‘ನಗರದ ಅಭಿವೃದ್ಧಿಗೆ ಶಾಸಕರ ಸಹಕಾರ ಕೋರುವೆ’

7
ವಿಜಯಪುರ ಮಹಾನಗರ ಪಾಲಿಕೆ ಉಪ ಮೇಯರ್‌ ಗೋಪಾಲ ಘಟಕಾಂಬಳೆ ಹೇಳಿಕೆ

‘ನಗರದ ಅಭಿವೃದ್ಧಿಗೆ ಶಾಸಕರ ಸಹಕಾರ ಕೋರುವೆ’

Published:
Updated:

ವಿಜಯಪುರ: ‘ನಗರ ಶಾಸಕರು ನನಗೆ ಏಕೆ ಮತ ಹಾಕಿಲ್ಲ ಎಂಬುದು ಗೊತ್ತಿಲ್ಲ. ನಾನೂ ಬಿಜೆಪಿ, ಅವರೂ ಬಿಜೆಪಿ. ನನಗೆ ಮತ ಹಾಕದಿದ್ದರೂ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರ ಸಹಕಾರ ಕೋರುವೆ’ ಎಂದು ವಿಜಯಪುರ ಮಹಾನಗರ ಪಾಲಿಕೆ ಉಪಮೇಯರ್‌ ಗೋಪಾಲ ಘಟಕಾಂಬಳೆ ಹೇಳಿದರು.

‘ರಾಜ್ಯ ಸರ್ಕಾರದಿಂದ ಪಾಲಿಕೆಗೆ ಹೆಚ್ಚಿನ ಅನುದಾನ ತರಲು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲರ ಸಹಕಾರ ಪಡೆಯುವೆ’ ಎಂದು ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇದು ನಮ್ಮ ಕೊನೆಯ ಅವಧಿ. ಕನಿಷ್ಠ 8ರಿಂದ 9 ಸಭೆ ನಡೆಸಲಿದ್ದೇವೆ. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಜೆಂಡಾ ಪ್ರಕಾರ ಸಭೆ ನಡೆಸುವ ಜತೆಯಲ್ಲೇ; ಸದಸ್ಯರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಯತ್ನ ನಡೆಸಲಿದ್ದೇವೆ. ಇನ್ಮುಂದಿನ ದಿನಗಳಲ್ಲಿ ನಡೆಯುವ ಪ್ರತಿ ಸಭೆಯೂ ಶಿಸ್ತಿನಿಂದ ನಡೆಯಲಿದೆ. ನಿಯಮಾವಳಿ ಪ್ರಕಾರವೇ ಜರುಗಲಿದೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೇಂದ್ರ ಸಚಿವ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪಾಲಿಕೆಯ ಹಿಂದಿನ ಚುನಾವಣೆಗಳಲ್ಲೂ ಭಾಗಿಯಾಗಿರಲಿಲ್ಲ. ಈಗಲೂ ಹಸ್ತಕ್ಷೇಪ ನಡೆಸಿಲ್ಲ. ವಿನಾಃ ಕಾರಣ ವರಿಷ್ಠರಿಗೆ ಸುಳ್ಳು ದೂರಿನ ಪತ್ರ ಬರೆದಿದ್ದಾರೆ.

ನಾನೂ ಬಿಜೆಪಿಯ ಉಪ ಮೇಯರ್‌. ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸುಳ್ಳು ದೂರುವವರು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರು ಪ್ರಸ್ತಾಪಿಸದೆ ಪರೋಕ್ಷ ವಾಗ್ದಾಳಿ ನಡೆಸಿದರು.

ನಗರ ವ್ಯಾಪ್ತಿಯಲ್ಲಿ ಶೀಘ್ರವೇ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು. ಈ ಕುರಿತಂತೆ ಆಯುಕ್ತರ ಜತೆ ಚರ್ಚಿಸುವೆ ಎಂದು ಗೋಪಾಲ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !