ್ಕೆ ನೃತ್ಯ ಒಂದು ಸುಲಭದ ದಾರಿ’ ಎಂದು ನನಗೆ ಖಚಿತಪಡಿಸಿದೆ. ‘ಯಾರೂ ನೋಡುತ್ತಿಲ್ಲ ಎಂಬಂತೆ ನರ್ತಿಸು, ಯಾರೂ ನೋವು ಮಾಡಲು ಸಾಧ್ಯವಿಲ್ಲ ಎಂಬಂತೆ ಪ್ರೀತಿಸು’ ಎಂಬ ಮಾತು ಆ ಸಂದರ್ಭದಲ್ಲಿ ನೆನಪಾಗುತ್ತಿತ್ತು. ತಮ್ಮೊಳಗೆ ಅವೆಷ್ಟೋ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡ ಈ ಹೆಣ್ಣುಮಕ್ಕಳು ಮತ್ತು ಮಹಿಳೆಯರು ನನ್ನೊಡನೆ ಮನಸ್ಸು ಬಿಚ್ಚಿ ಕುಣಿದದ್ದು ಧನ್ಯತೆಯ ಭಾವವನ್ನು ತಂದಿತ್ತು. ಕೊನೆಯ ದಿನ ಮುಗಿಸುವಾಗ ಮಹಿಳೆಯೊಬ್ಬರು ಹೇಳಿದ ಮಾತು ‘ಮೇಡಂ ನೀವು ನಮಗೆ ಹೇಳಿಕೊಟ್ಟ ನೃತ್ಯ ಶಿಬಿರದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ, ಕುಣಿ ಕುಣಿ, ಖುಷಿ ಖುಷಿ!’

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-348387267

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.