ಅವರ ಹಾಡುಗಳೇ ಹೀಗೆ. ಅಕ್ಷರಶಃ ಜೀವಸೆಲೆ. ಇಂತಿಂಥ ಸಂದರ್ಭ ಇದೆ. ನೀವು ಹಾಡಬೇಕು ಎಂದು ಕೋರಿದರೆ ಸಾಕು, ಅವರು ತಡ ಮಾಡುವುದಿಲ್ಲ. ಮದುವೆಯಿರಲಿ, ಜಾತ್ರೆಯಿರಲಿ, ಗೌರಿ ಹುಣ್ಣಿಮೆ ಅಥವಾ ನಾಗರ ಪಂಚಮಿಯೇ ಇರಲಿ, ಅವರ ಬಳಿ ಹಾಡು ಸಿದ್ಧವಿರುತ್ತದೆ. ಇನ್ನು ಅವರ ಧ್ವನಿ ಕೇಳಿದರೆ, ಅಲ್ಲಿ ಜನ ಜಮಾಯಿಸುತ್ತಾರೆ. ಸದ್ದುಗದ್ದಲ ಮಾಡದೇ ತದೇಕಚಿತ್ತದಿಂದ ಹಾಡು ಆಲಿಸುತ್ತಾರೆ.

ಸಾವಿರಾರು ಜನಪದ ಹಾಡುಗಳು ನಾಲಿಗೆಯಲ್ಲೇ ಇವೆ, ಧ್ವನಿಯ ರೂಪದಲ್ಲಿ ಹೊರಬರಲು ಕಾಯುತ್ತಿವೆ ಎಂಬಂತೆ ಅವರು ಹೊಲಕ್ಕೆ ಹೋಗಲಿ ಅಥವಾ ಮನೆಗೆಲಸ ಮಾಡುತ್ತಿರಲಿ, ಹಾಡುಗಳು ಬರತೊಡಗುತ್ತವೆ. ಅವರೊಂದಿಗೆ ಇರುವವರು ಗುನುಗುನಿಸುತ್ತಾರೆ. ಇಡೀ ಆವರಣವನ್ನೇ ಸಂಗೀತಮಯಗೊಳಿಸಿ, ಸಂಭ್ರಮ ಮೂಡಿಸುತ್ತಾರೆ. ಈ ಕಥೆ ನಿನ್ನೆ–ಮೊನ್ನೆಯದ್ದಲ್ಲ, 40ಕ್ಕೂ ಹೆಚ್ಚು ವರ್ಷಗಳಿಂದ ಈ ಕಾಯಕ, ಜನಪದ ಪರಂಪರೆ ಮುಂದುವರೆದಿದೆ.

ಈ ಜನಪದ ಗಾಯನದ ಜೀವಾಳ ಪಾರ್ವತೆವ್ವ ಸಿದ್ದಪ್ಪ ಹೊಂಗಲ್. ಧಾರವಾಡ ಜಿಲ್ಲೆಯ ದೇವರಹುಬ್ಬಳ್ಳಿ ಗ್ರಾಮದವರು. ಜನಪದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮತ್ತು ಇನ್ನೊಬ್ಬರಿಗೆ ಧಾರೆಯೆರೆಯುವಲ್ಲಿ ವರ್ಷಗಳಿಂದ ನಿರತರಾಗಿದ್ದಾರೆ. ವಯಸ್ಸು 70 ದಾಟಿದ್ದರೂ ತಮಗೆ ಆಯಾಸವಿಲ್ಲ. ದಣಿವೂ ಇಲ್ಲ ಎಂಬಂತೆ ಅವರು ಜನಪದ ಪರಂಪರೆ ಮತ್ತು ಗಾಯನಕ್ಕೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ.

ಅಪ್ಪಟ ದೇಸಿತನಗಳಿಂದ ಕೂಡಿರುವ ಅವರ ಹಾಡುಗಳಲ್ಲಿ ಪರಸ್ಪರ ಸೌಹಾರ್ದದಿಂದ ಸಹಬಾಳ್ವೆ ನಡೆಸುವ ಕಾಳಜಿ ಇರುತ್ತದೆ ಹೊರತು ಇನ್ನೊಬ್ಬರು ಹೀಯಾಳಿಸುವ ಮತ್ತು ಕೊಂಕು ಪದಗಳು ಇರುವುದಿಲ್ಲ. ‘ಎಲ್ಲವೂ ಸೋತಾಗ, ಗೆಲ್ಲಲು ಆತ್ಮವಿಶ್ವಾಸ ಬೇಕು’ ಎಂಬಂತೆ ಅವರ ಗೀತೆಗಳು ಬದುಕಿಗೆ ಔಷಧಿಯಾಗುತ್ತವೆ. ಕುಟುಂಬ, ಕೃಷಿ, ಸಂಪ್ರದಾಯ, ವ್ಯಕ್ತಿತ್ವ, ಜಾತ್ರೆ, ಗ್ರಾಮೀಣ ಬದುಕು ಹೀಗೆ ಪ್ರತಿಯೊಂದು ವಿಷಯದ ಬಗ್ಗೆಯೂ ಗೀತೆಗಳು ಜೀವ ತುಂಬುತ್ತದೆ.

ಎಷ್ಟೆಲ್ಲಾ ಸಾಧನೆ ಮಾಡಿದರೂ ಅದನ್ನು ಎಲ್ಲಿಯೂ ಹೇಳಿಕೊಳ್ಳದ ಪಾರ್ವತೆವ್ವ ಸಾಮಾನ್ಯ ಗೃಹಿಣಿಯಂತೆ ಜೀವನ ನಡೆಸುತ್ತಿದ್ದಾರೆ. ಅಜ್ಜಿ ಮತ್ತು ತಾಯಿಯಿಂದ ಹಾಡುವುದನ್ನು ಕಲಿತ ಅವರು ಕಿರಿಯ ವಯಸ್ಸಿನಲ್ಲೇ ಆಕಾಶವಾಣಿ ಕೇಂದ್ರದಲ್ಲಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟವರು. ಧಾರವಾಡ ಜಿಲ್ಲೆಯಲ್ಲದೇ ಸುತ್ತಮುತ್ತಲೂ ಎಲ್ಲಿಯೇ ಜಾನಪದ ಕಾರ್ಯಕ್ರಮವಿದ್ದರೆ, ಅವರಿಗೆ ತಪ್ಪದೇ ಆಹ್ವಾನ ಬರುತ್ತದೆ. ಅವರು ಅದನ್ನು ತಪ್ಪಿಸದೇ,ಖುಷಿಯಿಂದ ಪಾಲ್ಗೊಳ್ಳುತ್ತಾರೆ.

ಕರ್ನಾಟಕ ವಿಶ್ವವಿದ್ಯಾಲಯ, ಹಾವೇರಿಯ ಜಾನಪದ ವಿಶ್ವವಿದ್ಯಾಲಯ ಸೇರಿ ವಿವಿಧ ವಿಶ್ವವಿದ್ಯಾಲಯಗಳ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪಾರ್ವತೆವ್ವ ಅವರ ಗಾಯನ ಮತ್ತು ಬದುಕಿನ ಕುರಿತು ಅಧ್ಯಯನ ಮಾಡಿ, ಪಿಎಚ್.ಡಿ ಪದವಿ ಪಡೆದಿದ್ದಾರೆ. ‘ವಿಶ್ವವಿದ್ಯಾಲಯದ ಮೇಷ್ಟ್ರುಗಳು ತಮ್ಮ ವಿದ್ಯಾರ್ಥಿಗಳನ್ನು ನಮ್ಮ ಮನೆಗೆ ಕಳುಹಿಸುತ್ತಾರೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಗೀತೆಗಳನ್ನು ಹಾಡುತ್ತೇನೆ. ಪ್ರತಿದಿನ ವಿದ್ಯಾರ್ಥಿಗಳು ಬರುವ ಕಾರಣ ಮನೆಯಲ್ಲಿ ಸದಾ ಹಬ್ಬದ ವಾತಾವರಣ ಇರುತ್ತದೆ’ ಎಂದು ಪಾರ್ವತೆವ್ವ ಖುಷಿಯಿಂದ ಹೇಳುತ್ತಾರೆ.

ಪಾರ್ವತೆವ್ವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಪಾಠ ಮಾಡಿದ್ದಾರೆ. ಎರಡನೇ ತರಗತಿಯಷ್ಟೇ ಕಲಿತಿರುವ ಅವರು ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೊಸ ಸಂಗತಿಗಳನ್ನು ತಿಳಿಸಿದ್ದಾರೆ. ಜನಪದದ ಮಹತ್ವ ತಿಳಿಯಪಡಿಸಿದ್ದಾರೆ. ಈಗಲೂ ಎಲ್ಲಿಯಾದರೂ ಶಿಬಿರ, ಕಾರ್ಯಾಗಾರ ಇದ್ದರೆ, ಖುಷಿಯಿಂದ ಆ ಕಾಯಕದಲ್ಲಿ ನಿರತರಾಗುತ್ತಾರೆ.

ಪಾರ್ವತೆವ್ವ ಬರೆದದ್ದು ತುಂಬಾನೇ ಕಡಿಮೆ. 500ಕ್ಕೂ ಹೆಚ್ಚು ಹಾಡುಗಳು ಅವರ ಸ್ಮೃತಿಪಟಲದಲ್ಲಿವೆ. ಕೆಲವಷ್ಟು ಹಾಡು ದೀರ್ಘವಿದ್ದರೆ, ಇನ್ನೂ ಕೆಲವು ಸಣ್ಣವು. ಎಲ್ಲವನ್ನೂ ಪೇರಿಸಿಟ್ಟರೆ, ಪುಸ್ತಕಗಳ ಸಂಕಲನಗಳನ್ನು ತರುವಷ್ಟು ಹಾಡುಗಳು ಅವರ ಬಳಿಯಿವೆ. ಬೆಂಗಳೂರಿನ ಲಹರಿ ಸಂಸ್ಥೆಯವರು 1990ರ ದಶಕದಲ್ಲೇ ಅವರ ಜನಪದ ಹಾಡುಗಳನ್ನು ಧ್ವನಿ ಮುದ್ರಣ ಮಾಡಿತು. 1996ರಲ್ಲಿ ‘ಗಂಗವ್ವ-ಗೌರವ್ವ’, ‘ವರನೋಡಿ ಕನ್ಯಾಕೊಡು’, ‘ಮಲ್ಲಿಗೆ ಗೆಳತಿ’ ಧ್ವನಿಸುರುಳಿ ಬಿಡುಗಡೆಯಾದವು. ನಾಲ್ಕು ವರ್ಷದಲ್ಲಿ ದಾಖಲೆ ಒಂದು ಲಕ್ಷ ಧ್ವನಿಸುರುಳಿ ಮಾರಾಟವಾದವು.

ಪಾರ್ವತೆವ್ವ ಅವರು ಜನಪದ ಗಾಯನಕ್ಕೆ ಸೀಮಿತವಾಗಿಲ್ಲ. ಅವರು 300ಕ್ಕೂ ಹೆಚ್ಚು ಮದುವೆಗಳನ್ನು ಮಾಡಿಸಿದ್ದಾರೆ. ಜನಸಂಖ್ಯೆ ನಿಯಂತ್ರಣ ಅಭಿಯಾನ, ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಸೇರಿ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸ್ವತಃ ಜಾಗೃತಿ ಗೀತೆಗಳನ್ನು ರಚಿಸಿ, ಹಾಡಿದ್ದಾರೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿ, ಜನಪರ ಕಾರ್ಯ ಅಥವಾ ಸಮಾಜಕ್ಕೆ ಉಪಯುಕ್ತವಾಗುವಂತಹ ಯಾವುದೇ ಕಾರ್ಯಗಳಿದ್ದರೂ, ಅವರು ತಪ್ಪದೇ ಭಾಗಿಯಾಗುತ್ತಾರೆ.

ಪುಟ್ಟ ಗ್ರಾಮದಲ್ಲೇ ಉಳಿದುಕೊಂಡು ಜನಮನ್ನಣೆ ಗಳಿಸಿರುವ ಮತ್ತು ಪ್ರೀತಿಪಾತ್ರರು ಆಗಿರುವ ಪಾರ್ವತೆವ್ವ ಅವರಿಗೆ ಜಾನಪದ ಅಕಾಡೆಮಿ ಗೌರವ ಸನ್ಮಾನ, ಬಸವರಾಜ ಮನ್ಸೂರ ಸಮ್ಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಣಿಪಾಲ ಶಿಕ್ಷಣ ಸಂಸ್ಥೆಯಿಂದ ಜಾನಪದ ಕಣಜ ಪ್ರಶಸ್ತಿ, ಗೌರಮ್ಮ ಹೂಗಾರ ಪ್ರತಿಷ್ಠಾನ ಪ್ರಶಸ್ತಿ, ಅವ್ವ ಟ್ರಸ್ಟ್ ಜಾನಪದ ಪ್ರಶಸ್ತಿ ಮುಂತಾದವುಗಳಿಗೆ ಪಾತ್ರರಾಗಿದ್ದಾರೆ. ಆದರೆ, ಈ ಎಲ್ಲಾ ವಿಷಯಗಳನ್ನು ಎಲ್ಲಿಯೂ ಹೇಳಿಕೊಳ್ಳದ ಅವರು ಹಿರಿಯರೊಂದಿಗೆ ಹಿರಿಯರು, ಮಕ್ಕಳೊಂದಿಗೆ ಮಕ್ಕಳಾಗುತ್ತಾರೆ. ಎಲ್ಲರೊಂದಿಗೆ ಬೆರೆತು, ಸಂಭ್ರಮ ಹಂಚುತ್ತಾರೆ.

ವಿಜಯಪುರದಲ್ಲಿ ಇರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಈಚೆಗಷ್ಟೇ ಪಾರ್ವತೆವ್ವ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತು. ಅದನ್ನು ಸ್ವೀಕರಿಸಿದ ಅವರು ಹೇಳಿದ್ದು ಕೆಲವೇ ಸಾಲುಗಳು: ‘ಈ ಗೌರವ ಡಾಕ್ಟರೇಟ್ ನನಗೆ ನೀಡಿದ್ದಲ್ಲ. ಇದನ್ನು ಜಾನಪದ ಕಲೆ, ಪರಂಪರೆ ಮತ್ತು ಕಲಾವಿದರಿಗೆ ಸಮರ್ಪಿಸುತ್ತೇನೆ. ಈ ಜಾನಪದ ಪರಂಪರೆ ಒಬ್ಬರು–ಇಬ್ಬರಿಂದ ಬೆಳೆಯುವಂತದ್ದು ಅಥವಾ ಉಳಿಯುವಂತದ್ದು ಅಲ್ಲ. ಎಲ್ಲರೂ ಜೊತೆಗೂಡಿದಾಗ ಮತ್ತು ಒಗ್ಗಟ್ಟಿನಿಂದ ಶ್ರಮಿಸಿದಾಗ, ಜಾನಪದ ಪರಂಪರೆ ಮತ್ತು ಸಂಸ್ಕೃತಿ ಉಳಿಯುತ್ತದೆ.

ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ 'ಸುಧಾ’ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.