ಮುಂಜಾವಿನ ನಡಿಗೆ ಎಂಬುದು ಪ್ರತಿದಿನ ನನ್ನ ಅಮೂಲ್ಯ ಏಕಾಂತದ ಸಮಯ. ಹೊಗೆ, ದೂಳು, ಗಾಡಿಗಳ ಹಾರ್ನಿನ ರಗಳೆಯಿಲ್ಲದ, ನಿತ್ಯದ ಜಂಜಡಗಳನ್ನೆಲ್ಲ ಬದಿಗಿರಿಸಿ ಮನಸ್ಸನ್ನು ಪ್ರಶಾಂತವಾಗಿಸಿಕೊಳ್ಳಲು ಸಿಗುವ ಸದವಕಾಶ. ದೂರದಲ್ಲಿ ಎಲ್ಲಿಂದಲೋ ಢಣಢಣಗುಟ್ಟುವ ದೇಗುಲದ ಗಂಟೆಯ ರವ, ಸುಬ್ಬುಲಕ್ಷ್ಮಿಯ ಸುಪ್ರಭಾತ, ಹಕ್ಕಿಗಳ ಕಲರವ, ಮರೆಯಾಗುತ್ತಿರುವ ಚಂದ್ರಮನಿಗೆ ಜೊತೆಯಾಗಿ ಒಂದಿಷ್ಟು ತಂಗಾಳಿಯ ಸಾಂಗತ್ಯದ ನಡಿಗೆಯನ್ನು ತಪ್ಪಿಸಿಕೊಳ್ಳಲು ಒಂದು ದಿನದ ಮಟ್ಟಿಗಾದರೂ ಕಾರಣ ಹುಡುಕಬೇಕು ಅನ್ನಿಸುವುದಿಲ್ಲ.

ಅಂತಹ ಆಹ್ಲಾದಕರ ಸಮಯದಲ್ಲಿ, ಜೀವನದ ಇಳಿಸಂಜೆಯಲ್ಲಿರುವ ಹಿರಿಯರ ಗುಂಪಿನ ಮಾತಿಗೆ ಕಿವಿಯಾಗುವಾಗ, ಅವರ ಜೀವನೋತ್ಸಾಹ ಎಳೆಬಿಸಿಲಿನಂತೆ ಮನಸ್ಸಿಗೆ ಮುದ ನೀಡುತ್ತದೆ.

ಹಿರಿಯ ನಾಗರಿಕರೆಂದರೆ ವೈರಾಗ್ಯದ ಮಾತನಾಡುವವರು, ಇಡೀ ದಿನ ತಮ್ಮ ಗೋಳುಗಳನ್ನು ಹೇಳಿಕೊಳ್ಳುವವರು, ದೇವರು ದಿಂಡರು ಎಂದು ಅಧ್ಯಾತ್ಮದ ಕುರಿತೇ ಮಾತನಾಡುವ ‘ಬೋರಿಂಗ್ ಪರ್ಸನಾಲಿಟಿ’ ಎಂಬುದೇ ಹೆಚ್ಚಿನವರ ಭಾವನೆ. ಆದರೆ ದಿನನಿತ್ಯ ನಡಿಗೆಯ ವೇಳೆ ನನಗೆ ಸಿಗುವ ಹಿರಿಯ ಮಹಿಳೆಯರು ಮತ್ತು ಪುರುಷರ ಪ್ರತ್ಯೇಕ ಗುಂಪುಗಳು ಇದಕ್ಕೆ ತದ್ವಿರುದ್ಧ!

ನಡಿಗೆಯ ಬಳಿಕ ಕೈಕಾಲು ಆಡಿಸುತ್ತ, ಶ್ಲೋಕಗಳನ್ನು ಪಠಿಸುತ್ತ, ಉಳಿದ ನಡಿಗೆದಾರರನ್ನು ತಮ್ಮ ನಗು, ಹರಟೆಯ ಮೂಲಕ ಸೆಳೆಯುವ ವ್ಯಕ್ತಿತ್ವ ಮಹಿಳಾ ಗುಂಪಿನದ್ದಾದರೆ, ‘ಏನು ಮೇಷ್ಟ್ರೇ, ನಿನ್ನೆ ಮ್ಯಾಚ್ ನೋಡಿದ್ರಾ? ವಿರಾಟನದ್ದು ಏನ್ರೀ ಆಟ ಅದು? ಜೆಮಿಮಾ ಇಲ್ದಿದ್ರೆ ಏನಾಗ್ತಿತ್ತೋ? (ನಿಜ ಹೇಳಬೇಕೆಂದರೆ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಹೆಸರನ್ನು ಅವರ ಬಾಯಿಯಿಂದಲೇ ನಾನು ಮೊದಲು ಕೇಳಿದ್ದು!) ಮ್ಯಾಚ್ ನೋಡ್ಕೊಂಡೇ ಮಲಗಿದ್ದು’; ‘ಪಾಪ ಕಣ್ರೀ, ಕಾಂಪೌಂಡ್ ಬಿದ್ದು ಜನ ಸತ್ತುಹೋದ್ರಂತಲ್ಲ? ಛೇಛೇ’ ಎಂದೆಲ್ಲ ಹಿಂದಿನ ದಿನದ ಸುದ್ದಿಯ ವಿಶ್ಲೇಷಣೆಯಲ್ಲಿ ತೊಡುಗುವವರು ಪುರುಷರ ಗುಂಪಿನ ಸದಸ್ಯರು.

ಹೀಗಾಗಿ, ಅವರೊಂದಿಗಿನ ಮಾತುಕತೆಯ ನಂತರ ನ್ಯೂಸ್ಪೇಪರನ್ನಾಗಲೀ ಟಿ.ವಿ . ನ್ಯೂಸ್ ಚಾನೆಲ್ಲನ್ನಾಗಲೀ ನೋಡಬೇಕಂತಲೇ ಇಲ್ಲ. ಜ್ಞಾನವೂ ಉಂಟು, ಮನರಂಜನೆಯೂ ಉಂಟು. ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಖುಷಿಖುಷಿಯಾಗಿರುವ ಅವರ್ಯಾರೂ ಮನೆಯ ತಲೆನೋವನ್ನು ಪಾರ್ಕಿಗೆ ತಂದದ್ದು ನನಗಂತೂ ತಿಳಿದಿಲ್ಲ. ಎಲ್ಲೋ ಒಮ್ಮೊಮ್ಮೆ ‘ಮಕ್ಕಳೆಲ್ಲ ಅವರವರ ಜೀವನ ನೋಡಿಕೊಂಡು ಆರಾಮಾಗಿದ್ದಾರೆ’ ಎನ್ನುವುದನ್ನು ಬಿಟ್ಟರೆ, ಹಳವಂಡಗಳಿಗೆ ತಲೆಬಿಸಿ ಮಾಡಿಕೊಳ್ಳುತ್ತಾ ಇನ್ನೊಬ್ಬರಿಗೆ ತಮ್ಮ ಜಂಜಡವನ್ನು ದಾಟಿಸಿದ್ದು ನನ್ನ ಗಮನಕ್ಕೆ ಒಮ್ಮೆಯೂ ಬಂದಿಲ್ಲ.

ಈ ಹಿರಿಯ ಜೀವಗಳನ್ನು ಕಂಡಾಗೆಲ್ಲ ನೆನಪಾಗುವುದು ಇಂಥದ್ದೇ ಇನ್ನೊಂದು ಜೀವವಾದ ನನ್ನ ದೊಡ್ಡಮ್ಮ. ಜೀವನದ ಕೊನೇ ಗಳಿಗೆಯಲ್ಲಿ ಆರೋಗ್ಯಕ್ಕಿಂತ ಜಾಸ್ತಿ ಅವರು ಕಾಪಾಡಿಕೊಂಡದ್ದು ತಮ್ಮ ಬತ್ತದ ಉತ್ಸಾಹವನ್ನು. ಸ್ಥಳೀಯ ಜನಪದ ಹಾಡುಗಳಷ್ಟೇ ಸೊಗಸಾಗಿ ಸಿನಿಮಾ ಹಾಡುಗಳನ್ನೂ ಹಾಡುತ್ತಿದ್ದರು ಅವರು. ಅದರಲ್ಲೂ ಸಂದರ್ಭಕ್ಕೆ ತಕ್ಕಂತೆ ಹಾಡುವ ಚಾತುರ್ಯ ಅವರಲ್ಲಿತ್ತು. ಸೇವಂತಿ ಹೂಗಳನ್ನು ಕಂಡರೆ ‘ಸೇವಂತಿಯೇ ಸೇವಂತಿಯೇ’ ಎಂದೋ, ಶಾಲೆಗೆ ಹೋಗುತ್ತಿರುವ ಮಕ್ಕಳನ್ನು ಕಂಡರೆ ‘ಕನ್ನಡದಾ ಮಕ್ಕಳೆಲ್ಲ ಒಂದಾಗಿ ಬನ್ನಿ’ ಎಂದೋ, ಇನ್ನೂ ಪುಟ್ಟಪುಟ್ಟ ಮಕ್ಕಳನ್ನು ನೋಡಿದರೆ ‘ಮಕ್ಕಳಾಟವು ಚಂದ, ಮರುಳು ಬುದ್ಧಿಯು ಚಂದ’ ಎಂದೋ, ನೀರು ಹೊರುವ ಹುಡುಗಿಯರು ಕಣ್ಣಿಗೆ ಬಿದ್ದರೆ ‘ತಾರಕ್ಕ ಬಿಂದಿಗೆ ನಾ ನೀರಿಗೋಗುವೆ’ ಎಂದೋ ಕ್ಷಣ ಕೂಡ ಆಲೋಚಿಸದೆ ಹಾಡುವ ಕ್ಷಿಪ್ರಮತಿಯಾಗಿದ್ದರು.

ನನ್ನ ಇನ್ನೊಬ್ಬ ಸಂಬಂಧಿ ತಮ್ಮ ಮಕ್ಕಳನ್ನೆಲ್ಲ ಓದಿಸಿ, ಒಂದು ಹಂತಕ್ಕೆ ಅವರನ್ನು ದಡ ಸೇರಿಸಿದ ಮೇಲೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಒಂದು ಸಂಘದ ಸದಸ್ಯತ್ವ ಪಡೆದುಕೊಂಡರು. ಅದರ ಮೂಲಕ ಅವರು ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಭಜನೆ, ಸೋಬಾನೆ, ವಿಷ್ಣುಸಹಸ್ರನಾಮವನ್ನು ಹಾಡುತ್ತಾ ತಮ್ಮನ್ನು ತಾವು ಕ್ರಿಯಾಶೀಲರಾಗಿಸಿಕೊಂಡಿದ್ದಾರೆ. ಇನ್ನೊಬ್ಬ ಪರಿಚಿತೆ ಶಾಲೆ ಕಲಿತದ್ದು ಹತ್ತನೆಯ ತರಗತಿ. ಮಕ್ಕಳೆಲ್ಲ ಗೂಡಿನಿಂದ ಗಗನಕ್ಕೆ ಹಾರಿದ ಮೇಲೆ ಈಗ ಆನ್ಲೈನಿನಲ್ಲಿ ಸಂಸ್ಕೃತ ಅಭ್ಯಾಸ ಮಾಡುತ್ತಿದ್ದಾರೆ. ಮೊಮ್ಮಗಳನ್ನು ಈಜಿನ ತರಗತಿಗೆ ದಿನಾ ಕರೆದುಕೊಂಡು ಹೋಗುತ್ತಿದ್ದ ಅಜ್ಜಿಯೊಬ್ಬರು, ಅವಳು ಈಜುವುದನ್ನು ನೋಡಿ ಉತ್ತೇಜಿತರಾಗಿ ಸ್ವತಃ ಈಜು ಕಲಿಯಲು ಆಸಕ್ತರಾದರು. ಈ ಹಂಬಲ ಅವರನ್ನು ಎಷ್ಟು ದೂರ ಕರೆದುಕೊಂಡು ಹೋಗಿದೆಯೆಂದರೆ, ಈಗ ಅವರು ಸ್ಪರ್ಧೆಗಳಲ್ಲಿ ಭಾಗವಹಿಸುವಷ್ಟು ನಿಪುಣರು.

ನಮ್ಮೂರಿನಲ್ಲಿ ಈಗೀಗ ಸಮಾರಂಭಗಳಲ್ಲಿ ಬಡಿಸುವ ಕೆಲಸಕ್ಕೆ ಅಥವಾ ಮನೆಯಲ್ಲಿ ನಡೆಯುವ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಸಹಾಯ ಮಾಡಲು ಮಧ್ಯವಯಸ್ಸು ದಾಟಿದ ಮಹಿಳೆಯರು ಸದಾ ಮುಂದು. ಮನೆಯ ಆರ್ಥಿಕ ಪರಿಸ್ಥಿತಿಗೆ ನಿಯಮಿತ ಸಂಬಳವಲ್ಲದಿದ್ದರೂ ತಮ್ಮಿಂದಾದಷ್ಟು ಸಹಾಯ ಮಾಡಿ ಗಂಡನಿಗೆ ಹೆಗಲೆಣೆಯಾಗಿ ನಿಲ್ಲುವ ಅಪೇಕ್ಷೆ ಅವರದು. ಇಂಥ ಮಹಿಳೆಯರಲ್ಲಿ ಒಬ್ಬರು ಭತ್ತದ ಗದ್ದೆಗಳಲ್ಲಿ ದುಡಿದು, ಮಲ್ಲಿಗೆ ಗಿಡಗಳನ್ನು ಬೆಳೆಸಿ, ಹಾಲು ಮಾರಿ ಕೈತುಂಬಾ ಹಣವನ್ನು ಸಂಪಾದಿಸುತ್ತಿದ್ದಾರೆ.

ಈಗಂತೂ ವ್ಯಾಟ್ಸ್ಆ್ಯಪ್, ಫೇಸ್ಬುಕ್ಕಿನಿಂದಾಗಿ ಹಳೆಯ ಸ್ನೇಹಿತರು ಸಂಪರ್ಕಕ್ಕೆ ಸಿಗುವುದು ಸುಲಭ. ಮಾಲುಗಳಲ್ಲಿ, ಹೋಟೆಲ್ಲುಗಳಲ್ಲಿ ಇಂಥ ಹಳೆಯ ಗೆಳತಿಯರ, ಶಾಲಾ ಗೆಳತಿಯರ ರೀಯೂನಿಯನ್ನೋ ಗೆಟ್ ಟುಗೆದರ್ರೋ... ಒಟ್ಟಾರೆ ಇಂಥದ್ದೇ ಏನೋ ಒಂದು ನೆಪ ಹುಡುಕಿ ಆಗಾಗ್ಗೆ ಒಟ್ಟಾಗಿ ಸೇರಿ, ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳದಂತೆ ಜಾಗ್ರತೆ ವಹಿಸುವವರು ಬೇಕಾದಷ್ಟು ಮಂದಿ.

ಸಣ್ಣ ಪ್ರವಾಸ, ಕಿಟಿ ಪಾರ್ಟಿಗಳನ್ನು ಆಯೋಜಿಸಿ, ಹಾಡು, ನೃತ್ಯ, ಆಟ ಎಂದು ಖುಷಿಯಿಂದ ತೊಡಗಿಕೊಳ್ಳುವ ಅವರ ಗಮ್ಮತ್ತೇ ಗಮ್ಮತ್ತು. ಆ ಒಂದು ದಿನದ ಮಟ್ಟಿಗೆ ಆರೋಗ್ಯದ ಕಾಳಜಿಯನ್ನು ದೂರವಿಟ್ಟು ಮಂಚೂರಿ, ಐಸ್ಕ್ರೀಂ, ಚಾಟ್ಸು ಎಂದು ಎಲ್ಲಕ್ಕೂ ಜೈಕಾರ ಹಾಕುತ್ತಿರುತ್ತಾರೆ. ಆ ಗಳಿಗೆಯಲ್ಲಿ ತಮ್ಮ ಬಿ.ಪಿ., ಶುಗರ್ರು, ಮಂಡಿನೋವಿಗೆಲ್ಲ ‘ಡೋಂಟ್ ಕೇರ್’ ಎನ್ನುತ್ತ ‘ಈ ಸಮಯ ಆನಂದಮಯ’ ಎಂದು ತಲ್ಲೀನರಾಗಿರುತ್ತಾರೆ. ಈಗಿನ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗಿ ‘ಬುಕ್ ಮೈ ಶೋ’ನಲ್ಲಿ ಪಿಕ್ಚರ್ ಟಿಕೆಟ್ ಬುಕ್ ಮಾಡಿ, ಆ್ಯಪ್ನಲ್ಲಿ ಟ್ಯಾಕ್ಸಿ ಬುಕ್ ಮಾಡಿಕೊಂಡು ಟಾಕೀಸಿಗೆ ಹೋಗಿ, ಪಾಪ್ಕಾರ್ನ್ ತಿನ್ನುತ್ತ ‘ನಾವು ಯಾರ್ಗೂ ಕಮ್ಮಿಯಿಲ್ಲ’ ಎಂಬ ಭಾವನೆಯಲ್ಲಿ ಎಷ್ಟೋ ಹೆಣ್ಣುಮಕ್ಕಳು ಮರಳಿ ಅರಳುತ್ತಿದ್ದಾರೆ.

ಒಂದಷ್ಟು ವಯಸ್ಸಾದ ಮೇಲೆ ಬದುಕನ್ನು ಬಂದಂತೆ ಸ್ವೀಕರಿಸಿ, ಇದ್ದುದರಲ್ಲಿಯೇ ಖುಷಿ ಕಂಡುಕೊಳ್ಳುತ್ತಾ ತಾವು ಸಂತೋಷವಾಗಿ ಇರುವುದಲ್ಲದೆ ತಮ್ಮ ಸುತ್ತಲಿನವರನ್ನೂ ಸಂತೋಷವಾಗಿ ಇರಿಸಿಕೊಳ್ಳು ವುದೂ ಒಂದು ಜೀವನ ಕಲೆ- ಅದೇ ಜೀವನೋತ್ಸಾಹ. ಜೀವನದ ಜಂಜಡಗಳಿಗೆ ಹಲುಬದ, ‘ನಮ್ಮ ಬದುಕು ಮುಗಿಯಿತು, ನಮಗೆ ಇನ್ನೇನಾಗಬೇಕು’ ಎಂದು ಬದುಕಿನ ಬಗ್ಗೆ ನಿರಾಸಕ್ತಿಯನ್ನು ತೋರದ, ‘ಅದೆಲ್ಲ ಇದ್ದದ್ದೇ’ ಎಂದುಕೊಳ್ಳುತ್ತ ಪ್ರತಿಕ್ಷಣವನ್ನೂ ಜೀವಿಸುವ ಇಂಥವರು ನಮಗೆ ಯಾವತ್ತೂ ಆದರ್ಶಪ್ರಾಯರು!

ಹಿರಿಯ ಜೀವಗಳೇ ಸ್ಫೂರ್ತಿ!

ಬೆಳ್ಳಂಬೆಳಗ್ಗಿನ ತಂಪು ಹವೆಯಲ್ಲಿ ಉದ್ಯಾನಗಳ ಬೆಂಚಿನ ಮೇಲೆ ಕುಳಿತು ರೀಲ್ಸ್ಗಳನ್ನು ಸ್ಮಾಲ್ ಮಾಡುತ್ತಾ ವಿಡಿಯೊಗಳನ್ನು ನೋಡುತ್ತಾ ಗಂಟೆಗಟ್ಟಲೆ ಇಹಲೋಕದ ಪರಿವೆಯೇ ಇಲ್ಲದಂತೆ ಕುಳಿತುಕೊಳ್ಳುವ ಯುವಜನರನ್ನು ಕಂಡಾಗ ಮನಸ್ಸು ಪಿಚ್ಚೆನ್ನಿಸುತ್ತದೆ. ಅಲ್ಲೇ ಸಮೀಪದಲ್ಲಿ ವಾಕ್ ಮಾಡುತ್ತಾ, ಖುಷಿಯಾಗಿ ಹರಟೆ ಹೊಡೆಯುತ್ತಾ ಸಾಗುವ ಹಿರಿಯ ಜೀವಗಳಲ್ಲಿರುವ ಜೀವನೋತ್ಸಾಹದ ಕಾಲಂಶವಾದರೂ ಇವರಲ್ಲಿ ಕಾಣಬಾರದೇ, ಹೀಗಾದರೆ ಈ ಹೊಸ ಪೀಳಿಗೆಯ ಭವಿಷ್ಯ ಹೇಗಿರಬಹುದು ಎಂಬ ಅಂತರಂಗದ ಪ್ರಶ್ನೆ ಕಳಕಳಿ ಹುಟ್ಟಿಸುತ್ತದೆ.

ಅದೇನು ಉತ್ಸಾಹ ಅಂತೀರ...

ಕಳೆದ ವರ್ಷ ಒಂದು ಬ್ಯಾಡ್ಮಿಂಟನ್ ಟೂರ್ನಮೆಂಟಿನಲ್ಲಿ ಭಾಗವಹಿಸಲು ಹೋಗಿದ್ದೆ. ಐವತ್ತು ವರ್ಷದ ಮೇಲಿನವರ ಕೆಟಗರಿಯಲ್ಲಿ, ಆಶ್ಚರ್ಯವೆಂಬಂತೆ ಅರವತ್ತರ ಮೇಲಿನ ಮಹಿಳೆಯರು ಸಾಕಷ್ಟು ಮಂದಿ ಇದ್ದರು. ಅವರಲ್ಲಿ ಒಬ್ಬರು ಕ್ರಿಕೆಟ್ ಕೋಚ್ ಬೇರೆ ಆಗಿರುವರಂತೆ! ಎಲ್ಲರದ್ದೂ ಏನು ಪ್ಲೇಸಿಂಗ್, ಏನು ಸ್ಮಾಷ್, ಏನು ಚುರುಕಿನ ಮೂವ್ಮೆಂಟ್?! ಮೂಕವಿಸ್ಮಿತಳಾಗಿದ್ದೆ. ಅವರಿಗಿಂತ ಚಿಕ್ಕವಳಾದರೂ ಅರ್ಧಗಂಟೆ ಆಡುವಷ್ಟರಲ್ಲಿ ಸುಸ್ತಾಗಿ ಹೋದ ನಾನು, ಅವರ ಉತ್ಸಾಹದ ಎದುರು ನಾಚಿಕೆಪಟ್ಟಿದ್ದೆ. ಕೆಲವೊಮ್ಮೆ ಬದುಕಿನಲ್ಲಿ 'ಆ ಕ್ಷಣ' ಎನ್ನುವುದು ಹೇಗೆ ಸಂಧಿಯಾಗುವುದೆಂದೇ ತಿಳಿಯುವುದಿಲ್ಲ ನೋಡಿ!

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-1706555982

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.